
ರಾಜ್ಯ ಬಿಜೆಪಿ ನಾಯಕತ್ವಕ್ಕೆ ಭಿನ್ನರ ಬಣದ ತಿರುಗೇಟು ; ಬೆಂಗಳೂರಿನಲ್ಲಿ ಬಾಂಗ್ಲಾ ವಲಸಿಗರ ಸಮೀಕ್ಷೆ
ವಕ್ಫ್ ಆಸ್ತಿಗಳ ರಕ್ಷಣೆಗಾಗಿ ಹೋರಾಟ ನಡೆಸಿ, ಹೈಕಮಾಂಡ್ ಗೆ ವರದಿ ನೀಡಿದ್ದ ಭಿನ್ನರ ಬಣ ಇದೀಗ ಬೆಂಗಳೂರಿನಲ್ಲಿ ಅಕ್ರಮವಾಗಿ ನೆಲೆಸಿರುವ ಬಾಂಗ್ಲಾ ವಲಸಿಗರ ಪತ್ತೆಗೆ ಸಮೀಕ್ಷೆ ನಡೆಸಿ ವರದಿ ನೀಡಲು ಸಜ್ಜಾಗಿದೆ.
ಬಿಜೆಪಿ ನಾಯಕತ್ವದ ವಿರುದ್ಧ ಬಂಡಾಯ ಸಾರಿರುವ ಭಿನ್ನರ ಬಣವು ರಾಜ್ಯ ಸರ್ಕಾರದ ಲೋಪ, ರಾಜ್ಯದ ಸಮಸ್ಯೆಗಳ ಮೇಲೆ ಗಮನ ಕೇಂದ್ರೀಕರಿಸುವ ಮೂಲಕ ಹೈಕಮಾಂಡ್ ನಾಯಕರಿಗೆ ಪ್ರತಿಪಕ್ಷದ ನಿರ್ಲಕ್ಷ್ಯಗಳನ್ನು ಮನದಟ್ಟು ಮಾಡಿಕೊಡುವ ಪ್ರಯತ್ನ ಆರಂಭಿಸಿದೆ.
ಈಗಾಗಲೇ ವಕ್ಫ್ ಆಸ್ತಿಗಳ ರಕ್ಷಣೆಗಾಗಿ ಹೋರಾಟ ನಡೆಸಿ, ಹೈಕಮಾಂಡ್ ಗೆ ವರದಿ ನೀಡಿದ್ದ ಭಿನ್ನರ ಬಣ ಇದೀಗ ಬೆಂಗಳೂರಿನಲ್ಲಿ ಅಕ್ರಮವಾಗಿ ನೆಲೆಸಿರುವ ಬಾಂಗ್ಲಾ ವಲಸಿಗರ ಪತ್ತೆಗೆ ಸಮೀಕ್ಷೆ ನಡೆಸಿ ವರದಿ ನೀಡಲು ಸಜ್ಜಾಗಿದೆ.
ಆ ಮೂಲಕ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಹಾಗೂ ಪ್ರತಿಪಕ್ಷ ನಾಯಕ ಆರ್. ಅಶೋಕ್ ಅವರ ನಿರ್ಲಕ್ಷ್ಯಗಳನ್ನು ಹೈಕಮಾಂಡ್ ತೋರಿಸುವ ಪ್ರಯತ್ನ ಅರಂಭಿಸಿದೆ.
ರಾಜ್ಯ ಅಧ್ಯಕ್ಷರ ಬದಲಾವಣೆಗೆ ಪಟ್ಟು ಹಿಡಿದು ಪಕ್ಷದಿಂದಲೇ ಉಚ್ಚಾಟನೆಗೊಂಡಿರುವ ವಿಜಯಪುರ ಶಾಸಕ ಬಸನಗೌಡ ಪಾಟೀಲ ಯತ್ನಾಳ್ ನೇತೃತ್ವದ ಬಣವು ಈಚೆಗೆ ಬೆಂಗಳೂರು ಹಾಗೂ ದಾವಣಗೆರೆಯಲ್ಲಿ ಸಭೆ ನಡೆಸಿದ್ದು, ರಾಜ್ಯ ಬಿಜೆಪಿ ನಾಯಕತ್ವದ ಉದಾಸೀನತೆ ಹಾಗೂ ಸರ್ಕಾರದ ಲೋಪಗಳ ಕುರಿತು ಅಂಕಿ ಅಂಶಗಳ ಸಮೇತ ಹೈಕಮಾಂಡ್ ಗೆ ವರದಿ ನೀಡಲು ನಿರ್ಧರಿಸಿ, ಕಾರ್ಯ ಪ್ರವೃತ್ತವಾಗಿದೆ.
ಯತ್ನಾಳ್ ಬಣದಲ್ಲಿ ಗುರುತಿಸಿಕೊಂಡಿರುವ ಮಾಜಿ ಸಚಿವ ಅರವಿಂದ ಲಿಂಬಾವಳಿ ಅವರು ತಮ್ಮ ಕ್ಷೇತ್ರ ಮಹದೇವಪುರದಲ್ಲಿ ಅಕ್ರಮವಾಗಿ ನೆಲೆಸಿರುವ ಬಾಂಗ್ಲಾ ಪ್ರಜೆಗಳ ಸಮೀಕ್ಷೆ ನಡೆಸಿದ್ದು, ವರದಿ ಸಿದ್ದಪಡಿಸಿದ್ದಾರೆ. ಶೀಘ್ರದಲ್ಲೇ ವರದಿಯನ್ನು ಹೈಕಮಾಂಡ್ ನಾಯಕರಿಗೆ ನೀಡಲು ಭಿನ್ನರ ಬಣ ತೀರ್ಮಾನಿಸಿದೆ.
ಮಹದೇವಪುರ ಬಿಜೆಪಿ ಮಂಡಲದಿಂದ ಒಟ್ಟು 5 ತಂಡಗಳು ಅಕ್ರಮ ಬಾಂಗ್ಲಾ ವಲಸಿಗರ ಕುರಿತು ಸಮೀಕ್ಷೆ ನಡೆಸಿದ್ದು, ಅತಿ ಹೆಚ್ಚು ವಲಸಿಗರು ನಕಲಿ ದಾಖಲೆಗಳನ್ನು ಸೃಷ್ಟಿಸಿಕೊಂಡು ವಾಸವಿರುವುದು ಪತ್ತೆಯಾಗಿದೆ.
ಬೆಂಗಳೂರಿನಲ್ಲಿ ನೆಲೆಸಿರುವ ಬಹುತೇಕ ವಲಸಿಗರು ಮಧ್ಯವರ್ತಿಗಳ ಮೂಲಕ ನಕಲಿ ಆಧಾರ್ ಕಾರ್ಡ್ ಮತ್ತು ಮತದಾರರ ಗುರುತಿನ ಚೀಟಿ ಪಡೆದು ವಾಸ್ತವ್ಯ ಹೂಡಿರುವುದು ಪತ್ತೆಯಾಗಿದೆ ಎಂದು ಅರವಿಂದ ಲಿಂಬಾವಳಿ ಹೇಳಿದ್ದಾರೆ.
ಬೆಂಗಳೂರಿನ ಮಹಾದೇವಪುರ ಕ್ಷೇತ್ರದಲ್ಲಿ ಕಳೆದ ಒಂದು ತಿಂಗಳಿಂದ ಸಮೀಕ್ಷೆ ನಡೆಸಿ ವರದಿ ಸಿದ್ದಪಡಿಸಲಾಗಿದೆ. ಕೇಂದ್ರ ಸರ್ಕಾರ ಅಕ್ರಮವಾಗಿ ನೆಲೆಸಿರುವ ಬಾಂಗ್ಲಾ ನಿವಾಸಿಗಳನ್ನು ಹೊರಹಾಕಲು ಕ್ರಮ ಕೈಗೊಂಡಿರುವ ಹಿನ್ನೆಲೆಯಲ್ಲಿ ಬೆಂಗಳೂರಿನ ಈ ವರದಿ ಕೂಡ ನೆರವಾಗಲಿದೆ ಎನ್ನಲಾಗಿದೆ.
ಬಹುತೇಕ ಬಾಂಗ್ಲಾ ವಲಸಿಗರು ಕೋಲ್ಕತ್ತಾ ಆಧಾರ್ ಕಾರ್ಡ್ ಪಡೆದರೆ, ಇನ್ನೂ ಕೆಲವರು ಕೇರಳದ ಮತದಾರರ ಗುರುತಿನ ಚೀಟಿ ಪಡೆದು ಬೆಂಗಳೂರಿನಲ್ಲಿ ವಾಸ್ತವ್ಯ ಹೂಡಿದ್ದಾರೆ.
ಬಿಜೆಪಿ ಭಿನ್ನರ ಬಣ ಕ್ರಿಯಾಶೀಲ
ರಾಜ್ಯ ಬಿಜೆಪಿ ನಾಯಕತ್ವದ ರಾಜಕೀಯ ಮಾಡುವುದರಲ್ಲೇ ನಿರತವಾಗಿದೆ. ಸರ್ಕಾರದ ಭ್ರಷ್ಟಾಚಾರ ಹಾಗೂ ಆಡಳಿತ ಲೋಪಗಳ ಬಗ್ಗೆ ತಲೆಕೆಡಿಸಿಕೊಳ್ಳುತ್ತಿಲ್ಲ ಎಂದು ದೂರಿರುವ ಭಿನ್ನರ ಬಣದ ನಾಯಕರು ತಾವೇ ಹೆಚ್ಚು ಸಕ್ರಿಯರಾಗುವ ಮೂಲಕ ಬಿ.ವೈ.ವಿಜಯೇಂದ್ರ ವಿರುದ್ಧ ಅಸಮಾಧಾನ ಹೊರಹಾಕುತ್ತಿದ್ದಾರೆ.
ಈ ಹಿಂದೆ ಕೂಡ ಬಸನಗೌಡ ಯತ್ನಾಳ್ ಅವರು ವಿಜಯೇಂದ್ರ ಹಾಗೂ ಯಡಿಯೂರಪ್ಪ ವಿರುದ್ಧ ಬಹಿರಂಗವಾಗಿ ಆರೋಪಗಳನ್ನು ಮಾಡಿದ್ದರು. ಕೇಂದ್ರದ ಶಿಸ್ತು ಸಮಿತಿ ವತಿಯಿಂದ ಎರಡು ಬಾರಿ ಶೋಕಾಷ್ ನೋಟಿಸ್ ಪಡೆದಿದ್ದ ಯತ್ನಾಳ್ ಅವರನ್ನು ಕೊನೆಗೆ ಪಕ್ಷದಿಂದ ಉಚ್ಚಾಟನೆ ಮಾಡಲಾಗಿತ್ತು. ಕೇಂದ್ರ ನಾಯಕರ ಈ ಕ್ರಮಕ್ಕೆ ಬೇಸರ ವ್ಯಕ್ತಪಡಿಸಿದ್ದ ಬಣದ ನಾಯಕರು ಇದೀಗ ನಿಜವಾದ ಹೋರಾಟ ಏನೆಂಬುದನ್ನು ತೋಡಿಸಿಕೊಡುವ ಪ್ರಯತ್ನಕ್ಕೆ ಇಳಿದಿದ್ದಾರೆ.