ಕೃಷಿ ಕ್ರಾಂತಿಗೆ ಮುನ್ನುಡಿ: ಉಡುಪಿಯಲ್ಲಿ ದೇಶದ ಮೊಟ್ಟಮೊದಲ ಅತ್ಯಾಧುನಿಕ ಬಯೋಚಾರ್ ಘಟಕ
x

ಕೃಷಿ ಕ್ರಾಂತಿಗೆ ಮುನ್ನುಡಿ: ಉಡುಪಿಯಲ್ಲಿ ದೇಶದ ಮೊಟ್ಟಮೊದಲ ಅತ್ಯಾಧುನಿಕ 'ಬಯೋಚಾರ್' ಘಟಕ

ಬಯೋಚಾರ್‌ ಬಗ್ಗೆ ರೈತರಿಗೆ ಪರಿಚಯ ಇಲ್ಲ. ಆದರೆ, ಭೂಮಿಗೆ ಕೊಡುವ ನೀರು, ಗೊಬ್ಬರವನ್ನು ತಡೆದು ಬೆಳೆಗೆ ನೀರು ಮತ್ತು ಪೋಷಕಾಂಶ ದೊರಕುವಂತೆ ಮಾಡುತ್ತದೆ. ಉಡುಪಿಯಲ್ಲಿ ಮೊದಲ ಘಟಕ ಆರಂಭವಾಗಲಿದೆ.


Click the Play button to hear this message in audio format

ಭೂಮಿಗೆ ನೀಡುವ ನೀರು, ಗೊಬ್ಬರವನ್ನು ಮಣ್ಣು ಹೆಚ್ಚು ಸಮಯ ಹಿಡಿದಿಟ್ಟುಕೊಳ್ಳಲಾಗುವುದಿಲ್ಲ. ಅಲ್ಲದೇ, ಗಾಳಿಯ ಹೊಡೆತಕ್ಕೆ, ಮಳೆಯ ರಭಸಕ್ಕೆ ಗೊಬ್ಬರವು ಬೆಳೆಗೆ ಬೇಕಾದಷ್ಟು ಪ್ರಮಾಣದಲ್ಲಿ ಲಭ್ಯವಾಗುವುದಿಲ್ಲ. ಇದಕ್ಕೆಲ್ಲಾ ಪರಿಹಾರ ಬಯೋಚಾರ್‌..!

ಇದು ನಾಡಿನ ಬಹುತೇಕ ರೈತರಿಗೆ ಪರಿಚಯವೇ ಇಲ್ಲ. ಆದರೆ, ಭೂಮಿಗೆ ಕೊಡುವ ನೀರು, ಗೊಬ್ಬರವನ್ನು ತಡೆದು ಬೆಳೆಗೆ ನೀರು ಮತ್ತು ಪೋಷಕಾಂಶ ದೊರಕುವಂತೆ ಮಾಡುತ್ತದೆ. ಜಮೀನಿಗೆ ಬಿದ್ದ ನೀರು ಜಾರಿ ಹೋಗದಂತೆ ತಡೆಯುವ ಶಕ್ತಿ ಈ ಬಯೋಚಾರ್‌ಗೆ ಇದೆ.

ಈ ಕೃಷಿ ಸಂಜೀವಿನಿಯ ಮಹತ್ವವನ್ನು ಅರಿತ ಡೆನ್ಮಾರ್ಕ್ ಮೂಲದ ಪ್ರತಿಷ್ಠಿತ 'ಮಾಷ್ ಮೇಕ್' (Maach Make) ಸಂಸ್ಥೆಯು, ರಾಜ್ಯದಲ್ಲಿ 100 ಕೋಟಿ ರೂಪಾಯಿ ಬಂಡವಾಳ ಹೂಡಿಕೆಯೊಂದಿಗೆ ಭಾರತದ ಮೊಟ್ಟಮೊದಲ ಅತ್ಯಾಧುನಿಕ ಬಯೋಚಾರ್ ಘಟಕವನ್ನು ಉಡುಪಿ ಜಿಲ್ಲೆಯಲ್ಲಿ ಸ್ಥಾಪಿಸಲು ಮುಂದೆ ಬಂದಿದೆ. ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ್ ಅವರ ಯಶಸ್ವಿ ವಿದೇಶಿ ಪ್ರವಾಸದ ಫಲವಾಗಿ ಈ ಯೋಜನೆ ಸಾಕಾರಗೊಂಡಿದ್ದು, ಇದು ರಾಜ್ಯದ ಕೃಷಿ ಮತ್ತು ಕೈಗಾರಿಕಾ ಕ್ಷೇತ್ರಕ್ಕೆ ಹೊಸ ದಿಕ್ಕು ತೋರಿಸಲಿದೆ.

ಏನಿದು ಬಯೋಚಾರ್?

ಜೈವಿಕ ವಸ್ತುಗಳನ್ನು ಮಿತವಾದ ಆಮ್ಲಜನಕದ ಪೂರೈಕೆಯಿಂದ ಕಾಯಿಸಿದಾಗ ದೊರೆಯುವ ಅತಿಹೆಚ್ಚು ಇಂಗಾಲವನ್ನೊಳಗೊಂಡ ಘನವಸ್ತುವೇ ಬಯೋಚಾರ್‌. ಜನಸಾಮಾನ್ಯರಿಗೆ ಇದು ಬೇಗ ಅರ್ಥವಾಗುವುದಿಲ್ಲ. ಸುಲಭವಾಗಿ ಹೇಳಬೇಕೆಂದರೆ ಕಟ್ಟಿಗೆ, ಎಲೆ, ಕಸ, ಕಡ್ಡಿಯನ್ನು ಸುಟ್ಟು ಅದು ಬೂದಿಯಾಗುವ ಮೊದಲೇ ನೀರು ಸಿಂಪಡಿಸಿದರೆ ಉಳಿಯುವ ಕಪ್ಪು ಬಣ್ಣದ ಪದಾರ್ಥವೇ ಬಯೋಚಾರ್‌. ಕೃಷಿ ಮತ್ತು ಅರಣ್ಯ ಪ್ರದೇಶದಲ್ಲಿನ ತ್ಯಾಜ್ಯಗಳಾದ ಮರ, ಕಟ್ಟಿಗೆ, ಎಲೆ ಮತ್ತು ಕಸವನ್ನು ಬಳಸಿ ಇದನ್ನು ತಯಾರಿಸಲಾಗುತ್ತದೆ. ಗ್ರಾಮೀಣ ಭಾಷೆಯಲ್ಲಿ 'ಇದ್ದಿಲು' ಎಂದು ಕರೆಯಲಾಗುತ್ತದೆ.

ಕೃಷಿಕರು ಸ್ಥಳೀಯವಾಗಿ ಲಭ್ಯವಿರುವ ಕಚ್ಚಾ ಸಾಮಗ್ರಿಗಳಾದ ತೆಂಗಿನ ಸಿಪ್ಪೆ, ಅಡಿಕೆ ಸಿಪ್ಪೆ, ಒಣಹುಲ್ಲು, ಸೋಗೆ, ಹಾಳೆ, ಗೆಲ್ಲು, ತೆಂಗಿನ ಮಡಲು, ಶೇಂಗಾ ಸಿಪ್ಪೆ, ಭತ್ತದ ಹೊಟ್ಟನ್ನು ಬಳಸಿ ಕಡಿಮೆ ಖರ್ಚಿನಲ್ಲಿ ಜೈವಿಕ ಇದ್ದಿಲನ್ನು ತಯಾರಿಸಬಹುದು. ಮಣ್ಣಿನ ಪಾಲಿಗೆ ಇದು ನಿಜಕ್ಕೂ ಅದ್ಭುತ ಪದಾರ್ಥವಾಗಿದೆ. ಅಧಿಕ ಇಳುವರಿ ಪಡೆಯುವ ನಿಟ್ಟಿನಲ್ಲಿ ಭೂಮಿಗೆ ಸುರಿಯುವ ಗೊಬ್ಬರದ ಸಾರಸತ್ವವನ್ನೇ ಹೆಚ್ಚು ಕಾಲ ಹಿಡಿದಿಟ್ಟುಕೊಳ್ಳುವ ಶಕ್ತಿ ಇಂದು ಭೂಮಿಗಿಲ್ಲ. ಹೀಗಾಗಿ ಬಯೋಚಾರ್ ನೀಡಿದ ಮಣ್ಣಿಗೆ ಕಡಿಮೆ ಪ್ರಮಾಣದಲ್ಲಿ ನೀರು ನೀಡಬಹುದು. ಬಯೋಚಾರ್‌ನಲ್ಲಿ ಕೆಲವು ವಿಶಿಷ್ಟ ಗುಣಗಳಿವೆ; ಅಗಾಧ ಪ್ರಮಾಣದಲ್ಲಿ ನೀರನ್ನು ಹಿಡಿದಿಟ್ಟುಕೊಳ್ಳುವ ಸಾಮರ್ಥ್ಯ ಇದಕ್ಕಿದೆ.

ತಜ್ಞರು ಮತ್ತು ಬಳಕೆದಾರರ ಅಭಿಪ್ರಾಯ

ಯು.ಎನ್. ರವಿಕುಮಾರ್ (ನಿವೃತ್ತ ಪ್ರಾಧ್ಯಾಪಕ) ಈ ಕುರಿತು ಮಾತನಾಡಿ "ಜೈವಿಕ ಇದ್ದಿಲು ಬಳಕೆಯಿಂದ ಮಣ್ಣಿನಲ್ಲಿ ನೀರು ಹಿಡಿದಿಡುವ ಶಕ್ತಿ ಶೇ.15ರಿಂದ 20ರಷ್ಟು ಹೆಚ್ಚುತ್ತದೆ. ಸಾಮಾನ್ಯವಾಗಿ ಮಣ್ಣಿನಲ್ಲಿರುವ ಲವಣಾಂಶಗಳು ಮಳೆ ನೀರಿನ ಜತೆ ಹರಿದು ಹೋಗುತ್ತದೆ. ಹೀಗಾಗಿ ಸ್ವಲ್ಪ ಭಾಗ ಮಾತ್ರ ಗಿಡಗಳಿಗೆ ಸಿಗುತ್ತದೆ. ಆದರೆ, ಮಣ್ಣಿಗೆ ಸೇರಿಸಿರುವ ಜೈವಿಕ ಇದ್ದಿಲು ಲವಣಾಂಶ ಮತ್ತು ಪೋಷಕಾಂಶಗಳನ್ನು ಹಿಡಿದಿಟ್ಟುಕೊಳ್ಳುತ್ತದೆ. ಜತೆಗೆ ಸೂಕ್ಷ್ಮಾಣು ಜೀವಿಗಳಿಗೆ ಆಶ್ರಯ ನೀಡುತ್ತದೆ. 1 ಕೆಜಿ ಮಣ್ಣಿಗೆ ಶೇ.3ರಿಂದ 4ರಷ್ಟು ಜೈವಿಕ ಇದ್ದಿಲು ಸಾಕು." ಎಂದು ಹೇಳುತ್ತಾರೆ.

ಮಡಿಕೇರಿಯ ರೈತ ಪುರುಷೋತ್ತಮ ಕಶ್ಯಪ್ ಮಾತನಾಡಿ, "ಕೆಲವು ದಿನಗಳ ಕಾಲ ಬಯೋಚಾರ್‌ ಬಳಕೆ ಮಾಡಿದ್ದೇನೆ. ಕಾರಣಾಂತರದಿಂದ ಸದ್ಯಕ್ಕೆ ಬಳಕೆ ಮಾಡುವುದನ್ನು ನಿಲ್ಲಿಸಿದ್ದೇನೆ. ಆದರೆ, ಇದು ರೈತರಿಗೆ ಬಹಳಷ್ಟು ಉಪಯೋಗ. ಬಯೋಚಾರ್‌ ಬಳಕೆ ಮಾಡಿ ಬೆಳೆದ ಬೆಳೆಗಳು ಫಲವತ್ತಾಗಿ ಬೆಳೆಯುತ್ತವೆ. ಇದರ ಬಗ್ಗೆ ಹೆಚ್ಚಿನ ಅರಿವು ಮೂಡಿಸಬೇಕಾಗಿದೆ. ರಾಜ್ಯದ ಬಹಳಷ್ಟು ಕಡೆ ಇದರ ಬಗ್ಗೆ ಅರಿವಿಲ್ಲ. ಸರ್ಕಾರವು ಈ ಬಗ್ಗೆ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕು." ಎಂದು ಹೇಳಿದ್ದಾರೆ.

ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ್ ಹೊಸ ಯೋಜನೆ ಬಗ್ಗೆ ಅಭಿಪ್ರಾಯ ವ್ಯಕ್ತಪಡಿಸಿ "ಹಸುವಿನ ಸಗಣಿ ಮುಂತಾದ ನೈಸರ್ಗಿಕ ಗೊಬ್ಬರದೊಂದಿಗೆ ಬೆರೆಸಿದಾಗ ಇದು ಅಮೂಲ್ಯವಾದ ನೈಸರ್ಗಿಕ ಗೊಬ್ಬರವಾಗುತ್ತದೆ. ಬಯೋಚಾರ್ ಮಣ್ಣಿನ ರಚನೆಯನ್ನು ಸುಧಾರಿಸಲು, ತೇವಾಂಶವನ್ನು ಉಳಿಸಿಕೊಳ್ಳಲು ಮತ್ತು ಸಸ್ಯಗಳಿಗೆ ಪೋಷಕಾಂಶಗಳ ಲಭ್ಯತೆಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಅಂತಿಮವಾಗಿ ಕೃಷಿ ಉತ್ಪಾದಕತೆಯನ್ನು ಹೆಚ್ಚಿಸಲು ಕಾರಣವಾಗುತ್ತದೆ" ಎಂದು ಹೇಳಿದ್ದಾರೆ.

ಬಯೋಚಾರ್‌ ತಯಾರಿಸುವುದು ಹೇಗೆ?

ಬಯೋಚಾರ್ ತಯಾರಿಸಲು ಕುಲುಮೆ ಅಗತ್ಯ. 200 ಲೀಟರ್ ಸಾಮರ್ಥ್ಯದ ಲೋಹದ ಡ್ರಮ್ ಅಡಿಭಾಗದಲ್ಲಿ ಕೆಲವು ರಂಧ್ರಗಳನ್ನು ಮಾಡಬೇಕು. ಮೇಲ್ಭಾಗವನ್ನು ಮುಚ್ಚಳವಾಗಿ ಕತ್ತರಿಸಿಕೊಳ್ಳಬೇಕು. ಈ ಮುಚ್ಚಳದ ಮಧ್ಯದಲ್ಲಿ 8 ಇಂಚು ವ್ಯಾಸದ ಒಂದು ರಂಧ್ರಕೊರೆದು ಅದಕ್ಕೆ 3 ಅಡಿ ಉದ್ದದ ತಗಡಿನ ಕೊಳವೆ ಜೋಡಿಸಬೇಕು. ಈ ಕೊಳವೆ ಇದರ ಚಿಮಣಿಯಾಗಿರುತ್ತದೆ. 3 ಅಡಿ ಉದ್ದದ 1ಇಂಚು ದಪ್ಪದ 2 ಚೌಕ ಆಕಾರದ ಪೈಪುಗಳನ್ನು ಕತ್ತರಿಸಿಟ್ಟುಕೊಂಡರೆ ಬಯೋಚಾರ್ ಕುಲುಮೆ ಸಿದ್ಧವಾಗುತ್ತದೆ.

ಮುಂದಿನ ಹಂತವೇ ಬಯೋಚಾರ್ ತಯಾರಿ ಮಾಡುವುದಾಗಿರುತ್ತದೆ. ಮೊದಲು ಮೂರು ಕಲ್ಲುಗಳನ್ನಿಟ್ಟುಕೊಂಡು ಅದರ ಮೇಲೆ ಡ್ರಮ್ ಇಡಬೇಕು. ಒಣಗಿದ ತರಗೆಲೆ, ಸೋಗೆ, ಹಾಳೆ, ಗೆಲ್ಲು, ಅಡಕೆ ಸಿಪ್ಪೆ, ತೆಂಗಿನಸಿಪ್ಪೆ, ಮಡಲು, ಒಣ ಹುಲ್ಲು, ಭತ್ತದ ಹೊಟ್ಟು, ಶೇಂಗಾ ಸಿಪ್ಪೆ ಇತ್ಯಾದಿಗಳಿಂದ ತುಂಬಬೇಕು. ಮೇಲಿನಿಂದ ಬೆಂಕಿ ಹಚ್ಚಿ. ನಂತರ ಮೊದಲೇ ತಯಾರಿಸಿಟ್ಟುಕೊಂಡ 1 ಇಂಚಿನ ಚೌಕ ಆಕಾರದ ಪೈಪುಗಳನ್ನು ಮೇಲ್ಭಾಗದಲ್ಲಿಟ್ಟು ಅವುಗಳ ಮೇಲೆ ಚಿಮಣಿ ಇರುವ ಮುಚ್ಚಳವನ್ನಿಡಬೇಕು. ಮೇಲಿನಿಂದ ಕೆಳಗೆ ಬೆಂಕಿ ಉರಿಯುತ್ತಾ ಹೋಗುತ್ತದೆ. ಡ್ರಮ್ ತಳಭಾಗಕ್ಕೆ ನೀರು ಸಿಡಿಸಿದಾಗ ಅದು ಒಮ್ಮೆಲೆ ಆವಿಯಾದರೆ ಬಯೋಚಾರ್ ಸಿದ್ಧವಾಗುತ್ತದೆ. ಮುಚ್ಚಳ ತೆಗೆದು ಒಳಗೆ ಸಾಕಷ್ಟುನೀರು ಹಾಕಿ, ಆಮೇಲೆ ತಯಾರಾದ ಬಯೋಚಾರನ್ನು ದ್ರವ ಗೊಬ್ಬರಕ್ಕೆ ಸ್ಥಳಾಂತರಿಸಿ, ಅನುಕೂಲವಾದಂತೆ ಮಣ್ಣಿಗೆ ಸೇರಿಸಬಹುದು. .

Read More
Next Story