ಬೃಹತ್ ಭ್ರಷ್ಟಾಚಾರ ಆರೋಪ| ಸಚಿವ ನಾಗೇಂದ್ರರನ್ನು ವಜಾ ಮಾಡಬೇಕು: ಬಿವೈ ವಿಜಯೇಂದ್ರ ಆಗ್ರಹ
ಎಸ್‌ಟಿ ಬೋರ್ಡ್ (ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮ)ದಲ್ಲಿ ದೊಡ್ಡ ಹಗರಣವೊಂದು ನಡೆದಿರುವುದು ನಿನ್ನೆ ಬೆಳಕಿಗೆ ಬಂದಿದೆ. ಆ ಇಲಾಖೆ ನೌಕರ 187 ಕೋಟಿ ಹಗರಣದ ಬಗ್ಗೆ ಪತ್ರ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ತಕ್ಷಣವೇ ಇಲಾಖೆಯ ಸಚಿವ ನಾಗೇಂದ್ರರನ್ನು ವಜಾ ಮಾಡಬೇಕು. ಇಲ್ಲವಾದಲ್ಲಿ ಬಿಜೆಪಿ ರಾಜ್ಯದಾದ್ಯಂತ ಹೋರಾಟ ಮಾಡಲಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಸರ್ಕಾರವನ್ನು ಆಗ್ರಹಿಸಿದರು.
ಈ ಬಗ್ಗೆ ಕಲಬುರಗಿಯಲ್ಲಿ ಮಾತನಾಡಿದ ಅವರು, ʻʻಕಾಂಗ್ರೆಸ್ ಪಕ್ಷ ಭ್ರಷ್ಟಾಚಾರದ ಪಿತಾಮಹ ಕಾಂಗ್ರೆಸ್. ಕೂಡಲೆ ಸಿಎಂ ಸಿದ್ದರಾಮಯ್ಯ ಆ ಇಲಾಖೆಯ ಸಚಿವರನ್ನು ಮಂತ್ರಿ ಮಂಡಲದಿಂದ ಕೈ ಬಿಡಬೇಕು. ಹೈಕೋರ್ಟ್ ನ್ಯಾಯಧೀಶರ ನೈತೃತ್ವದಲ್ಲಿ ಪ್ರಕರಣದ ತನಿಖೆಯಾಗಬೇಕು. ಈ ವಿಚಾರವಾಗಿ ನಾವು ರಾಜ್ಯಪಾಲರನ್ನು ಭೇಟಿ ಮಾಡುತ್ತೇವೆʼʼ ಎಂದು ಹೇಳಿದರು.
ಬೆಂಗಳೂರಿನಲ್ಲಿರುವ ವಾಲ್ಮೀಕಿ ಅಭಿವೃದ್ಧಿ ನಿಗಮದ ಸೂಪರಿಂಡೆಂಟ್ ಚಂದ್ರಶೇಖರ್ ಶಿವಮೊಗ್ಗದ ವಿನೋಬ ನಗರದ ಕೆಂಚಪ್ಪ ಲೇಔಟ್‌ನಲ್ಲಿರುವ ಮನೆಯಲ್ಲಿ ನೇಣು ಹಾಕಿಕೊಂಡು ಸೋಮವಾರ ಆತ್ಮಹತ್ಯೆ ಮಾಡಿಕೊಂಡಿದ್ದರು. ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ಬರೋಬ್ಬರಿ 187 ಕೋಟಿ ರೂ. ಹಗರಣ ನಡೆದಿದೆ. ಈ ಪೈಕಿ 85 ಕೋಟಿ ರೂ. ಹಣವನ್ನು ಕಾನೂನು ಬಾಹಿರವಾಗಿ ವರ್ಗಾವಣೆ ಮಾಡಲಾಗಿದೆ. ಅಧಿಕಾರಿಗಳು ಮಾಡಿದ ತಪ್ಪು ನನ್ನ ಮೇಲೆ ಹಾಕುತ್ತಿದ್ದಾರೆ, ನನ್ನ ಸಾವಿಗೆ ಪದ್ಮಾನಾಭ, ಪರಶುರಾಮ್, ಶುಚಿಸ್ವತ ಅಧಿಕಾರಿಗಳೇ ಕಾರಣ ಎಂದು 6 ಪುಟಗಳ ʼಡೆತ್ ನೋಟ್ʼ ನಲ್ಲಿ ಬರೆದಿದ್ದರು ಎಂದು ಹೇಳಲಾಗಿದೆ.