ಐಟಿ ಉದ್ಯೋಗಿಗಳಿಗೆ ಬಿಗ್ ಶಾಕ್: 14 ಗಂಟೆ ಕೆಲಸದ ಹೊಸ ಪ್ರಸ್ತಾವಸರ್ಕಾರಕ್ಕೆ ಸಲ್ಲಿಸಿದ‌ ಐಟಿ ಕಂಪನಿಗಳು
x
ಸಾಂದರ್ಭಿಕ ಚಿತ್ರ

ಐಟಿ ಉದ್ಯೋಗಿಗಳಿಗೆ ಬಿಗ್ ಶಾಕ್: 14 ಗಂಟೆ ಕೆಲಸದ ಹೊಸ ಪ್ರಸ್ತಾವಸರ್ಕಾರಕ್ಕೆ ಸಲ್ಲಿಸಿದ‌ ಐಟಿ ಕಂಪನಿಗಳು


ಮಾಹಿತಿ ತಂತ್ರಜ್ಞಾನ (ಐಟಿ) ಕಂಪನಿಗಳು ಕರ್ನಾಟಕ ಸರ್ಕಾರಕ್ಕೆ ಹೊಸ ಪ್ರಸ್ತಾವನೆಯೊಂದನ್ನು ಸಲ್ಲಿಕೆ ಮಾಡಿವೆ. ಪ್ರಸ್ತುತ 12 ಗಂಟೆಗಳು ಇರುವ ಕೆಲಸದ ಅವಧಿಯನ್ನು 14 ಗಂಟೆಗಳು (12 ಗಂಟೆ + 2 ಗಂಟೆ ಹೆಚ್ಚುವರಿ ಕೆಲಸ) ವರೆಗೆ ವಿಸ್ತರಣೆ ವಿಸ್ತರಣೆ ಮಾಡಲು ಅವಕಾಶ ನೀಡುವಂತೆ ಇದರಲ್ಲಿ ಮನವಿ ಮಾಡಲಾಗಿದೆ. ಸರ್ಕಾರ ಇನ್ನೂ ಈ ಪಸ್ತಾವನೆ ಕುರಿತು ಯಾವುದೇ ತೀರ್ಮಾನ ಕೈಗೊಂಡಿಲ್ಲ. ಆದರೆ ಐಟಿ ಕಂಪನಿಗಳ ಪ್ರಸ್ತಾವನೆಗೆ ಉದ್ಯೋಗಿಗಳು ವಿರೋಧ ವ್ಯಕ್ತಪಸಿದ್ದಾರೆ.

ಐಟಿ ಕಂಪನಿಗಳು 14 ಗಂಟೆಯ ಕೆಲಸದ ಅವಧಿ ವಿಸ್ತರಣೆ ಮಾಡಲು ಅನುಕೂಲವಾಗುವಂತೆ ಕರ್ನಾಟಕ ಅಂಗಡಿಗಳು ಮತ್ತು ವಾಣಿಜ್ಯ ಸ್ಥಾಪನೆ ಕಾಯಿದೆ, 1961ಕ್ಕೆ ತಿದ್ದುಪಡಿ ತರಬೇಕು ಎಂದು ಸರ್ಕಾರಕ್ಕೆ ಸಲ್ಲಿಕೆ ಮಾಡಿರುವ ಪ್ರಸ್ತಾವನೆಯಲ್ಲಿ ಮನವಿ ಮಾಡಿವೆ. ಐಟಿ ಕಂಪನಿಗಳ ಜೊತೆ ಮತ್ತೊಮ್ಮೆ ಮಾತುಕತೆ ನಡೆಸಿ, ಸರ್ಕಾರ ಈ ಕುರಿತು ತೀರ್ಮಾನಿಸುವ ನಿರೀಕ್ಷೆ ಇದೆ.

ಪ್ರಸ್ತುತ 10 ಗಂಟೆ + 2 ಗಂಟೆ ಹೆಚ್ಚುವರಿ ಕೆಲಸ ಸೇರಿ ಒಟ್ಟು 12 ಗಂಟೆಗಳ ಕಾಲ ಐಟಿ ಉದ್ಯೋಗಿಗಳು ಕೆಲಸ ನಿರ್ವಹಣೆ ಮಾಡಲು ಕಾನೂನಿನಲ್ಲಿ ಅವಕಾಶವಿದೆ. ಆದರೆ ಕೆಲವು ಐಟಿ ಉದ್ಯೋಗಿಗಳು ಇದಕ್ಕಿಂತ ಹೆಚ್ಚಿನ ಹೊತ್ತು ಕೆಲಸ ಮಾಡುತ್ತಾರೆ. ಆದರೆ ಈಗ ಐಟಿ ಕಂಪನಿಗಳು 12 ಗಂಟೆ ಕೆಲಸ + 2 ಗಂಟೆ ಹೆಚ್ಚುವರಿ ಕೆಲಸ ಸೇರಿ 14 ಗಂಟೆ ಕೆಲಸ ಮಾಡಲು ಕಾನೂನು ರೂಪಿಸಬೇಕು ಎಂದು ಮನವಿ ಮಾಡಿವೆ.

ಹೊಸ ಪ್ರಸ್ತಾವನೆಯಂತೆ ಐಟಿ ಉದ್ಯೋಗಿಗಳು, ಬಿಪಿಓಗಳಲ್ಲಿ 12 ಗಂಟೆಗೂ ಅಧಿಕ ಕೆಲಸ ಮಾಡಲು ಅವಕಾಶ ನೀಡಬೇಕು. ಅಲ್ಲದೇ ನಿಯಮಿತವಾಗಿ ಮೂರು ತಿಂಗಳು 125 ಗಂಟೆ ಮೀರದಂತೆ ಕೆಲಸ ಇರಬೇಕು ಎಂದು ಮನವಿ ಮಾಡಲಾಗಿದೆ. ಈ ಪ್ರಸ್ತಾವನೆ ಕುರಿತು ಸರ್ಕಾರ ಒಂದು ಸುತ್ತಿನ ಮಾತುಕತೆ ನಡೆಸಿದೆ. ಐಟಿ ಕಂಪನಿಗಳ ಜೊತೆ ಮತ್ತೊಂದು ಸುತ್ತಿನ ಮಾತುಕತೆ ನಡೆಸಿದ ಬಳಿಕ ಈ ಕುರಿತು ಸರ್ಕಾರ ಸಚಿವ ಸಂಪುಟ ಸಭೆಯಲ್ಲಿ ಚರ್ಚಿಸಲಿದೆ.

ಐಟಿ ಕಂಪನಿಗಳ ಪ್ರಸ್ತಾವನೆಗೆ ಉದ್ಯೋಗಿಗಳು ವಿರೋಧ

ಐಟಿ ಕಂಪನಿಗಳ ಈ ಪ್ರಸ್ತಾವನೆಗೆ ಆರಂಭದಲ್ಲಿಯೇ ಸಾಕಷ್ಟು ವಿರೋಧ ಕೇಳಿ ಬಂದಿದೆ. ಕರ್ನಾಟಕ ರಾಜ್ಯ ಐಟಿ/ ಐಟಿಇಎಸ್ ನೌಕರರ ಸಂಘ (ಕೆಐಟಿಯು) ಸಹ ಪ್ರಸ್ತಾವನೆಯನ್ನು ವಿರೋಧಿಸಿದೆ. ಈ ಪಸ್ತಾವನೆಗೆ ಒಪ್ಪಿಗೆ ನೀಡಿದರೆ ಕಂಪನಿಗಳು ಈಗಿರುವ 3 ಶಿಫ್ಟ್‌ಗಳಿಂದ 2 ಶಿಫ್ಟ್‌ಗಳಿಗೆ ಬದಲಾಗಲಿವೆ. ಆದ್ದರಿಂದ ಉದ್ಯೋಗಿಗಳು ಕೆಲಸ ಕಳೆದುಕೊಳ್ಳಲಿದ್ದಾರೆ ಎಂದು ಕೆಐಟಿಯು ಅಂದಾಜಿಸಿದೆ.

ಈಗಾಗಲೇ ಐಟಿ ಉದ್ಯೋಗಿಗಳು ಒತ್ತಡದಿಂದ ಹಲವು ಆರೋಗ್ಯ ಸಮಸ್ಯೆ ಎದುರಿಸುತ್ತಿದ್ದಾರೆ. ಒಂದು ವೇಳೆ 14 ಗಂಟೆ ಕೆಲಸದ ಅವಧಿಗೆ ಒಪ್ಪಿಗೆ ನೀಡಿದರೆ ಉದ್ಯೋಗಿಗಳ ಆರೋಗ್ಯದ ಮೇಲೆ ಪರಿಣಾಮ ಉಂಟಾಗಲಿದೆ. ಈ ಕುರಿತು ಈಗಾಗಲೇ ನಡೆದಿರುವ ಹಲವು ಸಮೀಕ್ಷೆಗಳನ್ನು ಕೆಐಟಿಯು ಉಲ್ಲೇಖ ಮಾಡಿದೆ. ಕೆಸಿಸಿಐ ವರದಿಯ ಪ್ರಕಾರ ಶೇ 45ರಷ್ಟು ಐಟಿ ಉದ್ಯೋಗಿಗಳು ಒತ್ತಡದ ಕಾರಣ ಮಾನಸಿಕ ಕಿರಿಕಿರಿ ಅನುಭವಿಸುತ್ತಿದ್ದಾರೆ. ಶೇ 55ರಷ್ಟು ಉದ್ಯೋಗಿಗಳು ದೈಹಿಕ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ. ಒಂದು ವೇಳೆ ಐಟಿ ಕಂಪನಿಗಳ ಪ್ರಸ್ತಾವನೆಗೆ ಸರ್ಕಾರ ಒಪ್ಪಿಗೆ ನೀಡಿದರೆ ಅವರ ಆರೋಗ್ಯ ಇನ್ನಷ್ಟು ಹದಗೆಡಲಿದೆ ಎಂದು ಕೆಐಟಿಯು ಹೇಳಿದೆ.

ಐಟಿ ಕಂಪನಿಗಳ ಉದ್ಯೋಗಿಗಳನ್ನು ಸರ್ಕಾರ ಯಂತ್ರದಂತೆ ನೋಡಬಾರದು. ಅವರು ಸಹ ಮನುಷ್ಯರು, 14 ಗಂಟೆಗಳ ಕೆಲಸದ ಅವಧಿಗೆ ಒಪ್ಪಿಗೆ ನೀಡುವುದು ಸರಿಯಲ್ಲ. ಈ ಪ್ರಸ್ತಾವನೆಗೆ ಒಪ್ಪಿಗೆ ನೀಡುವ ಮೊದಲು ಮುಖ್ಯಮಂತ್ರಿ ಸಿದ್ದರಾಮಯ್ಯ ಸರ್ಕಾರ ವಿವರವಾದ ಅಧ್ಯಯನ ನಡೆಸಬೇಕು ಎಂದು ಐಟಿ ಉದ್ಯೋಗಿಗಳು ಸರ್ಕಾರವನ್ನು ಒತ್ತಾಯಿಸಿದ್ದಾರೆ.

ವಾರಕ್ಕೆ 70 ಗಂಟೆ ಕೆಲಸ ಮಾಡಲು ಸಿದ್ಧರಾಗಬೇಕು: ಇನ್ಫೋಸಿಸ್ ನಾರಾಯಣ ಮೂರ್ತಿ

ಭಾರತದ ಯುವಜನರು ವಾರಕ್ಕೆ 70 ಗಂಟೆ ಕೆಲಸ ಮಾಡಲು ಸಿದ್ಧರಾಗಬೇಕು ಎಂದು ಇನ್ಫೋಸಿಸ್ ಸಹ ಸಂಸ್ಥಾಪಕ ಎನ್‌ಆರ್ ನಾರಾಯಣ ಮೂರ್ತಿ ಹೇಳಿಕೆ ನೀಡಿದ್ದರು. ದೇಶದ 'ವರ್ಕ್ ಕಲ್ಚರ್' ಅನ್ನು ಮೇಲ್ದರ್ಜೆಗೇರಿಸಲು ಹಾಗೂ ಜಾಗತಿಕ ಮಟ್ಟದಲ್ಲಿನ ಪರಿಣಾಮಕಾರಿಯಾಗಿ ಸ್ಪರ್ಧಿಸಲು ಇದು ಅಗತ್ಯ ಎಂದು ಅವರು ಪ್ರತಿಪಾದಿಸಿದ್ದರು. ಅವರ ಹೇಳಿಕೆ ರಾಷ್ಟ್ರವ್ಯಾಪಿ ಚರ್ಚೆಗೆ ಗ್ರಾಸವಾಗಿದೆ.

ನಾರಾಯಣ ಮೂರ್ತಿ ಅವರು ಹೇಳಿರುವ ಪ್ರಕಾರ, ವಾರದ 5 ದಿನಗಳಲ್ಲಿ 70 ಗಂಟೆ ಕೆಲಸ ಎಂದರೆ ದಿನಕ್ಕೆ 14 ಗಂಟೆ ಕೆಲಸ ಮಾಡಬೇಕು ಎನ್ನುವುದಾಗಿದೆ. ಇದೀಗ ಐಟಿ ಕಂಪನಿಗಳು ಕೂಡ ಉದ್ಯೋಗಿಗಳ ಕೆಲಸದ ಅವಧಿಯನ್ನು 14 ಗಂಟೆಗಳು (12 ಗಂಟೆ + 2 ಗಂಟೆ ಹೆಚ್ಚುವರಿ ಕೆಲಸ) ವರೆಗೆ ವಿಸ್ತರಣೆ ಮಾಡಲು ಅವಕಾಶ ನೀಡುವಂತೆ ಸರ್ಕಾರಕ್ಕೆ ಮನವಿ ಮಾಡಿದೆ.

Read More
Next Story