Bitcoin Scam | ಐಜಿಪಿ ಸಂದೀಪ್ ಪಾಟೀಲ್‌ಗೆ ಮತ್ತೆ ನೋಟಿಸ್‌ ನೀಡಿದ ಎಸ್‌ಐಟಿ
x

Bitcoin Scam | ಐಜಿಪಿ ಸಂದೀಪ್ ಪಾಟೀಲ್‌ಗೆ ಮತ್ತೆ ನೋಟಿಸ್‌ ನೀಡಿದ ಎಸ್‌ಐಟಿ


ಬಿಟ್​ ಕಾಯಿನ್ ಹಗರಣ ಸಂಬಂಧ ತನಿಖೆ ತೀವ್ರಗೊಳಿಸಿರುವ ಎಸ್​​ಐಟಿ ತಂಡ, ಐಜಿಪಿ ಸಂದೀಪ್ ಪಾಟೀಲ್ ಅವರಿಗೆ ಮತ್ತೊಮ್ಮೆ ನೋಟಿಸ್‌ ಜಾರಿ ಮಾಡಿದ್ದು, ಈ ಹಿಂದೆ ವಿಚಾರಣೆಗೆ ಹಾಜರಾಗದಿರಲು ಕಾರಣ ತಿಳಿಸುವಂತೆ ಸೂಚಿಸಿದೆ.

ಪ್ರಕರಣದ ವಿಚಾರಣೆ ನಡೆಸುತ್ತಿರುವ ಎಸ್‌ಐಟಿ, ಈ ಹಿಂದೆ ವಿಚಾರಣೆಗೆ ಹಾಜರಾಗುವಂತೆ ಐಜಿಪಿ ಸಂದೀಪ್‌ ಪಾಟೀಲ್‌ ಅವರಿಗೆ ನೋಟಿಸ್ ನೀಡಿತ್ತು. ಆದರೆ, ಅವರು​ ವಿಚಾರಣೆಗೆ ಹಾಜರಾಗಿರಲಿಲ್ಲ.

ಈ ಹಗರಣಕ್ಕೆ ಸಂಬಂಧಿಸಿದಂತೆ ಸಂದೀಪ್‌ ಪಾಟೀಲ್‌ ಅವರನ್ನು ಫೆಬ್ರವರಿಯಲ್ಲಿ ಎಸ್​​ಐಟಿ ತೀವ್ರ ವಿಚಾರಣೆಗೆ ಒಳಪಡಿಸಿತ್ತು. ಸುಮಾರು 3 ತಾಸು ವಿಚಾರಣೆಗೆ ಒಳಪಡಿಸಿ ಮಾಹಿತಿ ಕಲೆ ಹಾಕಿತ್ತು. ಬಿಟ್​ ಕಾಯಿನ್ ಹಗರಣ ನಡೆದ ಸಂದರ್ಭದಲ್ಲಿ ಸಂದೀಪ್ ಪಾಟೀಲ್ ಸಿಸಿಬಿ ಮುಖ್ಯಸ್ಥರಾಗಿದ್ದರು. ಅವರ ನೇತೃತ್ವದಲ್ಲಿಯೇ ಆರಂಭದಲ್ಲಿ ಈ ಹಗರಣದ ತನಿಖೆ ನಡೆದಿತ್ತು. ಆದರೆ, ವಿಚಾರಣೆ ವೇಳೆಯೇ ಪ್ರಮುಖ ಆರೋಪಿ ಶ್ರೀಕಿಯನ್ನು ಬಳಸಿಕೊಂಡು ವಿಚಾರಣಾಧಿಕಾರಿಗಳೇ ಅಕ್ರಮ ಎಸಗಿರುವುದು ಪತ್ತೆಯಾಗಿತ್ತು. ಆ ಹಿನ್ನೆಲೆಯಲ್ಲಿ ವಿಚಾರಣಾ ತಂಡದ ಹೊಣೆ ಹೊತ್ತಿದ್ದ ಸಂದೀಪ್‌ ಪಾಟೀಲ್ ಅವರಿಗೂ ಹಗರಣದ ಉರುಳು ಸುತ್ತಿಕೊಂಡಿದೆ.

ಬಿಟ್ ಕಾಯಿನ್ ಹಗರಣ ಸಂಬಂಧ ತನಿಖೆಗೆ 2023ರ ಜುಲೈನಲ್ಲಿ ಕಾಂಗ್ರೆಸ್ ಸರ್ಕಾರ ಎಸ್​ಐಟಿ ರಚನೆ ಮಾಡಿತ್ತು. ಆಗ ಕಾಟನ್ ಪೇಟೆ ಠಾಣೆಯಲ್ಲಿ ಒಂದು ಕೇಸ್ ದಾಖಲು ಮಾಡಿದ್ದರು. ಆರೋಪಿಗಳ ಹೆಸರು ಪ್ರಸ್ತಾಪಿಸದೇ ತನಿಖೆ ಶುರುಮಾಡಲಾಗಿತ್ತು. ಇಷ್ಟೇ ಅಲ್ಲದೇ ಪ್ರಕರಣದಲ್ಲಿ ಸಂತೋಷ್ ಮತ್ತು ಪ್ರಶಾಂತ್ ಬಾಬು ಎನ್ನುವವರನ್ನು ಬಂಧಿಸಲಾಗಿತ್ತು.

ಪ್ರಮುಖ ಆರೋಪಿ ಶ್ರೀಕಿ ಬಂಧನ

ಮೇ 7ರಂದು ಬಿಟ್ ಕಾಯಿನ್ ಹಗರಣದ ಪ್ರಮುಖ ಆರೋಪಿ ಶ್ರೀಕಿ ಅಲಿಯಾಸ್​ ಶ್ರೀಕೃಷ್ಣನನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದರು. 2015ರಲ್ಲಿ ಕೆಂಪೇಗೌಡನಗರ ಠಾಣೆಯಲ್ಲಿ ದಾಖಲಾಗಿದ್ದ ಡ್ರಗ್ಸ್ ಕೇಸ್‌ನಲ್ಲಿ ಶ್ರೀಕಿಯನ್ನು ಬಂಧಿಸಲಾಗಿತ್ತು. ಈ ಕೇಸ್ ತನಿಖೆ ವೇಳೆ ಬಿಟ್‌ಕಾಯಿನ್ ಪ್ರಕರಣ ಬೆಳಕಿಗೆ ಬಂದಿತ್ತು. 2020ರಲ್ಲಿ ಸುಮಾರು 1000 ಕೋಟಿ ಹಗರಣದ ಬಿಟ್‌ಕಾಯಿನ್ ಕೇಸ್‌ನಲ್ಲಿ ಶ್ರೀಕಿ ಬಂಧನವಾಗಿತ್ತು. ಅಲ್ಲದೆ ಶ್ರೀಕಿ ಕಳೆದ ಐದಾರು ವರ್ಷಗಳಿಂದ ವಿವಿಧ ಕ್ರಿಪ್ಟೋ ಕರೆನ್ಸಿ ಮಾರಾಟ ಪ್ಲಾಟ್‌ಫಾರ್ಮ್‌ಗಳನ್ನು ಹ್ಯಾಕ್ ಮಾಡಿ ಅವುಗಳಿಂದ ಸಾವಿರಾರು ಬಿಟ್‌ಕಾಯಿನ್‌ಗಳನ್ನು ಕಳವು ಮಾಡಿರುವ ಆರೋಪವೂ ಇದೆ.

ಅಲ್ಲದೇ ರಾಜ್ಯ ಸರ್ಕಾರದ ಇ-ಸಂಗ್ರಹಣಾ ಪೋರ್ಟಲ್​ ಜಾಲತಾಣ ಹ್ಯಾಕ್​ ಮಾಡಿ ಹಣ ಲೂಟಿ ಮಾಡಿದ ಪ್ರಕರಣವೂ ಶ್ರೀಕಿ ಮೇಳಿದೆ. ಮಧ್ಯಂತರ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದ ಆತ ವಿಚಾರಣೆಗೆ ಹಾಜರಾಗದೆ ತಲೆಮರೆಸಿಕೊಂಡಿದ್ದ. ಸದ್ಯ ಆತನನ್ನು ಬಂಧಿಸಲಾಗಿದೆ.

Read More
Next Story