ಬಿಜೆಪಿ ಮಾಜಿ ಶಾಸಕ ಪ್ರೀತಂ ಗೌಡಗೆ ಸದ್ಯ ಬಂಧನವಿಲ್ಲ; ಹೈಕೋರ್ಟ್ ಆದೇಶ
x

ಬಿಜೆಪಿ ಮಾಜಿ ಶಾಸಕ ಪ್ರೀತಂ ಗೌಡಗೆ ಸದ್ಯ ಬಂಧನವಿಲ್ಲ; ಹೈಕೋರ್ಟ್ ಆದೇಶ


ಪ್ರಜ್ವಲ್‌ ರೇವಣ್ಣ ಪ್ರಕರಣದಲ್ಲಿ ಅಶ್ಲೀಲ ವಿಡಿಯೋಗಳ ಪೆನ್‌ಡ್ರೈವ್ ಹಂಚಿಕೆ ಆರೋಪ ಹೊತ್ತಿರುವ ಮಾಜಿ ಬಿಜೆಪಿ ಶಾಸಕ ಪ್ರೀತಂ ಗೌಡಗೆ ಬಿಗ್ ರಿಲೀಫ್ ಸಿಕ್ಕಂತಾಗಿದೆ. ಅವರನ್ನುವ ಬಂಧಿಸದಂತೆ ಹೈಕೋರ್ಟ್ ಶುಕ್ರವಾರ ಆದೇಶ ಹೊರಡಿಸಿದೆ.

ಅಶ್ಲೀಲ ವಿಡಿಯೋ ಹಂಚಿಕೆ ಪ್ರಕರಣದಲ್ಲಿ ಬಂಧನ ಭೀತಿ ಎದುರಿಸುತ್ತಿದ್ದ ಪ್ರೀತಂ ಗೌಡ ಅವರಿಗೆ ಇದೀಗ ಸಮಾಧಾನಕರ ಆದೇಶ ಹೊರಬಂದಿದೆ. ತನಿಖೆ ಮುಂದುವರಿಸಲು ಎಸ್ಐಟಿಗೆ ತಿಳಿಸಿದ್ದು, ವಿಚಾರಣೆಗೆ ಸಹಕರಿಸಲು ಅರ್ಜಿದಾರ ಪ್ರೀತಂ ಗೌಡಗೆ ಹೈಕೋರ್ಟ್ ಸೂಚನೆ ನೀಡಿದೆ.

ಎಸ್‌ಐಟಿ ಅಧಿಕಾರಿಗಳು ಈಗಾಗಲೇ ಅಶ್ಲೀಲ ವಿಡಿಯೋಗಳ ಪೆನ್‌ಡ್ರೈವ್‌ ಹರಡಿದ್ದು ಯಾರು ಎನ್ನುವುದರ ಬಗ್ಗೆ ಎಸ್ಐಟಿ ತನಿಖೆ ನಡೆಸುತ್ತಿದ್ದಾರೆ. ಕೆಲ ಶಂಕಿತರನ್ನೂ ವಶಕ್ಕೆ ಪಡೆದು ವಿಚಾರಣೆ ನಡೆಸಿದೆ. ಈ ನಡುವೆ ಸಂತ್ರಸ್ತ ಮಹಿಳೆಯೊಬ್ಬರು ಖುದ್ದು ಪ್ರಜ್ವಲ್‌ ರೇವಣ್ಣ, ಪ್ರೀತಂಗೌಡ ಸೇರಿದಂತೆ ನಾಲ್ವರ ವಿರುದ್ಧ ದೂರು ನೀಡಿದ್ದರು.

ಮಹಿಳೆ ನೀಡಿದ ದೂರಿನ ಮೇರೆಗೆ ಸಿಐಡಿ ಸೈಬರ್ ಠಾಣೆಯಲ್ಲಿ ಪ್ರೀತಂ ಗೌಡ ವಿರುದ್ಧ ಎಫ್‌ಐಆರ್ ದಾಖಲಾಗಿತ್ತು. ಜೆಡಿಎಸ್‌ ಮಾಜಿ ಸಂಸದ ಪ್ರಜ್ವಲ್​​ ರೇವಣ್ಣ, ಕಿರಣ್​, ಶರತ್​ ಹಾಗೂ ಪ್ರೀತಂ ಗೌಡ ವಿರುದ್ಧ ಐಪಿಸಿ ಸೆಕ್ಷನ್ 354(ಎ)-ಲೈಂಗಿಕ ಕಿರುಕುಳ, 354 (ಡಿ) ಮಹಿಳೆಯ ನಿರಾಸಕ್ತಿಯ ಹೊರತಾಗಿಯೂ ಆಕೆಯನ್ನು ಹಿಂಬಾಲಿಸಿ ಕಿರುಕುಳ ನೀಡಿರುವುದು, 354 ಬಿ-ಮಹಿಳೆ ಮೇಲೆ ಆಕ್ರಮಣ ಹಾಗೂ ಮಾಹಿತಿ, 506-ಜೀವ ಬೆದರಿಕೆ ಹಾಗೂ ಐಟಿ ಕಾಯ್ದೆ 66ಇ ಅಡಿ ಕೇಸು ದಾಖಲಾಗಿದೆ.

ಐಟಿ ಕಾಯ್ದೆ 66ಇ ಅಡಿಯಲ್ಲಿ ಮಹಿಳೆಯರ ಖಾಸಗಿ ದೃಶ್ಯ ಸೆರೆ ಹಿಡಿದು ಬಹಿರಂಗ ಮಾಡಿರುವ ಆರೋಪದ ಸೆಕ್ಷನ್‌ ಸೇರಿಸಲಾಗಿತ್ತು. ಇದಷ್ಟೇ ಅಲ್ಲ, ಬೆಂಗಳೂರಿನಲ್ಲಿ ಪೆನ್‌ಡ್ರೈವ್‌ ಖರೀದಿ ಮಾಡಿಸಿದ್ದೇ ಪ್ರೀತಂಗೌಡ, ಅವರ ಸಹಚರರಾದ ಕಿರಣ್ ಮತ್ತು ಶರತ್‌ ಪೆನ್‌ಡ್ರೈವ್‌ ಹಂಚಿದ್ದಾರೆ ಎಂದು ಎಫ್​ಐಆರ್‌ನಲ್ಲಿ ಉಲ್ಲೇಖಿಸಲಾಗಿತ್ತು.

ಪ್ರಜ್ವಲ್‌ ರೇವಣ್ಣ ಲೈಂಗಿಕ ದೌರ್ಜನ್ಯ ಎಸಗಿದ ವಿಡಿಯೋಗಳನ್ನ ಚಿತ್ರೀಕರಿಸಿದರೆ ಅದನ್ನ ಶೇರ್‌ ಮಾಡಿದ್ದು ಪ್ರೀತಂ ಮತ್ತು ಅವರ ಸಹಚರರು ಎಂದು ಅವರ ವಿರುದ್ಧ ಮಹಿಳೆ ಆರೋಪಿಸಿದ್ದರು. ಹಾಗಾಗಿ, ಪ್ರೀತಂಗೌಡ ವಿರುದ್ಧ ಕಠಿಣ ಸೆಕ್ಷನ್‌ಗಳನ್ನ ಎಫ್ಐಆರ್‌ನಲ್ಲಿ ಸೇರ್ಪಡೆ ಮಾಡಲಾಗಿತ್ತು.

Read More
Next Story