ಬಿಜೆಪಿ ಭಿನ್ನಮತ | ಬೆಳಗಾವಿ ಸಭೆ ಬೆನ್ನಲ್ಲೇ ವಿಜಯೇಂದ್ರ ರಾಜೀನಾಮೆಗೆ ಶಾಸಕ ಬಿಪಿ ಹರೀಶ್ ಒತ್ತಾಯ
x

ಬಿಜೆಪಿ ಭಿನ್ನಮತ | ಬೆಳಗಾವಿ ಸಭೆ ಬೆನ್ನಲ್ಲೇ ವಿಜಯೇಂದ್ರ ರಾಜೀನಾಮೆಗೆ ಶಾಸಕ ಬಿಪಿ ಹರೀಶ್ ಒತ್ತಾಯ


ʻʻಬಿ.ವೈ.ವಿಜಯೇಂದ್ರ ಅವರೇ ತಾವು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ, ಮತ್ತೊಮ್ಮೆ ಚುನಾವಣೆಗೆ ಸ್ಪರ್ಧಿಸಿ ಗೆದ್ದು ಬನ್ನಿ. ಏಕೆಂದರೆ ಕಾಂಗ್ರೆಸ್​ ಪಕ್ಷದ ಭಿಕ್ಷೆಯಿಂದ ನಮ್ಮ ಪಕ್ಷದ ರಾಜ್ಯಾಧ್ಯಕ್ಷರು ಶಾಸಕರಾಗಿರಬೇಕಾದ ಅವಶ್ಯಕತೆ ಇಲ್ಲʼʼ ಎಂದು ಹರಿಹರ ಶಾಸಕ ಬಿ.ಪಿ. ಹರೀಶ್‌ ಹೇಳಿದ್ದಾರೆ.

ದಾವಣಗೆರೆಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ʻʻಎಲ್ಲಾ ಪಕ್ಷದ ನಾಯಕರು ಹೊಂದಾಣಿಕೆ ರಾಜಕೀಯ ಮಾಡುತ್ತಾರೆ ಎಂದು ನಾನು ಈ ಹಿಂದೆಯೇ ಹೇಳಿದ್ದೆ. ಇವತ್ತು ಅದು ಸತ್ಯ ಎನ್ನುವಂತೆ ಡಿಸಿಎಂ ಡಿ.ಕೆ.ಶಿವಕುಮಾರ್ ಅವರು, ʻಹೇ ವಿಜಯೇಂದ್ರ ನೀನು ಕಾಂಗ್ರೆಸ್​ ಕೊಟ್ಟ ಭಿಕ್ಷೆಯಿಂದ ಶಾಸಕರಾಗಿರುವುದು, ನಾಗರಾಜ್​ ಗೌಡರನ್ನು ಶಿಕಾರಿಪುರದಲ್ಲಿ ನಿಲ್ಲಿಸಿದ್ದರೆ ಗೊತ್ತಾಗುತ್ತಿತ್ತು ನಿನ್ನ ಯೋಗ್ಯತೆ" ಎಂದು ಹೇಳಿದ್ದಾರೆ. ನಾನು ಅಂದು ಹೇಳಿದ್ದ ಮ್ಯಾಚ್‌​ಫಿಕ್ಸಿಂಗ್‌ ವಿಷಯವನ್ನು ಕಾಂಗ್ರೆಸ್ ಪಕ್ಷದ​ ಅಧ್ಯಕ್ಷರೇ ಒಪ್ಪಿಕೊಂಡಿದ್ದಾರೆʼʼ ಎಂದರು.

ʻʻಯಡಿಯೂರಪ್ಪ‌ ಅವರು ಮೊದಲಿನ ಹಾಗೆ ಈಗ ಇಲ್ಲ. ಅವರು ಶ್ರೀಮಂತರ ಸಹವಾಸಕ್ಕೆ ಬಿದ್ದು, ಒಳ ಒಪ್ಪಂದ ಮಾಡಿಕೊಳ್ಳುತ್ತಿದ್ದಾರೆ. ಬಿ.ವೈ.ವಿಜಯೇಂದ್ರ ಹೊಂದಾಣಿಕೆಯಲ್ಲಿ ಮುಂಚೂಣಿಯಲ್ಲಿದ್ದಾರೆ. ಕಾಂಗ್ರೆಸ್ ಹಾಗೂ ಬಿಜೆಪಿಯಲ್ಲಿನ ಒಳಒಪ್ಪಂದ ಹಾಗೂ ಹೊಂದಾಣಿಕೆ ರಾಜಕಾರಣ ಈಗ ಬಯಲಾಗುತ್ತಿದೆ. ಫಾರ್ಮ್​ ಹೌಸ್‌ನಲ್ಲಿ ಜಿಂಕೆ ಪತ್ತೆಯಾದ ಪ್ರಕರಣದಲ್ಲಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನ್​ ಬಚಾವ್ ಆಗಲು ಅಂದು ಸಿಎಂ ಆಗಿದ್ದ ಬಸವರಾಜ್ ಬೊಮ್ಮಾಯಿ‌ ಹಾಗೂ ಬಿ.ಎಸ್.ಯಡಿಯೂರಪ್ಪ ಅವರೇ ಕಾರಣ. ಈ ಬಗ್ಗೆ ಪಕ್ಷದ ವರಿಷ್ಠರಿಗೆ ದೂರ ಸಹ‌ ನೀಡಲಾಗಿದೆ. ಜಿಂಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ಸಲ್ಮಾನ್ ಖಾನ್ ಶಿಕ್ಷೆ ಅನುಭವಿಸಿ ಬಂದರೆ, ಸಚಿವ ಮಲ್ಲಿಕಾರ್ಜುನ್​ಗೆ ಮಾತ್ರ ಶಿಕ್ಷೆಯಾಗಲಿಲ್ಲ. ಇದಕ್ಕೆ ಕಾರಣ ಹೊಂದಾಣಿಕೆ ರಾಜಕಾರಣ. ಇನ್ನು ವಿಜಯೇಂದ್ರ ವಿರುದ್ಧ ಬ್ಲ್ಯಾಕ್‌ಮೇಲ್ ರಾಜಕಾರಣ ಮಾಡುತ್ತಿರುವ ಡಿ.ಕೆ.ಸುರೇಶ್‌ ಅವರಿಗೂ ಶಿಕ್ಷೆ ಆಗಬೇಕುʼʼ ಎಂದು ಒತ್ತಾಯಿಸಿದರು.

ʻʻಬೆಳಗಾವಿಯಲ್ಲಿ ಶಾಸಕ ಬಸನಗೌಡ ಪಾಟೀಲ್​ ಯತ್ನಾಳ್ ನೇತೃತ್ವದಲ್ಲಿ ಸಮಾನ ಮನಸ್ಕರು ಸೇರಿ ಸಭೆ ನಡೆಸಿದ್ದೇವೆ. ಆ ಸಭೆಯಲ್ಲಿ ಹೊಂದಾಣಿಕೆ ರಾಜಕಾರಣದ ಬಗ್ಗೆ ವರಿಷ್ಠರ ಗಮನ ಸೆಳೆಯಲಾಗಿದೆ. ಬಲಿಷ್ಠವಾಗಿ ಪಕ್ಷ ಕಟ್ಟುವವರು ಮಾತ್ರ ಸಭೆ ಸೇರಿದ್ದೆವು. ರಾಜ್ಯಾಧ್ಯಕ್ಷರ ವಿರುದ್ಧ ರಾಷ್ಟ್ರೀಯ ನಾಯಕರಿಗೆ ನಾವು ದೂರು ನೀಡಿದ್ದೇವೆ. ಲೋಕಸಭಾ ಚುನಾವಣೆಯಲ್ಲಿ ಶಾಮನೂರು ಮನೆತನದ ಜೊತೆ ಹೊಂದಾಣಿಕೆ ಮಾಡಿಕೊಂಡಿದ್ದೀರಿ. ಅವರ ಪರ ಚುನಾವಣಾ ಕೆಲಸ ಮಾಡಿಸಿದ್ದೀರಿ. ಆದ್ದರಿಂದ ನಿನ್ನೆ ಸಭೆ ಮಾಡಿದ್ದೇವೆ. ನಮ್ಮ ಪಕ್ಷಕ್ಕೆ ಪರ್ಯಾಯ ನಾಯಕರ ಅವಶ್ಯಕತೆ ಇದೆ. ಮುಂದಿನ ದಿನಗಳಲ್ಲಿ ಬೆಂಗಳೂರಿನಲ್ಲೂ ಸಭೆ ಮಾಡುತ್ತೇವೆ, ಅಲ್ಲಿ ಹೆಚ್ಚು ನಾಯಕರನ್ನು ಸೇರಿಸುತ್ತೇವೆʼʼ ಎಂದು ಹೇಳಿದರು.

ಬೆಳಗಾವಿಯಲ್ಲಿ ಭಾನುವಾರ ಬಸನಗೌಡ ಪಾಟೀಲ್‌ ಯತ್ನಾಳ್‌ ಮತ್ತು ರಮೇಶ್‌ ಜಾರಕಿಹೊಳಿ ನೇತೃತ್ವದಲ್ಲಿ ಹನ್ನೆರಡು ಮಂದಿ ಬಿಜೆಪಿ ಹಿರಿಯ ನಾಯಕರು ರಹಸ್ಯ ಸಭೆ ನಡೆಸಿ, ಪಕ್ಷದ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ಹಾಗೂ ಹಿರಿಯ ನಾಯಕ ಬಿ ಎಸ್ ಯಡಿಯೂರಪ್ಪ ವಿರುದ್ಧ ಪಕ್ಷದ ವರಿಷ್ಠರಿಗೆ ದೂರು ನೀಡಲು ನಿರ್ಧರಿಸಿದ ಮಾರನೇ ದಿನವೇ, ಆ ಸಭೆಯಲ್ಲಿ ಭಾಗಿಯಾದ ಬಿ ಪಿ ಹರೀಶ್‌ ಅವರು ನೀಡಿರುವ ಈ ಹೇಳಿಕೆ ರಾಜಕೀಯ ವಲಯದಲ್ಲಿ ಭಾರೀ ಕುತೂಹಲ ಕೆರಳಿಸಿದೆ.

Read More
Next Story