ಪರಿಷತ್‌ ಚುನಾವಣೆ | ಬಿಜೆಪಿ ಟಿಕೆಟ್‌ ಘೋಷಣೆ; ನೈರುತ್ಯ ಪದವೀಧರ ಕ್ಷೇತ್ರದಲ್ಲಿ ಬಂಡಾಯದ ಬಿಸಿ
x

ಪರಿಷತ್‌ ಚುನಾವಣೆ | ಬಿಜೆಪಿ ಟಿಕೆಟ್‌ ಘೋಷಣೆ; ನೈರುತ್ಯ ಪದವೀಧರ ಕ್ಷೇತ್ರದಲ್ಲಿ ಬಂಡಾಯದ ಬಿಸಿ

ವಿಧಾನ ಪರಿಷತ್‌ನ ಮೂರು ಶಿಕ್ಷಕರ ಮತ್ತು ಮೂರು ಪದವೀಧರರ ಕ್ಷೇತ್ರಗಳಿಗೆ ನಡೆಯಲಿರುವ ಚುನಾವಣೆಗೆ ಬಿಜೆಪಿ ಶನಿವಾರ ಟಿಕೆಟ್‌ ಘೋಷಿಸಿದೆ. ಅದರ ಬೆನ್ನಲ್ಲೇ ಉಡುಪಿ ಮಾಜಿ ಶಾಸಕ ರಘುಪತಿ ಭಟ್‌ ಬಂಡಾಯದ ಬಾವುಟ ಹಾರಿಸಿದ್ದಾರೆ


ರಾಜ್ಯದಲ್ಲಿ ಲೋಕಸಭಾ ಚುನಾವಣೆ ಮುಗಿದ ಬೆನ್ನಲ್ಲೇ ವಿಧಾನ ಪರಿಷತ್ತಿನ ಆರು ಸ್ಥಾನಗಳಿಗೆ ಚುನಾವಣಾ ಅಖಾಡ ಸಜ್ಜಾಗಿದೆ. ಆಡಳಿತಾರೂಢ ಕಾಂಗ್ರೆಸ್ ಈಗಾಗಲೇ ಆರೂ ಕ್ಷೇತ್ರಗಳ ಅಭ್ಯರ್ಥಿಗಳನ್ನು ಅಂತಿಮಗೊಳಿಸಿ ಪಟ್ಟಿ ಪ್ರಕಟಿಸಿದೆ. ಪ್ರತಿಪಕ್ಷ ಮೈತ್ರಿಕೂಟ ಎನ್ಡಿಎಯ ಬಿಜೆಪಿ ಕೂಡ ಐದು ಸ್ಥಾನಗಳಿಗೆ ತನ್ನ ಅಭ್ಯರ್ಥಿಗಳ ಪಟ್ಟಿಯನ್ನು ಶನಿವಾರ ರಾತ್ರಿ ಬಿಡುಗಡೆ ಮಾಡಿದೆ. ಉಳಿದ ಒಂದು ಸ್ಥಾನವನ್ನು ಮಿತ್ರ ಪಕ್ಷ ಜೆಡಿಎಸ್ಗೆ ಬಿಟ್ಟುಕೊಟ್ಟಿದ್ದು, ಜೆಡಿಎಸ್ ಇನ್ನೂ ಅಭ್ಯರ್ಥಿಯನ್ನು ಅಂತಿಮಗೊಳಿಸಿಲ್ಲ.

ಮೂರು ಪದವೀಧರ ಕ್ಷೇತ್ರಗಳು ಮತ್ತು ಮೂರು ಶಿಕ್ಷಕರ ಕ್ಷೇತ್ರಗಳ ವಿಧಾನ ಪರಿಷತ್ ಸ್ಥಾನಗಳಿಗೆ ಜೂನ್ 3 ರಂದು ಚುನಾವಣೆ ನಡೆಯಲಿದ್ದು, ಈಶಾನ್ಯ, ನೈರುತ್ಯ ಹಾಗೂ ಬೆಂಗಳೂರು ಪದವೀಧರ ಕ್ಷೇತ್ರಗಳಿಗೆ ಮತ್ತು ಆಗ್ನೇಯ, ನೃರುತ್ಯ ಹಾಗೂ ದಕ್ಷಿಣ ಶಿಕ್ಷಕರ ಕ್ಷೇತ್ರಗಳಿಗೆ ಮತದಾನ ನಡೆಯಲಿದೆ. ಮೇ 10ರಿಂದಲೇ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಆರಂಭವಾಗಿದ್ದು, ಮೇ 16 ನಾಮಪತ್ರ ಸಲ್ಲಿಕೆಗೆ ಕೊನೆಯ ದಿನ. ಮೇ 20ರಂದು ನಾಮಪತ್ರ ವಾಪಸ್ ಪಡೆಯಲು ಕೊನೆಯ ದಿನವಾಗಿದ್ದು, ಜೂನ್ 6ರಂದು ಮತ ಎಣಿಕೆ ನಡೆಯಲಿದೆ. ಆ ಹಿನ್ನೆಲೆಯಲ್ಲಿ ಸದ್ಯ ಚಾಲ್ತಿಯಲ್ಲಿರುವ ಚುನಾವಣಾ ನೀತಿ ಸಂಹಿತೆಯನ್ನು ರಾಜ್ಯದಲ್ಲಿ ಜೂನ್ 6ರವರೆಗೆ ವಿಸ್ತರಿಸಲಾಗಿದೆ.

ಆರೂ ಕ್ಷೇತ್ರಗಳ ಅಭ್ಯರ್ಥಿಗಳ ಹೆಸರನ್ನು ಕಾಂಗ್ರೆಸ್ ಸಾಕಷ್ಟು ಮುಂಚಿತವಾಗಿಯೇ ಘೋಷಿಸಿದ್ದು, ಈಶಾನ್ಯ ಪದವೀಧರ ಕ್ಷೇತ್ರಕ್ಕೆ ಡಾ ಚಂದ್ರಶೇಖರ ಪಾಟೀಲ್, ನೈರುತ್ಯ ಪದವೀಧರ ಕ್ಷೇತ್ರಕ್ಕೆ ಆಯನೂರು ಮಂಜುನಾಥ್, ಬೆಂಗಳೂರು ಪದವೀಧರ ಕ್ಷೇತ್ರಕ್ಕೆ ರಾಮೋಜಿ ಗೌಡ, ಆಗ್ನೇಯ ಶಿಕ್ಷಕರ ಕ್ಷೇತ್ರಕ್ಕೆ ಕೆ ಬಿ ಶ್ರೀನಿವಾಸ್, ನೈರುತ್ಯ ಶಿಕ್ಷಕರ ಕ್ಷೇತ್ರಕ್ಕೆ ಕೆ ಕೆ ಮಂಜುನಾಥ್ ಹಾಗೂ ದಕ್ಷಿಣ ಶಿಕ್ಷಕರ ಕ್ಷೇತ್ರಕ್ಕೆ ಮರಿತಿಬ್ಬೇಗೌಡ ಅವರ ಹೆಸರಿಗೆ ಟಿಕೆಟ್ ನೀಡಲಾಗಿದೆ.

ಬಿಜೆಪಿ ಟಿಕೆಟ್ ಘೋಷಣೆ ಬೆನ್ನಲ್ಲೇ ಬಂಡಾಯ

ಬಿಜೆಪಿ ನಾಮಪತ್ರ ಸಲ್ಲಿಕೆ ಆರಂಭವಾದ ಒಂದು ದಿನದ ಬಳಿಕ ತನ್ನ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿದೆ. ಈಶಾನ್ಯ ಪದವೀಧರ ಕ್ಷೇತ್ರದಿಂದ ಅಮರನಾಥ್ ಪಾಟೀಲ್, ನೈರುತ್ಯ ಪದವೀಧರ ಕ್ಷೇತ್ರದಿಂದ ಡಾ ಧನಂಜಯ ಸರ್ಜಿ, ಬೆಂಗಳೂರು ಪದವೀಧರ ಕ್ಷೇತ್ರದಿಂದ ಎ ದೇವೇಗೌಡ ಅವರನ್ನು ಕಣಕ್ಕಿಳಿಸುವುದಾಗಿ ಘೋಷಿಸಿದೆ. ಹಾಗೇ ಆಗ್ನೇಯ ಶಿಕ್ಷಕರ ಕ್ಷೇತ್ರದಿಂದ ವೈ ಎ ನಾರಾಯಣಸ್ವಾಮಿ ಮತ್ತು ದಕ್ಷಿಣ ಶಿಕ್ಷಕರ ಕ್ಷೇತ್ರದಿಂದ ಇ ಸಿ ನಿಂಗರಾಜು ಅವರಿಗೆ ಟಿಕೆಟ್ ಘೋಷಿಸಲಾಗಿದೆ. ನೈರುತ್ಯ ಶಿಕ್ಷಕರ ಕ್ಷೇತ್ರವನ್ನು ಮಿತ್ರ ಪಕ್ಷ ಜೆಡಿಎಸ್ಗೆ ಬಿಟ್ಟುಕೊಟ್ಟಿದೆ. ಈ ಕ್ಷೇತ್ರದಿಂದ ಜೆಡಿಎಸ್ ಅಭ್ಯರ್ಥಿಯಾಗಿ ಹಿರಿಯ ನಾಯಕ ಎಸ್ ಎಲ್ ಭೋಜೇಗೌಡ ಕಣಕ್ಕಿಳಿಯುವ ಸಾಧ್ಯತೆ ಇದೆ.

ಈ ನಡುವೆ, ಬಿಜೆಪಿ ಅಳೆದು ಸುರಿದು ಟಿಕೆಟ್ ಘೋಷಿಸಿದ್ದರೂ ಜೆಡಿಎಸ್ ನೊಂದಿಗೆ ಅದರ ಚುನಾವಣಾ ಹೊಂದಾಣಿಕೆಯ ಸೂತ್ರದ ಪ್ರಕಾರ ಅನಿವಾರ್ಯವಾಗಿ ನೈರುತ್ಯ ಶಿಕ್ಷಕರ ಕ್ಷೇತ್ರವನ್ನು ಆ ಪಕ್ಷಕ್ಕೆ ಬಿಟ್ಟುಕೊಡಬೇಕಾಗಿದೆ. ಜೊತೆಗೆ ಕಳೆದ ವರ್ಷದ ವಿಧಾನಸಭಾ ಚುನಾವಣೆಯ ವೇಳೆ ಪಕ್ಷಕ್ಕೆ ಹಾನಿ ಮಾಡಬಹುದಾದ ಲೆಕ್ಕಾಚಾರದಲ್ಲಿ ಧನಂಜಯ್ ಸರ್ಜಿ ಅವರಂಥವರನ್ನು ಮನವೊಲಿಸಿ ಚುನಾವಣಾ ಕಣದಿಂದ ಹಿಂದೆ ಸರಿಯುವಂತೆ ಮಾಡಿದ ಪರಿಣಾಮವಾಗಿ ಅವರಿಗೆ ಇದೀಗ ಕೊಟ್ಟ ಮಾತಿನಂತೆ ಟಿಕೆಟ್ ನೀಡಬೇಕಿತ್ತು. ಹಾಗಾಗಿ ಅವರಿಗೆ ಟಿಕೆಟ್ ನೀಡಿದ್ದರಿಂದಾಗಿ ಆ ಕ್ಷೇತ್ರದ ಟಿಕೆಟ್ ಆಕಾಂಕ್ಷಿಗಳಾಗಿದ್ದ ಪಕ್ಷದ ಹಿರಿಯ ನಾಯಕರು ಇದೀಗ ಬಂಡಾಯದ ಬಾವುಟ ಹಾರಿಸಿದ್ದಾರೆ.

ಶಿವಮೊಗ್ಗ, ದಾವಣಗೆರೆ(ಹೊನ್ನಾಳಿ, ಚನ್ನಗಿರಿ ತಾಲೂಕು ಮಾತ್ರ), ಚಿಕ್ಕಮಗಳೂರು, ಕೊಡಗು, ಉಡುಪಿ, ದಕ್ಷಿಣಕನ್ನಡ ಜಿಲ್ಲೆಗಳನ್ನು ಒಳಗೊಂಡಿದ್ದು ಒಟ್ಟು ಐದು ಲೋಕಸಭಾ ಕ್ಷೇತ್ರ ಮತ್ತು ಮೂವತ್ತು ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯನ್ನು ಹೊಂದಿದೆ. ಆ ಹಿನ್ನೆಲೆಯಲ್ಲಿ ಈ ಕ್ಷೇತ್ರದ ಟಿಕೆಟ್ಗಾಗಿ ಮಲೆನಾಡಿನವರು, ಕರಾವಳಿಯವರ ನಡುವೆ ಪೈಪೋಟಿ ಸಾಮಾನ್ಯ. ಆದರೆ, ಪ್ರತಿ ಬಾರಿ ಬಿಜೆಪಿ ನೃರುತ್ಯ ಶಿಕ್ಷಕರ ಕ್ಷೇತ್ರ ಮತ್ತು ನೈರುತ್ಯ ಪದವೀಧರರ ಕ್ಷೇತ್ರಗಳನ್ನು ಮಲೆನಾಡಿಗೆ ಒಂದು, ಕರಾವಳಿಗೆ ಒಂದರಂತೆ ಹಂಚಿ ಎರಡೂ ಕಡೆಯವರನ್ನು ಸಮಾಧಾನಪಡಿಸುವ ತಂತ್ರ ನಡೆಸುತ್ತಿತ್ತು. ಆದರೆ, ಈ ಬಾರಿ ಮಿತ್ರಪಕ್ಷ ಜೆಡಿಎಸ್ಗೆ ನೈರುತ್ಯ ಶಿಕ್ಷಕರ ಕ್ಷೇತ್ರವನ್ನು ಬಿಟ್ಟುಕೊಟ್ಟಿರುವುದರಿಂದ ಬಿಜೆಪಿ ಪಾಲಿಗೆ ನೈರುತ್ಯ ಪದವೀಧರರ ಕ್ಷೇತ್ರ ಮಾತ್ರ ಉಳಿದಿದೆ.

ಆದರೆ, ಕಳೆದ ವಿಧಾನಸಭಾ ಚುನಾವಣೆಯಲ್ಲಿ ಪಕ್ಷದ ಟಿಕೆಟ್ ನಿರಾಕರಿಸಲಾಗಿದ್ದ ಉಡುಪಿ ಶಾಸಕ ರಘುಪತಿ ಭಟ್ ಅವರಿಗೆ ಆ ವೇಳೆ ಪಕ್ಷದ ವರಿಷ್ಠರು ವಿಧಾನ ಪರಿಷತ್ ಚುನಾವಣೆಯಲ್ಲಿ ಟಿಕೆಟ್ ನೀಡುವ ಭರವಸೆ ನೀಡಿದ್ದರು ಎನ್ನಲಾಗಿದೆ. ಈ ನಡುವೆ ಶಿವಮೊಗ್ಗ ವಿಧಾನಸಭಾ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯಲು ಸಜ್ಜಾಗಿದ್ದ ಜನಪ್ರಿಯ ವೈದ್ಯರಾದ ಡಾ ಧನಂಜಯ ಸರ್ಜಿ ಅವರಿಗೂ ಅದೇ ಕ್ಷೇತ್ರದ ಟಿಕೆಟ್ ಭರವಸೆ ನೀಡಿ ಪಕ್ಷಕ್ಕೆ ಸೇರಿಸಿಕೊಳ್ಳುವ ಮೂಲಕ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಗೆ ಅನುಕೂಲ ಮಾಡಿಕೊಡಲಾಗಿತ್ತು. ಹಾಗಾಗಿ ನೃರುತ್ಯ ಪದವೀಧರರ ಕ್ಷೇತ್ರದ ಟಿಕೆಟ್ಗಾಗಿ ಧನಂಜಯ್ ಸರ್ಜಿ ಮತ್ತು ರಘುಪತಿ ಭಟ್ ನಡುವೆ ತೀವ್ರ ಪೈಪೋಟಿ ಇತ್ತು. ಈ ನಡುವೆ ವಿಕಾಸ್ ಪುತ್ತೂರು ಎಂಬ ಬಿಜೆಪಿ ಯುವ ಮುಖಂಡ ವಿಕಾಸ್ ಪುತ್ತೂರು ಕೂಡ ಟಿಕೆಟ್ ಆಕಾಂಕ್ಷಿಯಾಗಿದ್ದರು.

ಆದರೆ, ಇದೀಗ ಬಿಜೆಪಿ, ಶಿವಮೊಗ್ಗ ವೈದ್ಯ ಡಾ ಧನಂಜಯ ಸರ್ಜಿ ಅವರಿಗೆ ಟಿಕೆಟ್ ಘೋಷಿಸಿದ್ದು, ಅದರ ಬೆನ್ನಲ್ಲೇ ಮಾಜಿ ಶಾಸಕ ರಘುಪತಿ ಭಟ್ ಅವರು ಬಂಡಾಯದ ಬಾವುಟ ಹಾರಿಸಿದ್ದಾರೆ. ತಮ್ಮ ಸಾಮಾಜಿಕ ಜಾಲತಾಣ ಖಾತೆಗಳಲ್ಲಿ ಈ ಬಗ್ಗೆ ಬಹಿರಂಗ ಅಸಮಾಧಾನ ಹೊರಹಾಕಿರುವ ರಘುಪತಿ ಭಟ್, ನೈರುತ್ಯ ಶಿಕ್ಷಕರು ಮತ್ತು ಪದವೀಧರರ ಕ್ಷೇತ್ರಗಳೆರಡಕ್ಕೂ ಪಕ್ಷ ಉಡುಪಿ, ಚಿಕ್ಕಮಗಳೂರು, ದಕ್ಷಿಣ ಕನ್ನಡ, ಕೊಡಗು ಭಾಗದ ಪಕ್ಷದ ನಾಯಕರಿಗೆ ಅವಕಾಶ ನಿರಾಕರಿಸಿದೆ. ನಾಲ್ಕು ದಶಕಗಳ ಸಂಪ್ರದಾಯವನ್ನು ಮುರಿದು ಅನ್ಯಾಯ ಮಾಡಲಾಗಿದೆ. ಬಿಜೆಪಿಯ ಈ ನಿಲುವಿನಿಂದ ವಿಚಲಿತನಾಗಿದ್ದೇನೆ ಎಂದು ಹೇಳಿಕೊಂಡಿದ್ದಾರೆ.

ಅಲ್ಲದೆ, “ಕಳೆದ ವಿಧಾನಸಭಾ ಚುನಾವಣೆಯಲ್ಲಿ ನನಗೆ ಯಾವುದೇ ಮಾಹಿತಿ ನೀಡದೆ ಟಿಕಟ್ ನಿರಾಕರಿಸಲಾಗಿತ್ತು. ಆಗ ನನ್ನ ಹೆಸರಿನ ಬದಲು ಬೇರೆ ಹೆಸರು ಘೋಷಣೆಯಾಗಿದ್ದು ನನಗೆ ಟಿವಿ ವರದಿಯ ಮೂಲಕ ತಿಳಿಯಿತು. ಆಗ ಪದವೀಧರ ಕ್ಷೇತ್ರ ಪರಿಷತ್ ಚುನಾವಣೆಯಲ್ಲಿ ಅವಕಾಶ ನೀಡುವುದಾಗಿ ವರಿಷ್ಠರು ಭರವಸೆ ನೀಡಿದ್ದರು. ಹಾಗಾಗಿ ಬೇಸರಿಸಿಕೊಳ್ಳದೆ ವಿಧಾನ ಸಭಾ ಚುಣಾವಣೆಯಲ್ಲಿ ಮತ್ತು ಲೋಕಸಭಾ ಚುನಾವಣೆಯ ಶಿವಮೊಗ್ಗ ಕ್ಷೇತ್ರದ ಪ್ರಭಾರಿ ಉಸ್ತುವಾರಿಯಾಗಿ ಕೆಲಸ ಮಾಡಿದೆ. ಈಗ ವಿಧಾನ ಪರಿಷತ್ ಟಿಕೆಟ್ ಘೋಷಣೆಯಾಗಿದೆ. ಈ ಅನ್ಯಾಯಕ್ಕೆ ನ್ಯಾಯ ಕೊಡುವವರು ಯಾರು?” ಎಂದೂ ರಘುಪತಿ ಭಟ್ ಹೇಳಿಕೊಂಡಿದ್ದಾರೆ.

ಕಾಂಗ್ರೆಸ್ಸಿಗೂ ನೈರುತ್ಯದಲ್ಲಿ ಬಂಡಾಯದ ಬಿಸಿ

ನೃರುತ್ಯ ಪದವೀಧರ ಕ್ಷೇತ್ರದ ವಿಷಯದಲ್ಲಿ ಕೇವಲ ಬಿಜೆಪಿ ಮಾತ್ರವಲ್ಲದೆ, ಕಾಂಗ್ರೆಸ್ ಪಕ್ಷದಲ್ಲೂ ಬಂಡಾಯದ ಬಾವುಟ ಹಾರಿಸಲಾಗಿದೆ. ಕ್ಷೇತ್ರದಲ್ಲಿ ಎರಡು ಬಾರಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿ ಸೋಲು ಕಂಡಿದ್ದ ಎಸ್ ಪಿ ದಿನೇಶ್ ಅವರು ಮೂರನೇ ಅವಕಾಶ ಕೋರಿದ್ದರು. “ಕೆಪಿಸಿಸಿ ಅಧ್ಯಕ್ಷರು ವರ್ಷದ ಹಿಂದೆಯೇ ನನಗೆ ಟಿಕೆಟ್ ಖಚಿತಪಡಿಸಿ ಚುನಾವಣೆ ತಯಾರಿ ಮಾಡಿಕೊಳ್ಳುವಂತೆ ಹೇಳಿದ್ದರು. ಅವರ ಸೂಚನೆಯಂತೆ ಎಲ್ಲಾ ತಯಾರಿ ಮಾಡಿಕೊಂಡಿದ್ದೆ. ಆದರೆ, ಇದೀಗ ಪಕ್ಷಾಂತರಿ ಆಯನೂರು ಮಂಜುನಾಥ್ ಅವರಿಗೆ ಪಕ್ಷದ ಟಿಕೆಟ್ ಘೋಷಣೆಯಾಗಿದೆ. ಹಾಗಾಗಿ ನಾನು ಅನಿವಾರ್ಯವಾಗಿ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯುತ್ತಿದ್ದೇನೆ” ಎಂದು ಎಸ್ ಪಿ ದಿನೇಶ್ ಹೇಳಿದ್ದಾರೆ.

ಹಾಗಾಗಿ ನೈರುತ್ಯ ಪದವೀಧರ ಕ್ಷೇತ್ರದಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷಗಳೆರಡಕ್ಕೂ ಬಂಡಾಯದ ಬಿಸಿ ತಟ್ಟುವ ಸಾಧ್ಯತೆಗಳು ಹೆಚ್ಚಿವೆ.

Read More
Next Story