BJP Infighting | ವಿಜಯೇಂದ್ರಗೆ ಸೆಡ್ಡು ಹೊಡೆದಿದ್ದ ಯತ್ನಾಳ್‌ಗೆ ಹೈಕಮಾಂಡ್‌ ನೊಟೀಸ್‌
x

BJP Infighting | ವಿಜಯೇಂದ್ರಗೆ ಸೆಡ್ಡು ಹೊಡೆದಿದ್ದ ಯತ್ನಾಳ್‌ಗೆ ಹೈಕಮಾಂಡ್‌ ನೊಟೀಸ್‌

ರಾಜ್ಯ ಬಿಜೆಪಿ ಅಪ್ಪ-ಮಗನ ಹತೋಟಿಯಲ್ಲಿದ್ದು, ವಿಜಯೇಂದ್ರ ನಾಯಕತ್ವವನ್ನು ಒಪ್ಪಿಕೊಳ್ಳಲಾಗುವುದಿಲ್ಲ ಎಂದಿರುವ ಬಸನಗೌಡ ಪಾಟೀಲ ಯತ್ನಾಳ ಅವರು ವಕ್ಫ್‌ ವಿವಾದ ಸಂಬಂಧ ಪ್ರತ್ಯೇಕ ಹೋರಾಟವನ್ನು ನಡೆಸುತ್ತಿದ್ದಾರೆ.


ಬಿಜೆಪಿ ಸಂಸದೀಯ ಮಂಡಳಿ ಸದಸ್ಯ ಮತ್ತು ಮಾಜಿ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರ ನೇತೃತ್ವದಲ್ಲಿ ಅವರ ಪುತ್ರ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಭಾನುವಾರ ನಡೆಸಿದ ನಿಷ್ಠರ ಸಭೆ ಬಳಿಕ ಬಿಜೆಪಿ ಕೇಂದ್ರ ಶಿಸ್ತುಪಾಲನಾ ಸಮಿತಿ ಭಿನ್ನರ ಬಣದ ನಾಯಕ ಬಸನಗೌಡ ಪಾಟೀಲ ಯತ್ನಾಳ್‌ ಅವರಿಗೆ ಶೋಕಾಸ್‌ ನೊಟೀಸ್‌ ಜಾರಿಗೊಳಿಸಿದೆ.

ರಾಜ್ಯ ಬಿಜೆಪಿ ಅಪ್ಪ-ಮಗನ ಹತೋಟಿಯಲ್ಲಿದ್ದು, ವಿಜಯೇಂದ್ರ ನಾಯಕತ್ವವನ್ನು ಒಪ್ಪಿಕೊಳ್ಳಲಾಗುವುದಿಲ್ಲ ಎಂದು ಖಡಾಖಂಡಿತವಾಗಿ ಹೇಳಿರುವ ಬಸನಗೌಡ ಪಾಟೀಲ ಯತ್ನಾಳ ಅವರು ವಕ್ಫ್‌ ಭೂವಿವಾದ ಸಂಬಂಧ ರಾಜ್ಯ ಸರ್ಕಾರದ ವಿರುದ್ಧ ಪ್ರತ್ಯೇಕ ಹೋರಾಟವನ್ನು ನಡೆಸುತ್ತಿದ್ದಾರೆ. ಪ್ರತಿಬಾರಿ ವಿಜಯೇಂದ್ರ ಬಗ್ಗೆ ಟೀಕಾಸ್ತ್ರಗಳನ್ನು ಎಸೆಯುತ್ತಲೇ ಇದ್ದಾರೆ.

ಈ ಹಿನ್ನೆಲೆಯಲ್ಲಿ ಬಿಜೆಪಿಯ ಕೇಂದ್ರ ಶಿಸ್ತು ಪಾಲನಾ ಸಮಿತಿಯ ಸದಸ್ಯ ಕಾರ್ಯದರ್ಶಿ ಓಂ ಪಾಠಕ್‌ ಅವರು ಈ ನೊಟೀಸ್‌ ಜಾರಿಗೊಳಿಸಿದ್ದಾರೆ. "ಬಿಜೆಪಿ ನಾಯಕರ ವಿರುದ್ಧ ಸುಳ್ಳು ಆರೋಪಗಳನ್ನು ಹೊರಿಸುತ್ತಾ , ಹಲವು ಬಾರಿ ಈ ಬಗ್ಗೆ ಸೂಚನೆ ನೀಡಿದ್ದರೂ, ಮತ್ತೆ ಮತ್ತೆ ಹೇಳಿಕೆ ನೀಡಿ ಪಕ್ಷದ ಘನತೆಗೆ ಕುಂದು ತರಲಾಗುತ್ತಿದೆ. ಈ ಎಲ್ಲಾ ಅಂಶಗಳನ್ನು ಪರಿಗಣಿಸಿ ನೀಡಲಾಗುತ್ತಿರುವ ಶೋ ಕಾಸ್‌ ನೊಟೀಸ್‌ಗೆ ಹತ್ತು ದಿನಗಳ ಒಳಗೆ ವಿವರಣೆ ನೀಡಬೇಕು," ಎಂದು ಸೂಚಿಸಲಾಗಿದೆ.

ಜತೆಗೆ ವಿವರಣೆ ನೀಡಲು ತಪ್ಪಿದಲ್ಲಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು. ಇದು ಅಂತಿಮ ಸೂಚನೆ ಎಂದೂ ನೊಟೀಸ್‌ನಲ್ಲಿ ತಿಳಿಸಲಾಗಿದೆ.

ಯಾಕೆ ಯತ್ನಾಳ್‌ ವಿರೋಧ?

ಉತ್ತರ ಕರ್ನಾಟಕದ ಬಸನಗೌಡ ಪಾಟೀಲ್ ಯತ್ನಾಳ್ ನೇತೃತ್ವದ ಬಣ, ಮಧ್ಯ ಕರ್ನಾಟಕದ ಬಿ ವೈ ವಿಜಯೇಂದ್ರ ಬಣದ ವಿರುದ್ಧ ಬಹಿರಂಗ ಸಮರ ಸಾರಿದೆ. ಸಾಮಾನ್ಯವಾಗಿ ರಾಜಕಾರಣದಲ್ಲಿ ಆಡಳಿತ ಪಕ್ಷದ ಹಗರಣಗಳು, ವಿವಾದಗಳು ಪ್ರತಿಪಕ್ಷಗಳ ಆಂತರಿಕ ಭಿನ್ನಮತವನ್ನು ಮೀರಿ ಸರ್ಕಾರದ ವಿರುದ್ಧ ಹೋರಾಟಕ್ಕೆ ಪ್ರತಿಪಕ್ಷ ಮುಖಂಡರನ್ನು ಒಗ್ಗೂಡಿಸುತ್ತವೆ. ಆದರೆ, ಆಡಳಿತರೂಢ ಕಾಂಗ್ರೆಸ್ ವಿರುದ್ಧ ವಕ್ಫ್ ಆಸ್ತಿ ವಿವಾದವನ್ನೇ ಮುಂದಿಟ್ಟುಕೊಂಡು ಸಮರ ಸಾರಿದ ಬಿಜೆಪಿಗೆ, ಆ ವಿವಾದವೇ ಪಕ್ಷದ ಒಗ್ಗಟ್ಟಿಗೆ ಮುಳುವಾಗಿದೆ.

ವಕ್ಫ್ ವಿವಾದವನ್ನು ಮೊದಲು ಪ್ರಸ್ತಾಪಿಸಿದ ಬಸನಗೌಡ ಪಾಟೀಲ್ ಯತ್ನಾಳ್, ಮುಡಾ ಮತ್ತಿತರ ವಿವಾದಗಳ ವಿಷಯದಲ್ಲಿ ಆದಂತೆ ಈ ವಿಷಯದಲ್ಲಿಯೂ ಪಕ್ಷದ ರಾಜ್ಯಾಧ್ಯಕ್ಷರು ಕಾಂಗ್ರೆಸ್ ನಾಯಕರ ವಿರುದ್ಧ ಪ್ರಾಮಾಣಿಕ ಹೋರಾಟ ಮಾಡುತ್ತಿಲ್ಲ ಎಂಬ ಆರೋಪದೊಂದಿಗೆ ಅವರನ್ನು ಹೊರಗಿಟ್ಟು ತಮ್ಮದೇ ಪ್ರತ್ಯೇಕ ಹೋರಾಟ ಘೋಷಿಸಿದರು. ಅವರು ಹೋರಾಟ ಆರಂಭಿಸುತ್ತಿದ್ದಂತೆ ಎಚ್ಚೆತ್ತ ರಾಜ್ಯಾಧ್ಯಕ್ಷರು ಬಳಿಕ ಪಕ್ಷದ ಅಧಿಕೃತ ಹೋರಾಟವನ್ನು ಘೋಷಿಸಿದರು.

ಇದೀಗ ಯತ್ನಾಳ್ ತಮ್ಮ ಬಣದ ರಮೇಶ್ ಜಾರಕಿಹೊಳಿ, ಕುಮಾರ್ ಬಂಗಾರಪ್ಪ, ಅರವಿಂದ ಲಿಂಬಾವಳಿ ಅವರೊಂದಿಗೆ ಉತ್ತರ ಕರ್ನಾಟಕ ಭಾಗದಲ್ಲಿ ಹೋರಾಟ ತೀವ್ರಗೊಳಿಸುವ ಜೊತೆಗೆ ತಮ್ಮ ಪ್ರವಾಸದುದ್ದಕ್ಕೂ ಪಕ್ಷದ ರಾಜ್ಯಾಧ್ಯಕ್ಷರ ವಿರುದ್ಧ ಕಿಡಿ ಕಾರುತ್ತಿದ್ದಾರೆ. ಅಷ್ಟೇ ಅಲ್ಲದೆ, ಪಕ್ಷದ ಅಧ್ಯಕ್ಷ ಗಾದಿ ಮತ್ತು ಮುಂದಿನ ಮುಖ್ಯಮಂತ್ರಿ ಹುದ್ದೆಗಳನ್ನೂ ತಮ್ಮವರೇ ಪಡೆಯಲಿದ್ದು, ತಾವೇ ಪಕ್ಷದ ಅಧಿಕೃತ ಬಣ ಎಂಬ ಸಂದೇಶವನ್ನೂ ನೀಡಿದ್ದಾರೆ.

ಈ ನಡುವೆ ಪಕ್ಷದ ತಾಲೂಕು, ಜಿಲ್ಲಾ ಮತ್ತು ರಾಜ್ಯ ಪದಾಧಿಕಾರಿಗಳ ಬದಲಾವಣೆಗೆ ಚುನಾವಣೆ ನಡೆಯಬೇಕು ಎಂದು ಒತ್ತಾಯಿಸಿ ದೆಹಲಿ ವರಿಷ್ಠರಿಗೆ ಪತ್ರ ಬರೆಯುವ ಮೂಲಕ ಪಕ್ಷದ ರಾಜ್ಯಾಧ್ಯಕ್ಷರ ಬದಲಾವಣೆಯ ತಮ್ಮ ಹಳೆಯ ಬೇಡಿಕೆಗೆ ಸಾಂಸ್ಥಿಕ ಚುನಾವಣೆಯ ಮೂಲಕ ಬುನಾದಿ ಹಾಕುವ ಪ್ರಸ್ತಾಪವನ್ನೂ ಮುಂದಿಟ್ಟಿದ್ದಾರೆ.

ಸಹಜವಾಗೇ ಈ ಬೆಳವಣಿಗೆ ವಿಜಯೇಂದ್ರ ಮತ್ತು ಬಿ ಎಸ್ ಯಡಿಯೂರಪ್ಪ ಅವರನ್ನು ಕೆರಳಿಸಿದೆ. ಅಷ್ಟೇ ಅಲ್ಲ; ಪಕ್ಷದ ಹಿರಿಯ ನಾಯಕರನ್ನೂ ಆತಂಕಕ್ಕೆ ಈಡುಮಾಡಿದೆ. ಆ ಹಿನ್ನೆಲೆಯಲ್ಲಿಯೇ ವಿಜಯೇಂದ್ರ ಬಣ ದೆಹಲಿಗೆ ದೂರು ನೀಡಿತ್ತು. ಆದರೆ, ದೆಹಲಿ ನಾಯಕರ ಮಾತಿಗೆ ಸೊಪ್ಪು ಹಾಕದ ಯತ್ನಾಳ್, ತಮ್ಮ ವಕ್ಫ್ ಹೋರಾಟವನ್ನು ಮುಗಿಸಿಕೊಂಡು ತಮ್ಮ ಟೀಂನ ಎಲ್ಲಾ ಮುಖಂಡರೊಂದಿಗೆ ದೆಹಲಿಗೆ ಬಂದು ಮಾತನಾಡುವುದಾಗಿ ಹೇಳಿ, ವರಿಷ್ಠರ ತುರ್ತು ಮಾತುಕತೆ ಆಹ್ವಾನವನ್ನೇ ತಳ್ಳಿಹಾಕಿದ್ದಾರೆ.

ವರಿಷ್ಠರ ಆಹ್ವಾನ ಮತ್ತು ತಾವು ಅದನ್ನು ತಳ್ಳಿ ಹಾಕಿದ ವಿಷಯವನ್ನು ಸ್ವತಃ ಯತ್ನಾಳ್ ಅವರೇ ಬಹಿರಂಗಪಡಿಸಿದ್ದರು. ದೆಹಲಿಯಿಂದ ಕರೆ ಬಂದಿತ್ತು. ತಕ್ಷಣ ಹೊರಟು ಬಂದುಬಿಡಿ ಎಂದು ಕರೆದರು. ಆದರೆ, ನಾನು ಬರುವುದಿಲ್ಲ ಎಂದು ಹೇಳಿದೆ. ನಮ್ಮದು ಟೀಮ್ ಇದೆ, ನಾನು ಒಬ್ಬನೇ ಬರಲು ಸಾಧ್ಯವಿಲ್ಲ. ಕಾಂಗ್ರೆಸ್ ಭ್ರಷ್ಟಾಚಾರ ವಿರುದ್ಧ, ವಕ್ಫ್ ಅನ್ಯಾಯದ ವಿರುದ್ಧ ಹೋರಾಟ ಮಾಡುತ್ತಿದ್ದೇವೆ. ನಮ್ಮ ಟೀಂನ ಎಲ್ಲರನ್ನೂ ದೆಹಲಿಗೆ ಕರೆಯಿರಿ, ಆಗ ಬಂದು ಕರ್ನಾಟಕದಲ್ಲಿ ಏನು ನಡೆದಿದೆ ಎಂದು ಹೇಳುತ್ತೇವೆ ಎಂದು ಹೇಳಿದ್ದೇನೆ ಎಂದು ಯತ್ನಾಳ್ ಹೇಳಿದ್ದಾರೆ.

ಆ ಮೂಲಕ ದೆಹಲಿ ವರಿಷ್ಠರ ವಿರುದ್ಧವೂ ಯತ್ನಾಳ್ ಬಂಡಾಯದ ಬಾವುಟ ಹಾರಿಸಿದ್ದಾರೆ. ಜೊತೆಗೆ, ತಾವು ರಾಜ್ಯಾಧ್ಯಕ್ಷರ ವಿರುದ್ಧ ಮಾಡಿರುವ ಟೀಕೆಗಳಲ್ಲಿ ಒಂದು ಶಬ್ಧವನ್ನೂ ವಾಪಸ್ ಪಡೆಯುವ ಪ್ರಶ್ನೆ ಇಲ್ಲ ಎನ್ನುವ ಮೂಲಕ ತಾವು ಹಿಂದೆ ಸರಿಯುವ ಮಾತೇ ಇಲ್ಲ ಎಂದೂ ಹೇಳಿದ್ದಾರೆ.

ಈ ನಡುವೆ, ಮತ್ತೊಂದು ಕಡೆ ಯತ್ನಾಳ್ ಬಣಕ್ಕೆ ಸೆಡ್ಡು ಹೊಡೆಯಲು ವಿಜಯೇಂದ್ರ ಬಣ ದಾವಣಗೆರೆಯಲ್ಲಿ ಬಲ ಪ್ರದರ್ಶನಕ್ಕೆ ಮುಂದಾಗಿದೆ. ಬೃಹತ್ ಸಮಾವೇಶ ನಡೆಸಿ ಯತ್ನಾಳ್ ಮತ್ತು ಅವರ ಬಣಕ್ಕೆ ಸಂದೇಶ ನೀಡುವ ಪ್ರಯತ್ನ ಅದು ಎನ್ನಲಾಗಿದೆ. ಆ ಹಿನ್ನೆಲೆಯಲ್ಲಿ ಯಡಿಯೂರಪ್ಪ ನೇತೃತ್ವದಲ್ಲಿ ವಿಜಯೇಂದ್ರ ಅವರು ತಮ್ಮ ನಿಷ್ಠರ ಸಭೆಯನ್ನು ಭಾನುವಾರ ನಡೆಸಿದ್ದರು ಮತ್ತು ಯತ್ನಾಳ್‌ ವಿರುದ್ಧ ಕ್ರಮಕೈಗೊಳ್ಳುವಂತೆ ಕೇಂದ್ರ ನಾಯಕರಿಗೆ ಸಂದೇಶ ಕಳುಹಿಸಿದ್ದರು ಎನ್ನಲಾಗಿದೆ.

Read More
Next Story