
ಬಿಜೆಪಿ ಮುಖಂಡ, ಮಾಜಿ ಸಚಿವ ಬೈರತಿ ಬಸವರಾಜು ಪರಾರಿ: ಬಂಧನಕ್ಕೆ ಲುಕ್ ಔಟ್ ನೋಟಿಸ್ ಜಾರಿ
ಬಿಕ್ಲು ಶಿವ ಕೊಲೆ ಪ್ರಕರಣದಲ್ಲಿ ಮಾಜಿ ಸಚಿವ ಬೈರತಿ ಬಸವರಾಜುಗೆ ಹೈಕೋರ್ಟ್ ಹಾಗೂ ಸೆಷನ್ಸ್ ನ್ಯಾಯಾಲಯ ನಿರೀಕ್ಷಣಾ ಜಾಮೀನು ನಿರಾಕರಿಸಿದ ಹಿನ್ನಲೆಯಲ್ಲಿ, ಬಂಧನ ಸಾಧ್ಯತೆ ಹೆಚ್ಚಾಗಿದೆ. ಹಾಗಾಗಿ ಶುಕ್ರವಾರದಿಂದಲೇ ಶಾಸಕ ಬೈರತಿ ಬಸವರಾಜು ಅವರು ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡಿದ್ದಾರೆ.
ರೌಡಿಶೀಟರ್ ‘ಬಿಕ್ಲು’ ಶಿವ ಕೊಲೆ ಪ್ರಕರಣದಲ್ಲಿ ಬಿಜೆಪಿ ಶಾಸಕ ಬೈರತಿ ಬಸವರಾಜ್ ಅವರಿಗೆ ಬಂಧನ ಭೀತಿ ಎದುರಾಗಿದ್ದು, ಎರಡು ದಿನಗಳಿಂದ ತಲೆಮರೆಸಿಕೊಂಡಿದ್ದಾರೆ. ಶಾಸಕರ ಪತ್ತೆಗೆ ಸಿಐಡಿ ತಂಡವು ರಾಜ್ಯ ಮತ್ತು ಹೊರರಾಜ್ಯಗಳಲ್ಲಿ ವಿಸ್ತೃತ ಶೋಧ ನಡೆಸುತ್ತಿವೆ. ಈ ಮಧ್ಯೆ ವಿದೇಶಕ್ಕೆ ಪಲಾಯನ ಮಾಡುವ ಸಾಧ್ಯತೆ ಹಿನ್ನೆಲೆಯಲ್ಲಿ ಲುಕ್ ಔಟ್ ನೋಟಿಸ್ ಜಾರಿ ಮಾಡಲಾಗಿದೆ.
ಹೈಕೋರ್ಟ್ ಹಾಗೂ ಸೆಷನ್ಸ್ ನ್ಯಾಯಾಲಯದಲ್ಲಿ ನಿರೀಕ್ಷಣಾ ಜಾಮೀನು ನಿರಾಕರಿಸಿದ ಹಿನ್ನೆಲೆಯಲ್ಲಿ, ಬಂಧನ ಸಾಧ್ಯತೆ ಹೆಚ್ಚಾಗಿದೆ. ಹಾಗಾಗಿ ಶುಕ್ರವಾರದಿಂದಲೇ ಶಾಸಕ ಬೈರತಿ ಬಸವರಾಜು ಅವರು ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡಿದ್ದಾರೆ. ವಿದೇಶಕ್ಕೆ ಪರಾರಿಯಾಗುವ ಸಾಧ್ಯತೆ ಹಿನ್ನೆಲೆಯಲ್ಲಿ ದೇಶದ ಎಲ್ಲ ವಿಮಾನ ನಿಲ್ದಾಣಗಳಿಗೆ ‘ಲುಕ್‌ಔಟ್’ ನೋಟಿಸ್ ಜಾರಿ ಮಾಡಲಾಗಿದೆ ಎಂದು ತಿಳಿದು ಬಂದಿದೆ.
ಜುಲೈ 15ರಂದು ಹಲಸೂರಿನಲ್ಲಿ ನಡೆದ ಬಿಕ್ಲು ಶಿವನ ಹತ್ಯೆ ಪ್ರಕರಣದ ಪ್ರಮುಖ ಆರೋಪಿ ಜಗದೀಶ್ ಅಲಿಯಾಸ್ ಜಗ್ಗನೊಂದಿಗೆ ಶಾಸಕರು ನೇರ ಸಂಪರ್ಕ ಹೊಂದಿರುವುದು ತನಿಖೆಯಿಂದ ತಿಳಿದುಬಂದಿತ್ತು. ಕೊಲೆಗೂ ಮುನ್ನ ಹಲವು ಬಾರಿ ಇಬ್ಬರು ಪರಸ್ಪರ ಭೇಟಿಯಾಗಿದ್ದರು. ಕೊಲೆ ಪ್ರಕರಣಕ್ಕೆ ಸಂಬಂಧಿಸಿದ ಪ್ರಮುಖ ಸಾಕ್ಷ್ಯಾಧಾರಗಳು ದೊರೆತಿರುವುದರಿಂದ ಶಾಸಕರ ಬಂಧನ ಮತ್ತು ವಿಚಾರಣೆ ಅಗತ್ಯ ಎಂದು ಸಿಐಡಿ ಅಧಿಕಾರಿಗಳು ನ್ಯಾಯಾಲಯಕ್ಕೆ ಮನವರಿಕೆ ಮಾಡಿಕೊಟ್ಟಿದ್ದರಿಂದ ನಿರೀಕ್ಷಣಾ ಜಾಮೀನು ನಿರಾಕರಿಸಲಾಗಿತ್ತು.
ಜಗ್ಗ ಮತ್ತು ಬೈರತಿ ಬಸವರಾಜ್ ಮಧ್ಯೆ ಹಲವು ವರ್ಷಗಳಿಂದ ಆತ್ಮೀಯ ಸಂಪರ್ಕ ಇತ್ತು. ಇಬ್ಬರು ಜೊತೆಯಲ್ಲಿರುವ ಅನೇಕ ಫೋಟೋಗಳು ಮತ್ತು ದಾಖಲೆಗಳು ಸಿಐಡಿ ವಶದಲ್ಲಿವೆ. ಫೆಬ್ರವರಿ 2025ರಲ್ಲಿ ಈ ಇಬ್ಬರು ಸೇರಿ ಆರು ಮಂದಿ ಒಂದೇ ವಿಮಾನದಲ್ಲಿ ಪ್ರಯಾಣಿಸಿ ಪ್ರಯಾಗ್‌ರಾಜ್ ಕುಂಭಮೇಳದಲ್ಲಿ ಭಾಗವಹಿಸಿದ್ದರು. ಒಂದೇ ಪಿಎನ್‌ಆರ್ ಸಂಖ್ಯೆಯಲ್ಲಿ ಟಿಕೆಟ್ ಬುಕ್ ಆಗಿರುವ ದಾಖಲೆ ಕೂಡ ನ್ಯಾಯಾಲಯಕ್ಕೆ ಸಲ್ಲಿಸಲಾಗಿದೆ. ಜೊತೆಗೆ, ಕೊಲೆ ಆರೋಪಿಗಳಾದ ನರಸಿಂಹ, ಮುರುಗೇಶ್, ಅವಿನಾಶ್ ಮತ್ತು ಸುದರ್ಶನ್ ಎಂಬುವರು ಜಗ್ಗನ ಹುಟ್ಟುಹಬ್ಬದ ಸಂದರ್ಭದಲ್ಲಿ ಶಾಸಕರನ್ನು ಭೇಟಿಯಾಗಿದ್ದ ಮಾಹಿತಿ ಹೊರಬಿದ್ದಿದೆ.
ಹೈಕೋರ್ಟ್ ನಲ್ಲಿ ನಿರೀಕ್ಷಣಾ ಜಾಮೀನು ನಿರಾಕರಿಸಿದ ನ್ಯಾಯಪೀಠ ಅಧೀನ ನ್ಯಾಯಾಲಯದಲ್ಲಿ ಜಾಮೀನು ಕೋರಿ ಅರ್ಜಿ ಸಲ್ಲಿಸುವಂತೆ ಸೂಚಿಸಿದ ಹಿನ್ನೆಲೆಯಲ್ಲಿ ಬೈರತಿ ಬಸವರಾಜು ಅವರು ತಮ್ಮ ವಕೀಲರ ಮೂಲಕ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯಕ್ಕೆ ನಿರೀಕ್ಷಣಾ ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದು,ನಾಳೆ(ಡಿ.22) ವಿಚಾಣೆ ನಡೆಯಲಿದೆ.
ಬಿದರಹಳ್ಳಿ ಹೋಬಳಿ ಕಿತ್ತಗನೂರಿನ ಭೂ ವಿವಾದ ಹಿನ್ನೆಲೆಯಲ್ಲಿ ನಡೆದ ಬಿಕ್ಲು ಶಿವನ ಹತ್ಯೆ ಪ್ರಕರಣದಲ್ಲಿ ಜಗ್ಗ, ಮಲಯಾಳಿ ಅಜಿತ್ ಸೇರಿದಂತೆ 16 ಮಂದಿ ಬಂಧಿತರಾಗಿದ್ದು, ಶಾಸಕರನ್ನು 5ನೇ ಆರೋಪಿಯಾಗಿ ಪ್ರಕರಣಕ್ಕೆ ಸೇರಿಸಲಾಗಿದೆ.

