ವಿಧಾನಮಂಡಲ ಅಧಿವೇಶನ | ಸರ್ಕಾರದ ವಿರುದ್ಧ ಹೋರಾಟಕ್ಕೆ ಬಿಜೆಪಿ ಕಾರ್ಯತಂತ್ರ
x

ವಿಧಾನಮಂಡಲ ಅಧಿವೇಶನ | ಸರ್ಕಾರದ ವಿರುದ್ಧ ಹೋರಾಟಕ್ಕೆ ಬಿಜೆಪಿ ಕಾರ್ಯತಂತ್ರ

ವಕ್ಫ್ ಆಸ್ತಿ ನೋಟಿಸ್ ವಿಚಾರವೇ ಅಧಿವೇಶನದಲ್ಲಿ ಬಿಜೆಪಿಯ ಪ್ರಮುಖ ಚರ್ಚೆಯಾಗಿರಲಿದೆ. ವಕ್ಫ್ ನೋಟಿಸ್ ಹಿಂಪಡೆದರೆ ಸಾಲದು. ವಕ್ಫ್ ಅಧಿಸೂಚನೆ ರದ್ದುಪಡಿಸುವಂತೆ ಒತ್ತಡ ಹೇರಲು ಬಿಜೆಪಿ ನಾಯಕರು ತೀರ್ಮಾನಿಸಿದ್ದಾರೆ.


ಬೆಳಗಾವಿಯಲ್ಲಿ ನಡೆಯಲಿರುವ ಚಳಿಗಾಲದ ಅಧಿವೇಶನದಲ್ಲಿ ವಕ್ಫ್, ರೇಷನ್ ಕಾರ್ಡ್ ರದ್ದತಿ, ಅಬಕಾರಿ ಇಲಾಖೆಯ ಲಂಚಾವತಾರ ಸೇರಿದಂತೆ ಹಲವು ವಿಚಾರಗಳಲ್ಲಿ ರಾಜ್ಯ ಸರ್ಕಾರದ ವಿರುದ್ಧ ತೀವ್ರ ಹೋರಾಟ ನಡೆಸಲು ಬಿಜೆಪಿ ನಿರ್ಧರಿಸಿದೆ.

ಬೆಂಗಳೂರಿನಲ್ಲಿ ಮಂಗಳವಾರ ಪ್ರತಿಪಕ್ಷ ನಾಯಕ ಆರ್.ಅಶೋಕ್ ನೇತೃತ್ವದಲ್ಲಿ ನಡೆದ ಹಿರಿಯ ಶಾಸಕರ ಸಭೆಯಲ್ಲಿ ಈ ಎಲ್ಲ ವಿಷಯಗಳ ಕುರಿತು ಸುದೀರ್ಧ ಚರ್ಚೆ ನಡೆಸಲಾಗಿದೆ. ಚಳಿಗಾಲ ಅಧಿವೇಶನದ ಕಡಿಮೆ ಸಮಯದಲ್ಲಿ ಸರ್ಕಾರವನ್ನು ಸಾಧ್ಯವಾದಷ್ಟು ಮಟ್ಟಿಗೆ ಇಕ್ಕಟ್ಟಿಗೆ ಸಿಲುಕಿಸಲು ನಿರ್ಧರಿಸಲಾಗಿದೆ.

ಬಿಜೆಪಿ ಹೋರಾಟ ವಿಷಯಗಳೇನು?

ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ರೈತರಿಗೆ ನೀಡಿರುವ ವಕ್ಫ್ ಆಸ್ತಿ ನೋಟಿಸ್ ವಿಚಾರವೇ ಅಧಿವೇಶನದಲ್ಲಿ ಬಿಜೆಪಿಯ ಪ್ರಮುಖ ಚರ್ಚೆಯಾಗಿರಲಿದೆ. ವಕ್ಫ್ ನೋಟಿಸ್ ಹಿಂಪಡೆದರೆ ಸಾಲದು. ವಕ್ಫ್ ಅಧಿಸೂಚನೆಯನ್ನೇ ರದ್ದುಪಡಿಸುವಂತೆ ಸರ್ಕಾರದ ಮೇಲೆ ಒತ್ತಡ ಹೇರಲು ನಾಯಕರು ತೀರ್ಮಾನಿಸಿದ್ದಾರೆ.

ಬಿಪಿಎಲ್ ಕಾರ್ಡ್ ರದ್ದು ಮಾಡುತ್ತಿರುವ ವಿಚಾರವನ್ನೂ ಬಿಜೆಪಿ ಗಂಭೀರವಾಗಿ ಚರ್ಚೆಗೆ ಇಡಲಿದೆ. ಗ್ಯಾರಂಟಿ ಯೋಜನೆಗಳಿಗೆ ಹಣ ಹೊಂದಿಸಲು ಬಡವರಿಗೆ ನೀಡುವ ಅಕ್ಕಿಗೂ ಕತ್ತರಿ ಹಾಕಲಾಗುತ್ತಿದೆ ಎಂದು ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಲು ಸಿದ್ಧತೆ ನಡೆಸಲಾಗಿದೆ. ಅಬಕಾರಿ ಇಲಾಖೆಯಲ್ಲಿನ ಲಂಚಾವತಾರದಲ್ಲಿ ಸಚಿವ ಆರ್.ಬಿ. ತಿಮ್ಮಾಪುರ ವಿರುದ್ಧ ಕ್ರಮಕ್ಕೂ ಒತ್ತಾಯಿಸಲಿದೆ. ಇದಲ್ಲದೇ ರೈತರಿಗೆ ತಲುಪದ ಬೆಳೆನಷ್ಟ ಪರಿಹಾರ, ಮಳೆಗಾಲದಲ್ಲಿ ಬೆಂಗಳೂರು ಎದುರಿಸುವ ಸಮಸ್ಯೆಗಳು, ವಾಲ್ಮೀಕಿ, ಭೋವಿ ನಿಗಮದ ಅವ್ಯವಹಾರ, ದೇಶವಿರೋಧಿಗಳ ಮೇಲಿನ ಪ್ರಕರಣ ಹಿಂಪಡೆಯುವ ಕುರಿತಂತೆಯೂ ಸರ್ಕಾರವನ್ನು ಪ್ರಶ್ನಿಸಲು ನಿರ್ಧರಿಸಲಾಗಿದೆ.

ಗುರುವಾರದ ಸರ್ಕಾರ ಎಂದ ಅಶೋಕ್

ಹಿರಿಯ ಶಾಸಕರ ಸಭೆ ನಡೆಸಿದ ಬಳಿಕ ಮಾತನಾಡಿದ ಪ್ರತಿಪಕ್ಷ ನಾಯಕ ಆರ್.ಅಶೋಕ್ ಅವರು, ಇದೊಂದು ಗುರುವಾರದ ಸರ್ಕಾರ. ಕೇವಲ ಒಂದು ದಿನ ಮಾತ್ರ ಸಚಿವರು, ಅಧಿಕಾರಿಗಳು ಸಭೆ ಮಾಡುತ್ತಾರೆ ಎಂದು ಆರೋಪಿಸಿದರು.

ಉತ್ತರ ಕರ್ನಾಟಕದ ಜಿಲ್ಲೆಗಳ ಸಮಸ್ಯೆಗಳ ಬಗ್ಗೆ ಸರ್ಕಾರ ತಲೆಕೆಡಿಸಿಕೊಳ್ಳುತ್ತಿಲ್ಲ. ಬ್ರ್ಯಾಂಡ್ ಬೆಂಗಳೂರು ಬದಲಿಗೆ ಮಳೆ ಬಂದಾಗ ಮುಳುಗುವ ಬೆಂಗಳೂರಾಗಿದೆ. ರಸ್ತೆ ಗುಂಡಿಗಳಿಂದ ವಾಹನ ಚಾಲಕರಿಗೆ ಬೆನ್ನು ನೋವು ಉಂಟಾಗಿದೆ. ಜಯನಗರ ಸೇರಿದಂತೆ ಅನೇಕ ಕ್ಷೇತ್ರಗಳ ಬಿಜೆಪಿ ಶಾಸಕರಿಗೆ ಅನುದಾನ ಕಡಿತವಾಗಿದೆ. ಈ ಎಲ್ಲಾ ವಿಷಯಗಳ ಬಗ್ಗೆ ಸರ್ಕಾರದ ವಿರುದ್ಧ ಹೋರಾಟ ನಡೆಸಲಾಗುವುದು ಎಂದು ತಿಳಿಸಿದರು.

ರಾಜ್ಯದಲ್ಲಿ ಅಧಿಕಾರಿಗಳಿಗೆ ಸರ್ಕಾರ ನೇಣಿನ ಭಾಗ್ಯ ನೀಡಿದೆ. ಒಂದೋ ಅಧಿಕಾರಿಗಳು ವರ್ಗಾವಣೆಯಾಗಬೇಕು, ಇಲ್ಲವೇ ನೇಣು ಹಾಕಿಕೊಳ್ಳಬೇಕು ಎಂಬ ಸ್ಥಿತಿ ಉಂಟಾಗಿದೆ. ರೌಡಿಗಳನ್ನು ಜೈಲಿಗೆ ಹಾಕುವ ಬದಲು ಅವರ ಮೇಲಿದ್ದ ಪ್ರಕರಣಗಳನ್ನು ಹಿಂಪಡೆಯಲಾಗಿದೆ ಎಂದು ದೂರಿದರು.

ನಮ್ಮದು ಒಂದೇ ತಂಡ

ಬಿಜೆಪಿ ಒಂದೇ ತಂಡವಾಗಿ ಸರ್ಕಾರದ ವಿರುದ್ಧ ಹೋರಾಡಲಿದೆ. ಬಿಜೆಪಿಯ ಎಲ್ಲ ನಾಯಕರು ಹಾಗೂ ಮುಖಂಡರೊಂದಿಗೆ ಹೋರಾಟ ಮಾಡುವ ಬಗ್ಗೆ ಚರ್ಚಿಸುತ್ತೇನೆ. ರಾಜ್ಯದ ಆರ್ಥಿಕ ಪರಿಸ್ಥಿತಿ ಅಧೋಗತಿಗೆ ಹೋಗಿದ್ದು, ಸಿಎಂ ಸಿದ್ದರಾಮಯ್ಯನವರಿಂದ ಸರ್ಕಾರ ಪಾಪರ್ ಆಗಿದೆ. ಜನರು ಕೂಡ ಈ ಬಗ್ಗೆ ಹೇಳುತ್ತಿದ್ದಾರೆ. ಒಂದೂವರೆ ವರ್ಷದಲ್ಲಿ ಯಾವುದೇ ಅಭಿವೃದ್ಧಿ ಕೆಲಸ ನಡೆದಿಲ್ಲ ಎಂದರು.

ವಿರೋಧ ಪಕ್ಷದಲ್ಲಿ ಕಾಂಗ್ರೆಸ್ ಇದ್ದಾಗ ಕೋವಿಡ್ ಹಗರಣ ಇರುವ ಬಗ್ಗೆ ಮಾತನಾಡಲಿಲ್ಲ. ಈಗ ಮಾತ್ರ ಆ ಬಗ್ಗೆ ಮಾತನಾಡುತ್ತಿದೆ. ನಮ್ಮ ಅವಧಿ ಹಾಗೂ ಈಗಿನ 16 ತಿಂಗಳ ಅವಧಿಯ ಆಡಳಿತದ ಎಲ್ಲವನ್ನೂ ಸಿಬಿಐಗೆ ವಹಿಸಲಿ. ನಾವು ತನಿಖೆಗೆ ತಯಾರಿದ್ದೇವೆ ಎಂದರು.

ನಮಗೂ ಇವಿಎಂ ಮೇಲೆ ಅನುಮಾನವಿದೆ

ಕಾಂಗ್ರೆಸ್ ನಾಯಕರಂತೆ ಇವಿಎಂ ಮೇಲೆ ನಮಗೂ ಅನುಮಾನವಿದೆ. ಆದ್ದರಿಂದ ಕಾಂಗ್ರೆಸ್ನ ಎಲ್ಲ ಶಾಸಕರು ರಾಜೀನಾಮೆ ನೀಡಲಿ. ನಂತರ ಒಂದಾಗಿ ಚುನಾವಣೆ ಎದುರಿಸಬಹುದು. ಮಹಾರಾಷ್ಟ್ರದಲ್ಲಿ ಯಾಕೆ ಸೋತಿದ್ದೇವೆ ಎಂದು ಕಾಂಗ್ರೆಸ್ ಆತ್ಮಾವಲೋಕನ ಮಾಡಿಕೊಳ್ಳಲಿ. ಅದು ಬಿಟ್ಟು ಇವಿಎಂ ಮೇಲೆ ಆರೋಪ ಮಾಡುವುದಲ್ಲ ಎಂದು ವಾಗ್ದಾಳಿ ನಡೆಸಿದರು.

ಚಳಿಗಾಲದ ಅಧಿವೇಶನವನ್ನು ಕೇವಲ ಎರಡು ವಾರ ಮಾತ್ರ ನಡೆಸಲು ಸರ್ಕಾರ ನಿರ್ಧರಿಸಿದೆ. ಸಾಕಷ್ಟು ಸಮಸ್ಯೆಗಳಿರುವ ಕಾರಣ ಇನ್ನೂ ಹೆಚ್ಚಿನ ಸಮಯಾವಕಾಶ ನೀಡುವಂತೆ ಒತ್ತಾಯಿಸಲಾಗುವುದು ಎಂದು ಅಶೋಕ್ ಹೇಳಿದರು.

Read More
Next Story