
ಸಾಂದರ್ಭಿಕ ಚಿತ್ರ
ದೇವದಾಸಿ ಮಕ್ಕಳ ಪಿತೃತ್ವ ಗುರುತಿಸುವ ವಿಧೇಯಕ ಸರ್ವಾನುಮತದಿಂದ ಅಂಗೀಕಾರ
ದೇವದಾಸಿಗೆ ಜನಿಸುವ ಮಗುವನ್ನು ಹಿಂದೂ ಧರ್ಮದ ವೈಯಕ್ತಿಕ ಕಾನೂನಿನ ಪ್ರಕಾರ ಕಾನೂನುಬದ್ಧ ಮಗು ಎಂದು ಪರಿಗಣಿಸಲಾಗುತ್ತದೆ. ಇಬ್ಬರೂ ಪೋಷಕರ ಆಸ್ತಿಯ ಉತ್ತರಾಧಿಕಾರಿ ಮತ್ತು ಉತ್ತರಾಧಿಕಾರ ಹೊಂದುವ ಅರ್ಹತೆ ಮಗುವಿಗೆ ಇರಲಿದೆ.
ದೇವದಾಸಿಯರಿಗೆ ಜನಿಸಿದ ಮಗು ತನ್ನ ತಂದೆಯನ್ನು ಗುರುತಿಸಲು (ಪಿತೃತ್ವ) ಹಕ್ಕು ನೀಡುವ ವಿಧೇಯಕವು ವಿಧಾನಸಭೆಯಲ್ಲಿ ಸರ್ವಾನುಮತದಿಂದ ಅಂಗೀಕರಿಸಲಾಯಿತು.
ಸೋಮವಾರ ಅಧಿವೇಶನದಲ್ಲಿ ಕರ್ನಾಟಕ ದೇವದಾಸಿ ಪದ್ಧತಿ (ತಡೆಗಟ್ಟುವಿಕೆ, ನಿಷೇಧ, ಪರಿಹಾರ ಮತ್ತು ಪುನರ್ವಸತಿ) ಮಸೂದೆ– 2025 ಅಂಗೀಕಾರವಾಗಿದ್ದು, ರಾಜ್ಯದಲ್ಲಿ ದೇವದಾಸಿ ಪದ್ಧತಿ ನಿರ್ಮೂಲನೆ ಮಾಡುವ, ಸಮಗ್ರ ಪುನರ್ವಸತಿ ಕಲ್ಪಿಸಲು ಅವಕಾಶ ನೀಡಲಿದೆ.
ದೇವದಾಸಿಗೆ ಜನಿಸುವ ಮಗುವನ್ನು ಹಿಂದೂ ಧರ್ಮದ ವೈಯಕ್ತಿಕ ಕಾನೂನಿನ ಪ್ರಕಾರ ಕಾನೂನುಬದ್ಧ ಮಗು ಎಂದು ಪರಿಗಣಿಸಲಾಗುತ್ತದೆ. ಇಬ್ಬರೂ ಪೋಷಕರ ಆಸ್ತಿಯ ಉತ್ತರಾಧಿಕಾರಿ ಮತ್ತು ಉತ್ತರಾಧಿಕಾರ ಹೊಂದುವ ಅರ್ಹತೆ ಮಗುವಿಗೆ ಇರಲಿದೆ. ದೇವದಾಸಿ ಮಗುವಿಗೆ ತನ್ನ ತಂದೆ ತಿಳಿದಿಲ್ಲ ಎಂಬ ಕಾರಣಕ್ಕೆ ತಾರತಮ್ಯ ಮಾಡಲು ಅವಕಾಶ ಇಲ್ಲ ಎಂದು ತಿಳಿಸಲಾಗಿದೆ.
ದೇವದಾಸಿಯರ ಮಕ್ಕಳು ಶಿಕ್ಷಣ, ಆರೋಗ್ಯ ಮತ್ತು ಪರವಾನಗಿಗಳು, ಪಾಸ್‌ಪೋರ್ಟ್, ಪಾನ್ ಕಾರ್ಡ್, ಪಡಿತರ ಚೀಟಿ ಮತ್ತಿತರ ದಾಖಲೆಗಳಿಗೆ ಅರ್ಜಿ ಸಲ್ಲಿಸುವಾಗ ತನ್ನ ತಂದೆಯ ಹೆಸರು ಘೋಷಿಸುವುದು ಕಡ್ಡಾಯವಾಗಿದೆ. ಯಾವುದೇ ಅರ್ಜಿ ಸಲ್ಲಿಸುವಾಗ ತಂದೆಯ ಹೆಸರಿನ ಭಾಗವು ಕಡ್ಡಾಯವಲ್ಲ ಎಂದು ಖಚಿತಪಡಿಸಿಕೊಳ್ಳಲು ರಾಜ್ಯ ಸರ್ಕಾರ ಆಡಳಿತಾತ್ಮಕ ಕ್ರಮ ತೆಗೆದುಕೊಳ್ಳಬೇಕು. ಪ್ರತಿಯೊಬ್ಬ ದೇವದಾಸಿ ಮಹಿಳೆಯು ಉತ್ತಮ ಆರೋಗ್ಯ ಮತ್ತು ಯೋಗಕ್ಷೇಮದ ಹಕ್ಕು ಹೊಂದಲಿದ್ದು ಅದನ್ನು ಸರ್ಕಾರ ಒದಗಿಸಬೇಕು ಎಂದೂ ಮಸೂದೆಯಲ್ಲಿ ತಿಳಿಸಲಾಗಿದೆ.