ಜನಿವಾರ ತೆಗೆಸಿದ ಪ್ರಕರಣ | ಸಿಎಂ ಮೌನವೇಕೆ?;  ಉತ್ತರ ನೀಡುವಂತೆ ಬಿಜೆಪಿ ಆಗ್ರಹ
x

ಜನಿವಾರ ತೆಗೆಸಿದ ಪ್ರಕರಣ | ಸಿಎಂ ಮೌನವೇಕೆ?; ಉತ್ತರ ನೀಡುವಂತೆ ಬಿಜೆಪಿ ಆಗ್ರಹ

ಸಿಇಟಿ ಪರೀಕ್ಷೆಯ ಹಾಲ್ ಟಿಕೆಟ್ ನಲ್ಲಿ ಆಗಲಿ ಅಥವಾ ಇತರ ಯಾವುದೇ ಮಾರ್ಗಸೂಚಿಯಲ್ಲಿ ಜನಿವಾರ ಧರಿಸಬಾರದು ಎಂದು ಎಲ್ಲಿಯೂ ಸಹ ಉಲ್ಲೇಖವಾಗಿರಲಿಲ್ಲ. ಹಾಗಿದ್ದ ಮೇಲೆ ಜನಿವಾರ ಧರಿಸಿದ ವಿದ್ಯಾರ್ಥಿಗೆ ಪರೀಕ್ಷೆ ಕುಳಿತುಕೊಳ್ಳಲು ಅವಕಾಶ ನೀಡದಿರುವುದು ಏಕೆ..ಈ ಅನ್ಯಾಯಕ್ಕೆ ಯಾರು ಹೊಣೆ ಎಂದು ಬಿಜೆಪಿ ಪ್ರಶ್ನಿಸಿದೆ.


ಸಿಇಟಿ ಪರೀಕ್ಷೆ ಬರೆಯಲು ಬಂದಿದ್ದ ವಿದ್ಯಾರ್ಥಿಯಿಂದ ಜನಿವಾರ ತೆಗೆಸಿದ ಪ್ರಕರಣ ರಾಜಕೀಯ ಸ್ವರೂಪ ಪಡೆಯುತ್ತಿದೆ. ಜನಿವಾರ ತೆಗೆಸಿದ ಸಿಬ್ಬಂದಿ ವಿರುದ್ಧ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಪ್ರಕರಣ ದಾಖಲಿಸಿದ ಬಳಿಕವೂ ಪ್ರತಿಪಕ್ಷ ಬಿಜೆಪಿ ರಾಜ್ಯ ಸರ್ಕಾರ ವಿರುದ್ಧ ಹರಿಹಾಯ್ದಿದೆ.

ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಕಾಂಗ್ರೆಸ್ ಸರ್ಕಾರ ಧೋರಣೆಯನ್ನು ಟೀಕಿಸಿರುವ ಬಿಜೆಪಿ, ಸಂವಿಧಾನವನ್ನು ತಮಗೆ ಮನಸ್ಸಿಗೆ ಬಂದ ಹಾಗೆ ತಿರುಚುವುದರಲ್ಲಿ ಕಾಂಗ್ರೆಸ್ಸಿಗರು ಸಿದ್ದಹಸ್ತರು. ಶಾಲಾ- ಕಾಲೇಜುಗಳಲ್ಲಿ ಎಲ್ಲರೂ ಸಮಾನರು ಎಂಬ ನಿಟ್ಟಿನಲ್ಲಿ ವಸ್ತ್ರಸಂಹಿತೆಯಡಿ ಸಮವಸ್ತ್ರ ನೀತಿ ಜಾರಿಗೆ ತಂದಿದ್ದು ನಾವೇ ಕಾಂಗ್ರೆಸ್ಸಿಗರು ಬಡಾಯಿ ಕೊಚ್ಚಿಕೊಳ್ಳುತ್ತಿದ್ದರು. ಆದರೆ ಯಾವಾಗ ಮುಸ್ಲಿಂ ಸಮುದಾಯದ ಕೆಲ ವಿದ್ಯಾರ್ಥಿನಿಯರು ಶಾಲಾ-ಕಾಲೇಜುಗಳಿಗೆ ಹಿಜಾಬ್ ಧರಿಸಿ ಬಂದರೋ ಆಗ ಅವರ ನಿಲುವು ಬದಲಾಯಿತು. ಹಿಬಾಬ್ ಪ್ರಶ್ನಿಸಿದ ಪ್ರತಿಪಕ್ಷಗಳ ವಿರುದ್ಧ ಟೀಕಿಸಿದ್ದ ಕಾಂಗ್ರೆಸ್ಸಿಗರು ಇದು ಬಾಬಾ ಸಾಹೇಬರು ನಮಗೆ ನೀಡಿರುವ ಧಾರ್ಮಿಕ ಸ್ವಾತಂತ್ರ್ಯಎಂದು ತೇಪೆ ಹಚ್ಚಿದ್ದರು. ಇದು ಕಾಂಗ್ರೆಸ್ಸಿಗರ ಇಬ್ಬಗೆಯ ನೀತಿಗೆ ಸಾಕ್ಷಿಯಾಗಿದೆ ಎಂದು ಟ್ವೀಟ್ ಮೂಲಕ ಆಕ್ರೋಶ ವ್ಯಕ್ತಪಡಿಸಿದೆ.

ಕೆ.ಪಿ.ಎಸ್.ಸಿ ಪರೀಕ್ಷೆ ಸಂದರ್ಭದಲ್ಲೂ ಮಹಿಳೆಯೊಬ್ಬರ ಮಾಂಗಲ್ಯಸರ ತೆಗೆಸಿದ್ದರು. ಈ ಬಗ್ಗೆ ಮಾಧ್ಯಮದವರು ಕಾಂಗ್ರೆಸ್ಸಿಗರನ್ನು ಪ್ರಶ್ನಿಸಿದರೆ, “ಏಯ್ ಅದು ರೂಲ್ಸ್ ಕಣ್ರಿ” ಎಂದು ಅಬ್ಬರಿಸಿದ್ದರು. ಆದರೆ ಅದೇ ಮಾಧ್ಯಮದವರು ಹಾಗಾದರೆ ರೂಲ್ಸ್ ಪ್ರಕಾರ ಹಿಜಾಬ್ ಅನ್ನು ಏಕೆ ತೆಗೆಸಲಿಲ್ಲ ಎಂದು ಮರು ಪ್ರಶ್ನೆ ಹಾಕಿದರೆ ಅದಕ್ಕೆ ಕಾಂಗ್ರೆಸ್ಸಿಗರದ್ದು “ನೋ ಕಾಮೆಂಟ್ಸ್. ಈಗ ಬೀದರ್ ನಲ್ಲಿ ಸಿಇಟಿ ಪರೀಕ್ಷೆಗೆ ಜನಿವಾರ ಧರಿಸಿ ಬಂದಿದ್ದ ಎಂಬ ಕಾರಣಕ್ಕೆ ವಿದ್ಯಾರ್ಥಿಯೊಬ್ಬನಿಗೆ ಪರೀಕ್ಷೆಗೆ ಹಾಜರಾಗಲು ಅನುಮತಿ ನೀಡಿಲ್ಲ. ಸಾಲದ್ದಕ್ಕೆ ಜನಿವಾರವನ್ನು ಕಟ್ ಮಾಡಿಕೊಂಡು ಬಾ, ಆಗ ಮಾತ್ರ ಪರೀಕ್ಷೆ ಬರೆಯಲು ನಿನಗೆ ಅವಕಾಶ ನೀಡುತ್ತೇವೆ ಎಂದು ಅಲ್ಲಿನ ಸಿಬ್ಬಂದಿ ಹೇಳಿರುವುದು ಒಪ್ಪುವ ವಿಚಾರವಲ್ಲ ಎಂದು ಕಿಡಿಕಾರಿದೆ.

ಸಿಇಟಿ ಪರೀಕ್ಷೆಯ ಹಾಲ್ ಟಿಕೆಟ್ ನಲ್ಲಿ ಆಗಲಿ ಅಥವಾ ಇತರ ಯಾವುದೇ ಮಾರ್ಗಸೂಚಿಯಲ್ಲಿ ಜನಿವಾರ ಧರಿಸಬಾರದು ಎಂದು ಎಲ್ಲಿಯೂ ಸಹ ಉಲ್ಲೇಖವಾಗಿರಲಿಲ್ಲ. ಹಾಗಿದ್ದ ಮೇಲೆ ಜನಿವಾರ ಧರಿಸಿದ ವಿದ್ಯಾರ್ಥಿಗೆ ಪರೀಕ್ಷೆ ಕುಳಿತುಕೊಳ್ಳಲು ಅವಕಾಶ ನೀಡದಿರುವುದು ಏಕೆ..ಈ ಅನ್ಯಾಯಕ್ಕೆ ಯಾರು ಹೊಣೆ..? ದೂರದ ಉತ್ತರಪ್ರದೇಶದಲ್ಲಿ ದನಗಳ್ಳನ ಮೇಲೆ ಹಲ್ಲೆಯಾದರೆ ಕಾಂಗ್ರೆಸ್ಸಿಗರ ಮನಸ್ಸಿಗೆ ದುಃಖವಾಗುತ್ತದೆ. ಪುಟಗಟ್ಟಲೆ ಟ್ವೀಟ್‌ ಮಾಡಿವ ಸಿಎಂ ಸಿದ್ದರಾಮಯ್ಯ ಅವರು ತಮ್ಮದೆ ಆಡಳಿತವಿರುವ ರಾಜ್ಯದಲ್ಲಿ ವಿದ್ಯಾರ್ಥಿಯೊಬ್ಬನ ಉಜ್ವಲ ಭವಿಷ್ಯವನ್ನು ಮಂಕಾಗಿಸಿರುವ ಘಟನೆಯ ಬಗ್ಗೆ ಏಕೆ ಇದುವರೆಗೂ ಬಾಯ್ಬಿಟ್ಟಿಲ್ಲ ಎಂದು ಪ್ರಶ್ನಿಸಿದೆ.

ಸಂವಿಧಾನದ ಬಗ್ಗೆ ಮಾರುದ್ದ ಭಾಷಣ ಬಿಗಿಯುವ ಕಾಂಗ್ರೆಸ್ಸಿಗರಿಗೆ ಜನಿವಾರ ಧರಿಸಿದ ವಿದ್ಯಾರ್ಥಿಯ ಧಾರ್ಮಿಕ ಸ್ವಾತಂತ್ರ್ಯಕ್ಕೆ ಧಕ್ಕೆಯಾಗಿರುವುದು ಕಣ್ಣಿಗೆ ಕಾಣಿಸುತ್ತಿಲ್ಲವೇ. ಇದಕ್ಕೆ ಉತ್ತರಿಸಿ ಎಂದು ಆಗ್ರಹಿಸಿದೆ.

Read More
Next Story