ವಕ್ಫ್ ಬೋರ್ಡ್‌ ವಿವಾದ | ಮೊದಲು ನೋಟಿಸ್ ಕೊಟ್ಟಿದ್ದೇ ಬಿಜೆಪಿ ಸರ್ಕಾರ: ಸಚಿವ ಎಂ.ಬಿ.ಪಾಟೀಲ ಆರೋಪ
x
ಸಚಿವ ಡಾ ಎಂ ಬಿ ಪಾಟೀಲ್

ವಕ್ಫ್ ಬೋರ್ಡ್‌ ವಿವಾದ | ಮೊದಲು ನೋಟಿಸ್ ಕೊಟ್ಟಿದ್ದೇ ಬಿಜೆಪಿ ಸರ್ಕಾರ: ಸಚಿವ ಎಂ.ಬಿ.ಪಾಟೀಲ ಆರೋಪ


ವಕ್ಫ್ ಆಸ್ತಿಗಳ ಇಂಡೀಕರಣ (ಅಪ್ಡೇಟ್) ವಿವಾದ ಈಗ ಬಿಜೆಪಿ-ಕಾಂಗ್ರೆಸ್ ನಡುವೆ ರಾಜಕೀಯ ದಾಳವಾಗಿ ಬಳಕೆಯಾಗುತ್ತಿದೆ. ಬಿಜೆಪಿ ಸತ್ಯ ಶೋಧನಾ ಸಮಿತಿ ರಚಿಸುತ್ತಿದ್ದಂತೆ ವಕ್ಫ್ ಆಸ್ತಿ ಎಂಬ ನೋಟಿಸ್ ನೀಡಲು ಆರಂಭಿಸಿದ್ದೇ ಹಿಂದಿನ ಬಿಜೆಪಿ ಸರ್ಕಾರ ಎಂದು ಕಾಂಗ್ರೆಸ್ ಪಕ್ಷ ದಾಖಲೆಗಳ ಸಮೇತ ಆರೋಪಿಸಿದೆ.

ವಕ್ಫ್ ಆಸ್ತಿ ವಿಚಾರದಲ್ಲಿ ಬಿಜೆಪಿ ಕೆಟ್ಟ ರಾಜಕಾರಣ ಮಾಡುತ್ತಿದೆ. 2019ರಿಂದ 2022ರವರೆಗೆ ರಾಜ್ಯದಲ್ಲಿ ಅವರದ್ದೇ ಸರ್ಕಾರವಿದ್ದಾಗ ವಿಜಯಪುರ ಜಿಲ್ಲೆಯ ರೈತರಿಗೆ ವಕ್ಫ್ ಮಂಡಳಿ ಮೂಲಕ ನೋಟಿಸ್ ನೀಡಲಾಗಿತ್ತು. ಆಗ ಇರದ ಹಿಂದೂ ಪ್ರೇಮವನ್ನು ಈಗ ಕಪೋಲಕಲ್ಪಿತ ಸುಳ್ಳುಗಳ ಮೂಲಕ ಬಿಜೆಪಿ ವ್ಯಕ್ತಪಡಿಸುತ್ತಿದೆ ಎಂದು ವಿಜಯಪುರ ಜಿಲ್ಲಾ ಉಸ್ತುವಾರಿ ಸಚಿವರಾದ ಡಾ ಎಂ.ಬಿ.ಪಾಟೀಲ ವಾಗ್ದಾಳಿ ನಡೆಸಿದ್ದಾರೆ.

ಬಿಜೆಪಿ ಸರ್ಕಾರದ ಅವಧಿಯಲ್ಲಿ ನೀಡಿದ್ದ ನೋಟಿಸುಗಳೊಂದಿಗೆ ಸಾಮಾಜಿಕ ಮಾಧ್ಯಮ, `ಎಕ್ಸ್’ನಲ್ಲಿ ತಿರುಗೇಟು ನೀಡಿದ್ದಾರೆ. ಬಿಜೆಪಿ ಸರ್ಕಾರದ ಅವಧಿಯಲ್ಲಿ ರಾಜ್ಯದ ಅಭಿವೃದ್ಧಿ ಮರೆತು ಹಿಜಾಬ್, ಹಲಾಲ್, ಉರಿಗೌಡ-ನಂಜೇಗೌಡ ಎಂದು ನಾಟಕವಾಡಿದರು. ಈಗ ವಕ್ಫ್ ಆಸ್ತಿ ನೋಟಿಸ್ ಹೆಸರಿನಲ್ಲಿ ಆ ನಾಟಕ ಮುಂದುವರಿಸುತ್ತಿದ್ದಾರೆ. ಸುಳ್ಳಿನ ಕಂತೆ ಕಟ್ಟಿ ಜನರ ಕಣ್ಣಿಗೆ ಮಣ್ಣೆರಚುವ ಬಿಜೆಪಿಗರ ಕುತಂತ್ರ ಇಲ್ಲಿ ನಡೆಯುವುದಿಲ್ಲ ಎಂದು ಕುಟುಕಿದ್ದಾರೆ.

ರಾಜ್ಯ ಬಿಜೆಪಿ ಅಧ್ಯಕ್ಷ ವಿಜಯೇಂದ್ರ ರಚಿಸಿರುವ ಸತ್ಯ ಶೋಧನಾ ಸಮಿತಿ ಬಗ್ಗೆ ಅವರದ್ದೇ ಪಕ್ಷದ ಶಾಸಕ ಬಸನಗೌಡ ಪಾಟೀಲ ಯತ್ನಾಳ ಹಿಗ್ಗಾಮುಗ್ಗಾ ಟೀಕಿಸಿದ ಮೇಲೆ ಪುನಾರಚಿಸಲಾಗಿದೆ. ಇಷ್ಟೆಲ್ಲ ಆದ ಮೇಲೆ ಯತ್ನಾಳ್ ಜೊತೆಗೆ ಸಂಸದ ರಮೇಶ ಜಿಗಜಿಣಗಿ ಅವರನ್ನೂ ಸೇರಿಸಿದಂತೆ ನಟಿಸಿದ್ದಾರೆ. ಇದು ಆ ಪಕ್ಷದ ದುಸ್ಥಿತಿಗೆ ಹಿಡಿದ ಕನ್ನಡಿ. ಅವರದ್ದೇ ಸರ್ಕಾರದ ಅವಧಿಯಲ್ಲಿ ಜಿಲ್ಲೆಯ ರೈತರಿಗೆ ಕೊಟ್ಟಿರುವ ನೋಟಿಸ್‌ಗಳಿಗೆ ಮೊದಲು ಉತ್ತರ ಕೊಡಲಿ ಎಂದು ಎಂ.ಬಿ. ಪಾಟೀಲ ಆಗ್ರಹಿಸಿದ್ದಾರೆ.

ವಿಜಯಪುರ ಜಿಲ್ಲೆಯಲ್ಲಿ ವಕ್ಫ್ ಆಸ್ತಿ ಎಂದು ಹೇಳಿ ಯಾವ ರೈತರಿಗೂ ನೋಟಿಸ್ ಕೊಟ್ಟಿಲ್ಲ. ಇಲ್ಲದ ಸಮಸ್ಯೆ ಹುಟ್ಟುಹಾಕುತ್ತಿರುವ ಬಿಜೆಪಿ ನಾಯಕರು, ಮೊದಲು ತಮ್ಮಲ್ಲಿರುವ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಲಿ ಎಂದು ವ್ಯಂಗ್ಯವಾಡಿದ್ದಾರೆ.

ಸೋಮವಾರವಷ್ಟೇ ಸಚಿವರಾದ ಕೃಷ್ಣ ಭೈರೇಗೌಡ, ಎಂ.ಬಿ.ಪಾಟೀಲ ಹಾಗೂ ಜಮೀರ್ ಅಹಮದ್ ಖಾನ್ ಅವರು ಜಂಟಿ ಪತ್ರಿಕಾಗೋಷ್ಠಿ ನಡೆಸಿ, ಜಿಲ್ಲೆಯಲ್ಲಿ ವಕ್ಫ್ ಆಸ್ತಿ ಇರುವುದೇ 11 ಎಕರೆ ಎಂದು ಸ್ಪಷ್ಟಪಡಿಸಿದ್ದರು.

Read More
Next Story