ಬೀದಿ ನಾಯಿಗಳಿಗೆ ಬಿರಿಯಾನಿ, ಸರ್ಕಾರದಿಂದ ಹಣ ಲೂಟಿ ಯತ್ನ: ಅಶೋಕ್‌ ಟೀಕೆ
x
ಆರ್‌ ಅಶೋಕ್‌

ಬೀದಿ ನಾಯಿಗಳಿಗೆ ಬಿರಿಯಾನಿ, ಸರ್ಕಾರದಿಂದ ಹಣ ಲೂಟಿ ಯತ್ನ: ಅಶೋಕ್‌ ಟೀಕೆ

ಬೀದಿನಾಯಿಗಳಿಗೆ ಬಿರಿಯಾನಿ ಯೋಜನೆ ಹಗರಣಕ್ಕೆ ನಾಂದಿಯಾಗಲಿದೆ. ಯಾವುದೋ ತನಿಖಾ ಸಮಿತಿ ನೇಮಿಸಿ ಮುಚ್ಚಿ ಹಾಕಲಾಗುತ್ತದೆ. ಯೋಜನೆಯು ಅಕ್ರಮಗಳಿಗೆ ಕಾರಣವಾಗಲಿದೆ ಎಂದು ಅಶೋಕ್‌ ಕಿಡಿಕಾರಿದ್ದಾರೆ.


ಬೀದಿನಾಯಿಗಳಿಗೆ ಬಿರಿಯಾನಿ ನೀಡುವ ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆಯ (ಬಿಬಿಎಂಪಿ) ಯೋಜನೆಗೆ ಪ್ರತಿಪಕ್ಷ ಬಿಜೆಪಿ ವ್ಯಾಪಕ ಟೀಕೆ ವ್ಯಕ್ತಪಡಿಸಿದ್ದು, ಈ ಯೋಜನೆಯು ಇನ್ನುಮುಂದೆ ಹಗರಣವಾಗಲಿದೆ ಎಂದು ಟೀಕಾಪ್ರಹಾರ ನಡೆಸಿದೆ.

ಲೂಟಿ ಮಾಡುವ ಉದ್ದೇಶದಿಂದಲೇ ಬೀದಿನಾಯಿಗಳಿಗೆ ಬಿರಿಯಾನಿ ನೀಡುವ ಯೋಜನೆ ಜಾರಿಗೊಳಿಸಲು ರಾಜ್ಯ ಕಾಂಗ್ರೆಸ್‌ ಸರ್ಕಾರ ಮುಂದಾಗಿದೆ. ಇದು ಹಣ ಕೊಳ್ಳೆ ಹೊಡೆಯುವ ಯೋಜನೆ ಎಂದು ವಿಧಾನಸಭೆ ಪ್ರತಿಪಕ್ಷ ನಾಯಕ ಆರ್‌.ಅಶೋಕ್‌ ಕಿಡಿಕಾರಿದ್ದಾರೆ.

ಸದ್ಯಕ್ಕೆ ಇದು ಯೋಜನೆಯಾಗಿದೆ. ಇದು ಅನುಷ್ಠಾನಗೊಂಡರೆ ಈ ಯೋಜನೆ ಹಗರಣಕ್ಕೆ ನಾಂದಿಯಾಗಲಿದೆ. ಯೋಜನೆಯಲ್ಲಿ ಅಕ್ರಮ ಬಯಲು ಆಗುತ್ತಿದ್ದಂತೆ ಯಾವುದೋ ತನಿಖಾ ಸಮಿತಿಯನ್ನು ನೇಮಿಸಲಾಗುತ್ತದೆ. ಬಳಿಕ ಸಮಿತಿಯಿಂದ ವರದಿ ತರಿಸಿಕೊಂಡು ನಂತರ ಮುಚ್ಚಿ ಹಾಕಲಾಗುತ್ತದೆ. ಯೋಜನೆಯು ಅಕ್ರಮಗಳಿಗೆ ಕಾರಣವಾಗಲಿದೆ ಎಂದು ವಾಗ್ದಾಳಿ ನಡೆಸಿದ್ದಾರೆ.

ಯೋಜನೆಯಲ್ಲಿ ಅವ್ಯವಹಾರ ನಡೆದಿರುವುದು ಬೆಳಕಿಗೆ ಬಂದ ಬಳಿಕ ಯಾವುದೋ ತನಿಖಾ ಸಮಿತಿಯನ್ನು ನೇಮಿಸುತ್ತಾರೆ. ಕೊನೆಗೆ ವರದಿ ಮುಚ್ಚಿಹೋಗುತ್ತದೆ. ಇಂತಹ ಅಕ್ರಮಗಳಿಗೆ ಇದು ಕಾರಣವಾಗಲಿದೆ. ಮುಖ್ಯಮಂತ್ರಿ ಮತ್ತು ಉಪಮುಖ್ಯಮಂತ್ರಿಗಳು ಮುಖ್ಯಮಂತ್ರಿಯ ಕುರ್ಚಿಯ ಕಿತ್ತಾಟದಲ್ಲಿ ನಿರತರಾಗಿದ್ದಾರೆ. ಇಂತಹ ಸ್ಥಿತಿಯಲ್ಲಿ ಬಿಬಿಎಂಪಿ ವ್ಯಾಪ್ತಿಯಲ್ಲಿ ಬೀದಿನಾಯಿಗಳಿಗೆ ಊಟ ನೀಡುವ ಯೋಜನೆ ತರಲಾಗಿದೆ. ಬೀದಿನಾಯಿಗಳ ಉಪಟಳದಿಂದ ಮಕ್ಕಳಿಗೆ ತೊಂದರೆಯಾಗುತ್ತಿದೆ. ಅದಕ್ಕಾಗಿ ನಾಯಿಗಳ ಸಂಖ್ಯೆ ಕಡಿಮೆ ಮಾಡಬೇಕು ಎಂಬ ಉದ್ದೇಶದ ಯೋಜನೆ ಬಿಬಿಎಂಪಿಯಲ್ಲಿದೆ. ಜನರು ಹಾಗೂ ಸಂಘಟನೆಗಳು ಈಗಾಗಲೇ ಬೀದಿನಾಯಿಗಳಿಗೆ ಊಟ ಹಾಕುತ್ತಿದ್ದಾರೆ. ಈಗ ಬೌ ಬೌ ಬಿರಿಯಾನಿ ಹಾಕುವ ಅಗತ್ಯವೇನಿದೆ? ಎಂದು ಲೇವಡಿ ಮಾಡಿದರು.

ಪ್ರತಿ ಬೀದಿಗಳಲ್ಲಿ ಜನರು ಬೀದಿನಾಯಿಗಳಿಗೆ ಊಟ ಹಾಕುವುದು ಸಾಮಾನ್ಯವಾಗಿದೆ. ಈಗ ಹಣ ಲೂಟಿ ಮಾಡಲು ಇಂತಹ ಯೋಜನೆ ತರಲಾಗಿದೆ. ರಸ್ತೆಗಳಲ್ಲಿ ಗುಂಡಿಗಳು ಹೆಚ್ಚಾಗಿದೆ. ಉದ್ಯಾನಗಳ ನಿರ್ವಹಣೆ ಆಗುತ್ತಿಲ್ಲ. ಬಿಬಿಎಂಪಿ ಆಸ್ಪತ್ರೆಗಳಲ್ಲಿ ವೇತನ ನೀಡಲು ಹಣವಿಲ್ಲವಾಗಿದೆ. ಶಾಲೆಗಳ ಶಿಕ್ಷಕರಿಗೆ ಸಂಬಳ ನೀಡುತ್ತಿಲ್ಲ. ಯಾವುದಕ್ಕೂ ಹಣ ಇಲ್ಲ ಎಂದಾಗಿರುವಾಗ, ಬೀದಿನಾಯಿಗಳಿಗೆ ಬಿರಿಯಾನಿ ನೀಡಿ, ಅದರಲ್ಲಿ ಹಣ ಕೊಳ್ಳೆ ಹೊಡೆಯುವ ಯೋಜನೆ ತರಲಾಗುತ್ತಿದೆ ಎಂದು ಹೇಳಿದರು.

ಬೀದಿನಾಯಿಗಳ ಆರೋಗ್ಯದ ಆರೈಕೆಗೆ ಪಶು ಆಸ್ಪತ್ರೆ ನಿರ್ಮಿಸಬಹುದಿತ್ತು. ಬೀದಿ ಬದಿಯಲ್ಲಿ ಬಿದ್ದಿರುವ ನಾಯಿ ಅಥವಾ ಅಪಘಾತಕ್ಕೊಳಗಾದ ನಾಯಿಗಳನ್ನು ತಂದು ಚಿಕಿತ್ಸೆ ನೀಡಬಹುದು. ಅದನ್ನು ಬಿಟ್ಟು ಆಹಾರ ನೀಡುವ ಯೋಜನೆ ತಂದಿರುವುದು ಸರಿಯಲ್ಲ. ಬೀದಿನಾಯಿಗಳಿಗೆ ಮಾಂಸ ನೀಡುವುದರಿಂದ ಅವು ಕ್ರೂರವಾಗಿ ವರ್ತಿಸಬಹುದು. ಈಗಾಗಲೇ ನಮ್ಮ ಸಾಮಾನ್ಯ ಆಹಾರಕ್ಕೆ ಹೊಂದಿಕೊಂಡಿರುವ ಅವುಗಳಿಗೆ ಇಂತಹ ಆಹಾರ ನೀಡುವುದರಿಂದ ಸಮಸ್ಯೆ ಉಂಟಾಗಬಹುದು. ಬಿಬಿಎಂಪಿಯ ಹಣವನ್ನು ತಿನ್ನಲು ದಾರಿ ಹುಡುಕಿಕೊಂಡಿದ್ದಾರೆ ಎಂದು ಕಿಡಿಕಾರಿದರು.

ಸರ್ಕಾರದ ಮೇಲೆ ಆರೋಪ ಬಾರದಂತೆ ವರದಿ

ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಕಾಲ್ತುಳಿತ ಪ್ರಕರಣಕ್ಕೆ ಸರ್ಕಾರ ಅನುಮತಿ ನೀಡಿದೆ. ಆದರೆ ಪೊಲೀಸರನ್ನು ಬಲಿಪಶು ಮಾಡಲಾಗಿದೆ. ಆಯುಕ್ತರು, ಡಿಸಿಪಿ ಮೇಲೆ ಆರೋಪ ಹೊರೆಸಿ ಕೈ ತೊಳೆದುಕೊಳ್ಳಲಾಗಿದೆ. ಜಿಲ್ಲಾ ಉಸ್ತುವಾರಿ ಸಚಿವರು, ಗೃಹ ಸಚಿವರು ಎಲ್ಲ ಬಂದೋಬಸ್ತ್‌ ಮಾಡಿದ್ದರೆ, ದುರಂತ ನಡೆಯುತ್ತಿರಲಿಲ್ಲ. ಏನೂ ಮಾಡದೆ ಪೊಲೀಸರ ಮೇಲೆ ತಪ್ಪು ಹೊರಿಸಲಾಗಿದೆ. ಕ್ರಿಕೆಟಿಗ ವಿರಾಟ್‌ ಕೊಹ್ಲಿ ಅವರ ತಪ್ಪು ಕೂಡ ಇಲ್ಲ. ಸರ್ಕಾರದ ಮೇಲೆ ಆರೋಪ ಬರಬಾರದೆಂದು ಮೊದಲೇ ಹೇಳಿ ವರದಿ ಬರೆಸಲಾಗಿದೆ. ಇದು ಯೋಗ್ಯವಾದ ವರದಿ ಅಲ್ಲ. ಕೋರ್ಟ್‌ನಲ್ಲಿ ಬರುವ ತೀರ್ಪಿನ ಬಗ್ಗೆ ಮಾತ್ರ ನಂಬಿಕೆ ಇದೆ ಎಂದರು.

Read More
Next Story