BJP Infighting | ಯತ್ನಾಳ್‌-ವಿಜಯೇಂದ್ರ ಬಣಗಳ ಸಂಘರ್ಷ ತೀವ್ರ; ಶಕ್ತಿ ಪ್ರದರ್ಶನಕ್ಕೆ ಸಮಾವೇಶಗಳೇ ಅಖಾಡ
x

ಯತ್ನಾಳ್‌ ಹಾಗೂ ವಿಜಯೇಂದ್ರ

BJP Infighting | ಯತ್ನಾಳ್‌-ವಿಜಯೇಂದ್ರ ಬಣಗಳ ಸಂಘರ್ಷ ತೀವ್ರ; ಶಕ್ತಿ ಪ್ರದರ್ಶನಕ್ಕೆ ಸಮಾವೇಶಗಳೇ ಅಖಾಡ

ಬಿಜೆಪಿ ರಾಜ್ಯ ನಾಯಕತ್ವ ಕುರಿತ ಯತ್ನಾಳ್‌ ಹಾಗೂ ವಿಜಯೇಂದ್ರ ಬಣಗಳ ಸಂಘರ್ಷ ಇದೀಗ ಜಾತಿ, ಸಮುದಾಯ, ಧರ್ಮದ ಹೆಸರಿನಲ್ಲಿ ಶಕ್ತಿ ಪ್ರದರ್ಶನಕ್ಕೆ ವೇದಿಕೆ ಒದಗಿಸಿದ್ದು, ಬಣ ಸಂಘರ್ಷ ಹೊಸ ತಿರುವು ಪಡೆಯುತ್ತಿದೆ.


ರಾಜ್ಯ ಬಿಜೆಪಿಯಲ್ಲಿ ಬಣ ಬಡಿದಾಟ ನಿಲ್ಲುವ ಲಕ್ಷಣಗಳು ಕಾಣುತ್ತಿಲ್ಲ. ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹಾಗೂ ಬಿಜೆಪಿ ಅಧ್ಯಕ್ಷ ಬಿ.ವೈ. ವಿಜಯೇಂದ್ರ ಬಣಗಳ ನಡುವೆ ಆಂತರಿಕ ಜಗಳ ಈಗ ಶಕ್ತಿ ಪ್ರದರ್ಶನಕ್ಕೆ ಅಖಾಡ ಸಿದ್ಧಪಡಿಸುತ್ತಿದೆ.

ನಾಯಕತ್ವದ ಕುರಿತ ಹಗ್ಗಜಗ್ಗಾಟದಲ್ಲಿ ತೊಡಗಿದ್ದ ಎರಡೂ ಬಣಗಳು ಜಾತಿ, ಸಮುದಾಯ, ಧರ್ಮ ಹೆಸರಿನಲ್ಲಿ ಶಕ್ತಿ ಪ್ರದರ್ಶನಕ್ಕೆ ಮುಂದಾಗುತ್ತಿದ್ದು, ಬಣ ಸಂಘರ್ಷ ಹೊಸ ತಿರುವು ಪಡೆಯುತ್ತಿದೆ. ಮಾರ್ಚ್ 15ರೊಳಗೆ ರಾಜ್ಯಾದ್ಯಂತ ವೀರಶೈವ ಲಿಂಗಾಯತರನ್ನು ಒಗ್ಗೂಡಿಸಿ ಸಮಾವೇಶ ನಡೆಸಲು ಬಿ.ವೈ.ವಿಜಯೇಂದ್ರ ಬಣ ಸಜ್ಜಾಗುತ್ತಿದೆ. ಇದಕ್ಕೆ ತಿರುಗೇಟು ನೀಡಲು ಯತ್ನಾಳ್ ಬಣದ ನಾಯಕರು ಹಿಂದೂ ಸಮಾವೇಶಕ್ಕೆ ತಯಾರಿ ಆರಂಭಿಸಿದ್ದಾರೆ. ಪ್ರಖರ ಹಿಂದುತ್ವವಾದಿಯಾಗಿರುವ ಬಸನಗೌಡ ಪಾಟೀಲ್‌ ಅವರು ಹಿಂದೂ ಸಮಾವೇಶದ ಮೂಲಕ ಪಕ್ಷದ ನಾಯಕರಿಗೆ ಬಿಸಿ ಮುಟ್ಟಿಸಲು ಕಾರ್ಯತಂತ್ರ ಹೆಣೆಯುತ್ತಿದ್ದಾರೆ.

ಲಿಂಗಾಯತ ಸಮಾವೇಶ

ಯಡಿಯೂರಪ್ಪ ಅಭಿಮಾನಿಗಳನ್ನು ಸೇರಿಸಿಕೊಂಡು ವೀರಶೈವ-ಲಿಂಗಾಯತ ಸಭೆ ನಡೆಸಲು ಯೋಜಿಸಿದ್ದ ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ ಅವರಿಗೆ ಬಿ.ವೈ.ವಿಜಯೇಂದ್ರ ಹಾಗೂ ಬಿ.ಎಸ್‌. ಯಡಿಯೂರಪ್ಪ ಅವರು ಯಾವುದೇ ಸಭೆ ನಡೆಸದಂತೆ ತಾಕೀತು ಮಾಡಿದರೂ ಮೇ 15ರೊಳಗೆ ಸಮಾವೇಶ ನಡೆಸುವುದಾಗಿ ಹೇಳುವ ಮೂಲಕ ಯತ್ನಾಳ್ ಬಣಕ್ಕೆ ತಿರುಗೇಟು ನೀಡಲು ಸಜ್ಜಾಗಿದ್ದಾರೆ.

ಬೆಂಗಳೂರಿನಲ್ಲಿ ಈ ಕುರಿತು ಪ್ರತಿಕ್ರಿಯಿಸಿರುವ ಎಂ.ಪಿ.ರೇಣುಕಾಚಾರ್ಯ ಅವರು, ದಾವಣಗೆರೆಯಲ್ಲಿ ವೀರಶೈವ ಲಿಂಗಾಯತ ಮಹಾಸಂಗಮ ಸಮಾವೇಶ ನಿಗದಿಯಂತೆ ನಡೆಯಲಿದೆ. ಈ ಸಮಾವೇಶದಲ್ಲಿ ಕನಿಷ್ಠ 5 ಲಕ್ಷ ಜನ ಸೇರಲಿದ್ದಾರೆ. ಸಮಾವೇಶಕ್ಕೆ ಹಿರಿಯ ನಾಯಕರಾದ ಬಿ.ಎಸ್. ಯಡಿಯೂರಪ್ಪ ಹಾಗೂ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರು ಅಸಮ್ಮತಿ ಸೂಚಿಸಿದ್ದಾರೆ. ಆದಾಗ್ಯೂ ನಮ್ಮ ನಿರ್ಧಾರದಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ. ಸಮಾವೇಶ ಮಾಡಿಯೇ ತೀರುತ್ತೇವೆ. ಈ ಸಂಬಂಧ ರಾಜ್ಯದ 17 ಜಿಲ್ಲೆಗಳಲ್ಲಿ ಪೂರ್ವಸಿದ್ಧತಾ ಸಭೆಗಳನ್ನು ನಡೆಸಲಾಗಿದೆ ಎಂದು ಹೇಳಿದ್ದಾರೆ.

ರಾಜ್ಯದಲ್ಲಿ ಲಿಂಗಾಯತ ಸಮುದಾಯದ 19 ಮಂದಿ ಮುಖ್ಯಮಂತ್ರಿಗಳಾಗಿದ್ದಾರೆ. ಅದರಲ್ಲಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಕೆಲವರು ಬೇಕೆಂತಲೇ ಕಿರುಕುಳ ನೀಡಿದರು. ಯಡಿಯೂರಪ್ಪ ಅವರು ಲಿಂಗಾಯತ ನಾಯಕ ಅಲ್ಲ ಎಂದು ಜರಿದಿದ್ದರು. ಆದರೆ, ನಾವು ಅವರಿಗೆ ಸಮಾವೇಶದ ಮೂಲಕ ತಕ್ಕ ಉತ್ತರ ನೀಡುತ್ತೇವೆ ಎಂದು ಪರೋಕ್ಷವಾಗಿ ಯತ್ನಾಳ್‌ ಬಣದ ವಿರುದ್ಧ ಹರಿಹಾಯ್ದಿದ್ದಾರೆ.

ಯತ್ನಾಳ್ ಬಣದಿಂದ ಹಿಂದೂ ಸಮಾವೇಶ

ಬಿ.ವೈ.ವಿಜಯೇಂದ್ರ ಬಣದ ಎಂ.ಪಿ.ರೇಣುಕಾಚಾರ್ಯ ನೇತೃತ್ವದಲ್ಲಿ ನಡೆಯಲಿರುವ ವೀರಶೈವ ಲಿಂಗಾಯತ ಸಮಾವೇಶಕ್ಕೆ ತಿರುಗೇಟು ನೀಡಲು ಯತ್ನಾಳ್ ಬಣ ಹಿಂದೂ ಸಮಾವೇಶ ಆಯೋಜಿಸಲು ನಿರ್ಧರಿಸಿದೆ. 5 ಲಕ್ಷ ಜನರನ್ನ ಸೇರಿಸಿ ಸಮಾವೇಶ ನಡೆಸಲಾಗುವುದು. ಸಮಾವೇಶದಲ್ಲಿ ಯಡಿಯೂರಪ್ಪ ಅವರಿಗೆ ಜೈಕಾರ ಹಾಕುವುದಿಲ್ಲ. ದಾವಣಗೆರೆಯಲ್ಲಿ ವಿಜಯೇಂದ್ರ ಬಣದ ಸಮಾವೇಶ ಮುಗಿದ ಒಂದು ವಾರದಲ್ಲೇ ಹಿಂದೂ ಸಮಾವೇಶ ಮಾಡುತ್ತೇವೆ ಎಂದು ಯತ್ನಾಳ್ ಬಣ ಸವಾಲು ಹಾಕಿದೆ. ಯತ್ನಾಳ್ ಬಣದ ಶಾಸಕ ಬಿ.ಪಿ ಹರೀಶ್ ಮಾತನಾಡಿ, ಹಿಂದೂ ಸಮಾವೇಶ ನಡೆಸುವ ಕುರಿತು ಈಗಾಗಲೇ ಚರ್ಚೆ ನಡೆಸಿದ್ದೇವೆ. ಹಿಂದುತ್ವದ ಅಡಿಪಾಯ ಹೊಂದಿರುವ ಬಿಜೆಪಿಗೆ ಸಮಾವೇಶದಿಂದ ಶಕ್ತಿ ತುಂಬಲಾಗುವುದು ಎಂದು ಹೇಳಿದ್ದಾರೆ.

ಯತ್ನಾಳ್‌ ಹಾಗೂ ವಿಜಯೇಂದ್ರ ಬಣದ ಸವಾಲು-ಪ್ರತಿ ಸವಾಲುಗಳಿಂದ ಕಾರ್ಯಕರ್ತರು ಕಂಗಾಲಾಗಿದ್ದು, ಹೈಕಮಾಂಡ್‌ ಮುಂದಿನ ನಡೆಯ ಬಗ್ಗೆ ಕುತೂಹಲ ಮೂಡಿಸಿದೆ.

Read More
Next Story