ರಾಪಿಡೋ ಬೈಕ್‌ನಲ್ಲಿ ಮಹಿಳೆಗೆ ಲೈಂಗಿಕ ಕಿರುಕುಳ: ವಿಡಿಯೋ ಮಾಡಿ ದೂರು ನೀಡಿದ ಯುವತಿ, ಸವಾರ ಅರೆಸ್ಟ್
x

ಬಂಧಿತ ಆರೋಪಿ 

ರಾಪಿಡೋ ಬೈಕ್‌ನಲ್ಲಿ ಮಹಿಳೆಗೆ ಲೈಂಗಿಕ ಕಿರುಕುಳ: ವಿಡಿಯೋ ಮಾಡಿ ದೂರು ನೀಡಿದ ಯುವತಿ, ಸವಾರ ಅರೆಸ್ಟ್

ಘಟನೆ ಕುರಿತು ಮಹಿಳೆ ವಿಡಿಯೋ ರೆಕಾರ್ಡ್ ಮಾಡಿ ಬಳಿಕ ಪೊಲೀಸರಿಗೆ ದೂರು ನೀಡಿದ್ದಾರೆ. ಗುರುವಾರ ಸಂಜೆ 4 ಗಂಟೆ ಸುಮಾರಿಗೆ ಈ ಘಟನೆ ನಡೆದಿದ್ದು, ವಿಲ್ಸನ್ ಗಾರ್ಡನ್ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್‌ ದಾಖಲಾಗಿದೆ.


Click the Play button to hear this message in audio format

ಬೈಕ್ ಟ್ಯಾಕ್ಸಿ ಸೇವೆ ಒದಗಿಸುವ 'ರಾಪಿಡೋ'ದಲ್ಲಿ ಪ್ರಯಾಣಿಸುತ್ತಿದ್ದ ಮಹಿಳಾ ಪ್ರಯಾಣಿಕರೊಬ್ಬರಿಗೆ ಲೈಂಗಿಕ ಕಿರುಕುಳ ನೀಡಿ, ಅಸಭ್ಯವಾಗಿ ವರ್ತಿಸಿದ ಆರೋಪದ ಮೇಲೆ ಬೆಂಗಳೂರು ಪೊಲೀಸರು 28 ವರ್ಷದ ಸವಾರನೊಬ್ಬನನ್ನು ಬಂಧಿಸಿದ್ದಾರೆ. ಬೈಕ್ ಚಲಾಯಿಸುತ್ತಿರುವಾಗಲೇ ಆರೋಪಿ, ಮಹಿಳೆಯ ಕಾಲುಗಳನ್ನು ಹಿಡಿದು ಅನುಚಿತವಾಗಿ ಸ್ಪರ್ಶಿಸಲು ಯತ್ನಿಸಿದ್ದಾನೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

ಈ ಘಟನೆಯು ಗುರುವಾರ ಸಂಜೆ 4 ಗಂಟೆ ಸುಮಾರಿಗೆ ನಡೆದಿದ್ದು, ಸಂತ್ರಸ್ತ ಯುವತಿಯು ಚರ್ಚ್ ಸ್ಟ್ರೀಟ್‌ನಿಂದ ತಮ್ಮ ಪಿಜಿಗೆ ತೆರಳಲು ರಾಪಿಡೋ ಬೈಕ್ ಬುಕ್ ಮಾಡಿದ್ದರು. ಈ ವೇಳೆ, ಸವಾರ ಲೋಕೇಶ್ ಎಂಬಾತನು ಬೈಕ್ ಚಲಾಯಿಸುತ್ತಲೇ ಹಿಂದಿನ ಸೀಟಿನಲ್ಲಿ ಕುಳಿತಿದ್ದ ಮಹಿಳೆಯ ಕಾಲುಗಳನ್ನು ಹಿಡಿದು ಅನುಚಿತವಾಗಿ ಸ್ಪರ್ಶಿಸಲು ಯತ್ನಿಸಿದ್ದಾನೆ. "ನಾನು ಅವರಿಗೆ, 'ಭಯ್ಯಾ, ಕ್ಯಾ ಕರ್ ರಹೇ ಹೋ, ಮತ್ ಕರೋ?' (ಅಣ್ಣ, ಏನು ಮಾಡುತ್ತಿದ್ದೀರಿ, ಹೀಗೆ ಮಾಡಬೇಡಿ) ಎಂದು ಹೇಳಿದರೂ ಆತ ತನ್ನ ಕೃತ್ಯವನ್ನು ನಿಲ್ಲಿಸಲಿಲ್ಲ" ಎಂದು ಮಹಿಳೆ ತಮ್ಮ ಇನ್‌ಸ್ಟಾಗ್ರಾಮ್ ಪೋಸ್ಟ್‌ನಲ್ಲಿ ವಿವರಿಸಿದ್ದಾರೆ. ಪ್ರದೇಶದ ಬಗ್ಗೆ ಸರಿಯಾದ ಅರಿವಿಲ್ಲದ ಕಾರಣ, ಭಯದಿಂದ ತಕ್ಷಣ ಬೈಕ್ ನಿಲ್ಲಿಸಲು ಹೇಳಲು ಸಾಧ್ಯವಾಗಲಿಲ್ಲ ಎಂದು ಅವರು ತಮ್ಮ ಅಸಹಾಯಕತೆಯನ್ನು ತೋಡಿಕೊಂಡಿದ್ದಾರೆ.

ಬೆದರಿಕೆ ಮತ್ತು ದೂರು

ಮಹಿಳೆಯು ತಮ್ಮ ಪಿಜಿ ಬಳಿ ತಲುಪಿದಾಗ, ಅವರ ಸ್ಥಿತಿಯನ್ನು ಗಮನಿಸಿದ ಸ್ಥಳೀಯ ವ್ಯಕ್ತಿಯೊಬ್ಬರು ಸವಾರನನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಆಗ ಆರೋಪಿಯು ಕ್ಷಮೆಯಾಚಿಸಿದ್ದಾನೆ. ಆದರೆ, ಅಲ್ಲಿಂದ ಹೊರಡುವಾಗ ಮಹಿಳೆಯ ಕಡೆಗೆ ಬೆರಳು ತೋರಿಸಿ ಬೆದರಿಕೆ ಹಾಕಿದ್ದಾನೆ. ಇದು ತನಗೆ ಇನ್ನಷ್ಟು ಅಸುರಕ್ಷಿತ ಭಾವನೆ ಮೂಡಿಸಿತು ಎಂದು ಸಂತ್ರಸ್ತೆ ಹೇಳಿದ್ದಾರೆ. "ಯಾವುದೇ ಮಹಿಳೆ ಇಂತಹ ಪರಿಸ್ಥಿತಿಯನ್ನು ಎದುರಿಸಬಾರದು. ಇದು ನನಗೆ ಸಂಭವಿಸಿದ ಮೊದಲ ಘಟನೆಯಲ್ಲ, ಆದರೆ ಇಂದು ನಾನು ಎಷ್ಟು ಅಸುರಕ್ಷಿತಳೆಂದು ಭಾವಿಸಿದ್ದೇನೋ, ಅಷ್ಟು ಹಿಂದೆಂದೂ ಆಗಿರಲಿಲ್ಲ. ಅದಕ್ಕಾಗಿಯೇ ಮೌನವಾಗಿರಲು ಸಾಧ್ಯವಾಗಲಿಲ್ಲ," ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಸಂಪೂರ್ಣ ಘಟನೆಯನ್ನು ವಿಡಿಯೋ ರೆಕಾರ್ಡ್ ಮಾಡಿಕೊಂಡಿದ್ದ ಮಹಿಳೆಯು, ವಿಲ್ಸನ್ ಗಾರ್ಡನ್ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್‌ ದಾಖಲಿಸಿದ್ದಾರೆ.

ಆರೋಪಿಯ ಸಬೂಬು ಮತ್ತು ರಾಪಿಡೋ ಪ್ರತಿಕ್ರಿಯೆ

ಪೊಲೀಸರ ವಿಚಾರಣೆ ವೇಳೆ ಆರೋಪಿ ಲೋಕೇಶ್, ತನಗೆ ಬೆನ್ನು ನೋವಿತ್ತು ಹೀಗಾಗಿ ಉಜ್ಜಿಕೊಳ್ಳಲು ಯತ್ನಿಸುತ್ತಿದ್ದಾಗ ಆಕಸ್ಮಿಕವಾಗಿ ಮಹಿಳೆಯ ಕಾಲಿಗೆ ಕೈ ತಗುಲಿದೆ ಎಂದೂ ಸಬೂಬು ನೀಡಿದ್ದಾನೆ. ಆದರೆ, ಮಹಿಳೆ ಮಧ್ಯದಲ್ಲೇ ಆಕ್ಷೇಪ ವ್ಯಕ್ತಪಡಿಸಿದರೂ ಸವಾರ ತನ್ನ ಕೃತ್ಯವನ್ನು ಮುಂದುವರೆಸಿದ್ದರಿಂದ ಪೊಲೀಸರು ಆತನ ಹೇಳಿಕೆಯನ್ನು ಕಡೆಗಣಿಸಿದ್ದಾರೆ.

ಘಟನೆಯ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿರುವ ರಾಪಿಡೋ ಕಂಪನಿಯು, ಆರೋಪಿ ಸವಾರನ ಖಾತೆಯನ್ನು ತಕ್ಷಣವೇ ಅಮಾನತುಗೊಳಿಸಿದೆ. "ನಮ್ಮ ಪ್ಲಾಟ್‌ಫಾರ್ಮ್‌ನಲ್ಲಿ ಯಾರೂ ಅಸುರಕ್ಷಿತರೆಂದು ಭಾವಿಸಬಾರದು. ನಾವು ಈ ವಿಷಯದ ಬಗ್ಗೆ ಕೂಲಂಕಷವಾಗಿ ತನಿಖೆ ನಡೆಸುತ್ತೇವೆ ಮತ್ತು ತನಿಖೆಗೆ ಸಂಪೂರ್ಣ ಸಹಕಾರ ನೀಡುತ್ತೇವೆ," ಎಂದು ಕಂಪನಿ ಭರವಸೆ ನೀಡಿದೆ.

Read More
Next Story