Biklu Shiva murder case: Blue Corner notice issued against Jaggan, who is abroad
x

ಕೊಲೆ ಆರೋಪಿ ಜಗ್ಗ

ಬಿಕ್ಲು ಶಿವ ಕೊಲೆ ಪ್ರಕರಣ | ಆರೋಪಿ ಜಗ್ಗ ವಿರುದ್ದ ಬ್ಲೂ ಕಾರ್ನರ್‌ ನೋಟಿಸ್‌; ನೋಟಿಸ್‌ ಮಹತ್ವವೇನು?

ಹತ್ಯೆ ಬಳಿಕ ಆರೋಪಿ ಜಗ್ಗ ಪೊಲೀಸರಿಗೆ ಸಿಗದೆ ತಪ್ಪಿಸಿಕೊಂಡಿದ್ದಾನೆ. ಮೊದಲು ಆತನ ಪತ್ತೆಗೆ ಲುಕ್ ಔಟ್ ನೋಟಿಸ್ ನೀಡಿದ್ದ ತನಿಖಾ ತಂಡವು, ಈಗ ಆರೋಪಿ ವಿರುದ್ಧ ಇಂಟರ್‌ಪೋಲ್ ಮೂಲಕ ಬ್ಲೂ ಕಾರ್ನ‌ರ್‌ ನೋಟಿಸ್‌ ಜಾರಿಗೊಳಿಸಿದೆ.


ಬೆಂಗಳೂರಿನಲ್ಲಿ ಇತ್ತೀಚೆಗೆ ನಡೆದಿದ್ದ ರೌಡಿ ಶಿವಪ್ರಕಾಶ್ ಅಲಿಯಾಸ್ ಬಿಕ್ಲು ಶಿವ ಕೊಲೆ ಪ್ರಕರಣದಲ್ಲಿ ವಿದೇಶದಲ್ಲಿ ತಲೆಮರೆಸಿಕೊಂಡಿರುವ ಪ್ರಮುಖ ಆರೋಪಿ ಜಗದೀಶ್ ಅಲಿಯಾಸ್‌ ಜಗ್ಗ ವಿರುದ್ಧ ಸಿಐಡಿ ಪೊಲೀಸರು ಬ್ಲೂ ಕಾರ್ನ‌ರ್‌ ನೋಟಿಸ್ ಜಾರಿಗೊಳಿಸಿದ್ದಾರೆ.

ಹತ್ಯೆ ಬಳಿಕ ಆರೋಪಿ ಜಗ್ಗ ಪೊಲೀಸರಿಗೆ ಸಿಗದೆ ತಪ್ಪಿಸಿಕೊಂಡಿದ್ದಾನೆ. ಮೊದಲು ಆತನ ಪತ್ತೆಗೆ ಲುಕ್ ಔಟ್ ನೋಟಿಸ್ ನೀಡಿದ್ದ ತನಿಖಾ ತಂಡವು, ಈಗ ಆರೋಪಿ ವಿರುದ್ಧ ಇಂಟರ್‌ಪೋಲ್ ಮೂಲಕ ಬ್ಲೂ ಕಾರ್ನ‌ರ್‌ ನೋಟಿಸ್‌ ಜಾರಿಗೊಳಿಸಿದೆ. ಹತ್ಯೆ ಬಳಿಕ ಬಂಧನ ಭೀತಿಯಿಂದ ಜಗ್ಗ ದುಬೈಗೆ ಪರಾರಿಯಾಗಿದ್ದಾನೆ ಎಂಬ ಸಂಶಯವಿದ್ದು, ಬ್ಲೂ ಕಾರ್ನ‌ರ್‌ ನೋಟಿಸ್‌ ಹಿನ್ನೆಲೆಯಲ್ಲಿ ಆರೋಪಿ ಇರುವಿಕೆ ಬಗ್ಗೆ ಸಿಐಡಿಗೆ ಮಾಹಿತಿ ಸಿಗಲಿದೆ ಎಂದು ಮೂಲಗಳು ತಿಳಿಸಿವೆ.

ಭೂ ವಿವಾದದ ಹಿನ್ನೆಲೆಯಲ್ಲಿ ಜು.7ರಂದು ಹಲಸೂರು ಕೆರೆ ಸಮೀಪ ರೌಡಿ ಬಿಕ್ಲು ಶಿವನ ಮೇಲೆ ಶಾಸಕ ಬೈರತಿ ಬಸವರಾಜು ಆಪ್ತ ಎನ್ನಲಾದ ಹೆಣ್ಣೂರಿನ ಜಗ್ಗನ ಸಹಚರರು ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಹತ್ಯೆ ಮಾಡಿದ್ದರು. ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ಶಾಸಕ ಬೈರತಿ ಬಸವರಾಜುಗೂ ನೋಟಿಸ್‌ ನೀಡಿ ವಿಚಾರಣೆ ನಡೆಸಿದ್ದರು.

ಏನಿದು ಇಂಟರ್‌ಪೋಲ್‌ ?

ಇಂಟರ್ ಪೋಲ್ ಅಂತಾರಾಷ್ಟ್ರೀಯ ಪೊಲೀಸ್ ಸಂಸ್ಥೆಯಾಗಿದೆ. ಇದು ವಿದೇಶಗಳಲ್ಲಿ ತಲೆಮರೆಸಿಕೊಳ್ಳುವ ಕ್ರಿಮಿನಲ್​ಗಳ‌ ಬಗ್ಗೆ ಮಾಹಿತಿ ಹಂಚಿಕೊಳ್ಳುವ ವೇದಿಕೆಯಾಗಿದೆ. ಬಹು ಬಗೆಯ ಕ್ರಿಮಿನಲ್​ಗಳ ಬಗ್ಗೆ ಅರಿಯಲು, ಬಂಧಿಸಲು ಅಥವಾ ಈ ಬಗ್ಗೆ ಎಚ್ಚರಿಕೆ ಕೊಡಲು ಇಂಟರ್‌ಪೋಲ್‌ ಮೂಲಕ ವಿವಿಧ ನೋಟಿಸ್ ನೀಡಲಾಗುತ್ತದೆ. ನಿರ್ದಿಷ್ಟ ಅಪರಾಧಗಳಿಗೆ ನಿಗದಿತ ಬಣ್ಣದ ನೋಟಿಸ್‌ಗಳನ್ನು ಜಾರಿ ಮಾಡಲಾಗುತ್ತದೆ. ಇಂತಹ ನೋಟಿಸ್​ಗಳಲ್ಲಿ ಕೆಂಪು, ಹಳದಿ, ನೀಲಿ, ಕಪ್ಪು, ಹಸಿರು, ಕಿತ್ತಳೆ ಹಾಗೂ ನೇರಳ ಕಾರ್ನರ್ ನೋಟಿಸ್​ಗಳಿವೆ.

ರೆಡ್ ಕಾರ್ನರ್ ನೊಟೀಸ್ ಎಂದರೇನು ?

ವಾಂಟೆಡ್ ಕ್ರಿಮಿನಲ್​ಗಳು ದೇಶದಿಂದ ಪಲಾಯನ ಮಾಡುವ ಸಾಧ್ಯತೆಗಳಿದ್ದರೆ ಅಥವಾ ದೇಶದಿಂದ ವಿದೇಶಕ್ಕೆ ಪರಾರಿಯಾದಾಗ ಆತನನ್ನ ಬಂಧಿಸುವ ಸಲುವಾಗಿ ಸದಸ್ಯ ರಾಷ್ಟ್ರಗಳಿಗೆ ಮಾಹಿತಿ ನೀಡಿ ಬಂಧಿಸಲು ನೀಡುವ ನೋಟಿಸ್ ಅನ್ನು​ ರೆಡ್ ಕಾರ್ನರ್ ನೊಟೀಸ್ ಎಂದು ಕರೆಯಲಾಗುತ್ತದೆ.

ಬ್ಲೂಕಾರ್ನರ್ ನೋಟಿಸ್​

ಗಂಭೀರ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಿ ದೇಶದಿಂದ ತಲೆಮರೆಸಿಕೊಂಡಿರುವ ಆರೋಪಿ ವಿಳಾಸ ಹಾಗೂ ಇರುವಿಕೆಯನ್ನ ಪತ್ತೆ ಹಚ್ಚಲು ನೀಡುವುದೇ ಬ್ಲೂಕಾರ್ನರ್ ನೊಟೀಸ್. ಸದ್ಯ ಕೊಲೆ ಆರೋಪಿ ಜಗ್ಗನಿಗೆ ಸಿಐಡಿ ಪೊಲೀಸರು ಬ್ಲೂಕಾರ್ನರ್‌ ನೊಟೀಸ್ ಹೊರಡಿಸಿದ್ದಾರೆ.

ಗ್ರೀನ್ ಕಾರ್ನರ್ ನೋಟಿಸ್

ವ್ಯಕ್ತಿಯ ಅಪರಾಧ ಚಟುವಟಿಕೆಗಳ ಬಗ್ಗೆ ಎಚ್ಚರಿಕೆ ನೀಡಲು ಹಾಗೂ ಕ್ರಿಮಿನಲ್ ಕೃತ್ಯಗಳಲ್ಲಿ ಭಾಗಿಯಾಗದಂತೆ ಎಚ್ಚರ ನೀಡಲು ಬಳಸುವುದೇ ಹಸಿರು ಬಣ್ಣದ ನೊಟೀಸ್.

ಯೆಲ್ಲೋ ನೋಟಿಸ್

ಕಾಣೆಯಾದ ವ್ಯಕ್ತಿಗಳನ್ನ ಪತ್ತೆ ಹಚ್ಚಲು ಈ ನೋಟಿಸ್​ ನೀಡಲಾಗುತ್ತದೆ. ಸಾಮಾನ್ಯವಾಗಿ ಅಪ್ರಾಪ್ತರು ಹಾಗೂ ತಮ್ಮನ್ನ ಗುರುತಿಸಿಕೊಳ್ಳಲು ಸಾಧ್ಯವಾಗದ ವ್ಯಕ್ತಿಗಳಿಗೆ ಹಳದಿ ನೋಟಿಸ್ ಬಳಸಲಾಗುತ್ತದೆ.

ಬ್ಲ್ಯಾಕ್ ‌ನೊಟೀಸ್

ಅಪರಿಚಿತ ವ್ಯಕ್ತಿಗಳು ಮೃತರಾದರೆ ಅವರ ಗುರುತು ಪತ್ತೆ ಹಚ್ಚಲು ಈ ನೊಟೀಸ್ ಜಾರಿಯಾಗುತ್ತದೆ.

ಆರೆಂಜ್ ನೋಟಿಸ್

ಸಾರ್ವಜನಿಕ ಸುರಕ್ಷತೆಗೆ ಧಕ್ಕೆ ಆದಾಗ ಅಥವಾ ಯಾವುದೇ ಘಟನೆ, ವ್ಯಕ್ತಿ ಅಥವಾ ವಸ್ತುವಿಂದ ಆಗುವ ಅನಾಹುತಗಳ ಬಗ್ಗೆ ಎಚ್ಚರಿಕೆ ನೀಡಲು ಆರೆಂಜ್ ನೊಟೀಸ್​ ನೀಡಲಾಗುತ್ತದೆ.

ಪರ್ಪಲ್ ನೊಟೀಸ್

ಯಾವುದೇ ಅಪರಾಧ ಕೃತ್ಯಗಳಲ್ಲಿ ತೊಡಗುವವರು ಬಳಸುವ ಕ್ರಿಮಿನಲ್ ವಿಧಾನಗಳು, ಅಪಾಯಕಾರಿ ಶಸ್ತ್ರಾಸ್ತ್ರಗಳ ಬಳಕೆ ಬಗ್ಗೆ ಮಾಹಿತಿ ನೀಡುವುದು ಅಥವಾ ಮಾಹಿತಿ ಕೋರಲು ಪರ್ಪಲ್ ನೊಟೀಸ್ ಜಾರಿ ಮಾಡಲಾಗುತ್ತದೆ.

ಮೇಲಿನ ನೋಟಿಸ್‌ಗಳನ್ನು ಜಾರಿ ಮಾಡುವ ಮೂಲಕ ವ್ಯಕ್ತಿಗಳನ್ನು ಸುಲಭವಾಗಿ ಬಂಧಿಸಬಹುದಾಗಿದೆ.

Read More
Next Story