
ನಟ ಸುದೀಪ್ ಹೇಳಿಕೆಗೆ ಪಕ್ಷಿ ಪ್ರಿಯರ ಆಕ್ಷೇಪ: ಅರಣ್ಯ ಇಲಾಖೆ ನೋಟಿಸ್
ಬಿಗ್‌ಬಾಸ್ ಕನ್ನಡ ಸೀಸನ್ 12ರ ಇತ್ತೀಚಿನ ಸಂಚಿಕೆಯಲ್ಲಿ ಕಿಚ್ಚ ಸುದೀಪ್ ರಣಹದ್ದುಗಳ ಕುರಿತು ನೀಡಿದ ಹೇಳಿಕೆ ಬಗ್ಗೆ ಸ್ಪಷ್ಟನೆ ಕೋರಿ ಅರಣ್ಯ ಇಲಾಖೆಯು ಕಾರ್ಯಕ್ರಮದ ನಿರ್ಮಾಪಕರಿಗೆ ನೋಟಿಸ್ ಜಾರಿ ಮಾಡಿದೆ.
ಬಿಗ್‌ಬಾಸ್ ಕನ್ನಡ ಸೀಸನ್ 12ರ ಇತ್ತೀಚಿನ ಸಂಚಿಕೆಯಲ್ಲಿ ನಿರೂಪಕ ಕಿಚ್ಚ ಸುದೀಪ್ ಅವರು ರಣಹದ್ದುಗಳ ಕುರಿತು ನೀಡಿದ ಹೇಳಿಕೆ ಕುರಿತು ಸ್ಪಷ್ಟನೆ ಕೋರಿ ಅರಣ್ಯ ಇಲಾಖೆ ಅಧಿಕಾರಿಗಳು ಕಾರ್ಯಕ್ರಮದ ನಿರ್ಮಾಪಕರಿಗೆ ನೋಟಿಸ್ ಜಾರಿ ಮಾಡಿದ್ದಾರೆ.
ಸ್ಪರ್ಧಿಗಳೊಂದಿಗೆ ಮಾತನಾಡುವಾಗ ಸುದೀಪ್ ಅವರು, ರಣಹದ್ದುಗಳು ಜೀವಂತ ಪ್ರಾಣಿಗಳನ್ನು ಬೇಟೆಯಾಡುತ್ತವೆ ಎಂಬ ಅರ್ಥದಲ್ಲಿ ಮಾತನಾಡಿದ್ದರು. ಈ ಹೇಳಿಕೆಗೆ ವನ್ಯಜೀವಿ ಸಂರಕ್ಷಣಾ ಸಂಸ್ಥೆಗಳು ಮತ್ತು ತಜ್ಞರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದರು. ಈ ಹಿನ್ನೆಲೆಯಲ್ಲಿ ವನ್ಯಜೀವಿ ಸಂರಕ್ಷಣಾ ಕಾಯ್ದೆ ಮತ್ತು ನೈಜ ಮಾಹಿತಿ ಉಲ್ಲಂಘನೆ ಆರೋಪದ ಮೇಲೆ ಸ್ಪಷ್ಟನೆ ಕೋರಲಾಗಿದೆ.
ರಣಹದ್ದುಗಳು ಬೇಟೆಯಾಡುವ ಪಕ್ಷಿಗಳಲ್ಲ, ಅವು ಸ್ಕ್ಯಾವೆಂಜರ್‌ಗಳು (ಸತ್ತ ಪ್ರಾಣಿಗಳ ಮಾಂಸ ತಿನ್ನುವವು). ಅವು ಪರಿಸರದಲ್ಲಿ ಸತ್ತ ಪ್ರಾಣಿಗಳ ದೇಹವನ್ನು ತಿಂದು ರೋಗ ಹರಡದಂತೆ ತಡೆಯುವ ಮೂಲಕ ಪರಿಸರದ ಸಮತೋಲನ ಕಾಯ್ದುಕೊಳ್ಳುತ್ತವೆ. ಆದರೆ, ಸುದೀಪ್ ಅವರು ಇವು ಜೀವಂತ ಪ್ರಾಣಿಗಳನ್ನು ಬೇಟೆಯಾಡುತ್ತವೆ ಎಂದು ಹೇಳುವ ಮೂಲಕ ತಪ್ಪು ಮಾಹಿತಿ ನೀಡಿದ್ದಾರೆ ಎಂದು ವನ್ಯಜೀವಿ ಪ್ರೇಮಿಗಳು ದೂರಿದ್ದರು. ಈ ದೂರಿನ ಮೇರೆಗೆ ಅರಣ್ಯ ಇಲಾಖೆಯು ಹೇಳಿಕೆಯು ಕುರಿತು ವಿವರಣೆ ನೀಡುವಂತೆ ತಿಳಿಸಿದೆ.
ರಣಹದ್ದುಗಳು ಈಗಾಗಲೇ ಅಳಿವಿನಂಚಿನಲ್ಲಿರುವ ಪಕ್ಷಿ ಪ್ರಭೇದಗಳಾಗಿವೆ. ಇಂತಹ ಜನಪ್ರಿಯ ಕಾರ್ಯಕ್ರಮಗಳಲ್ಲಿ ತಪ್ಪು ಮಾಹಿತಿ ನೀಡುವುದರಿಂದ ಜನರಲ್ಲಿ ಈ ಪಕ್ಷಿಗಳ ಬಗ್ಗೆ ಕೆಟ್ಟ ಭಾವನೆ ಮೂಡುತ್ತದೆ ಮತ್ತು ಸಂರಕ್ಷಣಾ ಕಾರ್ಯಗಳಿಗೆ ಹಿನ್ನಡೆಯಾಗುತ್ತದೆ ಎಂದು ಇಲಾಖೆಯು ಅಭಿಪ್ರಾಯಪಟ್ಟಿದೆ.
ಟಿವಿಗಳಂತಹ ಮಾಧ್ಯಮಗಳಲ್ಲಿ ವನ್ಯಜೀವಿಗಳ ಬಗ್ಗೆ ಮಾತನಾಡುವಾಗ ಅತ್ಯಂತ ಎಚ್ಚರಿಕೆ ವಹಿಸಬೇಕು. ಮುಂದಿನ ಸಂಚಿಕೆಗಳಲ್ಲಿ ಈ ತಪ್ಪನ್ನು ಸರಿಪಡಿಸಿ, ರಣಹದ್ದುಗಳ ಮಹತ್ವದ ಬಗ್ಗೆ ವೀಕ್ಷಕರಿಗೆ ಸರಿಯಾದ ಮಾಹಿತಿ ನೀಡುವಂತೆ ಅರಣ್ಯ ಇಲಾಖೆ ಅಧಿಕಾರಿಗಳು ನಿರ್ಮಾಪಕರಿಗೆ ಸೂಚಿಸಿದ್ದಾರೆ. ಸಾರ್ವಜನಿಕರ ಮೇಲೆ ದೊಡ್ಡ ಪ್ರಭಾವ ಬೀರುವ ಸೆಲೆಬ್ರಿಟಿಗಳು ಮತ್ತು ಟಿವಿ ಶೋಗಳು ಪರಿಸರ ಮತ್ತು ಪ್ರಾಣಿಗಳ ಬಗ್ಗೆ ಸತ್ಯಾಸತ್ಯತೆ ಅರಿತು ಮಾತನಾಡಬೇಕು ಎಂಬ ಚರ್ಚೆ ಈಗ ಸಾಮಾಜಿಕ ಜಾಲತಾಣಗಳಲ್ಲಿ ಶುರುವಾಗಿದೆ.
ನೋಟಿಸ್‌ಗೆ ಸಂಬಂಧಿಸಿದಂತೆ ಬಿಗ್ ಬಾಸ್ ತಂಡವಾಗಲಿ ಅಥವಾ ನಟ ಕಿಚ್ಚ ಸುದೀಪ್ ಅವರಾಗಲಿ ಈವರೆಗೆ ಯಾವುದೇ ಅಧಿಕೃತ ಪ್ರತಿಕ್ರಿಯೆ ನೀಡಿಲ್ಲ. ಫಿನಾಲೆ ಸಂಭ್ರಮದಲ್ಲಿದ್ದ ಬಿಗ್ ಬಾಸ್ ಮನೆಯಲ್ಲಿ ಈ ಅನಿರೀಕ್ಷಿತ ವಿವಾದ ಈಗ ಹೊಸ ಸಂಚಲನ ಮೂಡಿಸಿದೆ.

