
ಡಿಕೆ ಶಿವಕುಮಾರ್‌ಗೆ ಬಿಗ್ ರಿಲೀಫ್ | ಸಿಬಿಐ, ಯತ್ನಾಳ್ ಅರ್ಜಿ ವಜಾಗೊಳಿಸಿದ ಹೈಕೋರ್ಟ್
ಅಕ್ರಮ ಆಸ್ತಿ ಗಳಿಕೆ ಪ್ರಕರಣದಲ್ಲಿ ಡಿಸಿಎಂ ಡಿಕೆ ಶಿವಕುಮಾರ್‌ಗೆ ಹೈಕೋರ್ಟ್‍ನಿಂದ ಬಿಗ್ ರಿಲೀಫ್ ಸಿಕ್ಕಿದೆ. ಈ ಪ್ರಕರಣದಲ್ಲಿ ರಾಜ್ಯ ಸರ್ಕಾರ ಸಿಬಿಐಗೆ ನೀಡಿದ್ದ ಅನುಮತಿಯನ್ನು ಹಿಂಪಡೆದು ತನಿಖೆಯನ್ನು ಲೋಕಾಯುಕ್ತಕ್ಕೆ ವಹಿಸಿದ್ದ ಕ್ರಮವನ್ನು ಪ್ರಶ್ನಿಸಿ ಸಿಬಿಐ ಮತ್ತು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ವಿಭಾಗೀಯ ಪೀಠ ವಜಾಗೊಳಿಸಿದೆ.
ಡಿ.ಕೆ ಶಿವಕುಮಾರ್ ವಿರುದ್ಧದ ಆದಾಯ ಮೀರಿ ಆಸ್ತಿ ಗಳಿಕೆ ಪ್ರಕರಣದ ಸಂಬಂಧ ಹಿಂದಿನ ಸರ್ಕಾರವು ಸಿಬಿಐ ತನಿಖೆಗೆ ವಹಿಸಿ ಅನುಮತಿ ನೀಡಲಾಗಿತ್ತು. ಆದರೆ ಹಾಲಿ ಕಾಂಗ್ರೆಸ್ ಸರ್ಕಾರವು ಇದನ್ನು ಹಿಂಪಡೆದು ಲೋಕಾಯುಕ್ತಕ್ಕೆ ವಹಿಸಿತ್ತು. ಇದನ್ನು ಪ್ರಶ್ನಿಸಿ ಹೈಕೋರ್ಟ್ ಗೆ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹಾಗೂ ಸಿಬಿಐ ರಿಟ್ ಅರ್ಜಿ ಸಲ್ಲಿಸಿತ್ತು.
ʻʻಈ ಪ್ರಕರಣದಲ್ಲಿ ಹೈಕೋರ್ಟ್ ತೀರ್ಪು ನೀಡುವುದು ಸೂಕ್ತವಲ್ಲ. ರಾಜ್ಯ ಮತ್ತು ಸಿಬಿಐ ನಡುವಿನ ವಿವಾದ ಸುಪ್ರೀಂಕೋರ್ಟ್ ಹಂತದಲ್ಲಿಯೇ ತೀರ್ಮಾನವಾಗಬೇಕು ಎಂದು ಉಚ್ಚ ನ್ಯಾಯಾಲಯ ಅಭಿಪ್ರಾಯಪಟ್ಟಿದೆ.ʼʼ ಈ ಪ್ರಕರಣವನ್ನು ಸುಪ್ರೀಂ ಕೋರ್ಟ್ ಅಂಗಳಕ್ಕೆ ತೆಗೆದುಕೊಂಡು ಹೋಗಲು ಅವಕಾಶ ಇದೆ. ಆದರೆ ಸದ್ಯಕ್ಕೆ ಡಿಕೆ ಶಿವಕುಮಾರ್ ಅವರಿಗೆ ತಾತ್ಕಾಲಿಕ ರಿಲೀಫ್ ಸಿಕ್ಕಿದೆ ಎಂದು ಹೇಳಬಹುದು.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ಬೆಳಿಗ್ಗೆ ಹಾಸನ ಜಿಲ್ಲೆಯ ಸಕಲೇಶಪುರದಲ್ಲಿ ಮಾತನಾಡಿದ್ದ ಡಿಕೆಶಿ, ʻʻನನಗೆ ದೇವರ ಬಗ್ಗೆ, ನ್ಯಾಯಾಲಯದ ಬಗ್ಗೆ ಅಪಾರ ನಂಬಿಕೆ ಇದೆ. ಅವರು ಏನು ಕೊಟ್ಟರೂ ಅದನ್ನು ನಾನು ಪ್ರಸಾದ ಎಂದು ಸ್ವೀಕಾರ ಮಾಡುತ್ತೇನೆʼʼ ಎಂದಿದ್ದರು.
ಒಂದೆಡೆ ಡಿಕೆಶಿಗೆ ಕೋರ್ಟ್ ತಾತ್ಕಾಲಿಕ ರಿಲೀಫ್ ನೀಡಿದರೆ, ಮತ್ತೊಂದೆಡೆ ರಾಜ್ಯ ರಾಜಕೀಯದಲ್ಲಿ ದೊಡ್ಡ ವಿವಾದವನ್ನೇ ಹುಟ್ಟು ಹಾಕಿದ್ದ ಮುಡಾ ನಿವೇಶನ ಹಂಚಿಕೆ ಹಗರಣ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ಯಪಾಲರು ತನಿಖೆಗೆ ನೀಡಿದ್ದ ಅನುಮತಿಯನ್ನು ಪ್ರಶ್ನಿಸಿ ಸಿಎಂ ಸಿದ್ದರಾಮಯ್ಯ ಹೈಕೋರ್ಟ್ ಮೆಟ್ಟಿಲೇರಿದ್ದರು. ಈ ವಿಚಾರಣೆ ಕೂಡ ಇಂದೇ ನಡೆದಿದ್ದು, ನ್ಯಾಯಾಲಯ ವಿಚಾರಣೆಯನ್ನು ಆಗಸ್ಟ್ 31ಕ್ಕೆ ಮುಂದೂಡಿದೆ.