ಬೆಳಗಾವಿ ಅಧಿವೇಶನ | ವಿವಿ ಆಡಳಿತದಲ್ಲಿ ರಾಜ್ಯಪಾಲರ ಅಧಿಕಾರ ಮೊಟಕು: ಮಸೂದೆಗೆ ಅಂಗೀಕಾರ
ಈ ಮಸೂದೆ ಅಂಗೀಕಾರಕ್ಕೆ ಬಿಜೆಪಿ ಮತ್ತು ಜೆಡಿಎಸ್ ಸದಸ್ಯರು ತೀವ್ರ ವಿರೋಧ ವ್ಯಕ್ತಪಡಿಸಿದರು. ರಾಜ್ಯಪಾಲರ ವಿರುದ್ಧ ದ್ವೇಷದ ಕಾರಣಕ್ಕಾಗಿ ಮತ್ತು ಸಂಘರ್ಷ ನಡೆಸಲು ಈ ಮಸೂದೆಯನ್ನು ಮಂಡಿಸಲಾಗಿದೆ ಎಂದು ಆರೋಪಿಸಿದರು
ರಾಜ್ಯಪಾಲರ ವಿಶ್ವವಿದ್ಯಾನಿಲಯಗಳ ಕುಲಪತಿ ಅಧಿಕಾರವನ್ನು ಮೊಟಕುಗೊಳಿಸಿ ಮುಖ್ಯಮಂತ್ರಿಯವರಿಗೆ ಅಧಿಕಾರ ನೀಡುವ 'ಕರ್ನಾಟಕ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ವಿಶ್ವವಿದ್ಯಾನಿಲಯ ತಿದ್ದುಪಡಿ ಮಸೂದೆ'ಯನ್ನು ಬೆಳಗಾವಿ ಸುವರ್ಣಸೌಧದಲ್ಲಿ ನಡೆಯುಯುತ್ತಿವ ವಿಧಾನಸಭಾ ಅಧಿವೇಶನದಲ್ಲಿ ಅಂಗೀಕರಿಲಾಯಿತು.
ಈ ಮಸೂದೆ ಅಂಗೀಕಾರಕ್ಕೆ ಬಿಜೆಪಿ ಮತ್ತು ಜೆಡಿಎಸ್ ಸದಸ್ಯರು ತೀವ್ರ ವಿರೋಧ ವ್ಯಕ್ತಪಡಿಸಿದರು. ರಾಜ್ಯಪಾಲರ ವಿರುದ್ಧ ದ್ವೇಷದ ಕಾರಣಕ್ಕಾಗಿ ಮತ್ತು ಸಂಘರ್ಷ ನಡೆಸಲು ಈ ಮಸೂದೆಯನ್ನು ಮಂಡಿಸಲಾಗಿದೆ. ಇದರಿಂದ ರಾಜ್ಯದ ಶಿಕ್ಷಣ ಕ್ಷೇತ್ರಕ್ಕೆ ಒಳ್ಳೆಯದಾಗುವುದಿಲ್ಲ ಎಂದು ವಿರೋಧಪಕ್ಷದ ಸದಸ್ಯರು ಟೀಕಿಸಿದರು.
ರಾಜಕೀಯ ಕಾರಣಕ್ಕಾಗಿ ಅಥವಾ ಯಾರನ್ನೋ ಕುಲಪತಿ ಮಾಡಲು ಮಸೂದೆ ಮಂಡಿಸಿಲ್ಲ. ವಿಶ್ವವಿದ್ಯಾನಿಲಯ ಆಡಳಿತವನ್ನು ಚುರುಕುಗೊಳಿಸಿ ಪರಿಣಾಮಕಾರಿ ಮಾಡುವ ಉದ್ದೇಶದಿಂದ ತಿದ್ದುಪಡಿ ಮಾಡಿದ್ದೇವೆ. ರಾಜ್ಯಪಾಲರೇ ಕುಲಪತಿ ಆಗಬೇಕು ಎಂಬ ಕಾನೂನು ಎಲ್ಲೂ ಇಲ್ಲ. ಗುಜರಾತ್ ಮತ್ತು ಅರುಣಾಚಲ ಪ್ರದೇಶದ ತಲಾ ಒಂದೊಂದು ವಿಶ್ವವಿದ್ಯಾಲಯ, ಉತ್ತರ ಪ್ರದೇಶದ ಲೋಹಿಯಾ ಕಾನೂನು ವಿಶ್ವವಿದ್ಯಾಲಯವೂ ಇದೇ ಮಾದರಿಯಲ್ಲಿವೆ ಎಂದು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ಮಸೂದೆಯನ್ನು ಸಮರ್ಥಿಸಿಕೊಂಡರು.
ಪ್ರಸ್ತುತ ವಿವಿಯಲ್ಲಿ ರಾಜ್ಯಪಾಲರು ಕುಲಾಧಿಪತಿ ಆಗಿದ್ದರು. ಆದರೆ ಈ ಮಸೂದೆ ಪ್ರಕಾರ ರಾಜ್ಯಪಾಲರ ಬದಲು ವಿವಿಗೆ ಸಿಎಂ ಕುಲಾಧಿಪತಿಗಳಾಗಲಿದ್ದಾರೆ. ಈ ವಿಶ್ವವಿದ್ಯಾಲಯದ ಎಲ್ಲಾ ನೇಮಕಾತಿ, ಆಡಳಿತಾತ್ಮಕ ಅಧಿಕಾರ ಸಿಎಂಗೆ ಇರಲಿದೆ. ಇದರ ಜೊತೆಗೆ ವಿಶ್ವವಿದ್ಯಾಲಯ ಧನ ಸಹಾಯ ಆಯೋಗ ವಿಶ್ವವಿದ್ಯಾಲಯಗಳ ಕುಲಪತಿಗಳ ನೇಮಕಾತಿಗೆ ಕನಿಷ್ಠ ವಿದ್ಯಾರ್ಹತೆಯನ್ನು ನಿಗದಿಗೊಳಿಸಿದೆ. ಇದರನ್ವಯ ಕುಲಪತಿಗಳ ಹುದ್ದೆಗೆ ಅಭ್ಯರ್ಥಿಗಳು ಪ್ರಾಧ್ಯಾಪಕ ಹುದ್ದೆಯಲ್ಲಿ ಕನಿಷ್ಠ 10 ವರ್ಷ ಸೇವೆ ಸಲ್ಲಿಸಬೇಕಾಗಿರುತ್ತದೆ. ಈ ನಿಯಮಗಳನ್ನು ಕಾಯ್ದೆಯಲ್ಲಿ ಅಳವಡಿಸಿಕೊಳ್ಳಲು ತಿದ್ದುಪಡಿಗೆ ಪ್ರಸ್ತಾಪಿಸಲಾಗಿದೆ. ಇದರಿಂದ ಕೆಲವೊಂದು ಪ್ರಕರಣಗಳಿಗೆ ತಿದ್ದುಪಡಿ ಪ್ರಸ್ತಾಪಿಸಲಾಗಿದೆ ಪ್ರಿಯಾಂಕ್ ಖರ್ಗೆ ಮಸೂದೆಯ ಕುರಿತು ವಿವರಿಸಿದರು.
ವಿರೋಧ ಪಕ್ಷದವರಿಂದ ತೀವ್ರ ವಿರೋಧ
ಈ ಮಸೂದೆಗೆ ವಿಪಕ್ಷ ಬಿಜೆಪಿ ಸದಸ್ಯರು ತೀವ್ರ ವಿರೋಧ ವ್ಯಕ್ತಪಡಿಸಿದ್ದು, ಈ ಮಸೂದೆಯಲ್ಲಿ ಯಾವ ಸದುದ್ದೇಶವೂ ಇಲ್ಲ. ಯಾವ ಸುಧಾರಣೆಯೂ ಕಾಣುವುದಿಲ್ಲ. ಗುಣಮಟ್ಟ ಹೆಚ್ಚಿಸುವ ಬಿಲ್ ಎಂದು ಹೇಳುತ್ತಾರೆ. ಆದರೆ ವಿವಿಗಳಿಗೆ ಸ್ವಾಯತ್ತತ್ತೆ ಕೊಡುವುದು ಸರಿಯಲ್ಲ. ಮತ್ತಷ್ಟು ಬಿಗಿಯಾದ ಹಿಡಿತ ಇರಬೇಕು. ಕುಲಪತಿಗಳೇ ಎಲ್ಲವನ್ನು ಮಾಡಬೇಕೆಂಬುದು ಸರಿಯಲ್ಲ. ವಿವಿಗಳಿಂದ ಒಳ್ಳೆ ಪ್ರತಿಭೆಗಳು ಬೇಕಾ?. ಸಣ್ಣ ಮಟ್ಟದ ಆಲೋಚನೆ ಇಲ್ಲಿ ಮಾಡಬೇಡಿ. ರಾಜ್ಯದ ಜನರ ಭವಿಷ್ಯ ಇದರಲ್ಲಿದೆ. ಈ ಬಿಲ್ ವಾಪಸ್ ಪಡೆಯಿರಿ. ಪ್ರತಿಪಕ್ಷಗಳ ಸಲಹೆಗಳನ್ನೂ ಪಡೆಯಿರಿ. ಚಾನ್ಸಲರ್ ಸ್ಥಾನದಿಂದ ಗೌರ್ನರ್ ತೆಗೆಯೋದು ಬೇಡ. ನಿಮ್ಮ ಹಗೆತನ, ವೈಮನಸ್ಸು ಯಾವುದೂ ಬೇಡ. ಪ್ರಿಯಾಂಕ್ ಖರ್ಗೆಯವರು ನೀವು ಬೆಳೆಯುವವರು. ಹಾಗಾಗಿ ಹಗೆತನ, ದ್ವೇಷ ಬೇಡ. ಹೋಗಿ ಎಲ್ಲೋ ಡಿಕ್ಕಿ ಹೊಡೆದುಕೊಳ್ಳೋದು ಬೇಡ ಎಂದು ಅಶ್ವತ್ಥ್ ನಾರಾಯಣ್ ಆಕ್ಷೇಪ ವ್ಯಕ್ತಪಡಿಸಿದರು.
ರಾಜ್ಯಪಾಲರ ಪೀಠ ಸಂವಿಧಾನದತ್ತವಾದುದು. ಇದನ್ನು ಯಾಕೆ ಧಿಕ್ಕರಿಸುತ್ತಿದ್ದೀರಿ?. ಎಲ್ಲಾ ವಿವಿಗಳಿಗೆ ರಾಜ್ಯಪಾಲರೇ ಉಪಕುಲಪತಿಗಳು. ಕೇರಳದಲ್ಲೂ ಇದೇ ರೀತಿ ಮಾಡೋಕೆ ಹೊರಟ್ರು. ಆದರೆ ನಮ್ಮ ರಾಜ್ಯದಲ್ಲಿ ಇದು ಬೇಡ ಅನ್ನಿಸುತ್ತದೆ. ರಾಜ್ಯಪಾಲರನ್ನು ತೆಗೆದು ಸಿಎಂಗೆ ಕೊಡೋದು ಸರಿಯಲ್ಲ. ಇದನ್ನು ನಾನು ವಿರೋಧಿಸುತ್ತೇನೆ ಎಂದು ಬಿಜೆಪಿ ಸದಸ್ಯ ಆರಗ ಜ್ಞಾನೇಂದ್ರ ಮಸೂದೆಗೆ ಆಕ್ಷೇಪ ವ್ಯಕ್ತಪಸಿದರು.
ಸರ್ಕಾರ ಗೌವರ್ನರ್ ಮಧ್ಯೆ ಕಂದಕ ತರುತ್ತಿದೆ. ರಾಜ್ಯಪಾಲರು ಕುಲಾಧಿಪತಿ ಆಗಿರುವುದರಿಂದ ಸಮಸ್ಯೆಗಳು ಏನಿದೆ ಅನ್ನೋದನ್ನು ಹೇಳಬೇಕಿತ್ತು. ಆದರೆ ತೆಗೆಯೋಕೆ ಏನಿದೆ ಹೇಳ್ತಿಲ್ಲ. ಗುಜರಾತ್ನಲ್ಲೂ ಇದೇ ಮಾದರಿ ಸಿಎಂಗೆ ಅಧಿಕಾರ ನೀಡಲಾಗಿದೆ ಎಂದು ಹೇಳುತ್ತೀರಿ. ಹಾಗಾದ್ರೆ ಗುಜರಾತ್ ಮಾದರಿ ಒಪ್ಪಿಕೊಳ್ಳಿ ಎಂದು ವಿಪಕ್ಷ ನಾಯಕ ಆರ್. ಅಶೋಕ್ ತಿಳಿಸಿದರು.
ಗುಜರಾತ್ ಹೇಗೆ ನೇಮಿಸುತ್ತದೆ?
ಗುಜರಾತ್ ಸಾರ್ವಜನಿಕ ವಿಶ್ವವಿದ್ಯಾನಿಲಯಗಳ ಕಾಯಿದೆ 2023 ರ ಅಡಿಯಲ್ಲಿ ರೂಪಿಸಲಾದ ನಿಯಮಗಳ ಪ್ರಕಾರ, ರಾಜ್ಯ ಸರ್ಕಾರದಿಂದ ನಾಮನಿರ್ದೇಶನಗೊಂಡ ಸದಸ್ಯರು, ವಿಶ್ವವಿದ್ಯಾಲಯ ಅಥವಾ ಸಂಸ್ಥೆಯ ನಿರ್ದೇಶಕರು, ವಿಶ್ವವಿದ್ಯಾನಿಲಯ ಧನಸಹಾಯ ಆಯೋಗದ ಪ್ರತಿನಿಧಿ ಮತ್ತು ರಿಜಿಸ್ಟ್ರಾರ್ ಅನ್ನು ಒಳಗೊಂಡಿರುವ ಶೋಧನಾ ಸಮಿತಿಯು ಇರುತ್ತದೆ. ಸರ್ಕಾರದಿಂದ ನಾಮನಿರ್ದೇಶನಗೊಂಡ ಸದಸ್ಯರು ಸಮಿತಿಯ ಅಧ್ಯಕ್ಷರಾಗಿರುತ್ತಾರೆ. ಉಪಕುಲಪತಿ ನೇಮಕಾತಿಗಾಗಿ ಪರಿಗಣನೆಗೆ ಉತ್ತಮ ಅಭ್ಯರ್ಥಿಗಳ ಪಟ್ಟಿಯನ್ನು ಇದು ಶಿಫಾರಸು ಮಾಡುತ್ತದೆ. ಪಟ್ಟಿಯಲ್ಲಿರುವ ಪ್ರತಿಯೊಬ್ಬ ವ್ಯಕ್ತಿಯ ಅರ್ಹತೆಯ ಬಗ್ಗೆ ವಿವರವಾದ ಬರವಣಿಗೆಯೊಂದಿಗೆ ವರದಿಯನ್ನು ಸಲ್ಲಿಸಲಾಗುತ್ತದೆ. ರಾಜ್ಯ ಸರ್ಕಾರ ಅವರಲ್ಲಿ ಒಬ್ಬರನ್ನು ಉಪಕುಲಪತಿಯಾಗಿ ನೇಮಿಸುತ್ತದೆ.
ರಾಜ್ಯದಲ್ಲಿ ಉಪಕುಲಪತಿಗಳ ನೇಮಕ ಹೇಗೆ?
ಈಗ ಉಪಕುಲಪತಿ ಹುದ್ದೆಗೆ ಮೂರು ಅರ್ಹ ಅಭ್ಯರ್ಥಿಗಳನ್ನು ಶಿಫಾರಸು ಮಾಡಲು ಸರ್ಕಾರವು ಶೋಧನಾ ಸಮಿತಿಯನ್ನು ರಚಿಸುತ್ತದೆ. ಈ ಪಟ್ಟಿಯನ್ನು ರಾಜ್ಯಪಾಲರ ಕಚೇರಿಗೆ ಕಳುಹಿಸಲಾಗುತ್ತದೆ. ಅಲ್ಲಿ ರಾಜ್ಯಪಾಲರು ಸರ್ಕಾರದೊಂದಿಗೆ ಸಮಾಲೋಚಿಸಿ ಒಬ್ಬ ಅಭ್ಯರ್ಥಿಯನ್ನು ಆಯ್ಕೆ ಮಾಡುತ್ತಾರೆ. ಉಪಕುಲಪತಿಗಳ ನೇಮಕದಲ್ಲಿ ರಾಜ್ಯಪಾಲರದ್ದೇ ಅಂತಿಮ ಮಾತು. ಆದರೆ ಒಂದು ವೇಳೆ ಪ್ರಸ್ತಾವಿತ ತಿದ್ದುಪಡಿಯು ಕಾನೂನಾದರೆ, ರಾಜ್ಯ ಸರ್ಕಾರವು ಸಮಿತಿಯು ಸೂಚಿಸುವ ಮೂರು ಹೆಸರುಗಳಿಂದ ಒಂದೇ ಹೆಸರನ್ನು ಅಂತಿಮಗೊಳಿಸಿ ರಾಜ್ಯಪಾಲರ ಅನುಮೋದನೆಗೆ ಕಳುಹಿಸುತ್ತದೆ. ಇದು ಉಪಕುಲಪತಿಗಳ ನೇಮಕದಲ್ಲಿ ಮುಖ್ಯಮಂತ್ರಿ ನಿರ್ಣಾಯಕ ಪಾತ್ರ ವಹಿಸುವ ಗುಜರಾತ್, ತಮಿಳುನಾಡು ಮತ್ತು ಆಂಧ್ರಪ್ರದೇಶದಂತಹ ರಾಜ್ಯಗಳ ಉಲ್ಲೇಖಗಳನ್ನು ಈ ಕರಡು ಮಸೂದೆ ಹೊಂದಿದೆ.
ವಿಪಕ್ಷಗಳ ವಿರೋಧದ ನಡುವೆಯೂ ಈ ಮಸೂದೆಯು ಇದೀಗ ವಿಧಾನ ಸಭೆಯಲ್ಲಿ ಅಂಗೀಕಾರವಾಗಿದೆ.