BJP Dissidence | ಜಾರಕಿಹೊಳಿ ವರ್ಸಸ್‌ ವಿಜಯೇಂದ್ರ: ಅದು ಅವರಿಬ್ಬರ ಗಲಾಟೆ ಎಂದ ಆರ್‌ ಅಶೋಕ್
x

BJP Dissidence | ಜಾರಕಿಹೊಳಿ ವರ್ಸಸ್‌ ವಿಜಯೇಂದ್ರ: ಅದು ಅವರಿಬ್ಬರ ಗಲಾಟೆ ಎಂದ ಆರ್‌ ಅಶೋಕ್


ಬಿ ವೈ ವಿಜಯೇಂದ್ರ ಅವರನ್ನು ರಾಜ್ಯ ಬಿಜೆಪಿ ಅಧ್ಯಕ್ಷರಾಗಿ ನಾನು ಎಂದಿಗೂ ಒಪ್ಪಿಕೊಳ್ಳುವುದಿಲ್ಲ ಎಂಬ ಸ್ಫೋಟಕ ಹೇಳಿಕೆ ನೀಡಿರುವ ಬಿಜೆಪಿ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಅವರ ಹೇಳಿಕೆಗೆ ಪ್ರತಿಕ್ರಿಯಿಸಿರುವ ವಿಧಾನಸಭಾ ಪ್ರತಿಪಕ್ಷ ನಾಯಕ ಹಾಗೂ ಬಿಜೆಪಿ ಹಿರಿಯ ಮುಖಂಡ ಆರ್ ಅಶೋಕ್, ಅದು ಅವರಿಬ್ಬರ ನಡುವಿನ ಗಲಾಟೆ ಎಂದಿದ್ದಾರೆ.

ಸೋಮವಾರ ಅಥಣಿಯಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದ ರಮೇಶ್ ಜಾರಕಿಹೊಳಿ, ಬಿ ವೈ ವಿಜಯೇಂದ್ರ ಅವರಿಂದಾಗಿಯೇ ಪಕ್ಷಕ್ಕೆ ಭ್ರಷ್ಟಾಚಾರದ ಕಳಂಕ ಅಂಟಿದೆ. ಅವರು ಪಕ್ಷದ ಅತ್ಯಂತ ಜ್ಯೂನಿಯರ್. ಅವರನ್ನು ನಾನು ಎಂದಿಗೂ ಪಕ್ಷದ ರಾಜ್ಯಾಧ್ಯಕ್ಷ ಎಂದು ಒಪ್ಪಿಕೊಳ್ಳಲಾರೆ ಎಂದಿದ್ದರು. ಆ ಹೇಳಿಕೆ ಬಿಜೆಪಿ ವಲಯದಲ್ಲಿ ಭಾರೀ ಸಂಚಲನ ಸೃಷ್ಟಿಸಿತ್ತು. ಇದೀಗ ಆ ಹೇಳಿಕೆಗೆ ಪ್ರತಿಕ್ರಿಯಿಸಿರುವ ಆರ್ ಅಶೋಕ್, ಅದು ಅವರಿಬ್ಬರ ನಡುವಿನ ಗಲಾಟೆ. ಅದರಲ್ಲಿ ನಮ್ಮ ಪಾತ್ರವೇನೂ ಇಲ್ಲ ಎಂದಿದ್ದಾರೆ.

ರಮೇಶ್ ಜಾರಕಿಹೊಳಿ ಹೇಳಿಕೆಯನ್ನು ನಾನು ಗಮನಿಸಿಲ್ಲ. ನಾನು ಸೋಮವಾರ ಬೆಂಗಳೂರಿನಲ್ಲೇ ಇರಲಿಲ್ಲ, ಹೈದರಾಬಾದಿನಲ್ಲಿದ್ದೆ. ಜಾರಕಿಹೊಳಿ ಮತ್ತು ಬಸನಗೌಡ ಪಾಟೀಲ್ ಯತ್ನಾಳ್ ಕೇಂದ್ರದ ವರಿಷ್ಠರ ಸಂಪರ್ಕದಲ್ಲಿದ್ದಾರೆ. ಅವರ ಕುರಿತು ಹೈಕಮಾಂಡ್ ಜೊತೆ ಚರ್ಚೆ ನಡೆಯುತ್ತಿದೆ. ಇದು ಹೊಸ ಸಮಸ್ಯೆ ಅಲ್ಲ. ಅವರಿಬ್ಬರ ನಡುವೆ ಇರುವ ವಿಚಾರ. ಅದರಲ್ಲಿ ನಮ್ಮದೇನೂ ಪಾತ್ರವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಆರ್ಎಸ್ಎಸ್ ಮುಖಂಡರು ರಾಜ್ಯ ಬಿಜೆಪಿಯ ಬಿನ್ನಮತ ಶಮನದ ಯತ್ನವಾಗಿ ನಡೆಸಿದ ಸಭೆಯ ಕುರಿತು ಪ್ರತಿಕ್ರಿಯಿಸಿದ ಅಶೋಕ್, ಆರ್ಎಸ್ಎಸ್ ನಿರ್ದೇಶನ ಕೊಟ್ಟಿದೆ ಎಂಬುದು ಇಲ್ಲ. ನಾನು ರಾಜಕಾರಣಿಗಿಂತ ಮೊದಲು ಆರ್ಎಸ್ಎಸ್ ಸ್ವಯಂಸೇವಕ. ಈ ಇಬ್ಬರು ನಾಯಕರ ನಡುವಿನ ವಿಷಯವನ್ನು ಕೇಂದ್ರದ ಪಕ್ಷದ ವರಿಷ್ಠರು ಗಮನಿಸುತ್ತಿದ್ದಾರೆ. ಸೂಕ್ತ ಸಮಯದಲ್ಲಿ ನಿರ್ಧಾರ ಕೈಗೊಳ್ಳುತ್ತಾರೆ ಎಂದು ಹೇಳಿದ್ದಾರೆ.

ಜಾರಕಿಹೊಳಿ ಏನು ಹೇಳಿದ್ದರು?

ಪಕ್ಷದ ಹಿರಿಯ ನಾಯಕ, ಶಾಸಕ ರಮೇಶ್ ಜಾರಕಿಹೊಳಿ ಅವರು ಸೋಮವಾರ, “ಪಕ್ಷದ ರಾಜ್ಯಾಧ್ಯಕ್ಷರಾಗಿ ಬಿ ವೈ ವಿಜಯೇಂದ್ರ ಅವರನ್ನು ನಾವು ಎಂದಿಗೂ ಒಪ್ಪುವುದೇ ಇಲ್ಲ. ಪಕ್ಷದಲ್ಲಿ ಅತ್ಯಂತ ಜ್ಯೂನಿಯರ್ ಆಗಿರುವ ಅವರಿಗೆ ಯಾವ ಸಿದ್ಧಾಂತವೂ ಗೊತ್ತಿಲ್ಲ. ಹಾಗಾಗಿ ಪಕ್ಷದ ವರಿಷ್ಠರು ಮುಂದಿನ ಅಧ್ಯಕ್ಷರನ್ನು ನಿರ್ಧರಿಸಬೇಕು” ಎಂದು ಸ್ಫೋಟಕ ಹೇಳಿಕೆ ನೀಡಿದ್ದರು.

ಅಥಣಿಯಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ಭಾರತೀಯ ಜನತಾ ಪಕ್ಷಕ್ಕೆ ʼಭ್ರಷ್ಟʼತೆಯ ಲೇಬಲ್ ತಂದುಕೊಟ್ಟಿದ್ದೇ ಈ ವಿಜಯೇಂದ್ರ. ಅಂತಹ ಹಿನ್ನೆಲೆಯ ಅವರು ಅಧ್ಯಕ್ಷರಾಗಿದ್ದಕ್ಕೆ ನನ್ನ ವಿರೋಧವಿದೆ. ಆದರೆ, ಬಿ ಎಸ್ ಯಡಿಯೂರಪ್ಪ ಅವರನ್ನು ನಾನು ಎಂದಿಗೂ ವಿರೋಧಿಸುವುದಿಲ್ಲ. ಅವರು ನಮ್ಮ ಪಕ್ಷದ ಪಕ್ಷಾತೀತ ಹಿರಿಯ ನಾಯಕರು. ಆದರೆ, ವಿಜಯೇಂದ್ರ ನಮ್ಮ ನಾಯಕನಲ್ಲ. ಅನಂತಕುಮಾರ್ ಅವರ ನಿಧನದ ಬಳಿಕ ಪಕ್ಷದ ರಾಜ್ಯ ಘಟಕದಲ್ಲಿ ಅಂತಹ ಯಾವ ಪ್ರಬಲ ನಾಯಕರೂ ಈಗಿಲ್ಲ” ಎಂದು ವಿಜಯೇಂದ್ರ ವಿರುದ್ಧ ಕಿಡಿಕಾರಿದ್ದರು.

ಪಕ್ಷದ ರಾಜ್ಯ ಘಟಕದ ಬಣ ರಾಜಕಾರಣಕ್ಕೆ ಸಂಬಂಧಿಸಿದಂತೆ ಆರ್ಎಸ್ ಎಸ್ ನಾಯಕರು ಇತ್ತೀಚೆಗೆ ಪಕ್ಷದ ರಾಜ್ಯ ನಾಯಕರೊಂದಿಗೆ ನಡೆಸಿದ ಸಭೆಯ ಕುರಿತು ಪ್ರತಿಕ್ರಿಯಿಸಿದ ರಮೇಶ್ ಜಾರಕಿಹೊಳಿ, “ಸಭೆಯಲ್ಲಿ ಏನೇನೆಲ್ಲಾ ಚರ್ಚೆಯಾಯಿತು. ಮುಖಂಡರು ಯಾರಿಗೆ ಏನೆಲ್ಲಾ ಬೈದರು ಎನ್ನೋದೆಲ್ಲಾ ಹೇಳಲಾಗದು. ಆದರೆ, ನಾವು ಬಿಜೆಪಿ ಆಡಳಿತವನ್ನು ಒಬ್ಬರ ಕೈಯಲ್ಲಿ ಕೊಡುವುದು ಬೇಡ ಎಂದು ಮುಖಂಡರಿಗೆ ಸ್ಪಷ್ಟವಾಗಿ ಹೇಳಿದ್ದೇವೆ” ಎಂದೂ ಹೇಳಿದ್ದರು.

Read More
Next Story