ಜಪಾನ್‌ನಿಂದ ಕರ್ನಾಟಕಕ್ಕೆ ಹರಿದುಬರಲಿದೆ  ಕೋಟ್ಯಾಂತರ ರೂ. ಬಂಡವಾಳ ಹೂಡಿಕೆ!
x

ಜಪಾನ್‌ನಿಂದ ಕರ್ನಾಟಕಕ್ಕೆ ಹರಿದುಬರಲಿದೆ ಕೋಟ್ಯಾಂತರ ರೂ. ಬಂಡವಾಳ ಹೂಡಿಕೆ!

ಬೃಹತ್‌ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ. ಬಿ. ಪಾಟೀಲ ಅವರ ನೇತೃತ್ವದ ನಿಯೋಗವು ರಾಜ್ಯದಲ್ಲಿನ ಸದೃಢ ಕೈಗಾರಿಕಾ ಪರಿಸರ ವ್ಯವಸ್ಥೆ, ಉದ್ಯಮಕ್ಕೆ ಅನುಕೂಲಕರ ವಾತಾವರಣ ಮತ್ತು ಸರ್ಕಾರದ ಪ್ರಗತಿಪರ ನೀತಿಗಳನ್ನು ಮನದಟ್ಟು ಮಾಡಿಕೊಟ್ಟಿದೆ.


2025ರಲ್ಲಿ ಬೆಂಗಳೂರಿನಲ್ಲಿ ನಡೆಯಲಿರುವ ಜಾಗತಿಕ ಹೂಡಿಕೆದಾರರ ಸಮಾವೇಶಕ್ಕೆ ಸಂಬಂಧಿಸಿದಂತೆ ಕರ್ನಾಟಕ ರಾಜ್ಯ ಸರ್ಕಾರವು, ಜಪಾನ್‌ನಲ್ಲಿ ಆಯೋಜಿಸಿದ್ದ ರೋಡ್‌ಷೋದಲ್ಲಿ ಅಲ್ಲಿನ 150ಕ್ಕೂ ಹೆಚ್ಚು ಕಂಪನಿಗಳಿಗೆ ರಾಜ್ಯದಲ್ಲಿನ ಬಂಡವಾಳ ಹೂಡಿಕೆಯ ಅವಕಾಶಗಳಿಗೆ ಎಡೆಮಾಡಿಕೊಟ್ಟಿದೆ.

ಬೃಹತ್‌ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ. ಬಿ. ಪಾಟೀಲ ಅವರ ನೇತೃತ್ವದ ನಿಯೋಗವು ರಾಜ್ಯದಲ್ಲಿನ ಸದೃಢ ಕೈಗಾರಿಕಾ ಪರಿಸರ ವ್ಯವಸ್ಥೆ, ಉದ್ಯಮಕ್ಕೆ ಅನುಕೂಲಕರ ವಾತಾವರಣ ಮತ್ತು ಸರ್ಕಾರದ ಪ್ರಗತಿಪರ ನೀತಿಗಳನ್ನು ಮನದಟ್ಟು ಮಾಡಿಕೊಟ್ಟರು. ಪರಿಸರ ಸಂರಕ್ಷಣೆ ಉಪಕರಣ ತಯಾರಿಸುವ ಬಹುರಾಷ್ಟ್ರೀಯ ಕಂಪನಿ ಡೈಕಿ ಆ್ಯಕ್ಸಿಸ್‌, ಕೈಗಾರಿಕಾ ಯಂತ್ರೋಪಕರಣ ತಯಾರಿಸುವ ಸುಮಿಟೊಮೊ ಹೆವಿ ಇಂಡಸ್ಟ್ರೀಸ್‌ (ಎಸ್‌ಎಚ್‌ಐ), ಸೆಮಿಕಂಡಕ್ಟರ್‌ ಪರಿಕರ ತಯಾರಿಸುವ ರೆನೆಸಸ್‌ ಎಲೆಕ್ಟ್ರಾನಿಕ್ಸ್‌ ಕಾರ್ಪೊರೇಷನ್‌ ಕಂಪನಿ ಹಾಗೂ ಜಪಾನ್‌ ಸರ್ಕಾರದ ಸಣ್ಣ ಕೈಗಾರಿಕೆಗಳ ಸಂಘಟನೆ ʼಎಸ್‌ಎಂಆರ್‌ಜೆʼ ಮುಖ್ಯಸ್ಥರ ಜೊತೆ ಸಮಾಲೋಚನೆ ನಡೆಸಿತು. ಈ ಸಭೆಗಳಲ್ಲಿನ ಮಾತುಕತೆಗಳು ರಾಜ್ಯದಲ್ಲಿನ ಬಂಡವಾಳ ಹೂಡಿಕೆಯ ಅವಕಾಶಗಳನ್ನು ಅನ್ವೇಷಿಸಲು ಮತ್ತು ಕರ್ನಾಟಕ ಮತ್ತು ಜಪಾನ್ ನಡುವಣ ಕೈಗಾರಿಕಾ ಸಹಯೋಗ ಬಲಪಡಿಸುವ ಬಗ್ಗೆ ಕೇಂದ್ರೀಕೃತಗೊಂಡಿದ್ದವು ಎಂದು ‌ಕೈಗಾರಿಕಾ ಸಚಿವಾಲಯದ ಪ್ರಕಟಣೆ ತಿಳಿಸಿದೆ.

ಡೈಕಿ ಆ್ಯಕ್ಸಿಸ್‌ಇಂಡಿಯಾ ಪ್ರೈವೇಟ್‌ಲಿಮಿಟೆಡ್‌ನ ನಿರ್ದೇಶಕ ರಿಯೊ ರಿಯೊಟಾ ವಾಜಾ ಅವರನ್ನು ಭೇಟಿಯಾಗಿ ಕರ್ನಾಟಕದಲ್ಲಿ ಸುಸ್ಥಿರ ಬೆಳವಣಿಗೆ, ನೀರಿನ ಉಳಿತಾಯ, ಕೊಳಚೆ ನೀರು ನಿರ್ವಹಣಾ ಘಟಕ (ಎಸ್‌ಟಿಪಿ) ಸ್ಥಾಪಿಸುವ ಕುರಿತು ಮಾತುಕತೆ ನಡೆಸಿದರು. ಡೈಕಿ ಆ್ಯಕ್ಸಿಸ್‌ ₹100 ಕೋಟಿ ವೆಚ್ಚದಲ್ಲಿ ಕರ್ನಾಟಕದಲ್ಲಿ ತ್ಯಾಜ್ಯ ನೀರು ನಿರ್ವಹಣಾ ಉಪಕರಣಗಳ ತಯಾರಿಕಾ ಘಟಕ ಸ್ಥಾಪಿಸುವ ಒಪ್ಪಂದಕ್ಕೆ ಈ ಸಭೆಯಲ್ಲಿ ಸಹಿ ಹಾಕಲಾಯಿತು.

ರೆನೆಸಸ್‌ ಎಲೆಕ್ಟ್ರಾನಿಕ್ಸ್‌ ಕಾರ್ಪೊರೇಷನ್ನಿನ ಸಿಇಒ ಚಾರ್ಲ್ಸ್‌ಕವಾಶಿಮಾ ಅವರನ್ನು ಭೇಟಿ ಮಾಡಿದ ನಿಯೋಗವು ವಿದೇಶಿ ಬಂಡವಾಳ ಹೂಡಿಕೆಗೆ ಇರುವ ಅವಕಾಶಗಳು ಮತ್ತು ಸವಾಲುಗಳನ್ನು ಚರ್ಚಿಸಿತು.

ಸುಮಿಟೊಮೊ ಹೆವಿ ಇಂಡಸ್ಟ್ರೀಸ್‌ನ (ಎಸ್‌ಎಚ್‌ಐ) ಚೇರ್ಮನ್‌ ಆಫ್‌ ರಿಪ್ರೆಸೆಂಟೇಟಿವ್‌ ಡೈರೆಕ್ಟರ್‌ ತೆತ್ಸುಯ ಒಕಾಮುರ ಮತ್ತು ಕಾರ್ಯನಿರ್ವಾಹಕ ಉಪಾಧ್ಯಕ್ಷ ತೋಷಿಹರು ತನಾಕಾ ಅವರನ್ನು ರಾಜ್ಯದ ನಿಯೋಗವು ಭೇಟಿಯಾಗಿತ್ತು. ರಾಜ್ಯದಲ್ಲಿ ಕಂಪನಿಯ ವಹಿವಾಟಿನ ವಿಸ್ತರಣೆಗೆ ಅಗತ್ಯ ಬೆಂಬಲ ನೀಡುವುದಾಗಿ ನಿಯೋಗವು ಭರವಸೆ ನೀಡಿತು. 2024ರ ಅಂತ್ಯದ ವೇಳೆಗೆ ಎಸ್‌ಎಚ್‌ಐ ಬೆಂಗಳೂರಿನಲ್ಲಿ ತನ್ನ ಪ್ರಧಾನ ಕಚೇರಿ ಆರಂಭಿಸಲಿದೆ.

ಜಪಾನ್‌ ಸರ್ಕಾರದ ಸಣ್ಣ ಹಾಗೂ ಮಧ್ಯಮ ಉದ್ಯಮಗಳು ಮತ್ತು ಪ್ರಾದೇಶಿಕ ಆವಿಷ್ಕಾರ ಸಂಸ್ಥೆಯ (ಎಸ್‌ಎಂಆರ್‌ಜೆ) ಕಾರ್ಯನಿರ್ವಾಹಕ ಉಪಾಧ್ಯಕ್ಷ ತೊಮೊಹಿರೊ ಕನೆಕೊ ಅವರ ಜೊತೆ ನಿಯೋಗವು ಸಮಾಲೋಚನೆ ನಡೆಸಿತು. ರಾಜ್ಯದಲ್ಲಿ ಅದರಲ್ಲೂ ವಿಶೇಷವಾಗಿ ವಾಹನ ಬಿಡಿಭಾಗ, ಎಲೆಕ್ಟ್ರಾನಿಕ್ಸ್ , ವೈಮಾಂತರಿಕ್ಷ ಹಾಗೂ ರಕ್ಷಣೆ, ಆಹಾರ ಸಂಸ್ಕರಣೆ, ಭಾರಿ ಯಂತ್ರೋಪಕರಣ ತಯಾರಿಕೆ ಕ್ಷೇತ್ರಗಳಲ್ಲಿ ತಮ್ಮ ವಹಿವಾಟು ವಿಸ್ತರಿಸಲು ʼಎಸ್‌ಎಂಆರ್‌ಜೆʼಗೆ ಅಗತ್ಯ ಸಹಕಾರ ನೀಡಲು ರಾಜ್ಯ ಸರ್ಕಾರ ಸಿದ್ಧವಿದೆ ಎಂದು ಸಚಿವರು ಭರವಸೆ ನೀಡಿದರು. ಜಪಾನಿನ 26,000 ʼಎಸ್‌ಎಂಇʼಗಳ ಸಹಯೋಗದಲ್ಲಿ ಕರ್ನಾಟಕದ ʼಎಸ್‌ಎಂಇʼಗಳ ಬೆಳವಣಿಗೆ ಉತ್ತೇಜಿಸಲು ನೆರವಾಗುವ ಒಪ್ಪಂದಕ್ಕೆ ಸಹಿ ಹಾಕಲಾಯಿತು.

ಜಪಾನ್‌ ಮತ್ತು ಭಾರತದ ಸಣ್ಣ ಹಾಗೂ ಮಧ್ಯಮ ಕೈಗಾರಿಕೆಗಳ (ಎಸ್‌ಎಂಇ) ಮುಖ್ಯಸ್ಥರ ಸಭೆಯನ್ನು ಆಗಸ್ಟ್‌ನಲ್ಲಿ ನಡೆಸಲು ಸಭೆಯಲ್ಲಿ ನಿರ್ಧರಿಸಲಾಯಿತು. ಕರ್ನಾಟಕದಲ್ಲಿ ಜಪಾನಿನ ʼಎಸ್‌ಎಂಇʼಗಳು ತಮ್ಮ ವಹಿವಾಟು ವಿಸ್ತರಿಸಲು ನಿಯೋಗವು ಆಹ್ವಾನ ನೀಡಿತು.

ಸೆಮಿಕಂಡಕ್ಟರ್‌ ಪರಿಕರಗಳನ್ನು ತಯಾರಿಸುವ ಬಹುರಾಷ್ಟ್ರೀಯ ಕಂಪನಿ ರೆನೆಸಸ್‌ ಎಲೆಕ್ಟ್ರಾನಿಕ್ಸ್‌ ಕಾರ್ಪೊರೇಷನ್ನಿನ ಹಿರಿಯ ನಿರ್ದೇಶಕ ಷೊ ಒಜಾಕಿ ಅವರನ್ನು ನಿಯೋಗವು ಭೇಟಿಯಾಗಿತ್ತು. ಎಲೆಕ್ಟ್ರಾನಿಕ್ಸ್‌ ವಲಯಕ್ಕೆ ದೇಶದಲ್ಲಿಯೇ ಗರಿಷ್ಠ ಪ್ರಮಾಣದ ಸಬ್ಸಿಡಿ ನೀಡುತ್ತಿರುವ ಕರ್ನಾಟಕದಲ್ಲಿನ ಎಲೆಕ್ಟ್ರಾನಿಕ್ಸ್‌ ಸಿಸ್ಟಮ್‌ ಡಿಸೈನ್‌ ಮತ್ತು ತಯಾರಿಕಾ (ಇಎಸ್‌ಡಿಎಂ) ಕ್ಷೇತ್ರದಲ್ಲಿನ ಅವಕಾಶಗಳನ್ನು ಸದ್ಬಳಕೆ ಮಾಡಿಕೊಳ್ಳಬೇಕು ಎಂದು ನಿಯೋಗವು ಮನವಿ ಮಾಡಿಕೊಂಡಿತು.

ತುಮಕೂರಿನ ಬಳಿ ಇರುವ ಜಪಾನ್‌ ಕೈಗಾರಿಕಾ ಟೌನ್‌ಶಿಪ್‌ನಲ್ಲಿ ₹ 210 ಕೋಟಿ ವೆಚ್ಚದಲ್ಲಿ ವಾಹನ ಬಿಡಿಭಾಗಗಳನ್ನು ತಯಾರಿಸುವ ಘಟಕವನ್ನು ಸ್ಥಾಪಿಸುವ ಒಪ್ಪಂದಕ್ಕೆ ಕೈಗಾರಿಕಾ ಸಲಕರಣೆಗಳನ್ನು ತಯಾರಿಸುವ ಜಪಾನಿನ ಅವೊಯಮಾ ಸೈಸಕುಷೊ ಕಂಪನಿಯು ಸಹಿ ಹಾಕಿದೆ.

ಎಂಬಿ ಪಾಟೀಲ ಅವರ ಸಮ್ಮುಖದಲ್ಲಿ ಕೈಗಾರಿಕಾ ಇಲಾಖೆ ಪ್ರಧಾನ ಕಾರ್ಯದರ್ಶಿ ಸೆಲ್ವಕುಮಾರ್ ಮತ್ತು ಅವೊಯಮಾ ಸೈಸಕುಷೊ ಕಂಪನಿಯ ಅಧ್ಯಕ್ಷ ಯುಕಿಯೋಷಿ ಅವೊಯಮಾ ಅವರು ಒಪ್ಪಂದಕ್ಕೆ ಸಹಿ ಹಾಕಿದ್ದಾರೆ. ಟೊಯೊಟಾ ಕಂಪನಿಯ ವಾಹನ ಬಿಡಿಭಾಗಗಳನ್ನು ತಯಾರಿಸುವ ಅವೊಯಮಾ, ತುಮಕೂರಿನ ಜಪಾನ್‌ ಕೈಗಾರಿಕಾ ಟೌನ್‌ಶಿಪ್‌ನಲ್ಲಿ ಈ ಘಟಕ ಸ್ಥಾಪಿಸಲು 20 ಎಕರೆ ಭೂಮಿಯನ್ನು ಗುರುತಿಸಿದೆ.

ರಾಜ್ಯದ ನಿಯೋಗವು ವಾಹನ ತಯಾರಿಕಾ ಬಹುರಾಷ್ಟ್ರೀಯ ದೈತ್ಯ ಕಂಪನಿ ಟೊಯೊಟೊದ ಮುಖ್ಯಸ್ಥರನ್ನು ಭೇಟಿಯಾಗಿ ಚರ್ಚೆ ನಡೆಸಿತು. ಕಂಪನಿಯ ಪ್ರಾಜೆಕ್ಟ್‌ ಜನರಲ್‌ ಮ್ಯಾನೇಜರ್‌ ಟಕಾವೊ ಐಬಾ, ಟೊಯೊಟಾ ಕಿರ್ಲೋಸ್ಕರ್‌ ಮೋಟರ್‌ನ ಹಿರಿಯ ಉಪಾಧ್ಯಕ್ಷ ಸುದೀಪ್‌ ಎಸ್‌. ದಳವಿ ಅವರು ಸಮಾಲೋಚನೆಯಲ್ಲಿ ಭಾಗಿಯಾಗಿದ್ದರು. ರಾಜ್ಯದಲ್ಲಿನ ಟೊಯೊಟಾದ ಭವಿಷ್ಯದ ಹೂಡಿಕೆ ಅವಕಾಶಗಳ ಬಗ್ಗೆ ಚರ್ಚೆ ನಡೆಸಲಾಯಿತು. ಜಾಗತಿಕ ಹೂಡಿಕೆದಾರರಿಗೆ ಅನುಕೂಲಕರ ವಾತಾವರಣ ಸೃಷ್ಟಿಸಲು ಮತ್ತು ರಾಜ್ಯದ ಕೈಗಾರಿಕಾ ಸಾಮರ್ಥ್ಯಗಳನ್ನು ಹೆಚ್ಚಿಸುವ ರಾಜ್ಯ ಸರ್ಕಾರದ ಬದ್ಧತೆಯನ್ನು ಸಚಿವರು ಸಭೆಯಲ್ಲಿ ಪುನರುಚ್ಚರಿಸಿದರು. ಟೊಯೊಟಾ ಮತ್ತು ಅವೊಯಮಾ ಕಂಪನಿಗಳ ಜೊತೆಗಿನ ಸಮಾಲೋಚನೆಗಳು ಉದ್ಯಮ ಸ್ನೇಹಿ ಸೌಲಭ್ಯಗಳನ್ನು ಒದಗಿಸುವ ರಾಜ್ಯದ ಬದ್ಧತೆಗೆ ನಿದರ್ಶನಗಳಾಗಿವೆ.

ರಾಜ್ಯ ಸರ್ಕಾರವು ಜಾರಿಗೆ ತರಲು ಉದ್ದೇಶಿಸಿರುವ ಹೊಸ ಶುದ್ಧ ಇಂಧನ ಸಂಚಾರ ನೀತಿ ಹಾಗೂ ಗೌರಿಬಿದನೂರು, ಧಾರವಾಡದಲ್ಲಿ ವಾಹನ ತಯಾರಿಕಾ ಉದ್ಯಮದ ನೆರವಿಗಾಗಿ ಎರಡು ದೊಡ್ಡ ಕೈಗಾರಿಕಾ ಸಮೂಹಗಳನ್ನು ಸ್ಥಾಪಿಸಲಾಗುತ್ತಿರುವುದನ್ನು ನಿಯೋಗವು ಟೊಯೊಟಾದ ಮುಖ್ಯಸ್ಥರ ಗಮನಕ್ಕೆ ತಂದಿತು. ಈ ಯೋಜನೆಗಳ ಪ್ರಯೋಜನ ಪಡೆದುಕೊಳ್ಳಲು ಟೊಯೊಟಾಕ್ಕೆ ಅಗತ್ಯ ಇರುವ ಎಲ್ಲ ಬಗೆಯ ನೆರವನ್ನು ರಾಜ್ಯ ಸರ್ಕಾರದಿಂದ ಒದಗಿಸಲಾಗುವುದು ಎಂದು ಸಚಿವ ಪಾಟೀಲ ಅವರು ಭರವಸೆ ನೀಡಿದರು.

ಈ ಸಂದರ್ಭದಲ್ಲಿ ಕೈಗಾರಿಕಾ ಇಲಾಖೆಯ ಪ್ರಧಾನ ಕಾರ್ಯದರ್ಶಿ ಡಾ. ಎಸ್ ಸೆಲ್ವಕುಮಾರ್, ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆಯ ಆಯುಕ್ತರಾದ ಶ್ರೀಮತಿ ಗುಂಜನ್ ಕೃಷ್ಣ, ವಿಧಾನ ಪರಿಷತ್ ಸದಸ್ಯ ಮಂಜುನಾಥ ಭಂಡಾರಿ ಇದ್ದರು.

Read More
Next Story