ಬಿಟ್ ಕಾಯಿನ್ ಹಗರಣ | ಡಿವೈಎಸ್‌ಪಿ ಶ್ರೀಧರ್ ಬಂಧಿಸದಂತೆ ಹೈಕೋರ್ಟ್ ಆದೇಶ
ಬಿಟ್ ಕಾಯಿನ್ ಪ್ರಕರಣದಲ್ಲಿ ಆರೋಪಿಗಳನ್ನು ಅಕ್ರಮವಾಗಿ ತಮ್ಮ ವಶದಲ್ಲಿಟ್ಟುಕೊಂಡು ಹ್ಯಾಕಿಂಗ್, ಬಿಟ್ ಕಾಯಿನ್‌ಗಳ ವರ್ಗಾವಣೆ ಮತ್ತು ಪಾಸ್‌ವರ್ಡ್ ಬದಲಾವಣೆ ಮಾಡಿದ ಆರೋಪ ಎದುರಿಸುತ್ತಿರುವ ಆಂತರಿಕ ಭದ್ರತಾ ವಿಭಾಗದ ಉಪ ಪೊಲೀಸ್ ವರಿಷ್ಠಾಧಿಕಾರಿ (ಡಿವೈಎಸ್‌ಪಿ) ಶ್ರೀಧರ್ ಕೆ. ಪೂಜಾರ್ ಅವರನ್ನು ಮುಂದಿನ ವಿಚಾರಣೆಯವರೆಗೆ ಬಂಧಿಸದಂತೆ ಹೈಕೋರ್ಟ್ ಆದೇಶಿಸಿದೆ.
ಡಿವೈಎಸ್‌ಪಿ ಶ್ರೀಧರ್ ಕೆ. ಪೂಜಾರ್ ಅವರು ನಿರೀಕ್ಷಣಾ ಜಾಮೀನು ಅರ್ಜಿ ಸಲ್ಲಿಸಿದ್ದರು. ಈ ಅರ್ಜಿ ವಿಚಾರಣೆಯನ್ನು ನಡೆಸಿದ ನ್ಯಾಯಮೂರ್ತಿ ಎಂ ಜಿ ಉಮಾ ಅವರ ಏಕಸದಸ್ಯ ಪೀಠ, ಬಂಧನಕ್ಕೆ ತಡೆಯಾಜ್ಞೆ ನೀಡಿ ಆದೇಶ ಹೊರಡಿಸಿದೆ.
ಶ್ರೀಧರ್ ಪೂಜಾರ್ ಪರ ವಾದ ಮಂಡಿಸಿದ ಹಿರಿಯ ವಕೀಲ ಎಂ ಅರುಣ್ ಶ್ಯಾಮ್ ಅವರು ʻʻಸುಪ್ರೀಂಕೋರ್ಟ್ ನಿರ್ದೇಶನದಂತೆ ಹೊಸದಾಗಿ ನಿರೀಕ್ಷಣಾ ಜಾಮೀನು ಕೋರಲಾಗಿದೆ. ಈ ಹಿಂದೆ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದ್ದ ಹೈಕೋರ್ಟ್ ಸೂಚನೆಯಂತೆ ತನಿಖಾಧಿಕಾರಿಯ ಮುಂದೆ ಪೂಜಾರ್ ವಿಚಾರಣೆಗೆ ಒಳಪಟ್ಟಿದ್ದರು. ಈ ಸಂದರ್ಭದಲ್ಲಿ ಪೂಜಾರ್ ಅವರ ಮೊಬೈಲ್ ಫೋನ್, ಲ್ಯಾಪ್‌ಟಾಪ್ ಮತ್ತು ಪೆನ್‌ಡ್ರೈವ್ ಅನ್ನು ಜಪ್ತಿ ಮಾಡಲಾಗಿದೆ. ಈಗ ಪೂಜಾರ್ ಅವರನ್ನು ಬಂಧಿಸಲು ಪ್ರಯತ್ನಿಸಲಾಗುತ್ತಿದೆʼʼ ಎಂದು ಆಕ್ಷೇಪ ವ್ಯಕ್ತಪಡಿಸಿದರು.
ಶ್ರೀಕಿಯು ತನ್ನ ಸ್ನೇಹಿತರನ್ನು ಸಂಪರ್ಕಿಸಲು ಅವಕಾಶ ಮಾಡಿಕೊಟ್ಟಿರುವುದು ಮತ್ತು ಶ್ರೀಕಿ ಮತ್ತು ಇತರರನ್ನು ಅಕ್ರಮವಾಗಿ ಬಂಧನದಲ್ಲಿಟ್ಟುಕೊಂಡಿರುವ ಆರೋಪ ಪೂಜಾರ್ ಮೇಲಿದೆ.
ಈ ಹಿಂದೆ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದ್ದ ಹೈಕೋರ್ಟ್ ಆದೇಶದಂತೆ ಮೂರು ಬಾರಿ ತನಿಖಾಧಿಕಾರಿಯ ಮುಂದೆ ಪೂಜಾರ್ ಹಾಜರಾಗಿದ್ದು, ತನಿಖಾಧಿಕಾರಿ ಹಿಂಬರಹ ನೀಡಿದ್ದಾರೆ. ಪೂಜಾರ್ ತನಿಖಾಧಿಕಾರಿಯ ಮುಂದೆ ಹಾಜರಾಗಲು ಸಿದ್ಧರಿದ್ದಾರೆ. ಆದರೆ, ಅವರ ಹಿತಾಸಕ್ತಿ ಕಾಪಾಡಬೇಕು. ಪೂಜಾರ್ ಅವರು ಡಿವೈಎಸ್‌ಪಿ ಶ್ರೇಣಿಯ ಅಧಿಕಾರಿಯಾಗಿದ್ದು, ಹಲವು ಪ್ರಕರಣಗಳಲ್ಲಿ ತನಿಖಾಧಿಕಾರಿಯಾಗಿದ್ದಾರೆ. ಒಂದೊಮ್ಮೆ ಪೂಜಾರ್ ಬಂಧನವಾದರೆ ಪ್ರತಿವಾದಿಗಳು ಪೂಜಾರ್ ಬಂಧನದ ವಿಚಾರವನ್ನು ಪ್ರಸ್ತಾಪಿಸಬಹುದು. ಅವರ ಇಡೀ ಸೇವೆಯು ಕಳಂಕಿತವಾಗಲಿದೆ ಎಂದರು.
ಶ್ರೀಕಿ ಗರ್ಲ್ ಫ್ರೆಂಡ್ ಪೂಜಾ ಭಟ್‌ಗೆ ಎಸ್‌ಐಟಿ ನೋಟಿಸ್
ಈ ಬಿಟ್ ಕಾಯಿನ್ ಹಗರಣ ಪ್ರಕರಣದ ಪ್ರಮುಖ ಆರೋಪಿಯಾಗಿರುವ ಶ್ರೀಕೃಷ್ಣ ಅಲಿಯಾಸ್ ಶ್ರೀಕಿಯ ಗರ್ಲ್ ಫ್ರೆಂಡ್ ಪೂಜಾ ಭಟ್ ಅವರಿಗೆ ವಿಚಾರಣೆಗೆ ಹಾಜರಾಗುವಂತೆ ಎಸ್‌ಐಟಿ ಅಧಿಕಾರಿಗಳು ನೋಟಿಸ್ ನೀಡಿದ್ದಾರೆ. ತುರ್ತಾಗಿ ವಿಚಾರಣೆಗೆ ಹಾಜರಾಗಲು ನೋಟಿಸ್‌ನಲ್ಲಿ ತಿಳಿಸಲಾಗಿದೆ.
ರಾಜಸ್ಥಾನದಲ್ಲಿರುವ ಪೂಜಾ ಭಟ್ ವಿಚಾರಣೆಗಾಗಿ ಬೆಂಗಳೂರಿಗೆ ಆಗಮಿಸಬೇಕಿದೆ. ಇವರು ಶ್ರೀಕಿ ಬಿಟ್ ಕಾಯಿನ್ ವಹಿವಾಟು, ಶ್ರೀಕಿಯಿಂದ ಕಾರು, ಮನೆ ಪಡೆದುಕೊಂಡಿದ್ದಾರೆ. ಹಾಗಾಗಿ ನೋಟಿಸ್ ನೀಡಲಾಗಿದೆ ಎಂದು ತಿಳಿದುಬಂದಿದೆ.
ಏನಿದು ಪ್ರಕರಣ?
2017ರಲ್ಲಿ ಆರೋಪಿ ಶ್ರೀಕಿ ತುಮಕೂರಿನಲ್ಲಿರುವ ಯೂನೊಕಾಯಿನ್ ಟೆಕ್ನಾಲಜೀಸ್ ಕಂಪನಿಯ ಸರ್ವರ್ ಹ್ಯಾಕ್ ಮಾಡಿ 60.6 ಬಿಟ್ ಕಾಯಿನ್‌ಗಳನ್ನು (ಮಾರುಕಟ್ಟೆ ಮೌಲ್ಯ ₹32.48 ಕೋಟಿ ಮೌಲ್ಯ) ಕಳ್ಳತನ ಮಾಡಿದ್ದ. ಈ ಘಟನೆ ಸಂಬಂಧ ಯೂನೊಕಾಯಿನ್ ಟೆಕ್ನಾಲಜೀಸ್ ಕಂಪನಿ ನಿರ್ದೇಶಕ ಬಿ.ವಿ. ಹರೀಶ್ ಅವರು ತುಮಕೂರಿನ ನ್ಯೂ ಎಕ್ಸ್‌ಟೆನ್ಶನ್ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಮೊದಲಿಗೆ ಆರೋಪಿ ಯಾರು ಎಂದು ಪತ್ತೆಯಾಗದ ಹಿನ್ನೆಲೆ ಅಪರಿಚಿತರ ವಿರುದ್ಧ ಎಫ್‌ಐಆರ್ ದಾಖಲಾಗಿತ್ತು. ಪ್ರಕರಣದ ತನಿಖೆ ಕೈಗೆತ್ತಿಕೊಂಡು ಪರಿಶೀಲಿಸಿದಾಗ, ಶ್ರೀಕಿಯೇ ಆರೋಪಿ ಎಂಬುದು ಸಾಬೀತಾಗಿದೆ.
ಮತ್ತೊಂದೆಡೆ ಈ ಪ್ರಕರಣದ ವಿಚಾರಣೆಗೆ ಶ್ರೀಕಿ ಗೈರಾಗಿ, ತಲೆಮರೆಸಿಕೊಂಡು ಸುತ್ತಾಡುತ್ತಿದ್ದನು. ಬೆಂಗಳೂರಿನ ಬಳ್ಳಾರಿ ರಸ್ತೆಯಲ್ಲಿರುವ ಪಂಚತಾರಾ ಹೋಟೆಲ್‌ವೊಂದರಲ್ಲಿ ಆತ ವಾಸ್ತವ್ಯ ಹೂಡಿದ್ದ ಬಗ್ಗೆ ಮಾಹಿತಿ ಸಿಗುತ್ತಿದ್ದಂತೆ ಅದೇ ಹೋಟೆಲ್‌ನಲ್ಲಿಯೇ ಆತನನ್ನು ಒಂದು ತಿಂಗಳ ಹಿಂದೆ ಬಂಧಿಸಲಾಗಿದೆ. ಸದ್ಯ ಇದೀಗ ಶ್ರೀಕಿ ಗರ್ಲ್ ಫ್ರೆಂಡ್ ಪೂಜಾ ಭಟ್‌ಗೆ ನೋಟಿಸ್ ನೀಡಲಾಗಿದೆ.