![Namma Metro Fare Hike | ಮೆಟ್ರೋ ಪ್ರಯಾಣ ದರ ಏರಿಕೆ ಹಿಂಪಡೆಯಲು ಬಿಜೆಪಿ ಆಗ್ರಹ: ಸಂಜೆ ಪ್ರತಿಭಟನೆ Namma Metro Fare Hike | ಮೆಟ್ರೋ ಪ್ರಯಾಣ ದರ ಏರಿಕೆ ಹಿಂಪಡೆಯಲು ಬಿಜೆಪಿ ಆಗ್ರಹ: ಸಂಜೆ ಪ್ರತಿಭಟನೆ](https://karnataka.thefederal.com/h-upload/2025/02/10/511830-bjp-nayaka.webp)
Namma Metro Fare Hike | ಮೆಟ್ರೋ ಪ್ರಯಾಣ ದರ ಏರಿಕೆ ಹಿಂಪಡೆಯಲು ಬಿಜೆಪಿ ಆಗ್ರಹ: ಸಂಜೆ ಪ್ರತಿಭಟನೆ
Namma Metro Fare Hike | ಬಿಜೆಪಿ ಪ್ರಧಾನ ಕಾರ್ಯದರ್ಶಿ ರಾಜೀವ್ ಕುಡುಚಿ ಮಾತನಾಡಿ, ಮೆಟ್ರೋ ಪ್ರಯಾಣ ದರ ಏರಿಕೆ ಮಾಡುವಂತೆ ರಾಜ್ಯ ಸರ್ಕಾರವೇ ಪ್ರಸ್ತಾವನೆ ಸಲ್ಲಿಸಿತ್ತು ಎಂದಿದ್ದಾರೆ
ಮೆಟ್ರೋ ಪ್ರಯಾಣ ದರ ಏರಿಕೆ ನಿರ್ಧಾರ ಹಿಂಪಡೆಯುವಂತೆ ಒತ್ತಾಯಿಸಿ ಜಯನಗರ ಶಾಸಕ ಸಿ.ಕೆ.ರಾಮಮೂರ್ತಿ ನೇತೃತ್ವದ ಬಿಜೆಪಿ ನಿಯೋಗ ಸೋಮವಾರ ಬಿಎಂಆರ್‌ಸಿಎಲ್ ವ್ಯವಸ್ಥಾಪಕ ನಿರ್ದೇಶಕರಿಗೆ ಮನವಿ ಸಲ್ಲಿಸಿತು.
ಶೇ 50 ರಷ್ಟು ಪ್ರಯಾಣ ದರ ಏರಿಕೆಯಿಂದ ಜನಸಾಮಾನ್ಯರು ಮೆಟ್ರೋದಲ್ಲಿ ಪ್ರಯಾಣಿಸಲು ಹಿಂದೇಟು ಹಾಕುವಂತಿದೆ. ದೇಶದ ಎಲ್ಲ ರಾಜ್ಯಗಳಲ್ಲಿ ಮೆಟ್ರೋ ಪ್ರಯಾಣದ ದರ ಕಡಿಮೆ ಇದೆ. ಆದರೆ, ಬೆಂಗಳೂರಿನಲ್ಲಿ ಶೇ 50 ರಿಂದ 60 ರಷ್ಟು ಹೆಚ್ಚಿಸಿರುವುದು ಒಪ್ಪಲಾಗದು. ಕೂಡಲೇ ದರ ಏರಿಕೆ ಹಿಂಪಡೆಯಬೇಕು ಎಂದು ವ್ಯವಸ್ಥಾಪಕ ನಿರ್ದೇಶಕರ ಎಮ್ ಮಹೇಶ್ವರ ರಾವ್ ಅವರನ್ನು ಒತ್ತಾಯಿಸಿದರು.
ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಮೆಟ್ರೋ ಪ್ರಯಾಣ ದರ ಏರಿಕೆ ವಿಚಾರವನ್ನು ಶಾಸಕರೊಂದಿಗೆ ಚರ್ಚಿಸದೇ ಬೆಲೆ ನಿಗದಿ ಸಮಿತಿಯತ್ತ ಬೊಟ್ಟು ತೋರಿಸುತ್ತಿದ್ದಾರೆ. ದರ ಹೆಚ್ಚಳದಿಂದ ಮಧ್ಯಮ ವರ್ಗದವರಿಗೆ ತಿಂಗಳಿಗೆ 4-5 ಸಾವಿರ ರೂ. ಹೊರೆಯಾಗುತ್ತಿದೆ. ಮೆಟ್ರೋ ನಿಲ್ದಾಣಗಳಲ್ಲಿ ಶೌಚಾಲಯ, ಪಾರ್ಕಿಂಗ್ ವ್ಯವಸ್ಥೆ, ಕುಡಿಯುವ ನೀರು ಸೇರಿದಂತೆ ಯಾವುದೇ ಮೂಲಸೌಕರ್ಯ ಒದಗಿಸಿಲ್ಲ. ಹಾಗಿದ್ದರೂ ದುಪ್ಪಟ್ಟು ಹಣ ವಸೂಲಿ ಮಾಡುವ ಮೂಲಕ ʼನಮ್ಮ ಮೆಟ್ರೋʼ ಖಾಸಗಿ ಮೆಟ್ರೋದಂತಾಗಿದೆ ಎಂದು ಟೀಕಿಸಿದರು.
ಮೆಟ್ರೋ ದರ ಶೇ 5-10 ಹೆಚ್ಚಳಕ್ಕೆ ನಮ್ಮ ಅಭ್ಯಂತರವಿಲ್ಲ. ಆದರೆ, ಏಕಾಏಕಿ ಶೇ 50-60ರಷ್ಟು ಹೆಚ್ಚಿಸಿರುವುದು ಸರಿಯಲ್ಲ. ಬಿಎಂಆರ್‌ಸಿಎಲ್ ಕೂಡಲೇ ದರ ವಾಪಸ್ ಪಡೆಯದಿದ್ದರೆ ಹೋರಾಟ ತೀವ್ರಗೊಳಿಸಲಾಗುವುದು ಎಂದು ಎಚ್ಚರಿಸಿದರು.
ಮೆಟ್ರೋ ದರ ಏರಿಕೆಗೆ ಕೇಂದ್ರ ಕಾರಣ ಎಂಬ ಪ್ರಿಯಾಂಕ್ ಖರ್ಗೆ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಎಲುಬಿಲ್ಲದ ನಾಲಿಗೆ ದಿನಕ್ಕೊಂದು ಹೇಳಿಕೆ ನೀಡುತ್ತಿದೆ. ದರ ನಿಗದಿ ಸಮಿತಿಯಲ್ಲಿ ಕೇಂದ್ರ ಸರ್ಕಾರದ ಅಧಿಕಾರಿಗಳ ಜೊತೆಗೆ ರಾಜ್ಯ ಸರ್ಕಾರದವರು ಇರುತ್ತಾರೆ. ಒಮ್ಮೆ ದರ ಏರಿಸುವ ಮೊದಲು ಯಾವ ರಾಜ್ಯಗಳಲ್ಲಿ ಎಷ್ಟು ದರ ಇದೆ ಎಂಬುದನ್ನು ಏಕೆ ಪರಿಶೀಲಿಸಲಿಲ್ಲ. ವಿರೋಧ ವ್ಯಕ್ತವಾದ ನಂತರ ಕೇಂದ್ರ ಸರ್ಕಾರದ ಮೇಲೆ ಬೊಟ್ಟು ಮಾಡುತ್ತಿದ್ದಾರೆ. ಸಿಎಂ ಸಿದ್ದರಾಮಯ್ಯ ಅವರಿಗೆ ಬೆಲೆ ಏರಿಕೆ ಬಿಟ್ಟರೆ ಬೇರೇನೂ ಗೊತ್ತಿಲ್ಲ. ಬಿಎಂಟಿಸಿ, ಕೆಎಸ್ಆರ್‌ಟಿಸಿ ಬಸ್ ದರ ಏರಿಕೆಯಾಗಿದೆ. ಈಗ ಮೆಟ್ರೋ ದರ ಏರಿಸಿದ್ದಾರೆ. ಕೂಡಲೇ ದರ ಏರಿಕೆ ಹಿಂಪಡೆಯಬೇಕು ಎಂದು ಆಗ್ರಹಿಸಿದರು.
ಬಸವನಗುಡಿ ಶಾಸಕ ರವಿ ಸುಬ್ರಹ್ಮಣ್ಯ ಮಾತನಾಡಿ, ಏಕಾಏಕಿ ಮೆಟ್ರೋ ಪ್ರಯಾಣ ದರ ಏರಿಕೆ ಖಂಡಿಸಿ ಬಿಜೆಪಿ ತೆಗೆದುಕೊಂಡಿರುವ ನಿರ್ಣಯವನ್ನು ಬಿಎಂಆರ್ಸಿಎಲ್ ವ್ಯವಸ್ಥಾಪಕ ನಿರ್ದೇಶಕರಿಗೆ ಸಲ್ಲಿಸಲಾಗಿದೆ. ಮೆಟ್ರೋ ಸೇವಾ ಕ್ಷೇತ್ರವೇ ವಿನಃ ಸಂಪಾದನೆ ಮಾಡುವ ಕ್ಷೇತ್ರ ಅಲ್ಲ. ಬಡವರಿಗೆ ಅನುಕೂಲವಾಗಲು ಹಾಗೂ ಬೆಂಗಳೂರಿನ ವಾಹನ ದಟ್ಟಣೆ ಕಡಿಮೆ ಮಾಡಲು ಕೇಂದ್ರ ಸರ್ಕಾರ ಯೋಜನೆಗೆ ಅನುದಾನ ನೀಡಿದೆ. ಆದರೆ, ರಾಜ್ಯ ಸರ್ಕಾರ ಹಾಲಿನಿಂದ ಹಿಡಿದು ಆಲ್ಕೋಹಾಲ್‌ವರೆಗೆ, ಬಸ್ಸಿನಿಂದ ಹಿಡಿದು ಮೆಟ್ರೋವರೆಗೆ ಜನಸಾಮಾನ್ಯರ ಮೇಲೆ ಬರೆ ಎಳೆದಿದೆ. ಕೆಲ ಕಡೆಗಳಲ್ಲಿ ಪ್ರಯಾಣ ದರ ಶೇ 100 ಕ್ಕೆ ಏರಿಕೆಯಾಗಿದೆ. ಜನಸಾಮಾನ್ಯರ ಮೇಲೆ ರಾಜ್ಯ ಸರ್ಕಾರ ಗದಾಪ್ರಹಾರ ಮಾಡುತ್ತಿದೆ. ಕೂಡಲೇ ದರ ಏರಿಕೆ ಹಿಂಪಡೆಯಬೇಕು. ಮೆಟ್ರೋ ನಿಲ್ದಾಣಗಳಲ್ಲಿ ಅಗತ್ಯ ಸೌಲಭ್ಯ ಕಲ್ಪಿಸಬೇಕು. ಇಲ್ಲವಾದಲ್ಲಿ ಬೆಂಗಳೂರಿನಾದ್ಯಂತ ಬಿಜೆಪಿ ಉಗ್ರ ಹೋರಾಟ ನಡೆಸಲಿದೆ ಎಂದು ಹೇಳಿದರು.
ಬಿಜೆಪಿ ಪ್ರಧಾನ ಕಾರ್ಯದರ್ಶಿ ರಾಜೀವ್ ಕುಡುಚಿ ಮಾತನಾಡಿ, ಮೆಟ್ರೋ ಪ್ರಯಾಣ ದರ ಏರಿಕೆ ಮಾಡುವಂತೆ ರಾಜ್ಯ ಸರ್ಕಾರವೇ ಪ್ರಸ್ತಾವನೆ ಸಲ್ಲಿಸಿದೆ. ಕೇಂದ್ರ ಸರ್ಕಾರ ಅದಕ್ಕಾಗಿ ದರ ನಿಗದಿ ಸಮಿತಿ ರಚಿಸಿತ್ತು. ಆ ಸಮಿತಿಯು ಕಾರ್ಯಾಚರಣೆ ವೆಚ್ಚಆಧರಿಸಿ ವರದಿ ನೀಡಿತ್ತು. ಆದರೆ, ದರ ಹೆಚ್ಚಳಕ್ಕೆ ಶಿಫಾರಸು ಮಾಡಿ ಸಮಿತಿ ಸಲ್ಲಿಸಿದ್ದ ವರದಿಯನ್ನು ಕೇಂದ್ರ ಸರ್ಕಾರ ನಿರಾಕರಿಸಿತ್ತು. ಆಗ ರಾಜ್ಯ ಸರ್ಕಾರವೇ ಒತ್ತಡ ಹೇರಿ ದರ ಏರಿಕೆಗೆ ಅನುಮೋದನೆ ಪಡೆದಿದೆ ಎಂದು ಆರೋಪಿಸಿದರು.
ಇಂದು ಮೆಟ್ರೋ ನಿಲ್ದಾಣಗಳಲ್ಲಿ ಪ್ರತಿಭಟನೆ
ಮೆಟ್ರೋ ಪ್ರಯಾಣ ದರ ಏರಿಕೆ ಖಂಡಿಸಿ ಬಿಜೆಪಿ ವತಿಯಿಂದ ಸೋಮವಾರ ಸಂಜೆ 6ಕ್ಕೆ ಬೆಂಗಳೂರಿನಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ. ಹಸಿರು ಮಾರ್ಗದ ಮಾದಾವರ, ಪೀಣ್ಯ, ಯಶವಂತಪುರ ಸೇರಿದಂತೆ ನೇರಳ ಮಾರ್ಗದ ಒಟ್ಟು 16ನಿಲ್ದಾಣಗಳಲ್ಲಿ ಏಕಕಾಲದಲ್ಲಿ ಪ್ರತಿಭಟನೆ ನಡೆಸಲಾಗುವುದು ಎಂದು ರಾಜೀವ್ ತಿಳಿಸಿದರು.
ಬಿಜೆಪಿ ನಿಯೋಗದಲ್ಲಿ ಮುಖಂಡರಾದ ಅಶ್ವತ್ಥನಾರಾಯಣ, ಹರೀಶ್, ಪ್ರಕಾಶ್, ಅನಿಲ್‌ಕುಮಾರ್, ಮಾಜಿ ಮೇಯರ್ ಗೌತಮ್ ಇತರರು ಇದ್ದರು.