
ಬಿಗ್ ಬಾಸ್ ಶೋಗೆ ಸಂಕಷ್ಟ: ಅನುಮತಿ ಇಲ್ಲದ ಆರೋಪ, ಜಾಲಿವುಡ್ ಪಾರ್ಕ್‌ಗೆ ಬೀಗ ಜಡಿದ ಅಧಿಕಾರಿಗಳು
ರಾಮನಗರ ತಹಶೀಲ್ದಾರ್ ತೇಜಸ್ವಿನಿ ನೇತೃತ್ವದ ಅಧಿಕಾರಿಗಳ ತಂಡ, ಜಾಲಿವುಡ್ ಪಾರ್ಕ್‌ಗೆ ಭೇಟಿ ನೀಡಿ ಈ ದಿಢೀರ್ ಕ್ರಮ ಕೈಗೊಂಡಿದೆ. ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯು (KSPCB) ಪಾರ್ಕ್‌ಗೆ ನೋಟಿಸ್ ನೀಡಿದ ಬೆನ್ನಲ್ಲೇ ಈ ಬೆಳವಣಿಗೆ ನಡೆದಿದೆ.
ಜನಪ್ರಿಯ ರಿಯಾಲಿಟಿ ಶೋ 'ಬಿಗ್ ಬಾಸ್' ಕನ್ನಡ ಸೀಸನ್ 12ಕ್ಕೆ ಆರಂಭದಲ್ಲೇ ದೊಡ್ಡ ವಿಘ್ನ ಎದುರಾಗಿದೆ. ಶೋ ನಡೆಯುತ್ತಿರುವ ಬಿಡದಿ ಕೈಗಾರಿಕಾ ಪ್ರದೇಶದಲ್ಲಿರುವ 'ಜಾಲಿವುಡ್ ಸ್ಟುಡಿಯೋಸ್ ಮತ್ತು ಅಡ್ವೆಂಚರ್ಸ್ ಪಾರ್ಕ್'ಗೆ ನಿಯಮ ಉಲ್ಲಂಘನೆ ಆರೋಪದ ಮೇಲೆ ತಾಲ್ಲೂಕು ಆಡಳಿತ ಮಂಗಳವಾರ ಬೀಗ ಹಾಕಿದೆ. ಇದರಿಂದಾಗಿ ಬಿಗ್ ಬಾಸ್ ಶೋನ ಭವಿಷ್ಯ ಅತಂತ್ರವಾಗಿದೆ.
ರಾಮನಗರ ತಹಶೀಲ್ದಾರ್ ತೇಜಸ್ವಿನಿ ನೇತೃತ್ವದ ಅಧಿಕಾರಿಗಳ ತಂಡ, ಜಾಲಿವುಡ್ ಪಾರ್ಕ್‌ಗೆ ಭೇಟಿ ನೀಡಿ ಈ ದಿಢೀರ್ ಕ್ರಮ ಕೈಗೊಂಡಿದೆ. ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯು (KSPCB) ಪಾರ್ಕ್‌ಗೆ ನೋಟಿಸ್ ನೀಡಿದ ಬೆನ್ನಲ್ಲೇ ಈ ಬೆಳವಣಿಗೆ ನಡೆದಿದೆ. ಪಾರ್ಕ್ ಅನ್ನು ತಕ್ಷಣವೇ ಮುಚ್ಚುವಂತೆ ಮತ್ತು ಅಲ್ಲಿ ನಡೆಯುತ್ತಿರುವ ಬಿಗ್ ಬಾಸ್ ಶೋ ಸೇರಿದಂತೆ ಎಲ್ಲಾ ಚಟುವಟಿಕೆಗಳನ್ನು ಸ್ಥಗಿತಗೊಳಿಸುವಂತೆ ಅಧಿಕಾರಿಗಳು ಸೂಚನೆ ನೀಡಿದ್ದಾರೆ.
ಮಾಲಿನ್ಯ ನಿಯಂತ್ರಣ ಅನುಮತಿ ಇಲ್ಲ
ಜಾಲಿವುಡ್ ಪಾರ್ಕ್ ವಿರುದ್ಧ ಹಲವು ಗಂಭೀರ ಆರೋಪಗಳು ಕೇಳಿಬಂದಿವೆ. ಪಾರ್ಕ್ ಅನ್ನು ಆರಂಭಿಸಲು ಮಾಲಿನ್ಯ ನಿಯಂತ್ರಣ ಮಂಡಳಿಯಿಂದ ಅಗತ್ಯವಿರುವ ಅನುಮತಿಯನ್ನು ಪಡೆದಿಲ್ಲ, ಪಾರ್ಕ್‌ನಿಂದ ಉತ್ಪತ್ತಿಯಾಗುವ ತ್ಯಾಜ್ಯವನ್ನು ಅವೈಜ್ಞಾನಿಕವಾಗಿ ವಿಲೇವಾರಿ ಮಾಡಲಾಗುತ್ತಿದೆ, ಮತ್ತು ತ್ಯಾಜ್ಯ ನೀರನ್ನು ನೇರವಾಗಿ ಪರಿಸರಕ್ಕೆ ಬಿಡುವ ಮೂಲಕ ಜಲ ಮಾಲಿನ್ಯ ಮತ್ತು ಪರಿಸರ ಮಾಲಿನ್ಯ ಕಾಯ್ದೆಗಳನ್ನು ಉಲ್ಲಂಘಿಸಲಾಗಿದೆ ಎಂಬ ಆರೋಪಗಳು ಕೇಳಿಬಂದಿವೆ. ಅಲ್ಲದೆ, ಸ್ಥಳೀಯ ಪ್ರಾಧಿಕಾರವಾದ ಬೆಂಗಳೂರು ಮಹಾನಗರ ಪ್ರದೇಶಾಭಿವೃದ್ಧಿ ಪ್ರಾಧಿಕಾರದಿಂದ (BMRDA) ಕಟ್ಟಡದ ನಕ್ಷೆ ಅನುಮೋದನೆ ಪಡೆದಿಲ್ಲ ಎಂಬ ಆರೋಪವೂ ಇದೆ.
ಈ ಆರೋಪಗಳ ಹಿನ್ನೆಲೆಯಲ್ಲಿ, ಕರ್ನಾಟಕ ಮಾಲಿನ್ಯ ನಿಯಂತ್ರಣ ಕಾಯ್ದೆ 1981ರ ಸೆಕ್ಷನ್ 31 ಮತ್ತು 1983ರ ನಿಯಮ 20(ಎ) ಅಡಿಯಲ್ಲಿ ಪಾರ್ಕ್ ಅನ್ನು ಮುಚ್ಚಲು ಮಂಡಳಿಯು ರಾಮನಗರ ಜಿಲ್ಲಾಧಿಕಾರಿಗೆ ಸೂಚನೆ ನೀಡಿತ್ತು. ಅಲ್ಲದೆ, ಪಾರ್ಕ್‌ಗೆ ವಿದ್ಯುತ್ ಸಂಪರ್ಕವನ್ನು ಕಡಿತಗೊಳಿಸುವಂತೆ ಬೆಸ್ಕಾಂಗೆ ಕೂಡ ನಿರ್ದೇಶನ ನೀಡಲಾಗಿತ್ತು.
ಈ ಅನಿರೀಕ್ಷಿತ ಬೆಳವಣಿಗೆಯಿಂದಾಗಿ, ಬಿಗ್ ಬಾಸ್ ಶೋನ ಆಯೋಜಕರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಸದ್ಯಕ್ಕೆ ಶೋನ ಚಿತ್ರೀಕರಣ ಸ್ಥಗಿತಗೊಂಡಿದ್ದು, ಮುಂದಿನ ನಡೆ ಏನು ಎಂಬ ಬಗ್ಗೆ ತೀವ್ರ ಕುತೂಹಲ ಮೂಡಿದೆ.