ಪ್ರಜ್ವಲ್ ಪೆನ್‌ಡ್ರೈವ್ ಪ್ರಕರಣ | ಮಾಜಿ ಕಾರು ಚಾಲಕ ಹೇಳಿದ್ದೇನು?
x

ಪ್ರಜ್ವಲ್ ಪೆನ್‌ಡ್ರೈವ್ ಪ್ರಕರಣ | ಮಾಜಿ ಕಾರು ಚಾಲಕ ಹೇಳಿದ್ದೇನು?


ರಾಜ್ಯಾದ್ಯಾಂತ ಭಾರೀ ಸದ್ದು ಮಾಡಿರುವ ಲೈಂಗಿಕ ದೌರ್ಜನ್ಯಗಳ ಪೆನ್‌ಡ್ರೈವ್ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಜ್ವಲ್ ರೇವಣ್ಣ ಅವರ ಮಾಜಿ ಕಾರು ಚಾಲಕ ಕಾರ್ತಿಕ್ ಅಜ್ಞಾತ ಸ್ಥಳದಿಂದ ವಿಡಿಯೋ ಮೂಲಕ ಸ್ಪೋಟಕ ಮಾಹಿತಿ ಹಂಚಿಕೊಂಡಿದ್ದಾರೆ.

ಪ್ರಜ್ವಲ್ ರೇವಣ್ಣ ಮಾಜಿ ಕಾರು ಚಾಲಕ ಕಾರ್ತಿಕ್ ಹೇಳಿದ್ದೇನು?

ʻʻನಾನು ಹದಿನೈದು ವರ್ಷದಿಂದ ಪ್ರಜ್ವಲ್ ರೇವಣ್ಣ ಹಾಗೂ ಅವರ ಫ್ಯಾಮಿಲಿಗೆ ಕಾರು ಡ್ರೈವರ್ ಆಗಿ ಕೆಲಸ ಮಾಡಿದ್ದೇನೆ. ಒಂದು ವರ್ಷದಿಂದ ಕೆಲಸ ಬಿಟ್ಟಿದ್ದೀನಿ, ನನ್ನ ಜಮೀನು ಬರೆಸಿಕೊಂಡು ನನ್ನ ಪತ್ನಿ ಮೇಲೆ ಹಲ್ಲೆ ಮಾಡಿ, ಹಿಂಸೆ ಕೊಟ್ಟರು. ಆದ್ದರಿಂದ ಅವರ ಮನೆಯಿಂದ ಹೊರಬಂದೆʼʼ ಎಂದು ಕಾರ್ತಿಕ್ ಅವರು ಹೇಳಿದ್ದಾರೆ.

ʻʻದೇವರಾಜೇ ಗೌಡ (ಹೊಳೆನರಸೀಪುರದ ಬಿಜೆಪಿ ಮುಖಂಡ) ಅವರು ರೇವಣ್ಣ ಫ್ಯಾಮಿಲಿ ವಿರುದ್ಧ ಹೋರಾಟ ಮಾಡುತ್ತಿದ್ದರು. ಹಾಗಾಗಿ ಬೇರೆ ಯಾರಿಂದಲೂ ನ್ಯಾಯ ಸಿಗಲ್ಲ ಅಂತ ದೇವರಾಜೇಗೌಡ ಬಳಿ ಹೋದೆ. ನಾನು ನನ್ನ ಮೇಲಿನ ಅವರ ದಬ್ಬಾಳಿಕೆ ಬಗ್ಗೆ ಮಾತ್ರ ದೇವರಾಜೇ ಗೌಡರ ಬಳಿ ಹೇಳಿಕೊಂಡು ಕಾನೂನು ಹೋರಾಟ ನಡೆಸಲು ಅವರ ನೆರವು ಕೋರಿದ್ದೆ. ಆದರೆ, ಅಷ್ಟರಲ್ಲಿ ಯಾವುದೇ ಅಶ್ಲೀಲ ವಿಡಿಯೋ ರಿಲೀಸ್ ಮಾಡಬಾರದು ಎಂದು ನನ್ನ ವಿರುದ್ದ ಪ್ರಜ್ವಲ್ ರೇವಣ್ಣ ಕೋರ್ಟಿನ ತಡೆಯಾಜ್ಞೆ ತರುತ್ತಾರೆ. ಆ ತಡೆಯಾಜ್ಞೆ ವಿಷಯ ಗೊತ್ತಾದ ಮೇಲೆ ದೇವರಾಜೇಗೌಡರು ನನಗೆ, ʼನಿನ್ನ ಬಳಿ ಇರುವ ವಿಡಿಯೋ, ಫೋಟೋಸ್, ನಾನು ಯಾರಿಗೂ ತೋರಿಸಲ್ಲ ಕೊಡುʼ ಎಂದು ಕೇಳಿದ್ದರು. ನಾನು ನಂಬಿ ನನ್ನ ಬಳಿಯಿದ್ದ ವಿಡಿಯೋದ ಒಂದು ಕಾಪಿ ಕೊಟ್ಟೆ. ಅವರು ಅದನ್ನು ಸ್ವಾರ್ಥಕ್ಕೆ ಉಪಯೋಗಿಸಿಕೊಂಡರೋ ಗೊತ್ತಿಲ್ಲʼʼ ಎಂದು ಮಾಹಿತಿ ನೀಡಿದ್ದಾರೆ.

ʻʻದೇವರಾಜೇಗೌಡರನ್ನು ಬಿಟ್ಟರೆ ಬೇರೆ ಯಾರಿಗೂ ನಾನು ವಿಡಿಯೋ ಕೊಟ್ಟಿಲ್ಲ. ಕಾಂಗ್ರೆಸ್‌ನವರಿಗಂತು ನಾನು ವಿಡಿಯೋ ಕೊಟ್ಟಿಲ್ಲ, ಕಾಂಗ್ರೆಸ್ ಅವರ ಮೇಲೆ ನಂಬಿಕೆ ಇಲ್ಲದ ಕಾರಣಕ್ಕೇ ನಾನು ಸಹಾಯಕ್ಕಾಗಿ ದೇವರಾಜೇಗೌಡರ ಹತ್ತಿರ ಹೋಗಿದ್ದೆ. ಹಾಗಿರುವಾಗ ಮತ್ತೆ ಕಾಂಗ್ರೆಸ್‌ನವರನ್ನು ನಂಬಿ ಅವರಿಗೆ ಪೆನ್‌ಡ್ರೈವ್‌ ಕೊಡುವುದು ಸಾಧ್ಯವೇ? ಹಾಗಾಗಿ ದೇವರಾಜೇಗೌಡರಿಗೆ ಮಾತ್ರ ಕೊಟ್ಟಿದ್ದೆ. ಪೆನ್‌ಡ್ರೈವ್ ಯಾರು ಹಂಚಿದರೊ ಗೊತ್ತಿಲ್ಲ. ನನ್ನ ಮೇಲೆ ಇಲ್ಲಸಲ್ಲದ ಆರೋಪ ಮಾಡುತ್ತಿದ್ದಾರೆ. ನಾನು ಕಾಂಗ್ರೆಸ್ ಅವರಿಗೆ ಕೊಡುವುದಿದ್ದರೆ ದೇವರಾಜೇಗೌಡ ಬಳಿ ಏಕೆ ಹೋಗುತ್ತಿದ್ದೆ? ಇವತ್ತು ಎಸ್ಐಟಿ ಮುಂದೆ ಹಾಜರಾಗಿ ಎಲ್ಲಾ ಹೇಳುತ್ತೇನೆ. ನಂತರ ಮಾಧ್ಯಮದ ಮುಂದೆ ಎಲ್ಲಾ ವಿವರವಾಗಿ ಹೇಳುತ್ತೇನೆʼʼ ಎಂದಿದ್ದಾರೆ.

ʻʻಕಾಂಗ್ರೆಸ್‌ನವರ ಹೆಸರನ್ನು ಬೆರೆಸಬೇಡಿ. ದೇವರಾಜೇಗೌಡರನ್ನು ಬಿಟ್ಟರೆ ಯಾರಿಗೂ ಒಂದು ತುಣುಕು ಕೊಟ್ಟಿಲ್ಲ, ಇವತ್ತು ಎಸ್ಐಟಿ ಮುಂದೆ ಹಾಜರಾಗಿ ಕೂಲಂಕಷವಾಗಿ ಹೇಳುತ್ತೇನೆ. ರೇವಣ್ಣ ಮನೆಯಲ್ಲಿ ಏನೆಲ್ಲಾ ನಡೆದಿದೆ ನಾನು ನೋಡಿದ್ದೇನೆ. ಎಲ್ಲವನ್ನೂ ಎಸ್ಐಟಿ ಮುಂದೆ ಹೇಳುತ್ತೇನೆ. ಯಾರಿಗೆ ಅನ್ಯಾಯ ಆಗಿದೆ ಧೈರ್ಯವಾಗಿ ಮುಂದೆ ಬನ್ನಿʼʼ ಎಂದು ಹೇಳಿದ್ದಾರೆ.

ಸದ್ಯ ಪ್ರಕರಣದ ಕುರಿತು ಎಸ್ಐಟಿ ತನಿಖೆ ಆರಂಭಿಸಿದೆ. ಮತ್ತೊಂದೆಡೆ ಪ್ರಜ್ವಲ್ ರೇವಣ್ಣ ಅವರು ತಲೆಮರೆಸಿಕೊಂಡು ವಿದೇಶಕ್ಕೆ ಪರಾರಿಯಾಗಿದ್ದಾರೆ. ಪೆನ್‌ಡ್ರೈವ್ ಪ್ರಕರಣ ಸಂಬಂಧ ಜೆಡಿಎಸ್ ಹಾಗೂ ಬಿಜೆಪಿ ವಿರುದ್ಧ ಕಾಂಗ್ರೆಸ್ ನಾಯಕರು ವಾಗ್ದಾಳಿ ನಡೆಸುತ್ತಿದ್ದಾರೆ.

Read More
Next Story