ಬಹುಕೋಟಿ ಬಿಟ್ ಕಾಯಿನ್ ಹಗರಣ: ಐಜಿಪಿ ಸಂದೀಪ್ ಪಾಟೀಲ್ ವಿಚಾರಣೆ
x

ಬಹುಕೋಟಿ ಬಿಟ್ ಕಾಯಿನ್ ಹಗರಣ: ಐಜಿಪಿ ಸಂದೀಪ್ ಪಾಟೀಲ್ ವಿಚಾರಣೆ


ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಅವರ ಅವಧಿಯಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದ್ದ ಬಿಟ್ ಕಾಯಿನ್ ಹಗರಣದ ತನಿಖೆ ಚುರುಕುಗೊಳಿಸಿರುವ ಸಿಐಡಿ ವಿಶೇಷ ತನಿಖಾ ದಳ(ಎಸ್ ಐಟಿ), ಅಕ್ರಮಕ್ಕೆ ಸಂಬಂಧಿಸಿದಂತೆ ಬುಧವಾರ ಕೆಎಸ್ ಆರ್ ಪಿ ಐಜಿಪಿ ಸಂದೀಪ್ ಪಾಟೀಲ್ ಅವರನ್ನು ವಿಚಾರಣೆ ನಡೆಸಿದೆ.

ಬಸವರಾಜ್ ಬೊಮ್ಮಾಯಿ ನೇತೃತ್ವದ ಬಿಜೆಪಿ ಸರ್ಕಾರದ ಅವಧಿಯಲ್ಲಿ ಬಹುಕೋಟಿ ಬಿಟ್ ಕಾಯಿನ್ ಹಗರಣ ಬೆಳಕಿಗೆ ಬಂದಾಗ, ಆರಂಭದಲ್ಲಿ ತನಿಖೆಯನ್ನು ಕೈಗೆತ್ತಿಕೊಂಡಿದ್ದ ಸಿಸಿಬಿಯ ಮುಖ್ಯಸ್ಥರಾಗಿದ್ದ ಸಂದೀಪ್ ಪಾಟೀಲ್ ಮತ್ತು ಇತರೆ ಸಿಬ್ಬಂದಿ, ತನಿಖೆ ವೇಳೆ ವಶಪಡಿಸಿಕೊಂಡಿದ್ದ ಕೋಟ್ಯಂತರ ಮೌಲ್ಯದ ಬಿಟ್ ಕಾಯಿನ್ ಗಳನ್ನು ದುರುಪಯೋಗಪಡಿಸಿಕೊಂಡಿದ್ದರು ಎಂಬ ಗಂಭೀರ ಆರೋಪದ ಕುರಿತು ಎಸ್ ಐಟಿ ವಿಚಾರಣೆ ನಡೆಸಿದೆ.

ಎಸ್ಐಟಿ ಮುಖ್ಯಸ್ಥರಾಗಿರುವ ಸಿಐಡಿ ಹೆಚ್ಚುವರಿ ಡಿಐಜಿ ಮನೀಶ್ ಕರ್ಬಿಕರ್ ನೇತೃತ್ವದಲ್ಲಿ ತನಿಖಾಧಿಕಾರಿಗಳು ಸುಮಾರು ಮೂರು ತಾಸು ಸಂದೀಪ್ ಪಾಟೀಲ್ ಅವರನ್ನು ವಿಚಾರಣೆ ನಡೆಸಿದರು.

ವಿಚಾರಣೆ ವೇಳೆ ಸಂದೀಪ್ ಪಾಟೀಲ್ ಅವರು, “ಬಿಟ್ ಕಾಯಿನ್ ಪ್ರಕರಣದ ತನಿಖೆಯಲ್ಲಿ ಲೋಪವಾಗಿಲ್ಲ. ಹಾಗೇ ತಾಂತ್ರಿಕ ತೊಡಕು ಕೂಡ ಆಗಿಲ್ಲ. ಪ್ರಕರಣದ ಪ್ರಮುಖ ಆರೋಪಿ ಶ್ರೀಕಿ ಅಲಿಯಾಸ್ ಶ್ರೀಕೃಷ್ಣ ನೀಡಿದ ಮಾಹಿತಿ ಪ್ರಕಾರ ಬಿಟ್ ಕಾಯಿನ್ಗಳನ್ನು ವಶಕ್ಕೆ ಪಡೆದು ಸರ್ಕಾರದ ಸುಪರ್ದಿಗೆ ವಹಿಸಲಾಗಿತ್ತು. ಈ ಪ್ರಕ್ರಿಯೆಯಲ್ಲಿ ಯಾವುದೇ ಲೋಪವಾಗಿಲ್ಲ. ಆದರೆ, ಬಂಧಿತ ಪ್ರಶಾಂತ್ ಬಾಬು ಮತ್ತು ಸಂತೋಷ್ ಎಸಗಿರುವ ಕರ್ತವ್ಯಲೋಪ ಮತ್ತು ಅಕ್ರಮದ ಬಗ್ಗೆ ತಮಗೆ ಯಾವ ಮಾಹಿತಿಯೂ ಇರಲಿಲ್ಲ ಎಂದು ಸಂದೀಪ್ ಪಾಟೀಲ್ ತನಿಖಾಧಿಕಾರಿಗಳಿಗೆ ವಿವರಿಸಿದರು ಎಂದು ಹೇಳಲಾಗಿದೆ.

ತನಿಖಾಧಿಕಾರಿಗಳೇ ಅಕ್ರಮ ಎಸಗಿದ್ದರು!

೨೦೨೦ರಲ್ಲಿ ಬಿಟ್ ಕಾಯಿನ್ ಪ್ರಕರಣ ಹೊರಬಂದಾಗ ತನಿಖೆಗೆ ನೇಮಕವಾಗಿದ್ದ ಸಿಸಿಬಿ ಅಧಿಕಾರಿಗಳೇ ಕಿಂಗ್ ಪಿನ್, ಅಂತಾರಾಷ್ಟ್ರೀಯ ಹ್ಯಾಕರ್ ಶ್ರೀಕಿಯ ತನಿಖೆಯ ವೇಳೆ ಆತನ ಜೊತೆ ಕೈಜೋಡಿಸಿ ಸಾಕ್ಷ್ಯ ನಾಶಪಡಿಸಿದ್ದಲ್ಲದೆ, ಕೋಟ್ಯಂತರ ಮೌಲ್ಯದ ಬಿಟ್ ಕಾಯಿನ್ಗಳನ್ನು ಮಾರಾಟ ಮಾಡಿ ಅಕ್ರಮ ಎಸಗಿದ ಆರೋಪದ ಮೇಲೆ ಸಿಸಿಬಿ ತಾಂತ್ರಿಕ ವಿಭಾಗದ ಇನ್ಸಪೆಕ್ಟರ್ ಡಿ ಎಂ ಪ್ರಶಾಂತ್ ಬಾಬು ಮತ್ತು ಜಿಸಿಐಡಿ ಟೆಕ್ನಾಲಜಿಸ್ ಕಂಪನಿಯ ಸಿಇಒ ಸಂತೋಷ್ ಕುಮಾರ್ ಅವರನ್ನು ಕಳೆದ ಜನವರಲ್ಲಿ ಎಸ್ ಐಟಿ ಬಂಧಿಸಿತ್ತು. ಆ ಬಂಧಿತರು ನೀಡಿದ ಮಾಹಿತಿ ಮೇಲೆ ಅಂದು ತನಿಖೆಯ ಹೊಣೆ ಹೊತ್ತಿದ್ದ ಅಂದಿನ ಸಿಸಿಬಿ ಮುಖ್ಯಸ್ಥ ಹಾಗೂ ಹಾಲಿ ಕೆಎಸ್ ಆರ್ ಪಿ ಐಜಿಪಿ ಸಂದೀಪ್ ಪಾಟೀಲ್ ಅವರನ್ನು ವಿಚಾರಣೆಗೊಳಪಡಿಸಲಾಗಿದೆ.

ಪ್ರಕರಣದ ಹಿನ್ನೆಲೆ

೨೦೨೦ರಲ್ಲಿ ಬೆಂಗಳೂರಿನ ಕೆಂಪೇಗೌಡ ನಗರದ ಪೊಲೀಸರು ಡ್ರಗ್ಸ್ ಪ್ರಕರಣವೊಂದರಲ್ಲಿ ಸುಜಯ್ ಎಂಬ ಆರೋಪಿಯನ್ನು ವಿಚಾರಣೆಗೊಳಪಡಿಸಿದಾಗ ಬಿಟ್ ಕಾಯಿನ್ ಬಳಸಿ ಡಾರ್ಕ್ನೆಟ್ ಮೂಲಕ ಡ್ರಗ್ಸ್ ಖರೀದಿಸುತ್ತಿದ್ದ ಸಂಗತಿ ಬೆಳಕಿಗೆ ಬಂದಿತ್ತು. ತನಿಖೆ ವೇಳೆ, ಶ್ರೀಕಿ ಅಲಿಯಾಸ್ ಶ್ರೀಕೃಷ್ಣ ಎಂಬಾತ ಪ್ರಕರಣದ ಕಿಂಗ್ ಪಿನ್ ಎಂಬುದು ಬೆಳಕಿಗೆ ಬಂದಿತ್ತು. ಅಲ್ಲದೆ ಆತ ಅಂತಾರಾಷ್ಟ್ರೀಯ ಮಟ್ಟದಲ್ಲಿ ಹ್ಯಾಕರ್ ಆಗಿ ಕುಖ್ಯಾತನಾಗಿದ್ದು, ಅಮೆರಿಕ ಎಫ್ ಬಿಐ ಕೂಡ ಸಾವಿರಾರು ಕೋಟಿ ಮೌಲ್ಯದ ಬಿಟ್ ಕಾಯಿನ್ ಹಗರಣದಲ್ಲಿ ಪಾಲುದಾರ ಆತ ಎಂದು ಗುರುತಿಸಿರುವುದು ಕೂಡ ಗೊತ್ತಾಗಿತ್ತು.

ಕರ್ನಾಟಕ ಮತ್ತು ಭಾರತ ಸರ್ಕಾರದ ವೆಬ್ ಸೈಟ್, ಆನ್ ಲೈನ್ ಗೇಮಿಂಗ್ ಆಪ್ಗಳನ್ನು ಕೂಡ ಹ್ಯಾಕ್ ಮಾಡಿ ಕೋಟ್ಯಂತರ ಹಣ ದೋಚಿದ್ದು ಕೂಡ ತಿಳಿದುಬಂದಿತ್ತು. ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರಿನ ಕಾಟನ್ ಪೇಟೆ, ಅಶೋಕನಗರ ಮತ್ತು ಸೈಬರ್ ಕ್ರೈಂ ಠಾಣೆಗಳಲ್ಲಿ ಮೂರು ಪ್ರತ್ಯೇಕ ಪ್ರಕರಣಗಳು ದಾಖಲಾಗಿದ್ದವು. ಪ್ರಕರಣದಲ್ಲಿ ಅಂದಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತು ಆಡಳಿತರೂಢ ಬಿಜೆಪಿಯ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಅವರು ಪಾಲುದಾರರು ಎಂದು ಪ್ರತಿಪಕ್ಷಗಳು ಆರೋಪಿಸಿದ್ದವು. ಬೆಳಗಾವಿ ಅಧಿವೇಶನದಲ್ಲಿ ಕೂಡ ಆ ಬಾರಿ ಪ್ರಕರಣ ಸದ್ದು ಮಾಡಿತ್ತು.

ಪ್ರಕರಣದ ತನಿಖೆ ಕೈಗೆತ್ತಿಕೊಂಡ ಸಿಸಿಬಿಯ ಅಧಿಕಾರಿಗಳು ಶ್ರೀಕಿಯ ಹ್ಯಾಕಿಂಗ್ ಪರಿಣತಿಯನ್ನೇ ಬಳಸಿಕೊಂಡು ಸಾವಿರಾರು ಕೋಟಿ ಮೌಲ್ಯದ ಬಿಟ್ ಕಾಯಿನ್ ಗಳನ್ನು ಮಾರಾಟ ಮಾಡಿ ಹಣ ಲೂಟಿ ಮಾಡಿದ ಗಂಭೀರ ಆರೋಪ ಕೂಡ ಕೇಳಿಬಂದಿತ್ತು. ಆ ಹಿನ್ನೆಲೆಯಲ್ಲಿ ಕಾಂಗ್ರೆಸ್ ಸರ್ಕಾರ ಪ್ರಕರಣದ ತನಿಖೆಗೆ ಸಿಐಡಿಯ ವಿಶೇಷ ತನಿಖಾ ದಳವನ್ನು ನೇಮಿಸಿತ್ತು.

Read More
Next Story