ದೆಹಲಿಯಲ್ಲಿ ಮತ್ತೆ ಭುಗಿಲೆದ್ದ ಬಿಜೆಪಿ ಭಿನ್ನಮತ: ವಿಜಯೇಂದ್ರ ವಿರುದ್ಧ ಜಾರಕಿಹೊಳಿ ಟೀಂ ತಂತ್ರ
x

ದೆಹಲಿಯಲ್ಲಿ ಮತ್ತೆ ಭುಗಿಲೆದ್ದ ಬಿಜೆಪಿ ಭಿನ್ನಮತ: ವಿಜಯೇಂದ್ರ ವಿರುದ್ಧ 'ಜಾರಕಿಹೊಳಿ ಟೀಂ' ತಂತ್ರ

ಸಂಸತ್ ಅಧಿವೇಶನ ನಡೆಯುತ್ತಿರುವ ಹಿನ್ನೆಲೆಯಲ್ಲಿ ದೆಹಲಿಗೆ ತೆರಳಿರುವ ರಾಜ್ಯದ ಅತೃಪ್ತ ನಾಯಕರು, ಅಲ್ಲಿನ ಕರ್ನಾಟಕ ಭವನದಲ್ಲಿ ಪ್ರತ್ಯೇಕ ಸಭೆ ನಡೆಸುವ ಮೂಲಕ ತಮ್ಮ ಒಗ್ಗಟ್ಟು ಪ್ರದರ್ಶಿಸಿದ್ದಾರೆ.


Click the Play button to hear this message in audio format

ರಾಜ್ಯ ಬಿಜೆಪಿಯಲ್ಲಿ ಸ್ವಲ್ಪ ದಿನಗಳ ಕಾಲ ತಣ್ಣಗಾಗಿದ್ದ ಭಿನ್ನಮತದ ಜ್ವಾಲೆ ಮತ್ತೆ ಭುಗಿಲೆದ್ದಿದೆ. ಪಕ್ಷದ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರ ಬದಲಾವಣೆಗೆ ಆಗ್ರಹಿಸಿ ಅತೃಪ್ತ ಬಣ ಇದೀಗ ನೇರವಾಗಿ ದೆಹಲಿಯಲ್ಲಿ ಬೀಡುಬಿಟ್ಟಿದ್ದು, ಹೈಕಮಾಂಡ್ ಮಟ್ಟದಲ್ಲಿ ಭಾರಿ ಒತ್ತಡ ಹೇರಲು ಮುಂದಾಗಿದೆ.

ಸಂಸತ್ ಅಧಿವೇಶನ ನಡೆಯುತ್ತಿರುವ ಹಿನ್ನೆಲೆಯಲ್ಲಿ ದೆಹಲಿಗೆ ತೆರಳಿರುವ ರಾಜ್ಯದ ಅತೃಪ್ತ ನಾಯಕರು, ಅಲ್ಲಿನ ಕರ್ನಾಟಕ ಭವನದಲ್ಲಿ ಪ್ರತ್ಯೇಕ ಸಭೆ ನಡೆಸುವ ಮೂಲಕ ತಮ್ಮ ಒಗ್ಗಟ್ಟು ಪ್ರದರ್ಶಿಸಿದ್ದಾರೆ. ಗೋಕಾಕ್ ಶಾಸಕ ಹಾಗೂ ಪ್ರಭಾವಿ ನಾಯಕ ರಮೇಶ್ ಜಾರಕಿಹೊಳಿ ನೇತೃತ್ವದಲ್ಲಿ ನಡೆದ ಈ ಮಹತ್ವದ ಸಭೆಯಲ್ಲಿ ಮಾಜಿ ಸಚಿವ ಕುಮಾರ ಬಂಗಾರಪ್ಪ, ಪ್ರಮುಖ ಮುಖಂಡರಾದ ಬಿ.ವಿ. ನಾಯಕ್, ಬಿ.ಎಸ್.ವೈ. ಅವರ ಮಾಜಿ ಆಪ್ತ ಎನ್.ಆರ್. ಸಂತೋಷ್ ಹಾಗೂ ಶ್ರೀಮಂತ ಪಾಟೀಲ್ ಸೇರಿದಂತೆ ಹಲವು ಪ್ರಮುಖರು ಪಾಲ್ಗೊಂಡಿದ್ದರು ಎಂದು ತಿಳಿದುಬಂದಿದೆ.

ವರಿಷ್ಠರ ಭೇಟಿಗೆ ಅತೃಪ್ತರ ಕಸರತ್ತು

ಕರ್ನಾಟಕ ಭವನದಲ್ಲಿ ಪ್ರಾಥಮಿಕ ಹಂತದ ಮಾತುಕತೆ ನಡೆಸಿರುವ ಬಂಡಾಯ ಬಣ, ತಮ್ಮ ದೂರುಗಳನ್ನು ಪಕ್ಷದ ರಾಷ್ಟ್ರೀಯ ನಾಯಕರಿಗೆ ತಲುಪಿಸಲು ಸಜ್ಜಾಗಿದೆ. ಪ್ರಮುಖವಾಗಿ ಕೇಂದ್ರ ಸಚಿವ ಹಾಗೂ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಮತ್ತು ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್. ಸಂತೋಷ್ ಅವರನ್ನು ಭೇಟಿ ಮಾಡಲು ಸಮಯ ಕೋರಿದ್ದಾರೆ.

ಬಂಡಾಯ ನಾಯಕರ ಪ್ರಮುಖ ಅಜೆಂಡಾ 'ವಿಜಯೇಂದ್ರ ಹಠಾವೋ' ಎಂಬುದಾಗಿದೆ. ಪಕ್ಷದಲ್ಲಿ ವಂಶಪಾರಂಪರ್ಯ ರಾಜಕಾರಣ ಮಿತಿಮೀರಿದೆ ಮತ್ತು ಹಿರಿಯ ನಾಯಕರನ್ನು ನಿರಂತರವಾಗಿ ಕಡೆಗಣಿಸಲಾಗುತ್ತಿದೆ ಎಂಬ ಗಂಭೀರ ಆರೋಪಗಳನ್ನು ವರಿಷ್ಠರ ಮುಂದಿಡಲು ಈ ನಾಯಕರು ನಿರ್ಧರಿಸಿದ್ದಾರೆ. ರಾಜ್ಯ ನಾಯಕತ್ವದ ವಿರುದ್ಧದ ಅಸಮಾಧಾನವನ್ನು ನೇರವಾಗಿ ಕೇಂದ್ರ ನಾಯಕರಿಗೆ ಮುಟ್ಟಿಸಿ, ರಾಜ್ಯ ಘಟಕದಲ್ಲಿ ಹಸ್ತಕ್ಷೇಪ ಮಾಡುವಂತೆ ಆಗ್ರಹಿಸುವುದು ಇವರ ತಂತ್ರವಾಗಿದೆ.

ದೈಹಿಕವಾಗಿ ಗೈರು, ಮಾನಸಿಕವಾಗಿ ಹಾಜರ್!

ವಿಶೇಷವೆಂದರೆ, ವಿಜಯೇಂದ್ರ ವಿರುದ್ಧದ ಹೋರಾಟದಲ್ಲಿ ಮುಂಚೂಣಿಯಲ್ಲಿರುವ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು ಅನಿವಾರ್ಯ ಕಾರಣಗಳಿಂದ ದೆಹಲಿಗೆ ತೆರಳಿಲ್ಲ. ಆದರೂ, ದೆಹಲಿಯಲ್ಲಿ ನಡೆಯುತ್ತಿರುವ ಪ್ರತಿಯೊಂದು ಬೆಳವಣಿಗೆಯ ಮೇಲೂ ಕಣ್ಣಿಟ್ಟಿದ್ದಾರೆ. ರಮೇಶ್ ಜಾರಕಿಹೊಳಿ ಸೇರಿದಂತೆ ದೆಹಲಿಯಲ್ಲಿರುವ ನಾಯಕರೊಂದಿಗೆ ಅವರು ನಿರಂತರ ಸಂಪರ್ಕದಲ್ಲಿದ್ದು, ತಂತ್ರಗಾರಿಕೆಯ ಭಾಗವಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಹೈಕಮಾಂಡ್ ನಡೆ ಏನು?

ಬಿ.ವೈ. ವಿಜಯೇಂದ್ರ ಅವರು ರಾಜ್ಯಾಧ್ಯಕ್ಷರಾಗಿ ಆಯ್ಕೆಯಾದಾಗಿನಿಂದಲೂ ಈ ಬಣ ವಿರೋಧ ವ್ಯಕ್ತಪಡಿಸುತ್ತಲೇ ಇದೆ. ಅವರನ್ನು ಬದಲಿಸಲೇಬೇಕೆಂಬುದು ಬಂಡಾಯಗಾರರ ಏಕೈಕ ಬೇಡಿಕೆಯಾಗಿದೆ. ಆದರೆ, ಇದುವರೆಗೂ ಕೇಂದ್ರ ನಾಯಕರು ಈ ಒತ್ತಡಗಳಿಗೆ ಮಣಿಯದೆ, ವಿಜಯೇಂದ್ರ ಅವರನ್ನೇ ಮುಂದುವರಿಸಿಕೊಂಡು ಬಂದಿದ್ದಾರೆ. ಇದೀಗ ಮತ್ತೆ ಭುಗಿಲೆದ್ದಿರುವ ಈ ಅಸಮಾಧಾನಕ್ಕೆ ವರಿಷ್ಠರು ಮಣೆ ಹಾಕುತ್ತಾರೆಯೇ ಅಥವಾ ಹಿಂದಿನಂತೆಯೇ ನಿರ್ಲಕ್ಷ್ಯ ವಹಿಸುತ್ತಾರೆಯೇ ಎಂಬುದನ್ನು ಕಾದು ನೋಡಬೇಕಿದೆ.

Read More
Next Story