
ಚುನಾವಣೆಯಲ್ಲಿ ಅಕ್ರಮ ಮಾಡಲೆಂದೇ ಸರ್ಕಾರದಿಂದ ಮತಪತ್ರ ಬಳಕೆಗೆ ತೀರ್ಮಾನ, ಬಿಜೆಪಿ ವಾಗ್ದಾಳಿ
ಇವಿಎಂ ಬಳಸಿ ರಾಜ್ಯದಲ್ಲಿ 2023ರ ಚುನಾವಣೆಯಲ್ಲಿ ಗೆಲುವು ಸಾಧಿಸಿರುವ 136 ಕಾಂಗ್ರೆಸ್ ಶಾಸಕರು ಮತ್ತು ಲೋಕಸಭಾ ಸದಸ್ಯರಿಂದ ರಾಜೀನಾಮೆ ಕೊಡಿಸಿ ಮತಪತ್ರ ಬಳಸಿ ಮತ್ತೆ ಚುನಾವಣೆಯಿಂದ ಗೆದ್ದು ಬರಲಿ ಎಂದು ಬಿ.ವೈ. ವಿಜಯೇಂದ್ರ ತಿಳಿಸಿದ್ದಾರೆ.
ಮತಪತ್ರಗಳ ಬಳಕೆಯಿಂದ ಚುನಾವಣಾ ಅಕ್ರಮ ಎಸಗಬಹುದು, ಮತಗಟ್ಟೆಗಳಲ್ಲಿ ದೌರ್ಜನ್ಯ ಮೆರೆಯಬಹುದು, ಎಗ್ಗಿಲ್ಲದೇ ಕಳ್ಳ ಮತದಾನವನ್ನೂ ಮಾಡಬಹುದು ಎಂಬ ಕಾರಣಕ್ಕಾಗಿ ಕಾಂಗ್ರೆಸ್ ಮತ ಪತ್ರ ಆಧರಿಸಿದ ಚುನಾವಣೆಯನ್ನು ನಡೆಸಲು ತೀರ್ಮಾನಿಸಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಹೇಳಿದ್ದಾರೆ.
ಈ ಕುರಿತು ತಮ್ಮ ಸಾಮಾಜಿಕ ಜಾಲತಾಣ ʼಎಕ್ಸ್ʼನಲ್ಲಿ ಪ್ರತಿಕ್ರಿಯಿಸಿರುವ ಅವರು, ಇವಿಎಂ ಬಳಸಿ ರಾಜ್ಯದಲ್ಲಿ 2023ರ ಚುನಾವಣೆಯಲ್ಲಿ ಗೆಲುವು ಸಾಧಿಸಿರುವ 136 ಕಾಂಗ್ರೆಸ್ ಶಾಸಕರು ಮತ್ತು ಲೋಕಸಭಾ ಸದಸ್ಯರಿಂದ ರಾಜೀನಾಮೆ ಕೊಡಿಸಿ ಮತಪತ್ರ ಬಳಸಿ ಮತ್ತೆ ಚುನಾವಣೆಯಿಂದ ಗೆದ್ದು ಬರಲಿ, ಇಲ್ಲದಿದ್ದರೆ ಮತಗಳ್ಳತನದಿಂದ ನಾವು ಆಯ್ಕೆಯಾಗಿ ಅಧಿಕಾರಕ್ಕೆ ಬಂದಿರುವುದು ಎಂದು ಕಾಂಗ್ರೆಸ್ ಒಪ್ಪಿಕೊಳ್ಳಲಿ ಎಂದಿದ್ದಾರೆ.
ಸ್ಥಳೀಯ ಸಂಸ್ಥೆಗಳ ಚುನಾವಣೆಗಳಲ್ಲಿ ವಿದ್ಯುನ್ಮಾನ ಮತಯಂತ್ರಗಳನ್ನು ಬದಿಗಿಟ್ಟು ರಾಜ್ಯ ಸರ್ಕಾರ ಮತಪತ್ರ ಬಳಕೆಗೆ ನಿರ್ಧರಿಸಿರುವುದು ತಾವು ರಾಜ್ಯದಲ್ಲಿ ಅಧಿಕಾರಕ್ಕೆ ಬಂದಿರುವುದೇ ಮತಗಳ್ಳತನದಿಂದ ಎಂದು ಸ್ವಯಂ ಪ್ರಾಮಾಣಿಕರಿಸಿಕೊಂಡಂತಿದೆ ಎಂದರು.
ಮತಪತ್ರ ಬಳಕೆಯಲ್ಲೇ ಅಕ್ರಮ ಹೆಚ್ಚು
ದೇಶದಲ್ಲಿ ಅತಿಹೆಚ್ಚು ಅಕ್ರಮ ಮತದಾನ, ಮತಗಳ್ಳತನದ ದೂರುಗಳು, ಚುನಾವಣಾ ದೌರ್ಜನ್ಯದ ಘಟನೆಗಳು, ಚುನಾವಣಾ ಅಕ್ರಮಗಳು ನಡೆದ ಬಗ್ಗೆ ನ್ಯಾಯಾಲಯಗಳಲ್ಲಿ ದೂರುಗಳು ಅತಿ ಹೆಚ್ಚು ದಾಖಲಾಗಿದ್ದರೆ ಅದು ಮತಪತ್ರ ಆಧರಿಸಿ ನಡೆಸಿದ ಚುನಾವಣೆಗಳಲ್ಲಿ, ಅದೂ ಕಾಂಗ್ರೆಸ್ಸಿಗರ ಮೇಲೇ ಹೆಚ್ಚು ಎಂಬುದನ್ನು ಕಾಂಗ್ರೆಸ್ಸಿಗರು ತಿಳಿದುಕೊಳ್ಳಬೇಕು. ಮಾಜಿ ಪ್ರಧಾನಿ ಇಂದಿರಾ ಗಾಂಧಿಯವರು ದೇಶದಲ್ಲಿ ತುರ್ತು ಪರಿಸ್ಥಿತಿ ಹೇರಲು ಕಾರಣವಾಗಿದ್ದು, ಅವರು ನಡೆಸಿದ ಮತಗಳ್ಳತನ ಹಾಗೂ ಅಕ್ರಮ ಚುನಾವಣೆಯ ಹಿನ್ನೆಲೆಯಲ್ಲಿ ನ್ಯಾಯಾಲಯ ನೀಡಿದ ತೀರ್ಪಿನಿಂದ ಎಂಬ ಇತಿಹಾಸವನ್ನು ದೇಶದ ಜನ ಮರೆತಿಲ್ಲ.
ರಾಹುಲ್ ಗಾಂಧಿಯಿಂದ ವಿವಾದ
ಮತ ಪತ್ರ ಆಧರಿಸಿದ ಚುನಾವಣೆಗಳಲ್ಲಿ ಅಕ್ರಮ ಹಾಗೂ ಮತಗಳ್ಳತನ ನಡೆಸುವುದರಲ್ಲಿ ನಿಷ್ಣಾತರಾದ ಕಾಂಗ್ರೆಸ್ಸಿಗರು ಚುನಾವಣೆಗಳ ನಿರಂತರ ಸೋಲುಗಳಿಂದ ಮೂಲೆಗುಂಪಾಗುತ್ತಿರುವ ಪರಿಸ್ಥಿತಿಯಿಂದ ಕಂಗೆಟ್ಟು ಹೋಗಿದ್ದಾರೆ. ಈ ಕಾರಣದಿಂದಾಗಿ ಆಧಾರ ರಹಿತ, ಅಪ್ರಬುದ್ಧ, ವಿತಂಡ ವಾದವನ್ನು ಮುಂದಿಟ್ಟುಕೊಂಡು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಮತಗಳ್ಳತನದ ಹೆಸರಿನಲ್ಲಿ ಬಾಲಿಶ ವಿವಾದ ಹುಟ್ಟು ಹಾಕಲು ಹೊರಟಿದ್ದಾರೆ ಎಂದು ತಿಳಿಸಿದ್ದಾರೆ.
ಸರ್ಕಾರದಿಂದ ತಂತ್ರಜ್ಞಾನಕ್ಕೆ ಅಪಮಾನ
ತಮ್ಮ ನಾಯಕ ರಾಹುಲ್ ಗಾಂಧಿ ಅವರನ್ನು ಬೆಂಬಲಿಸಲು ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಸರ್ಕಾರ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಮತಪತ್ರವನ್ನು ಬಳಸಿ ಚುನಾವಣೆ ನಡೆಸುವುದಾಗಿ ನಿರ್ಣಯ ಕೈಗೊಂಡಿದೆ. ಇಡೀ ದೇಶ, ಜಗತ್ತು ತಂತ್ರಜ್ಞಾನವನ್ನು ಆಧರಿಸಿ ವೇಗವಾಗಿ ನಡೆಯುತ್ತಿದ್ದರೆ, ಕರ್ನಾಟಕದ ಕಾಂಗ್ರೆಸ್ ಸರ್ಕಾರ ತಂತ್ರಜ್ಞಾನವನ್ನು ಅಪಮಾನಿಸಿ ಹೆಬ್ಬೆಟ್ಟಿನ ದಿನಗಳನ್ನು ನೆನಪಿಸಲು ಹೊರಟಿದೆ ಎಂದರು.
ಕಾಂಗ್ರೆಸ್ ಸರ್ಕಾರ ಅಧಿಕಾರವಿದ್ದ ಅವಧಿಯಲ್ಲಿ ಮತಪತ್ರ ಬಳಸಿ ನಡೆದ ಚುನಾವಣೆಗಳಲ್ಲಿ ಎಷ್ಟು ಅಕ್ರಮ ನಡೆದಿದೆ ಎನ್ನುವುದಕ್ಕೆ ಇವತ್ತಿಗೂ ದಾಖಲೆಗಳಿವೆ, 90ರ ದಶಕದಲ್ಲಿ ದಾವಣಗೆರೆಯಲ್ಲಿ ಜಯಗಳಿಸಿದ್ದ ಲೋಕಸಭಾ ಬಿಜೆಪಿ ಅಭ್ಯರ್ಥಿಯನ್ನು ಮರು ಎಣಿಕೆಯಲ್ಲಿ ಸೋಲಿಸಿ ಕಾಂಗ್ರೆಸ್ ಅಭ್ಯರ್ಥಿಯನ್ನು ಗೆಲ್ಲಿಸಲಾಯಿತು, ಬಿಜೆಪಿ ಅಭ್ಯರ್ಥಿಯ ಮತ್ರ ಪತ್ರಗಳನ್ನು ಹೇಗೆ ತಿರಸ್ಕೃತಗೊಳಿಸಲಾಯಿತು ಎಂಬುದಕ್ಕೆ ಅಂದು ದಾವಣಗೆರೆಯ ಮತ ಎಣಿಕೆ ಕೇಂದ್ರದ ಶೌಚಾಲಯಗಳಲ್ಲೆಲ್ಲಾ ಬಿಜೆಪಿ ಅಭ್ಯರ್ಥಿಯ ಮತ ಪತ್ರಗಳು ಚೆಲ್ಲಾಡಿರುವುದನ್ನು ಮಾಧ್ಯಮಗಳು ವರದಿ ಮಾಡಿದ್ದವು. ಪ್ರಜಾಪ್ರಭುತ್ವ ವ್ಯವಸ್ಥೆ ಹಾಗೂ ಪಾರದರ್ಶಕ ಚುನಾವಣೆಯನ್ನು ಧಿಕ್ಕರಿಸುವುದೇ ಕಾಂಗ್ರೆಸ್‌ನ ಗುರಿಯಾಗಿದೆ ಎಂದು ಪೋಸ್ಟ್‌ನಲ್ಲಿ ತಿಳಿಸಿದ್ದಾರೆ.
ಚುನಾವಣೆಯಲ್ಲಿ ಸೋತಾಗ ಕಾಂಗ್ರೆಸ್‌ಗೆ ಮತಪತ್ರ ನೆನಪು: ಬಿ. ಶ್ರೀರಾಮುಲು
ಅಧಿಕಾರಕ್ಕೆ ಬಂದು ಎರಡೂವರೆ ವರ್ಷ ಮುಗಿಯುವುದರೊಳಗೆ ಜನರಿಂದ ಆಡಳಿತ ವಿರೋಧಿ ಆಲೆಗೆ ಗುರಿಯಾಗಿ ಸೋಲುವ ಭೀತಿಯಲ್ಲಿರುವ ಕಾಂಗ್ರೆಸ್ ಸರ್ಕಾರದ ಸ್ಥಿತಿ ಒಲ್ಲದ ಗಂಡ, ಮೊಸರಲ್ಲಿ ಕಲ್ಲು ಹುಡುಕಿದ ಎಂಬಂತಾಗಿದೆ ಎಂದು ಬಿಜೆಪಿ ನಾಯಕ ಬಿ. ಶ್ರೀರಾಮುಲು ಹೇಳಿದ್ದಾರೆ.
ಈ ಕುರಿತು ತಮ್ಮ ಸಾಮಜಾಕಿ ಜಾಲತಾಣ ʼಎಕ್ಸ್ʼನಲ್ಲಿ ಬ್ಯಾಲಟ್ ಪೇಪರ್ ಕುರಿತು ಪ್ರತಿಕ್ರಿಯಿಸಿರುವ ಅವರು, "ನೀವು ಚುನಾವಣೆಯಲ್ಲಿ ಗೆದ್ದರೆ ಇವಿಎಂಗಳನ್ನು ತಿರುಚಲಾಗುವುದಿಲ್ಲ. ನೀವು ಚುನಾವಣೆಯಲ್ಲಿ ಸೋತಾಗ ಮಾತ್ರ ಇವಿಎಂಗಳನ್ನು ತಿರುಚಲಾಗುತ್ತದೆ" ಎಂದು ನ್ಯಾಯಮೂರ್ತಿಗಳಾದ ವಿಕ್ರಮ್ ನಾಥ್ ಮತ್ತು ಪ್ರಸನ್ನ ಬಿ ವರಾಳೆ ಅವರ ಪೀಠವೇ ಹೇಳಿದೆ ಎಂದು ಸುಪ್ರೀಂ ಕೋರ್ಟ್‌ನ ತೀರ್ಪನ್ನು ಉಲ್ಲೇಖಿಸಿದ್ದಾರೆ.
ಕಾಂಗ್ರೆಸ್‌ನದ್ದು ಅವಕಾಶವಾದಿತನ
ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ 136 ಸ್ಥಾನಗಳನ್ನು ಗೆದ್ದಾಗ ಇವಿಎಂ ಕಾರ್ಯನಿರ್ವಹಣೆ ಅದ್ಭುತವಾಗಿತ್ತು. ಆಗ ಯಾರಾದರೂ ನಮಗೆ ಇಷ್ಟೊಂದು ಸ್ಥಾನ ಹೇಗೆ ? ಬಂದಿತು ಎಂದು ಪ್ರಶ್ನೆ ಮಾಡಿದ್ದೀರಾ? 2024ರ ಲೋಕಸಭಾ ಚುನಾವಣೆಯಲ್ಲಿ ಏಕಾಏಕಿ 9 ಸ್ಥಾನ , ಉಪ ಚುನಾವಣೆಯಲ್ಲಿ 3 ಸ್ಥಾನ ಗೆದ್ದಾಗ ಇವಿಎಂ ಬಗ್ಗೆ ಯಾವ ನಾಯಕರು ಸೊಲ್ಲೆತ್ತಲಿಲ್ಲ. ಫಲಿತಾಂಶ ನಿಮ್ಮ ಕಡೆ ಬಂದಾಗ, ಜೈ, ಸೋಲುವ ಸುಳಿವು ಗೊತ್ತಾಗುತ್ತಿದ್ದಂತೆ ಇಡೀ ವ್ಯವಸ್ಥೆಯೇ ಸರಿ ಇಲ್ಲ ಎನ್ನುವುದನ್ನು ಅವಕಾಶವಾದಿತನ ಎನ್ನಬೇಕೇ ಇಲ್ಲವೇ ಆಷಾಢಭೂತಿತನ ಎಂದು ಕರೆಯಬೇಕೆ ಎಂದು ಪ್ರಶ್ನಿಸಿದ್ದಾರೆ.
2004 ರಿಂದ 2014 ರ ವರೆಗೆ ಕೇಂದ್ರದಲ್ಲಿ ಅಧಿಕಾರ ನಡೆಸಿದ್ದ ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರ ಒಂದೇ ಒಂದು ದಿನ ಇವಿಎಂ ಬಗ್ಗೆ ಮಾತನಾಡಿದ ನಿದರ್ಶನ ಇದ್ದರೆ ತಿಳಿಸಿ. ಸಾಲು ಸಾಲು ಚುನಾವಣೆ ಸೋತು ಮತದಾರರಿಂದ ತಿರಸ್ಕೃತವಾಗಿರುವ ಕಾಂಗ್ರೆಸ್ ಇವಿಎಂ ಮೇಲೆ ಸಂಶಯದ ಬೊಟ್ಟು ಮಾಡಿ ಜನರ ಮನಸ್ಸನ್ನು ವಿಷಯಾಂತರ ಮಾಡುವ ವ್ಯರ್ಥ ಪ್ರಯತ್ನವೇ ಹೊರೆತು ಇದರಲ್ಲಿ ಬೇರೆ ಇನ್ನೇನು ಇಲ್ಲ. ಇವಿಎಂ ಹಾಗೂ ಚುನಾವಣಾ ಪ್ರಕ್ರಿಯೆ ಮೇಲೆ ಸುಪ್ರೀಂ ಕೋರ್ಟ್ ಈ ಹಿಂದೆ ನೀಡಿರುವ ತೀರ್ಪುಗಳನ್ನು ಕಾಂಗ್ರೆಸ್ ನಾಯಕರು ತಿಳಿದುಕೊಳ್ಳಬೇಕು ಎಂದು ಪೋಸ್ಟ್‌ನಲ್ಲಿ ತಿಳಿಸಿದ್ದಾರೆ.