ಬಿಹಾರ ಚುನಾವಣೆಗೂ, ಸ್ಫೋಟಕ್ಕೂ ತಳಕು ಹಾಕುವುದಿಲ್ಲ; ಎಂ.ಬಿ. ಪಾಟೀಲ್
x

ಎಂ.ಬಿ ಪಾಟೀಲ್‌ 

ಬಿಹಾರ ಚುನಾವಣೆಗೂ, ಸ್ಫೋಟಕ್ಕೂ ತಳಕು ಹಾಕುವುದಿಲ್ಲ; ಎಂ.ಬಿ. ಪಾಟೀಲ್

ಒಂದು ವೇಳೆ ಇದು ಉಗ್ರರ ಹೇಯ ಕೃತ್ಯ ಎಂದು ಸಾಬೀತಾದರೆ, ಅದನ್ನು ಎಲ್ಲರೂ ಒಗ್ಗಟ್ಟಿನಿಂದ ಖಂಡಿಸುವುದಾಗಿ ತಿಳಿಸಿದ್ದಾರೆ. ಈ ಸಂದರ್ಭದಲ್ಲಿ ದೇಶದ ಪರವಾಗಿ ಮತ್ತು ಜನರ ಪರವಾಗಿ ನಾವೆಲ್ಲರೂ ಒಗ್ಗಟ್ಟಾಗಿದ್ದೇವೆ ಎಂದು ಹೇಳಿದ್ದಾರೆ.


Click the Play button to hear this message in audio format

ದೆಹಲಿಯಲ್ಲಿ ಸಂಭವಿಸಿದ ಕಾರ್ ಸ್ಫೋಟದ ಕುರಿತು ಪ್ರತಿಕ್ರಿಯೆ ನೀಡಿರುವ ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ್, ಈ ಘಟನೆಗೂ ಮತ್ತು ಬಿಹಾರ ಚುನಾವಣೆಗೂ ತಳುಕು ಹಾಕಬಾರದು ಎಂದು ಸ್ಪಷ್ಟಪಡಿಸಿದ್ದಾರೆ. ಇದು ಉಗ್ರರ ಕೃತ್ಯವೇ ಅಥವಾ ರಾಸಾಯನಿಕದಿಂದಾದ ಸ್ಫೋಟವೇ ಎಂಬುದು ತನಿಖೆಯಿಂದ ಮೊದಲು ದೃಢಪಡಬೇಕಿದೆ ಎಂದು ಅವರು ಹೇಳಿದ್ದಾರೆ.

ಭದ್ರತಾ ವೈಫಲ್ಯದ ಬಗ್ಗೆ ಕೇಂದ್ರ ಗಮನಹರಿಸಲಿ

"ಒಂದು ವೇಳೆ ಇದು ಉಗ್ರರ ಹೇಯ ಕೃತ್ಯ ಎಂದು ಸಾಬೀತಾದರೆ, ನಾವೆಲ್ಲರೂ ಒಗ್ಗಟ್ಟಾಗಿ ಖಂಡಿಸುತ್ತೇವೆ ಮತ್ತು ದೇಶದ ಹಾಗೂ ಜನರ ಪರವಾಗಿ ನಿಲ್ಲುತ್ತೇವೆ," ಎಂದು ಪಾಟೀಲ್ ಭರವಸೆ ನೀಡಿದರು. ಕೆಂಪುಕೋಟೆಯಂತಹ ಸೂಕ್ಷ್ಮ ಪ್ರದೇಶದಲ್ಲಿ ಈ ಘಟನೆ ನಡೆದಿರುವುದರಿಂದ, ಇದು ಸ್ಪಷ್ಟವಾಗಿ ಭದ್ರತಾ ವೈಫಲ್ಯವನ್ನು ಸೂಚಿಸುತ್ತದೆ ಎಂದ ಅವರು, "ಬೇರೆ ಬೇರೆ ಕಡೆ ರಾಸಾಯನಿಕಗಳನ್ನು ವಶಪಡಿಸಿಕೊಳ್ಳಲಾಗುತ್ತಿದೆ ಎಂಬ ವರದಿಗಳಿವೆ. ಇದು ಕೂಡ ಭದ್ರತಾ ಲೋಪವನ್ನು ಎತ್ತಿ ತೋರಿಸುತ್ತದೆ," ಎಂದು ಹೇಳಿದರು.

ಹಿಂದಿನ ಘಟನೆಗಳಿಂದ ಪಾಠ ಕಲಿತಿಲ್ಲ

"ಈ ಹಿಂದೆ ದೇಶದಲ್ಲಿ ದಾಳಿಗಳು ನಡೆದಾಗ, ಆರ್‌ಡಿಎಕ್ಸ್ ದೇಶದೊಳಗೆ ಹೇಗೆ ಬಂತು ಎಂಬುದೇ ಪತ್ತೆಯಾಗಲಿಲ್ಲ. ಈಗ ಮತ್ತೆ ಅಮಾಯಕರು ಪ್ರಾಣ ಕಳೆದುಕೊಂಡಿದ್ದಾರೆ. ಕೇಂದ್ರ ಸರ್ಕಾರವು ಹಿಂದಿನ ಘಟನೆಗಳಿಂದ ಪಾಠ ಕಲಿತಂತೆ ಕಾಣಿಸುತ್ತಿಲ್ಲ," ಎಂದು ಅವರು ಬೇಸರ ವ್ಯಕ್ತಪಡಿಸಿದರು. ಕೇಂದ್ರ ಸರ್ಕಾರವು ಕೈಗೊಳ್ಳುವ ಯಾವುದೇ ಕಠಿಣ ಕ್ರಮಕ್ಕೆ ತಮ್ಮ ಪಕ್ಷ ಸಂಪೂರ್ಣ ಬೆಂಬಲ ನೀಡುತ್ತದೆ ಎಂದು ಅವರು ಸ್ಪಷ್ಟಪಡಿಸಿದರು.

ಉಗ್ರರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮಕ್ಕೆ ಆಗ್ರಹ

ಇದು ಉಗ್ರರ ಕೃತ್ಯ ಎಂದು ದೃಢಪಟ್ಟರೆ, ಉಗ್ರರ ವಿರುದ್ಧ ಮತ್ತು ಉಗ್ರ ಸಂಘಟನೆಗಳನ್ನು ಮಟ್ಟ ಹಾಕಲು ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಬೇಕು ಎಂದು ಎಂ.ಬಿ. ಪಾಟೀಲ್ ಆಗ್ರಹಿಸಿದರು. "ಈ ಘಟನೆಯ ಬಗ್ಗೆ ಸಂಪೂರ್ಣ ತನಿಖೆಯಾಗಬೇಕು. ಉಗ್ರರ ಎಲ್ಲಾ ಸಂಪರ್ಕಗಳನ್ನು ಪತ್ತೆ ಮಾಡಿ, ಕೃತ್ಯ ಎಸಗಿದವರು ಯಾವುದೇ ದೇಶದಲ್ಲಿದ್ದರೂ ಅವರನ್ನು ಪತ್ತೆಹಚ್ಚಿ ಶಿಕ್ಷಿಸಬೇಕು," ಎಂದು ಅವರು ಒತ್ತಾಯಿಸಿದರು.

Read More
Next Story