ರೇವಣ್ಣ ಪ್ರಕರಣಕ್ಕೆ ಸ್ಪೋಟಕ ತಿರುವು | ಅಪಹರಣ ನಡದೇ ಇಲ್ಲ ಎಂದ ಸಂತ್ರಸ್ತೆ!
x

ರೇವಣ್ಣ ಪ್ರಕರಣಕ್ಕೆ ಸ್ಪೋಟಕ ತಿರುವು | ಅಪಹರಣ ನಡದೇ ಇಲ್ಲ ಎಂದ ಸಂತ್ರಸ್ತೆ!


ಪ್ರಜ್ವಲ್‌ ರೇವಣ್ಣ ಲೈಂಗಿಕ ಹಗರಣದಲ್ಲಿ ಸಂತ್ರಸ್ತೆಯಾಗಿರುವ ಮಹಿಳೆಯ ಅಪಹರಣ ಪ್ರಕರಣಕ್ಕೆ ಮಹತ್ವದ ತಿರುವು ಸಿಕ್ಕಿದೆ. ಎಸ್‌ಐಟಿ ತಂಡದ ಸುಪರ್ಧಿಯಲ್ಲಿರುವಾಗ ಸಂತ್ರಸ್ತ ಮಹಿಳೆಯು ಸ್ಪಷ್ಟೀಕರಣ ನೀಡುತ್ತಿರುವ ವಿಡಿಯೋವೊಂದು ವೈರಲ್ ಆಗಿದೆ.

ಸದ್ಯ ವೈರಲ್‌ ಆಗುತ್ತಿರುವ ವಿಡಿಯೋದಲ್ಲಿ ಸಂತ್ರಸ್ತ ಮಹಿಳೆಯು, ʻʻಎಚ್.ಡಿ.ರೇವಣ್ಣ, ಭವಾನಿ ರೇವಣ್ಣ, ಪ್ರಜ್ವಲ್ ರೇವಣ್ಣ ಅಥವಾ ಸತೀಶ್ ಬಾಬು ಅವರಿಂದ ಏನೂ ತೊಂದರೆಯಾಗಿಲ್ಲ. ತಾನು ಅಪಹರಿಸಲ್ಪಟ್ಟಿಲ್ಲʼʼ ಎಂದು ಹೇಳಿರುವುದು ಪ್ರಕರಣಕ್ಕೆ ತಿರುವು ನೀಡಿದೆ.

ಪ್ರಜ್ವಲ್‌ ರೇವಣ್ಣ ಪ್ರಕರಣದ ಬೆನ್ನಲ್ಲೇ ಎಚ್.ಡಿ.ರೇವಣ್ಣ ಹಾಗೂ ಸತೀಶ್ ಬಾಬು ಅವರು ತನ್ನ ತಾಯಿಯನ್ನು ಅಪಹರಣ ಮಾಡಿದ್ದಾರೆ ಎಂದು ಸಂತ್ರಸ್ತೆಯ ಪುತ್ರ ಕೆ.ಆರ್.ನಗರ ಠಾಣೆಯಲ್ಲಿ ದೂರು ನೀಡಿದ್ದರು. ಆ ದೂರಿನನ್ವಯ ಇಬ್ಬರನ್ನೂ ಬಂಧಿಸಲಾಗಿತ್ತು. ಆದರೆ ಇದೀಗ ಸಂತ್ರಸ್ತೆಯ ಹೇಳಿಕೆಯ ವಿಡಿಯೋ ವೈರಲ್ ಆಗಿದ್ದು ಆರೋಪಕ್ಕೆ ವ್ಯತಿರಿಕ್ತವಾಗಿ ಸಂತ್ರಸ್ತೆ ಹೇಳಿಕೆ ನೀಡಿದ್ದಾರೆ. ಇದು ಪ್ರಕರಣಕ್ಕೆ ಮೇಜರ್‌ ಟ್ವಿಸ್ಟ್‌ ನೀಡಲಿದೆ ಎನ್ನಲಾಗುತ್ತಿದೆ.

ಸಂತ್ರಸ್ತ ಮಹಿಳೆ ವಿಡಿಯೋದಲ್ಲಿ ಹೇಳಿದ್ದೇನು?

ʻʻವಿಡಿಯೋಗಳು ವೈರಲ್ ಆದ ಬಳಿಕ ಬೇಸತ್ತು, ಮನಸ್ಸಿಗೆ ನೆಮ್ಮದಿಯಿರದೆ ಸಂಬಂಧಿಕರ ಮನೆಯಲ್ಲಿ ನಾಲ್ಕು ದಿನ ಇದ್ದು ಬರೋಣ ಎಂದು ತೆರಳಿದ್ದೆ. ಆದರೆ, ಈ ರೀತಿಯ ಆರೋಪಗಳು ಬರುತ್ತಿರುವುದನ್ನು ಟಿವಿಯಲ್ಲಿ ನೋಡಿದ ಬಳಿಕ ಈಗ ಮಾತನಾಡುತ್ತಿದ್ದೇನೆ. ನನಗೆ ಎಚ್.ಡಿ.ರೇವಣ್ಣ, ಭವಾನಿ ರೇವಣ್ಣ, ಪ್ರಜ್ವಲ್ ರೇವಣ್ಣ ಅಥವಾ ಸತೀಶ್ ಬಾಬು ಅವರಿಂದ ಏನೂ ತೊಂದರೆಯಾಗಿಲ್ಲ. ನನ್ನನ್ನು ಚೆನ್ನಾಗಿಯೇ ನೋಡಿಕೊಂಡು ಕಳುಹಿಸಿದ್ದಾರೆ. ಯಾರೂ ಕೂಡ ನನ್ನನ್ನು ಅಪಹರಿಸಿಲ್ಲ, ವಿಡಿಯೋಗಳಿಗೂ ಇದಕ್ಕೂ ಸಂಬಂಧವಿಲ್ಲʼʼ ಎಂದಿದ್ದಾರೆ.

ʻʻನಾನು ಸಂಬಂಧಿಕರ ಮನೆಗೆ ಬಂದಿದ್ದೇನೆ, ನನ್ನ ಮಗನೂ ಸಹ ತಲೆಕಡಿಸಿಕೊಳ್ಳುವ ಅಗತ್ಯವಿಲ್ಲ. ನಾನು ಸುರಕ್ಷಿತವಾಗಿದ್ದು, ಇನ್ನೆರಡು ದಿನಗಳಲ್ಲಿ ಮನೆಗೆ ಬರುತ್ತೇನೆ. ಪೊಲೀಸ್, ತನಿಖೆ ಅಂತ ಯಾರು ಮನೆ ಹತ್ರ ಹೋಗಬೇಡಿ, ಮಕ್ಕಳು ಗಾಬರಿಯಾಗುತ್ತಾರೆ. ನಾವು ಕೂಲಿ‌ ಮಾಡಿಕೊಂಡು ಜೀವನ ಸಾಗಿಸುವವರು. ನೀವು ಪದೇ ಪದೇ ಮನೆ ಬಳಿ ಹೋದರೆ ನಮಗೆ ತೊಂದರೆಯಾಗಲಿದೆ. ನನಗೆ ತೊಂದರೆಯಾದರೆ ನಾನೇ ನಿಮ್ಮ ನೆರವು ಕೇಳುತ್ತೇನೆ. ನನಗಾಗಲಿ, ಕುಟುಂಬದವರಿಗೆ ಆಗಲಿ, ಗಂಡನಿಗಾಗಲಿ ಏನಾದರೂ ತೊಂದರೆಯಾರೆ ನೀವೆ ಜವಾಬ್ದಾರಿಯಾಗಬೇಕಾಗುತ್ತದೆ. ನನ್ನ ಮಗ ಗೊತ್ತಿಲ್ಲದೇ ಹೀಗೆ ಮಾಡಿಬಿಟ್ಟಿದ್ದಾನೆ, ನಾನೇ ಹೋಗಿದ್ದೇನೆʼʼ ಎಂದು ಸಂತ್ರಸ್ತ ಮಹಿಳೆ ವಿಡಿಯೋದಲ್ಲಿ ಹೇಳಿದ್ದಾರೆ.

ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿರುವ ಈ ವಿಡಿಯೋದ ಅಸಲೀತನ ಇನ್ನಷ್ಟೇ ಖಾತರಿಯಾಗಬೇಕಿದೆ.

ಸಂಸದರ ನಿವಾಸಕ್ಕೆ ಎಫ್‌ಎಸ್‌ಎಲ್‌ ತಂಡ ಭೇಟಿ, ಸಾಕ್ಷ್ಯ ಸಂಗ್ರಹ

ಮತ್ತೊಂದೆಡೆ ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧ ದಾಖಲಾಗಿರುವ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಹಾಸನದಲ್ಲಿರುವ ಸಂಸದರ ಸರ್ಕಾರಿ ಬಂಗಲೆಗೆ ಎಫ್‌ಎಸ್‌ಎಲ್‌ ತಂಡ ಭೇಟಿ ನೀಡಿ, ಸಾಕ್ಷ್ಯ ಸಂಗ್ರಹ ಮಾಡಿದೆ.

ಹಾಸನದ ಆರ್.ಸಿ.ರಸ್ತೆಯಲ್ಲಿರುವ ಸಂಸದರ ನಿವಾಸದಲ್ಲಿ ಈಗಾಗಲೇ ಎಸ್‌ಐಟಿ ತಂಡ ಸಂತ್ರಸ್ತೆಯ ಸ್ಥಳ ಮಹಜರು ಮಾಡಿದೆ. ಇದೀಗ ಸಂಸದ ನಿವಾಸದ ಬೀಗವನ್ನು ಸ್ಥಳೀಯ ಪೊಲೀಸರ ಸಮ್ಮುಖದಲ್ಲಿ ತೆರೆದು ಎಫ್‌ಎಸ್‌ಎಲ್ ತಂಡ ಒಳಪ್ರವೇಶಿಸಿ ಸಾಕ್ಷ್ಯಕ್ಕಾಗಿ ಹುಡುಕಾಟ ಆರಂಭಿಸಿದೆ. ಮನೆಯ ಎದುರು ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ.

Read More
Next Story