BJP Infighting | ವಿಜಯೇಂದ್ರ ವೈಫಲ್ಯ: ಭಿನ್ನರ ಕೂಗಿಗೆ ದನಿಗೂಡಿಸಿದ ಡಿ ವಿ ಸದಾನಂದ ಗೌಡ
ಬಿಜೆಪಿ ಬಣ ಸಂಘರ್ಷಕ್ಕೆ ಇದೀಗ ಹಿರಿಯ ನಾಯಕ, ಮಾಜಿ ಮುಖ್ಯಮಂತ್ರಿ ಡಿ ವಿ ಸದಾನಂದ ಗೌಡ ತಮ್ಮದೇ ವ್ಯಾಖ್ಯಾನವನ್ನು ನೀಡಿದ್ದು, ಪಕ್ಷದ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ಮತ್ತು ಕೋರ್ ಕಮಿಟಿಯ ವೈಫಲ್ಯಗಳನ್ನು ಬೊಟ್ಟುಮಾಡಿದ್ದಾರೆ.
ಪಕ್ಷದ ಹಂಗಾಮಿ ರಾಜ್ಯಾಧ್ಯಕ್ಷರು ಪಕ್ಷ ತಮಗೆ ವಹಿಸಿದ ಜವಾಬ್ದಾರಿಯನ್ನು ನಿಭಾಯಿಸುವಲ್ಲಿ ವಿಫಲರಾಗಿದ್ದಾರೆ ಎಂದು ಹೇಳುವ ಮೂಲಕ ಬಿ ವೈ ವಿಜಯೇಂದ್ರ ಅವರು ರಾಜ್ಯಾಧ್ಯಕ್ಷ ಸ್ಥಾನಕ್ಕೆ ಅರ್ಹರಲ್ಲ ಎಂಬ ಭಿನ್ನಮತೀಯ ನಾಯಕ ಬಸನಗೌಡ ಪಾಟೀಲ್ ಯತ್ನಾಳ್ ಅವರ ವಾದಕ್ಕೆ ದನಿಗೂಡಿಸಿದ್ದಾರೆ.
ಪಕ್ಷದ ಸಂಘಟನೆ ಮತ್ತು ಶಿಸ್ತು ವಿಷಯದಲ್ಲಿ ರಾಜ್ಯಾಧ್ಯಕ್ಷರು ಎಡವಿದ್ದಾರೆ ಎಂದು ಹೇಳಿರುವ ಅವರು, ಅತೃಪ್ತರನ್ನು ವಿಶ್ವಾಸಕ್ಕೆ ಪಡೆದು ಪಕ್ಷದ ಒಗ್ಗಟ್ಟು ಕಾಯ್ದುಕೊಳ್ಳುವ ಪ್ರಯತ್ನವನ್ನು ಅವರು ಮಾಡಲಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಬೆಂಗಳೂರಿನಲ್ಲಿ ಮಾಧ್ಯಮಗಳಿಗೆ ನೀಡಿರುವ ಪ್ರತಿಕ್ರಿಯೆ ವೇಳೆ ಅವರು, ಈ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದು, ಪಕ್ಷದಲ್ಲಿ ಅಸಮಾಧಾನ, ಅತೃಪ್ತಿಯ ಹೊಗೆ ಇದ್ದಾಗಲೇ ಅದನ್ನು ಕೂಡಲೇ ಗಮನಿಸಿ ಎಲ್ಲರನ್ನೂ ವಿಶ್ವಾಸಕ್ಕೆ ಪಡೆದು ಪರಿಸ್ಥಿತಿ ಕೈಮೀರಿಹೋಗದಂತೆ ಎಚ್ಚರಿಕೆ ವಹಿಸಬೇಕಿತ್ತು. ಆದರೆ, ಅಂತಹ ಪ್ರಯತ್ನಗಳನ್ನು ಮಾಡಲಿಲ್ಲ ಎಂದಿರುವ ಗೌಡರು, ಕರ್ನಾಟಕ ಬಿಜೆಪಿಯ ಇಂದಿನ ಈ ಸ್ಥಿತಿಗೆ ಕೋರ್ ಕಮಿಟಿ ಕೂಡ ಕಾರಣ ಎಂದು ಹೇಳಿದ್ದಾರೆ.
ಕೋರ್ ಕಮಿಟಿ ಸಭೆಯಲ್ಲಿ ರಾಜ್ಯದ ಪಕ್ಷದ ಸ್ಥಿತಿಗತಿ ಕುರಿತು ಗಂಭೀರ ಚರ್ಚೆ ಮಾಡಬೇಕಿತ್ತು. ಸಂಘಟನಾ ಪರ್ವ, ಸಂಘಟನಾ ಪರ್ವ ಅಂತಾರೆ. ಆದರೆ, ಆಂತರಿಕ ಕಚ್ಚಾಟ ಪರ್ವವೇ ಜೋರಾಗಿದೆ. ಶಿಸ್ತಿನ ಪಕ್ಷ, ಅಶಿಸ್ತನ್ನು ಸಹಿಸುವುದಿಲ್ಲ ಎಂದು ಹೇಳುತ್ತಾರೆ. ಆದರೆ, ಎಸ್ ಟಿ ಸೋಮಶೇಖರ್ ಮತ್ತು ಶಿವರಾಮ ಹೆಬ್ಬಾರ ವಿಷಯದಲ್ಲಿ ಕ್ರಮಕ್ಕೆ ಶಿಫಾರಸು ಮಾಡಿದರೂ ಶಿಸ್ತಿನ ಪಕ್ಷದಲ್ಲಿ ಯಾವುದೇ ಕ್ರಮ ಆಗಲಿಲ್ಲ ಎಂದು ಹೇಳುವ ಮೂಲಕ ತಮ್ಮದೇ ಪಕ್ಷದ ನಾಯಕತ್ವದ ಬಗ್ಗೆ ಬಹಿರಂಗ ಟೀಕೆ ಮಾಡಿದರು.
ಕೋರ್ ಕಮಿಟಿ ಸಭೆಯಲ್ಲಿ ಇಂತಹ ಶಿಸ್ತು ಉಲ್ಲಂಘನೆಯ, ಸಂಘಟನೆಯ ವಿಷಯಗಳನ್ನು ಚರ್ಚೆ ಮಾಡಿದ್ದರೆ ಒಂದಷ್ಟು ಗೊಂದಲಗಳು ಬಗೆಹರಿಯುತ್ತಿದ್ದವು. ಪಕ್ಷ ಆಂತರಿಕ ಕಚ್ಚಾಟಗಳಲ್ಲಿ ಹೂತುಹೋಗಿದೆ. ಆಂತರಿಕ ಕಚ್ಚಾಟದಲ್ಲಿ ತೊಡಗಿರುವವರು ಸಂಘಟನಾ ಪರ್ವದಲ್ಲಿ ಭಾಗವಹಿಸಿಲ್ಲ. ಆದರೆ, ಕೋರ್ ಕಮಿಟಿ ಸಭೆಯಲ್ಲಿ ಇಂತಹ ಗಂಭೀರ ವಿಷಯಗಳು ಚರ್ಚೆಗೇ ಬರಲಿಲ್ಲ ಎಂದು ಅವರು ಹೇಳಿದರು.
ನೂತನ ರಾಜ್ಯಾಧ್ಯಕ್ಷರ ನೇಮಕ ಕುರಿತು ಮಾತನಾಡಿದ ಅವರು, ‘ನೂತನ ಅಧ್ಯಕ್ಷರ ನೇಮಕದ ವಿಷಯದಲ್ಲಿ ಸಹಮತ ಮೂಡದೇ ಇದ್ದರೆ ಪಕ್ಷದಲ್ಲಿ ಚುನಾವಣೆ ನಡೆಯುತ್ತದೆ. ಎಲ್ಲರನ್ನೂ ವಿಶ್ವಾಸಕ್ಕೆ ಪಡೆದು, ಚುನಾವಣೆ ಇಲ್ಲದೆ ಆಯ್ಕೆ ಮಾಡುವ ಪರಿಸ್ಥಿತಿ ನಿರ್ಮಾಣವಾದರೆ ಮಾತ್ರ ಅವಿರೋಧ ಆಯ್ಕೆ ಆಗುತ್ತದೆ’ ಎಂದು ಹೇಳಿದರು.
ಕಳೆದ ವಾರ ರಾಜ್ಯ ಬಿಜೆಪಿ ಭಿನ್ನಮತ ಭುಗಿಲೆದ್ದಿರುವ ನಡುವೆಯೇ ಡಿ ವಿ ಸದಾನಂದಗೌಡರ ಮನೆಯಲ್ಲಿ ಪಕ್ಷದ ಒಕ್ಕಲಿಗ ಮುಖಂಡರ ಸಭೆ ನಡೆದಿತ್ತು. ಪಕ್ಷದ ಅಧ್ಯಕ್ಷ ಸ್ಥಾನ ಅಥವಾ ಪ್ರತಿಪಕ್ಷ ನಾಯಕನ ಸ್ಥಾನಗಳಲ್ಲಿ ಒಂದನ್ನಾದರೂ ಸಮುದಾಯಕ್ಕೆ ಉಳಿಸಿಕೊಳ್ಳುವುದರ ಕುರಿತು ಆ ಸಭೆಯಲ್ಲಿ ಒಕ್ಕಲಿಗ ಮುಖಂಡರು ಚರ್ಚಿಸಿದ್ದರು ಎನ್ನಲಾಗಿತ್ತು.