ಮಲೆನಾಡು-ಕರಾವಳಿ ಬೆಸೆಯುವ ಸೇತುವೆಯ ಉದ್ಘಾಟನೆಯೂ,  ರಾಜಕೀಯ ವೈರುದ್ಯವೂ.!
x

ಮಲೆನಾಡು-ಕರಾವಳಿ ಬೆಸೆಯುವ ಸೇತುವೆಯ ಉದ್ಘಾಟನೆಯೂ, ರಾಜಕೀಯ ವೈರುದ್ಯವೂ.!

ಏಳು ವರ್ಷಗಳ ಹಿಂದೆ ಕೇಂದ್ರ ಭೂ ಸಾರಿಗೆ ಸಚಿವ ನಿತಿನ್‌ ಗಡ್ಕರಿಯವರು ಗುದ್ದಲಿ ಪೂಜೆ ನೆರವೇರಿಸಿದ್ದ ದೇಶದ ಎರಡನೇ ಅತೀ ಉದ್ದದ ತೂಗು ಸೇತುವೆ ಸೋಮವಾರ ಗಡ್ಕರಿ ಅವರಿಂದಲೇ ಲೋಕಾರ್ಪಣೆಗೊಂಡಿತು. ಆದರೆ...


ಶರಾವತಿ ಹಿನ್ನೀರು ಪ್ರದೇಶವಾದ ಕರೂರು-ಬಾರಂಗಿ ಹೋಬಳಿಗೆ ಸಂಪರ್ಕ ಕಲ್ಪಿಸುವ ಸಿಗಂದೂರು ಸೇತುವೆ ಉದ್ಘಾಟನೆ ಕಾರ್ಯಕ್ರಮದಲ್ಲೂ ರಾಜಕೀಯ ಪ್ರವೇಶ ಪಡೆದಿದೆ. ಎಲ್ಲರೂ ಕೂಡಿ ಸಂಭ್ರಮಿಸಬೇಕಾದ ಕಾರ್ಯಕ್ರಮಕ್ಕೆ ಗೈರಾಗುವ ಮೂಲಕ ರಾಜ್ಯ ಸರ್ಕಾರ, ಕೇಂದ್ರ ಸರ್ಕಾರದ ವಿರುದ್ಧ ಪ್ರತಿಭಟನೆಯನ್ನು ದಾಖಲಿಸಿತು.

473 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾಗಿರುವ ಸೇತುವೆ ಆರೂವರೆ ದಶಕಗಳಿಂದ ಚಾಲ್ತಿಯಲ್ಲಿದ್ದ ಲಾಂಚ್‌ ಮೇಲಿನ ಪಯಣವನ್ನು ಕೊನೆಗಾಣಿಸಿದೆ. ಸಿಗಂದೂರು ಸೇತುವೆಯು ಮಲೆನಾಡು ಮತ್ತು ಕರಾವಳಿಯನ್ನು ಹತ್ತಿರಕ್ಕೆ ಬೆಸೆಯುವ ಐತಿಹಾಸಿಕ ಸೇತುವೆಯಾಗಿದೆ. ವರ್ಷಕ್ಕೆ ಲಕ್ಷಾಂತರ ಭಕ್ತರು ಮತ್ತು ಪ್ರವಾಸಿಗರನ್ನು ಸೂಜಿಗಲ್ಲಿನಂತೆ ಸೆಳೆಯುತ್ತಿದ್ದ ಶ್ರೀ ಕ್ಷೇತ್ರ ಸಿಗಂದೂರಿಗೆ ಸಂಪರ್ಕ ಕಲ್ಪಿಸುವ ಈ ಸೇತುವೆ ದೇಶದಲ್ಲಿಯೇ ಎರಡನೇ ಅತೀ ಉದ್ದದ ತೂಗು ಸೇತುವೆಯಾಗಿದೆ. ಸೇತುವೆ ನಿರ್ಮಾಣವನ್ನು ಯಾರೇ ಮಾಡಿರಲಿ, ಶತಮಾನದ ಸಂಕೋಲೆ ಕಳಚಿದ ಭಾವನಾತ್ಮಕ ಸನ್ನಿವೇಶದಲ್ಲಿ ಜನರಿರುವಾಗ ರಾಜಕೀಯ ಮೇಲಾಟವಾಗಿದ್ದು ಮಾತ್ರ ದುರಂತವೇ ಸರಿ.

ಅಗಾಧ ಜಲರಾಶಿಯ ನಡುವೆ ಹಾದು ಹೋಗಿರುವ ಅತೀ ಉದ್ದನೆಯ ಸೇತುವೆ ಮೇಲೆ ಹೆಜ್ಜೆ ಇಟ್ಟು ಸಾಗುವ ಅಮೃತಘಳಿಗೆ ರಾಜಕೀಯಕ್ಕೆ ವೇದಿಕೆಯಾಯಿತು. ಸುರಿಯುವ ಮಳೆಯಲ್ಲಿಯೂ ಅಲ್ಲಿ ನೆರೆದಿದ್ದ ಜನರಲ್ಲಿ ಒಂದು ಸಾರ್ಥಕ ಭಾವ ಕಂಡು ಬರುತಿತ್ತು. ಇದು ಐತಿಹಾಸಿಕ ಅಂಬಾರಗೊಡ್ಲು-ಕಳಸವಳ್ಳಿ-ಸಿಗಂದೂರು ಸಂಪರ್ಕ ಸೇತುವೆಯ ಉದ್ಘಾಟನೆಯಂದು (ಸೋಮವಾರ) ಕಂಡು ಬಂದ ದೃಶ್ಯ.

ಆರೂವರೆ ದಶಕಗಳಿಂದ ದೋಣಿ ಮತ್ತು ಲಾಂಚ್‌ಗಳಲ್ಲಿಯೇ ನದಿಯನ್ನು ದಾಟಿ ಸಾಗರಕ್ಕೆ ಬರುತ್ತಿದ್ದ ಶರಾವತಿ ಹಿನ್ನೀರು ಪ್ರದೇಶವಾದ ಕರೂರು ಮತ್ತು ಬಾರಂಗಿ ಹೋಬಳಿಯ ಜನರ ಶಾಪ ವಿಮೋಚನೆಯಾದಂತಾಗಿದೆ. ಏಳು ವರ್ಷಗಳ ಹಿಂದೆ ಕೇಂದ್ರ ಭೂ ಸಾರಿಗೆ ಸಚಿವ ನಿತಿನ್‌ ಗಡ್ಕರಿಯವರು ಗುದ್ದಲಿ ಪೂಜೆ ನೆರವೇರಿಸಿದ್ದ ದೇಶದ ಎರಡನೇ ಅತೀ ಉದ್ದದ ತೂಗು ಸೇತುವೆ ಸೋಮವಾರ ಗಡ್ಕರಿ ಅವರಿಂದಲೇ ಲೋಕಾರ್ಪಣೆಗೊಂಡಿತು. ಆದರೆ...

ಉದ್ಘಾಟನೆಗೆ ಸಿಎಂ ಸಿದ್ದರಾಮಯ್ಯ ಭಾಗಿಯಾಗಲಿಲ್ಲ...

ಕೇಂದ್ರ ಭೂ ಸಾರಿಗೆ ಇಲಾಖೆಯ ವ್ಯಾಪ್ತಿಗೆ ಬರುವ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದಿಂದ ಕಾಮಗಾರಿ ನಡೆದಿದ್ದು, ಇದೊಂದು ಕೇಂದ್ರ ಸರ್ಕಾರದ ಕಾರ್ಯಕ್ರಮವಾಗಿದೆ. ದೊಡ್ಡ ಮಟ್ಟದ ಸೇತುವೆ ಉದ್ಘಾಟನೆಗೆ ರಾಜ್ಯಮಟ್ಟದ ಕಾರ್ಯಕ್ರಮ ನಡೆಯುವಾಗ ಶಿಷ್ಟಾಚಾರ ಪಾಲನೆಯಾಗಿಲ್ಲ ಎಂಬ ಕಾರಣಕ್ಕೆ ರಾಜ್ಯ ಸರಕಾರದ ಯಾವ ಪ್ರತಿನಿಧಿಗಳು ಉದ್ಘಾಟನೆಯಲ್ಲಿ ಭಾಗಿಯಾಗಿಲ್ಲ. ಜೂ.11 ರಂದೇ ಕೇಂದ್ರ ಸಚಿವ ನಿತಿನ್‌ ಗಡ್ಕರಿ ಅವರು ಸಿಎಂ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದು ಕಾರ್ಯಕ್ರಮಕ್ಕೆ ಆಹ್ವಾನ ನೀಡಿದ್ದರೆಂದು ಹೇಳಲಾಗಿದೆ.


ಆದರೆ ಅದೇ ದಿನ ಗಡ್ಕರಿಗೆ ಪತ್ರ ಬರೆದಿರುವ ಸಿಎಂ ಸಿದ್ದರಾಮಯ್ಯ ಅವರು," ರಾಜ್ಯಮಟ್ಟದ ಕಾರ್ಯಕ್ರಮ ಮಾಡುವಾಗ ನಿಮ್ಮ ಇಲಾಖೆ ಅಧಿಕಾರಿಗಳು ಶಿಷ್ಟಾಚಾರ ಪಾಲಿಸಿಲ್ಲ. ನನಗೆ ಪೂರ್ವನಿರ್ಧರಿತ ಕಾರ್ಯಕ್ರಮಗಳಿದ್ದವು. ಮುಂಚಿತವಾಗಿ ದಿನಾಂಕ ಪಡೆಯದೆ ಕಾರ್ಯಕ್ರಮ ನಿಗದಿ ಮಾಡಿದ್ದೀರಿ. ಆದ್ದರಿಂದ ಕಾರ್ಯಕ್ರಮವನ್ನು ಮುಂದೂಡಬೇಕು ಮತ್ತು ನಿಮಗೆ ಅನುಕೂಲವಾಗುವ ಎರಡು ದಿನಾಂಕ ತಿಳಿಸಿದರೆ ಅದರಲ್ಲಿ ಒಂದಕ್ಕೆ ನಾನು ಬರುವೆ," ಎಂದು ಉತ್ತರಿಸಿದ್ದರು.

ಮುಖ್ಯಮಂತ್ರಿಯ ಮನವಿಯನ್ನೂ ಲೆಕ್ಕಿಸದೆ ಕಾರ್ಯಕ್ರಮ ನಿಗದಿ ಮಾಡಿರುವುದರ ಹಿಂದೆ ರಾಜಕೀಯ ಲಾಭ ಪಡೆಯುವ ಹುನ್ನಾರವಿದೆ ಎಂಬ ಆರೋಪ ಸ್ಥಳೀಯ ಕಾಂಗ್ರೆಸ್‌ ನಾಯಕರದ್ದಾಗಿದೆ. ಬಹುವರ್ಷಗಳ ಬೇಡಿಕೆಯನ್ನು ಈಡೇರಿಸಿರುವುದು ನಾವು, ಕಾಂಗ್ರೆಸ್‌ನವರ ಪಾತ್ರ ಏನೂ ಇಲ್ಲ ಎಂಬ ಉಮೇದಿನಲ್ಲಿ ಬಿಜೆಪಿ ನಾಯಕರು ಕಾರ್ಯಕ್ರಮವನ್ನು ತರಾತುರಿಯಲ್ಲಿ ಮಾಡಿದ್ದಾರೆ.

ಸ್ಥಳೀಯವಾಗಿ ಯಡಿಯೂರಪ್ಪ ಕುಟುಂಬ ಮತ್ತು ಮಾಜಿ ಸಿಎಂ ಬಂಗಾರಪ್ಪ ಕುಟುಂಬದ ನಡುವೆ ಇರುವ ರಾಜಕೀಯ ಜಿದ್ದಾಜಿದ್ದಿಯೂ ಇದಕ್ಕೆ ಕಾರಣ ಎಂದೂ ವಿಶ್ಲೇಷಿಸಲಾಗುತ್ತಿದೆ. ಶಿವಮೊಗ್ಗದಲ್ಲಿ ಹಲವು ವಿಚಾರಗಳಲ್ಲಿ ಸಂಸದ ಬಿ.ವೈ.ರಾಘವೇಂದ್ರ ಮತ್ತು ಸಚಿವ ಮಧುಬಂಗಾರಪ್ಪ ಅವರ ನಡುವೆ ಪರಸ್ಪರ ಟೀಕಾಟಿಪ್ಪಣಿಗಳು ನಡೆಯುತ್ತಿರುತ್ತವೆ. ಸೇತುವೆ ಇರುವ ಸಾಗರ ವಿಧಾನ ಸಭೆ ಕ್ಷೇತ್ರದಲ್ಲಿ ಕಾಂಗ್ರೆಸ್‌ ಶಾಸಕ ಬೇಳೂರು ಗೋಪಾಲಕೃಷ್ಣ ಇದ್ದಾರೆ. ಅವರನ್ನೂ ಕಾರ್ಯಕ್ರಮದಲ್ಲಿ ಉಪೇಕ್ಷೆ ಮಾಡಬೇಕೆಂಬ ಉದ್ದೇಶದಿಂದ ಕಾರ್ಯಕ್ರಮಕ್ಕೆ ಒಮ್ಮನಸ್ಸಿನಿಂದ ಕರೆದಿಲ್ಲ. ಕಾರ್ಯಕ್ರಮದ ಪೂರ್ವ ತಯಾರಿ ಬಗ್ಗೆ ನಡೆದ ಸಭೆಗೂ ಸಚಿವ ಮತ್ತು ಶಾಸಕರಿಗೆ ಆಹ್ವಾನ ನೀಡಿಲ್ಲ. ಕಾರ್ಯಕ್ರಮದ ಹಿಂದಿನ ದಿನ ನಾಮ್‌ಕೇವಾಸ್ತೆ ಕರೆದಿದ್ದಾರೆ ಎಂಬುದು ಕಾಂಗ್ರೆಸ್‌ ನಾಯಕರ ವಾದವಾಗಿತ್ತು.


ಭಾವನಾತ್ಮಕ ವಿಷಯ

ಸೇತುವೆ ನಿರ್ಮಾಣ ಒಂದು ಭಾವನಾತ್ಮಕ ವಿಷಯವಾಗಿದ್ದು, ಶರಾವತಿ ಮುಳುಗಡೆ ಸಂತ್ರಸ್ಥರ ಭೂಮಿಯ ವಿಚಾರವಾಗಿ ಬಿಜೆಪಿ ವಿರುದ್ಧ ಸಚಿವ ಮಧು ಬಂಗಾರಪ್ಪ ಮತ್ತು ಕಾಂಗ್ರೆಸ್‌ ಮುಖಂಡರು ವಾಗ್ದಾಳಿ ನಡೆಸುತ್ತಿದ್ದಾರೆ. ಬೊಮ್ಮಾಯಿ ಸರಕಾರದ ಅವಧಿಯಲ್ಲಿ ಸಂತ್ರಸ್ತರ ಭೂಮಿಯ ಅಧಿಸೂಚನೆ ರದ್ದು ಮಾಡಲಾಗಿದೆ ಎಂದು ನಿರಂತರ ಆರೋಪ ಮಾಡುತ್ತಿದ್ದಾರೆ. ಹೀಗಾಗಿ ಹಿನ್ನೀರು ಸಂತ್ರಸ್ಥರಿಗೆ ನಿರ್ಮಿಸಿರುವ ಸಂಪರ್ಕ ಸೇತುವೆಯ ಲಾಭವನ್ನು ತಾವು ಮಾತ್ರ ಪಡೆಯಬೇಕೆಂಬ ಹವಣಿಕೆಯಲ್ಲಿ ಕೇಂದ್ರ ಸರ್ಕಾರ ಮತ್ತು ಸ್ಥಳೀಯ ಬಿಜೆಪಿ ಸಂಸದರು ಹಾಗೂ ಮುಖಂಡರು ರಾಜ್ಯ ಸರ್ಕಾರದ ಪ್ರತಿನಿಧಿಗಳನ್ನು ಉಪೇಕ್ಷೆ ಮಾಡಿದ್ದಾರೆ.

ಸಾಗರಕ್ಕೆ ಬಂದು ವಾಪಸ್‌ ಆದ ಜಾರಕಿಹೊಳಿ

ರಾಜ್ಯದ ಲೋಕೋಪಯೋಗಿ ಸಚಿವ ಸತೀಶ್‌ ಜಾರಕಿಹೊಳಿ ಅವರು ಕಾರ್ಯಕ್ರಮಕ್ಕಾಗಿಯೇ ಬೆಂಗಳೂರಿನಿಂದ ಸಾಗರಕ್ಕೆ ಬಂದಿದ್ದರು. ಆದರೆ ಈ ಹೊತ್ತಿಗಾಗಲೇ ಬೆಂಗಳೂರಿನಲ್ಲಿ ಹೇಳಿಕೆ ನೀಡಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ದೊಡ್ಡ ಕಾರ್ಯಕ್ರಮದಲ್ಲಿ ರಾಜ್ಯ ಸರ್ಕಾರವನ್ನು ನಿರ್ಲಕ್ಷ್ಯ ಮಾಡಿರುವ ಕಾರಣ ನಾವು ಕಾರ್ಯಕ್ರಮಕ್ಕೆ ಗೈರಾಗುವ ಮೂಲಕ ಪ್ರತಿಭಟಿಸುತ್ತೇವೆ ಎಂದು ಹೇಳಿಕೆ ನೀಡಿದ್ದರು. ಈ ವಿಷಯ ಗಮಕ್ಕೆ ಬರುತ್ತಲೇ ಜಾರಕಿಹೊಳಿ ಕೂಡಾ ಕಾರ್ಯಕ್ರಮದಿಂದ ದೂರ ಉಳಿದರು. ಸಚಿವ ಮಧು ಬಂಗಾರಪ್ಪ ಮತ್ತು ಶಾಸಕ ಬೇಳೂರು ಗೋಪಾಲಕೃಷ್ಣ ಕೂಡಾ ಸಭೆಗೆ ಹೋಗಲಿಲ್ಲ.

ಶಿವಮೊಗ್ಗ ಸಂಸದ ಬಿ.ವೈ ರಾಘವೇಂದ್ರ ಹೇಳಿಕೆ

ಈ ನಡುವೆ ಪ್ರತಿಕ್ರಿಯೆ ನೀಡಿರುವ ಶಿವಮೊಗ್ಗ ಸಂಸದ ಬಿ.ವೈ.ರಾಘವೇಂದ್ರ ಅವರು, ಜುಲೈ 9 ರಂದು ಮುಂಚಿತವಾಗಿಯೇ ಮುಖ್ಯಮಂತ್ರಿಗೆ ಆಹ್ವಾನ ನೀಡಲಾಗಿದೆ. ಅವರು ಯಾಕೆ ವಿಳಂಬವಾಯಿತೆಂದು ಹೇಳಿಕೆ ನೀಡಿದ್ದಾರೊ ಗೊತ್ತಿಲ್ಲ ಎಂದಿದ್ದಾರೆ.

ಸುಸಂಸ್ಕೃತ ರಾಜಕೀಯದ ಇತಿಹಾಸಕ್ಕೆ ಸಹ್ಯವಲ್ಲದ ರಾಜಕೀಯ ನಡೆ

ಶಿವಮೊಗ್ಗ ಜಿಲ್ಲೆ ಎಂದರೆ ಇದೊಂದು ರಾಜಕೀಯದ ಗರಡಿಮನೆ ಮತ್ತು ಇಲ್ಲಿ ಒಂದು ಸುಸಂಸ್ಕೃತ ರಾಜಕೀಯದ ಇತಿಹಾಸವೇ ಇದೆ. ಶಾಂತವೇರಿ ಗೋಪಾಲಗೌಡ, ಕಡಿದಾಳು ಮಂಜಪ್ಪ, ಜೆ.ಹೆಚ್.ಪಟೇಲ್‌, ಕೆ.ಹೆಚ್.ಶ್ರೀನಿವಾಸ್‌, ಬದರಿನಾರಾಯಣ ಅಯ್ಯಂಗಾರ್‌, ಎಸ್.ಬಂಗಾರಪ್ಪ, ಕಾಗೋಡು ತಿಮ್ಮಪ್ಪ, ಯಡಿಯೂರಪ್ಪ ಶಂಕರಮೂರ್ತಿಯವರಂತಹ ರಾಜಕೀಯ ಮುತ್ಸದ್ದಿಗಳಿದ್ದರೂ ಅವರೆಲ್ಲ ಪರಸ್ಪರ ಸೈದ್ಧಾಂತಿಕ ಭಿನ್ನಾಭಿಪ್ರಾಯವನ್ನು ಹೊಂದಿದ್ದರು. ಉಳಿದಂತೆ ರಾಜಕೀಯ ಟೀಕೆ ಟಿಪ್ಪಣಿ ಮಾಡುತ್ತಿದ್ದರೂ ವೈಯಕ್ತಿಕ ನೆಲೆಯಲ್ಲಿ ಇರುತ್ತಿರಲಿಲ್ಲ. ಆದರೆ ಇತ್ತೀಚಿನ ತಲೆಮಾರಿನ ರಾಜಕೀಯ ಮುಖಂಡರ ಹೇಳಿಕೆಗಳಲ್ಲಿಯೇ ರಾಜಕೀಯ ಈರ್ಷ್ಯೆ ಎದ್ದುಕಾಣುತ್ತದೆ. ಒಬ್ಬರ ಟೀಕೆಯನ್ನು ಮತ್ತೊಬ್ಬರು ವೈಯಕ್ತಿಕವಾಗಿ ತೆಗೆದುಕೊಳ್ಳುತ್ತಾರೆ. ಈ ಬದಲಾದ ರಾಜಕೀಯ ಸಂಸ್ಖೃತಿಯ ಕಾರಣಕ್ಕೇ ಸಿಗಂದೂರು ಸೇತುವೆ ಉದ್ಘಾಟನೆ ಕಾರ್ಯಕ್ರಮ ಸಾಕ್ಷಿಯಾಗಿದೆ.

ಬಂಗಾರಪ್ಪ-ಯಡಿಯೂರಪ್ಪ ಮಾದರಿ!

ನಾಲ್ಕು ದಶಕಗಳ ಕಾಲ ಬಂಗಾರಪ್ಪ ಮತ್ತು ಯಡಿಯೂರಪ್ಪ ಪರಸ್ಪರ ವಿರುದ್ಧ ದಿಕ್ಕಿನಲ್ಲಿ ರಾಜಕೀಯ ಮಾಡಿದವರು, ಆದರೆ ಅವರುಗಳ ಟೀಕೆ ಸೈದ್ಧಾಂತಿಕ ನೆಲೆಯಲ್ಲಿ ಇರುತಿತ್ತು. ಎಲ್ಲಿಯೇ ಆಗಲಿ ಅವರು ಎದುರುಬದರಾದರೆ ತುಂಬಾ ಆತ್ಮೀಯತೆಯಿಂದ ನಡೆದುಕೊಳ್ಳುತ್ತಿದ್ದರು. ರಾಜಕೀಯಕ್ಕಾಗಿ ವೈಯಕ್ತಿಕ ನೆಲೆಯಲ್ಲಿ ಅವರು ಟೀಕೆಯನ್ನೇ ಮಾಡುತ್ತಿರಲಿಲ್ಲ. ಮತ್ತು ಪರಸ್ಪರರನ್ನು ಗೌರವಿಸುತ್ತಿದ್ದರು. ಈ ರಾಜಕೀಯ ನಾಯಕರ ನಡೆ ಇಂದಿನ ಅವರುಗಳ ಉತ್ತರಾಧಿಕಾರಿಗಳಿಗೆ ಮಾದರಿಯಾಗಬೇಕಿದೆ ಎನ್ನುತ್ತಾರೆ ರಾಜಕೀಯ ನಾಯಕರೊಬ್ಬರು. ಒಟ್ಟಿನಲ್ಲಿ ಸಂಭ್ರಮದಿಂದ ಆಗಬೇಕಿದ್ದ ಒಂದು ಐತಿಹಾಸಿಕ ಸೇತುವೆ ಉದ್ಘಾಟನೆ ರಾಜಕೀಯ ಲಾಭ ನಷ್ಟದ ಲೆಕ್ಕಾಚಾರದಲ್ಲಿ ಚರ್ಚೆಗೊಳಗಾಗಿದ್ದು ಮಾತ್ರ ವೈರುದ್ಯವೇ ಸರಿ.

Read More
Next Story