ಬಿಟ್ ಕಾಯಿನ್ ಕಳವು: ಕುಖ್ಯಾತ ಹ್ಯಾಕರ್ ಶ್ರೀಕಿ ಮತ್ತೆ ಅರೆಸ್ಟ್
ಸಾವಿರಾರು ಕೋಟಿ ಅಕ್ರಮದ ಬಿಟ್‌ಕಾಯಿನ್ ಹಗರಣದ ಪ್ರಮುಖ ಆರೋಪಿ ಶ್ರೀಕೃಷ್ಣ ಅಲಿಯಾಸ್ ಶ್ರೀಕಿಯನ್ನು ಎಸ್ ಐಟಿ ಅಧಿಕಾರಿಗಳು ಕಳೆದ ರಾತ್ರಿ ಮತ್ತೊಮ್ಮೆ ಬಂಧಿಸಿದ್ದಾರೆ. ತುಮಕೂರಿನ ಸೆನ್ ಪೊಲೀಸ್ ಠಾಣೆಯಲ್ಲಿ ಯೂನೋಕಾಯಿನ್ ಟೆಕ್ನಾಲಜೀಸ್ ಕಂಪನಿಯ ₹32 ಕೋಟಿ ರೂ. ಮೌಲ್ಯದ ಬಿಟ್ ಕಾಯಿನ್ ಹ್ಯಾಕ್ ಮಾಡಿರುವ ಆರೋಪದಡಿ ಪೊಲೀಸರು ಈ ಕ್ರಮ ಕೈಗೊಂಡಿದ್ದಾರೆ.
ಪ್ರಕರಣದಲ್ಲಿ ವಿಚಾರಣೆಗೆ ಹಾಜರಾಗುವಂತೆ ಹಲವು ಬಾರಿ ಶ್ರೀಕಿಗೆ ನೋಟಿಸ್ ನೀಡಲಾಗಿತ್ತು. ಆದರೆ ವಿಚಾರಣೆಗೆ ಗೈರಾದ ಹಿನ್ನೆಲೆಯಲ್ಲಿ ಆರೋಪಿಯನ್ನು ಸೆರೆ ಹಿಡಿಯಲಾಗಿದೆ.
ಪ್ರಕರಣದ ಹಿನ್ನೆಲೆ
2017ರಲ್ಲಿ ತುಮಕೂರು ಪೊಲೀಸ್ ಠಾಣೆಯಲ್ಲಿ ಯುನೋ ಕಾಯಿನ್ ಕಳವು ಪ್ರಕರಣ ದಾಖಲಾಗಿತ್ತು. ಯೂನೋಕಾಯಿನ್ ಟೆಕ್ನಾಲಜೀಸ್ ಕಂಪನಿಯ ಸಹ ಸಂಸ್ಥಾಪಕ ಬಿ.ವಿ.ಹರೀಶ್ ಎಂಬವರು ಶ್ರೀಕಿ ವಿರುದ್ಧ ದೂರು ನೀಡಿದ್ದರು. ಕಂಪನಿಯ 60.6 ಬಿಟ್ ಕಾಯಿನ್ಗಳನ್ನು ಕಳವು ಮಾಡಲಾಗಿದೆ(ಬಿಟ್ ಸದ್ಯದ ಮೌಲ್ಯದ ಪ್ರಕಾರ ಸುಮಾರು 32 ಕೋಟಿ ರೂ. ಬೆಲೆಯ ಬಿಟ್ ಕಾಯಿನ್ ) ಎಂದು ಆರೋಪಿಸಿ ಅವರು ಪ್ರಕರಣ ದಾಖಲಿಸಿದ್ದರು.
2020ರಲ್ಲಿ ಸುಮಾರು 1000 ಕೋಟಿ ಹಗರಣದ ಬಿಟ್‌ಕಾಯಿನ್ ಕೇಸ್‌ನಲ್ಲಿ ಶ್ರೀಕಿ ಬಂಧನವಾಗಿತ್ತು. ಅಲ್ಲದೆ ಶ್ರೀಕಿ ಶ್ರೀಕಿ ಕಳೆದ ಐದಾರು ವರ್ಷಗಳಿಂದ ವಿವಿಧ ಕ್ರಿಪ್ಟೋ ಕರೆನ್ಸಿ ಮಾರಾಟ ಪ್ಲಾಟ್‌ಫಾರ್ಮ್‌ಗಳನ್ನು ಹ್ಯಾಕ್ ಮಾಡಿ ಅವುಗಳಿಂದ ಸಾವಿರಾರು ಬಿಟ್‌ಕಾಯಿನ್‌ಗಳನ್ನು ಎಗರಿಸಿದ್ದನು. ರಾಜ್ಯ ಸರ್ಕಾರದ ಇ-ಸಂಗ್ರಹಣಾ ಪೋರ್ಟಲ್ ಜಾಲತಾಣ ಹ್ಯಾಕ್ ಮಾಡಿದ್ದನು. ಈ ಪ್ರಕರಣವನ್ನು ಸಿಸಿಬಿ ಪೊಲೀಸರು ತನಿಖೆ ನಡೆಸಿ, ಆರೋಪಿಯನ್ನು ಬಂಧಿಸಿದ್ದರು. ಬಳಿಕ ಜಾಮೀನಿನ ಮೇಲೆ ಹೊರಗಡೆ ಬಂದಿದ್ದನು. ಇದಾದ ಬಳಿಕ ಸಿಸಿಬಿ ಪೊಲೀಸರ ವಿರುದ್ಧ ದಾಖಲೆ ತಿರುಚಿರುವ ಆರೋಪಗಳು ಕೇಳಿಬಂದಿತ್ತು. ಈ ಹಿನ್ನೆಲೆಯಲ್ಲಿ ಬಿಟ್ ಕಾಯಿನ್ ಪ್ರಕರಣವನ್ನು ಸಿಐಡಿಗೆ ವರ್ಗಾಯಿಸಲಾಗಿತ್ತು.
ಸಿಐಡಿ ಪೊಲೀಸರು 5-6 ಬಾರಿ ನೋಟಿಸ್ ನೀಡಿದರೂ ಶ್ರೀಕಿ ವಿಚಾರಣೆಗೆ ಹಾಜರಾಗುತ್ತಿರಲಿಲ್ಲ. ಪ್ರತಿಬಾರಿಯೂ ಒಂದೊಂದು ಕಾರಣ ನೀಡುತ್ತಿದ್ದನು. ತಂದೆಗೆ ಹುಷಾರಿಲ್ಲ, ತಾಯಿಗೆ ಹುಷಾರಿಲ್ಲ, ನನಗೆ ಹುಷಾರಿಲ್ಲ ಎಂದು ಕಾರಣ ನೀಡಿ ಸಿಐಡಿ ಪೊಲೀಸರ ವಿಚಾರಣೆಗೆ ಹಾಜರಾಗುತ್ತಿರಲಿಲ್ಲ ಎಂದು ಸಿಐಡಿ ಅಧಿಕಾರಿಗಳು ಹೇಳಿದ್ದರು. ಇದೀಗ ಎಸ್‌ಐಟಿ ಅಧಿಕಾರಿಗಳು ಶ್ರೀಕಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಯಾರು ಈ ಶ್ರೀಕಿ ?
ಶ್ರೀಕೃಷ್ಣ ಅಲಿಯಾಸ್ ಶ್ರೀಕಿ ಮೂಲತಃ ಬೆಂಗಳೂರಿನ ನಿವಾಸಿ. ವಿದೇಶದಲ್ಲಿ 2014ರಿಂದ 3 ವರ್ಷ ಕಂಪ್ಯೂಟರ್ ಸೈನ್ಸ್‌ನಲ್ಲಿ ಬಿಎಸ್ಸಿ ಪದವಿ ಪಡೆದಿದ್ದ. ಹ್ಯಾಕಿಂಗ್ ಮಾಡುವುದರಲ್ಲಿ ಎಕ್ಸ್ ಪರ್ಟ್ ಆಗಿದ್ದ ಈತ ವೆಬ್‌ಸೈಟ್ ಹ್ಯಾಕ್ ಮಾಡುವುದನ್ನೇ ವೃತ್ತಿಯಾಗಿಸಿಕೊಂಡಿದ್ದನು. ಪದವಿ ಪಡೆದು ಭಾರತಕ್ಕೆ ಮರಳಿದ ನಂತರ ಸಣ್ಣಪುಟ್ಟ ವೆಬ್‌ಸೈಟ್‌ಗಳನ್ನು ಹ್ಯಾಕ್ ಮಾಡಿ ಗಮನ ಸೆಳೆದಿದ್ದ ನಂತರ ದೊಡ್ಡ ದೊಡ್ಡ ಕಂಪನಿಗಳ ವೆಬ್‌ಸೈಟ್‌ಗಳನ್ನು ಹ್ಯಾಕ್ ಮಾಡುತ್ತಿದ್ದನು. ಅದರಲ್ಲೂ, ಬಿಟ್ ಕಾಯಿನ್ ವ್ಯವಹಾರದಲ್ಲಿ ಭಾಗಿಯಾಗಿದ್ದ ಕಂಪನಿಗಳ ವೆಬ್‌ಸೈಟ್‌ಗಳನ್ನು ಹ್ಯಾಕ್ ಮಾಡಿ ಹಣ ಗಳಿಸುತ್ತಿದ್ದನು. ಈ ಎಲ್ಲ ದುಷ್ಕೃತ್ಯಗಳಿಗೆ ಡಾರ್ಕ್ ವೆಬ್ ಬಳಕೆ ಮಾಡುತ್ತಿದ್ದ ಎಂದು ಕಂಪ್ಯೂಟರ್ ತಜ್ಞರು ಹೇಳುತ್ತಾರೆ.
2020ರಲ್ಲಿ ಡಾರ್ಕ್‌ವೆಬ್ ಮೂಲಕ ವಿದೇಶಗಳಿಂದ ಹೈಡ್ರೊ ಗಾಂಜಾ ತರಿಸಿದ್ದ ಆರೋಪದಡಿಯಲ್ಲಿ ಬೆಂಗಳೂರಿನ ಕೆಂಪೇಗೌಡ ನಗರ ಪೊಲೀಸ್ ಠಾಣೆಯಲ್ಲಿ ಶ್ರೀಕಿ ಹಾಗೂ ಇತರರ ವಿರುದ್ಧ ದೂರು ದಾಖಲಾಗಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಶ್ರೀಕಿ ಹಾಗೂ ಇತರರನ್ನು ಸಿಸಿಬಿ ಬಂಧಿಸಿತ್ತು. ನಂತರ ಶ್ರೀಕಿ ಜಾಮೀನು ಪಡೆದಿದ್ದ. ಈ ಹಗರಣದಲ್ಲಿ ಶ್ರೀಕಿ ಜೊತೆಗೆ ಕೆಲವು ರಾಜಕಾರಣಿಗಳ ಮಕ್ಕಳೂ ಭಾಗಿಯಾಗಿರುವ ಆರೋಪ ಇದೆ.