
ಕಾಲ್ಪನಿಕ ಚಿತ್ರ
ಬಿಕ್ಲು ಶಿವ ಹತ್ಯೆ ಪ್ರಕರಣ: ಮಾಜಿ ಸಚಿವ ಬೈರತಿ ಬಸವರಾಜ್ ಸಂಬಂಧಿ ಸೇರಿ ಮತ್ತೆ ಮೂವರು ವಶಕ್ಕೆ
ಅನಿಲ್, ಅರುಣ್ ಹಾಗೂ ನವೀನ್ ಬಂಧಿತರು ಎನ್ನಲಾಗುತ್ತಿದೆ. ಭಾರತೀನಗರ ಪೊಲೀಸರು ಮೂವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.
ಇಡೀ ರಾಜಧಾನಿಯನ್ನೇ ಬೆಚ್ಚಿಬೀಳಿಸಿದ್ದ ರೌಡಿಶೀಟರ್ ಶಿವಕುಮಾರ್ ಅಲಿಯಾಸ್ ಬಿಕ್ಲು ಶಿವ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ಚುರುಕುಗೊಂಡಿದ್ದು, ಮಾಜಿ ಸಚಿವ ಹಾಗೂ ಶಾಸಕ ಬೈರತಿ ಬಸವರಾಜ್ ಅವರ ಸಂಬಂಧಿ ಎನ್ನಲಾದ ವ್ಯಕ್ತಿ ಸೇರಿದಂತೆ ಮತ್ತಿಬ್ಬರನ್ನು ಭಾರತಿ ನಗರ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಪೊಲೀಸರ ವಶದಲ್ಲಿರುವವರನ್ನು ಅನಿಲ್, ಅರುಣ್ ಹಾಗೂ ನವೀನ್ ಎಂದು ಗುರುತಿಸಲಾಗಿದೆ. ಇವರಲ್ಲಿ ಅನಿಲ್, ಪ್ರಕರಣದ ಐದನೇ ಆರೋಪಿಯಾಗಿರುವ ಕೆ.ಆರ್. ಪುರಂ ಶಾಸಕ ಬೈರತಿ ಬಸವರಾಜ್ ಅವರ ಸಂಬಂಧಿ ಎಂದು ಹೇಳಲಾಗುತ್ತಿದೆ. ಉಳಿದಿಬ್ಬರಾದ ಅರುಣ್ ಹಾಗೂ ನವೀನ್, ಪ್ರಕರಣದ ಪ್ರಮುಖ ಆರೋಪಿ ಜಗದೀಶ್‌ನ ಸಹಚರರಾಗಿದ್ದು, ಕೊಲೆಯ ನಂತರ ತಲೆಮರೆಸಿಕೊಂಡಿದ್ದರು. ಸದ್ಯ ಮೂವರನ್ನೂ ವಶಕ್ಕೆ ಪಡೆದಿರುವ ಪೊಲೀಸರು, ತೀವ್ರ ವಿಚಾರಣೆ ನಡೆಸುತ್ತಿದ್ದಾರೆ.
ಪ್ರಕರಣದ ಹಿನ್ನೆಲೆ
ಜುಲೈ 15ರ ರಾತ್ರಿ ಬೆಂಗಳೂರಿನ ಭಾರತಿ ನಗರದಲ್ಲಿ ಬಿಕ್ಲು ಶಿವನನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಲಾಗಿತ್ತು. ಜಮೀನು ವಿವಾದವೇ ಈ ಕೊಲೆಗೆ ಪ್ರಮುಖ ಕಾರಣ ಎನ್ನಲಾಗುತ್ತಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಈ ಹಿಂದೆಯೇ ಜಗದೀಶ್, ಕಿರಣ್, ವಿಮಲ್, ಅನಿಲ್ ಮತ್ತು ಫ್ರೆಡ್ರಿಕ್ ಎಂಬುವವರನ್ನು ಬಂಧಿಸಲಾಗಿತ್ತು. ಸದ್ಯ ಅವರೆಲ್ಲರೂ 10 ದಿನಗಳ ಪೊಲೀಸ್ ಕಸ್ಟಡಿಯಲ್ಲಿದ್ದಾರೆ.
ಪ್ರಕರಣದಲ್ಲಿ ಐದನೇ ಆರೋಪಿಯಾಗಿರುವ ಮಾಜಿ ಸಚಿವ ಬೈರತಿ ಬಸವರಾಜ್ ಅವರನ್ನು ಕಳೆದ ಶನಿವಾರ ಪೊಲೀಸರು ಸುಮಾರು ಮೂರು ಗಂಟೆಗಳ ಕಾಲ ವಿಚಾರಣೆ ನಡೆಸಿದ್ದರು. ಇದೀಗ ಮತ್ತೆ ಜುಲೈ 23ರ ಬುಧವಾರದಂದು ವಿಚಾರಣೆಗೆ ಹಾಜರಾಗುವಂತೆ ಸೂಚಿಸಲಾಗಿದೆ. ಹೊಸದಾಗಿ ಮೂವರನ್ನು ವಶಕ್ಕೆ ಪಡೆದಿರುವುದರಿಂದ, ಪ್ರಕರಣದ ತನಿಖೆ ಮತ್ತಷ್ಟು ಬಿಗಿಯಾಗಿದ್ದು, ಕೊಲೆಯ ಹಿಂದಿನ ಸಂಪೂರ್ಣ ಜಾಲವನ್ನು ಭೇದಿಸಲು ಪೊಲೀಸರು ಯತ್ನಿಸುತ್ತಿದ್ದಾರೆ.