ರಾಮನ ಹೆಸರಿನಲ್ಲಿ ಮತ ಕೇಳಿದರೂ ಅಯೋಧ್ಯೆಯಲ್ಲಿ ಬಿಜೆಪಿಗೆ ಸೋಲು:  ಸಿದ್ದರಾಮಯ್ಯ
x
ಮುಖ್ಯಮಂತ್ರಿ ಸಿದ್ದರಾಮಯ್ಯ

ರಾಮನ ಹೆಸರಿನಲ್ಲಿ ಮತ ಕೇಳಿದರೂ ಅಯೋಧ್ಯೆಯಲ್ಲಿ ಬಿಜೆಪಿಗೆ ಸೋಲು: ಸಿದ್ದರಾಮಯ್ಯ

ಈ ಫಲಿತಾಂಶ ಮೋದಿ ಜನಪ್ರಿಯತೆ ನೆಲಕಚ್ಚಿದೆ ಎನ್ನುವುದು ಮೇಲು ನೋಟಕ್ಕೆ ಸಾಬೀತಾಗಿದೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.


Click the Play button to hear this message in audio format

ಇಂದಿನ ಫಲಿತಾಂಶದಿಂದ ನರೇಂದ್ರ ಮೋದಿ ಜನಪ್ರಿಯತೆ ನೆಲಕಚ್ಚಿದೆ ಎನ್ನುವುದು ಮೇಲು ನೋಟಕ್ಕೆ ಸಾಬೀತಾಗಿದೆ ಹಾಗೂ ದೇಶದಲ್ಲಿ ಎಲ್ಲೂ ಮೋದಿಯವರ ಅಲೆ ಇಲ್ಲ ಎನ್ನುವುದಕ್ಕೆ ಸಾಕ್ಷಿಯಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

ಚುನಾವಣಾ ಫಲಿತಾಂಶದ ಬಳಿಕ ಬೆಂಗಳೂರಿನ ಗೃಹ ಕಚೇರಿ ಕೃಷ್ಣಾದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಕಾಂಗ್ರೆಸ್‌ನ ನಿರೀಕ್ಷೆಗೆ ತಕ್ಕಂತೆ ಸ್ಥಾನಗಳನ್ನು ಗೆಲ್ಲಲು ಸಾಧ್ಯವಾಗಿಲ್ಲ ಎಂದು ಒಪ್ಪಿಕೊಂಡರು. "15-20 ಸ್ಥಾನ ನಮ್ಮ ನಿರೀಕ್ಷೆಯಾಗಿತ್ತು. ಆದರೆ, 2019 ರಲ್ಲಿ ಕೇವಲ ಒಂದು ಸ್ಥಾನದಲ್ಲಿ ಗೆದ್ದಿದ್ದೆವು. ಈಗ 9 ಕ್ಕೆ ಏರಿದ್ದೇವೆ. ಈ ಬಾರಿ ನಮಗೆ ಶೇ 45.34, ಬಿಜೆಪಿ ಶೇ 46.04 ರಷ್ಟು ಮತ ಪಡೆದಿದೆ. 2019 ರಲ್ಲಿ ಬಿಜೆಪಿ ಶೇ 51.38 ರಷ್ಟು ಮತ ಗಳಿಸಿತ್ತು. ನಮಗೆ ಶೇ31.88 ರಷ್ಟು ಮಾತ್ರ ಮತಗಳು ಬಂದಿದ್ದವು. 2019 ಕ್ಕೆ ಹೋಲಿಸಿದರೆ ನಮ್ಮ ಮತ ಪ್ರಮಾಣ ಹೆಚ್ಚಾಗಿದೆ. ಬಿಜೆಪಿ ಮತ ಪ್ರಮಾಣ ಶೇ5 ರಷ್ಟು ಕುಸಿದಿದೆ. ಜೆಡಿಎಸ್ ಜೊತೆ ಮೈತ್ರಿಯ ಬಳಿಕವೂ ಅವರ ಮತ ಪ್ರಮಾಣದಲ್ಲಿ ಇಳಿಕೆಯಾಗಿದೆ," ಎಂದು ವಿಶ್ಲೇಷಿಸಿದರು.

ಜೆಡಿಎಸ್ ಕೂಡ 2019ಕ್ಕಿಂತ ಕಡಿಮೆ ಪ್ರಮಾಣದ ಮತ ಪಡೆದಿದೆ. ಆದರೂ ನಾವು ನಿರೀಕ್ಷಿತ ಪ್ರಮಾಣದಲ್ಲಿ ಸೀಟು ಗೆದ್ದಿಲ್ಲ. ರಾಷ್ಟ್ರಮಟ್ಟದಲ್ಲಿ ಕಾಂಗ್ರೆಸ್ ಮತ ಪ್ರಮಾಣ ಹೆಚ್ಚಾಗಿದೆ. ಕೇಂದ್ರದಲ್ಲಿ ಅಧಿಕಾರಿದಲ್ಲಿದ್ದ ಬಿಜೆಪಿ ಮೋದಿ 2014-2019 ಕ್ಕಿಂತ ಕಡಿಮೆ ಸೀಟು ಕಡಿಮೆ ಗಳಿಸಿದ್ದಾರೆ. ಮೋದಿ ಮುಖ ನೋಡಿಯೂ ಬಿಜೆಪಿಗೆ ಬಹುಮತ ಬಂದಿಲ್ಲ. ಯಾವ ಪಕ್ಷಕ್ಕೂ ಬಹುಮತ ಬಂದಿಲ್ಲ ಎಂದರು.

ಮೋದಿ ಜನಪ್ರಿಯತೆ ನೆಲಕಚ್ಚಿದೆ

ಬಿಜೆಪಿ ಸರಳ ಬಹುಮತ ಪಡೆಯುವಲ್ಲೂ ಸೋತಿದೆ. ದೇಶದಲ್ಲಿ ಎಲ್ಲೂ ಮೋದಿಯವರ ಅಲೆ ಕಾಣಲಿಲ್ಲ. ಹೀಗಾಗಿ ಈ ಫಲಿತಾಂಶ ಮೋದಿ ಜನಪ್ರಿಯತೆ ನೆಲಕಚ್ಚಿದೆ ಎನ್ನುವುದು ಮೇಲು ನೋಟಕ್ಕೆ ಗೊತ್ತಾಗಿದೆ. ಸರ್ಕಾರ ಯಾರು ಮಾಡ್ತಾರೆ ಎಮ್ನುವುದು ಈಗಲೇ ಹೇಳಲು ಸಾಧ್ಯವಿಲ್ಲ ಎಂದರು.

ಮೋದಿಯವರು ಚುನಾವಣೆಯ ಕೊನೆ ಕೊನೆಗೆ ಧರ್ಮ, ದೇವರ ಹೆಸರಲ್ಲಿ ಮತ ಕೇಳಿ ನೇರವಾಗಿ ಇತರೆ ಧರ್ಮೀಯರ ವಿರುದ್ಧ ಭಾಷಣ ಮಾಡಿದರು, ಹಿಂದುಳಿದವರ ಮೀಸಲಾತಿ ಕಾಂಗ್ರೆಸ್ ಕಿತ್ತುಕೊಳ್ಳುತ್ತದೆ ಎಂದು ಸುಳ್ಳು ಹೇಳಿಕೊಂಡು ತಿರುಗಿದರೂ ಮೋದಿಯವರಿಗೆ ಬಹುಮತ ಬರಲಿಲ್ಲ. NDA ಕಳೆದ ಬಾರಿಗಿಂತ 64 ಸ್ಥಾನ ಕಳೆದುಕೊಂಡಿದೆ. ಇದು ರಾಷ್ಟ್ರ ಮಟ್ಟದಲ್ಲಿ ಬಿಜೆಪಿಯ ಸೋಲು ಎಂದರು.

ಮೋದಿಗೆ ಪ್ರಧಾನಿಯಾಗುವ ನೈತಿಕ ಹೊಣೆ ಇಲ್ಲ

ಈ ಸೋಲಿನ ಕಾರಣದಿಂದ ಮೋದಿಯವರಿಗೆ ಮತ್ತೆ ಪ್ರಧಾನಿ ಆಗುವ ನೈತಿಕ ಹಕ್ಕಿಲ್ಲ. ವಿರೋಧ ಪಕ್ಷದ ನಾಯಕರು, ಮುಖ್ಯಮಂತ್ರಿಗಳನ್ನು ಜೈಲಿಗೆ ಹಾಕಿದರು. ED, IT, CBI ಹೆಸರಲ್ಲಿ ಹೆದರಿಸಿದರು, ಬೆದರಿಸಿದರು ಆದರೂ ದೇಶದ ಜನ ಬಿಜೆಪಿಗೆ ಬಹುಮತ ಕೊಡಲಿಲ್ಲ. ರಾಮನ ಹೆಸರಲ್ಲಿ, ರಾಮ ಮಂದಿರದ ಹೆಸರಲ್ಲಿ ಅಯೋಧ್ಯೆಯಲ್ಲೂ ಬಿಜೆಪಿ ಸೋತಿದೆ. ಇದು ಬಿಜೆಪಿಯ ಸೋಲು ಎಂದರು.

Read More
Next Story