
BIFFes 2025 | ಬೆಂಗಳೂರು ಚಲನಚಿತ್ರೋತ್ಸವದಲ್ಲಿ ವಿವಾದ, ಗೊಂದಲಗಳ ಕಾರುಬಾರು!
ʼಸರ್ವ ಜನಾಂಗದ ಶಾಂತಿಯ ತೋಟʼ ಎಂಬ ಘೋಷವಾಕ್ಯದಡಿ ನಡೆಯುತ್ತಿರುವ ಉತ್ಸವ ಅಸಮಾಧಾನ, ಅವ್ಯವಸ್ಥೆ ಮತ್ತು ಗೊಂದಲಗಳಿಂದಲೇ ಹೆಚ್ಚು ಸುದ್ದಿಯಾಗುತ್ತಿದ್ದು, ಸರ್ವ ಜನರನ್ನು ವಿಶ್ವಾಸಕ್ಕೆ ಪಡೆಯುವಲ್ಲೇ ಎಡವಿದಂತೆ ತೋರುತ್ತಿದೆ.
BIFFes 16: ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದ 16ನೇ ಆವೃತ್ತಿ ಆರಂಭವಾಗಿದೆ. ಮಾರ್ಚ್ 1ರಿಂದ 8ರವರೆಗೆ ನಡೆಯುವ ಸಿನಿಮೋತ್ಸವದಲ್ಲಿ ಈ ಬಾರಿ ʼಸರ್ವ ಜನಾಂಗದ ಶಾಂತಿಯ ತೋಟʼ ಎಂಬ ಕರ್ನಾಟಕದ ಸರ್ಕಾರದ ಆಶಯದ ಶೀರ್ಷಿಕೆಯಡಿಯಲ್ಲೇ ನಡೆಯುತ್ತಿರುವುದು ವಿಶೇಷ.
ಆದರೆ, ಸಿನಿಮೋತ್ಸವದ ಉದ್ಘಾಟನಾ ಸಮಾರಂಭದಲ್ಲೇ ಕನ್ನಡ ಚಿತ್ರರಂಗದ ಬಹುತೇಕ ಗಣ್ಯರು, ಸ್ಟಾರ್ ನಟರು ಕಾರ್ಯಕ್ರಮದಿಂದ ಅಂತರ ಕಾಯ್ದುಕೊಂಡಿರುವುದು ಇದೀಗ ವ್ಯಾಪಕ ಚರ್ಚೆಗೆ ಗ್ರಾಸವಾಗಿದೆ. ಅದರಲ್ಲೂ ಉದ್ಘಾಟನಾ ಕಾರ್ಯಕ್ರಮದ ವೇದಿಕೆಯಲ್ಲೇ ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರು ಕನ್ನಡ ಚಿತ್ರರಂಗದ ಈ ವರಸೆಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ಉದ್ಘಾಟನಾ ಕಾರ್ಯಕ್ರಮಕ್ಕೆ ಚಿತ್ರರಂಗದ ನಟರು, ನಿರ್ದೇಶಕರು, ನಿರ್ಮಾಪಕರು ಸೇರಿದಂತೆ ಬಹುತೇಕರು ಗೈರಾದ ಹಿನ್ನೆಲೆಯಲ್ಲಿ ಡಿ ಕೆ ಶಿವಕುಮಾರ್ ಅವರು, “ನಿಮ್ಮ ಕಾರ್ಯಕ್ರಮಕ್ಕೆ ನೀವೇ ಬರದಿದ್ದರೆ ಹೇಗೆ? ಇದನ್ನು ಎಚ್ಚರಿಕೆಯಂತಾದರೂ ಪರಿಗಣಿಸಿ ಅಥವಾ ಮನವಿ ಎಂದಾದರೂ ಪರಿಗಣಿಸಿ… ಸರ್ಕಾರ ಅನುಮತಿ ನೀಡದೆ ಇದ್ದರೆ ಸಿನಿಮಾ ಚಿತ್ರೀಕರಣಕ್ಕೆ ಅವಕಾಶವೇ ಸಿಗುವುದಿಲ್ಲ. ಯಾರಿಗೆ ಹೇಗೆ ನಟ್ಟು ಬೋಲ್ಟ್ ಟೈಟ್ ಮಾಡಬೇಕು ಎಂಬುದು ನಮಗೆ ಗೊತ್ತಿದೆ'' ಎಂದು ಖಡಕ್ ಸಂದೇಶ ರವಾನಿಸಿದ್ದಾರೆ.
ಅದೇ ವೇಳೆ, ಈ ಹಿಂದೆ ಕಾಂಗ್ರೆಸ್ ಪಕ್ಷ, ಮೇಕೆದಾಟು ಯೋಜನೆಗೆ ಕೇಂದ್ರ ಸರ್ಕಾರದ ಅನುಮತಿಗೆ ಆಗ್ರಹಿಸಿ ಹಮ್ಮಿಕೊಂಡಿದ್ದ ಪಾದಯಾತ್ರೆಯ ವೇಳೆ ತಾವು ಸಿನಿಮಾ ನಟರು, ನಿರ್ಮಾಪಕರು ಹಾಗೂ ನಿರ್ದೇಶಕರನ್ನು ಭೇಟಿಯಾಗಿ ಬೆಂಬಲ ಕೋರಿದ್ದು, ಸಾಧು ಕೋಕಿಲಾ ಹಾಗೂ ದುನಿಯಾ ವಿಜಿ ಹೊರತುಪಡಿಸಿ ಯಾರೊಬ್ಬರೂ ಪಾದಯಾತ್ರೆಗೆ ಬರಲಿಲ್ಲ ಎಂದೂ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಆ ಮೂಲಕ ತಮ್ಮ ಕೋಪ, ಮತ್ತು ಅಸಮಾಧಾನಕ್ಕೆ ಕಾರಣವೇನು ಎಂಬುದನ್ನೂ ಹೇಳಿದ್ದಾರೆ.
ಅವರ ಆ ಮಾತುಗಳು ಇದೀಗ ಕನ್ನಡ ಸಿನಿಮಾ ಅಷ್ಟೇ ಅಲ್ಲದೆ, ರಾಜಕೀಯ ಮತ್ತು ಸಾಂಸ್ಕೃತಿಕ ವಲಯದಲ್ಲಿ ಸಾಕಷ್ಟು ಪ್ರತಿಕ್ರಿಯೆಗಳ ಪ್ರತಿಧ್ವನಿ ಎಬ್ಬಿಸಿವೆ. ಡಿ ಕೆ ಅವರ ಬೋಲ್ಡ್ ಅಂಡ್ ನಟ್ ಭಾಷೆಯ ಕುರಿತು ಹಿರಿಯ ಚಿಂತಕ ಹಾಗೂ ಸಿನಿಮಾ ನಿರ್ದೇಶಕ ಡಾ ಬರಗೂರು ರಾಮಚಂದ್ರಪ್ಪ ಸೇರಿದಂತೆ ಕೆಲವರು ಆಕ್ಷೇಪವೆತ್ತಿದ್ದರೆ, ನಟಿ ರಮ್ಯಾ ಸೇರಿದಂತೆ ಸ್ವತಃ ಸಿನಿಮಾ ರಂಗದ ಹಲವರು ಅವರ ಹೇಳಿಕೆ ಕನ್ನಡ ಸಿನಿಮಾ ರಂಗದ ಮಟ್ಟಿಗೆ ಸರಿಯಾಗಿಯೇ ಇದೆ ಎಂಬ ಅಭಿಪ್ರಾಯವನ್ನೂ ವ್ಯಕ್ತಪಡಿಸಿದ್ದಾರೆ. ಆ ಮೂಲಕ ಸಿನಿಮೋತ್ಸವದ ಆರಂಭವೇ ವಿವಾದಕ್ಕೆ ನಾಂದಿ ಹಾಡಿದೆ.
ಅಷ್ಟಕ್ಕೂ ಕನ್ನಡ ಸಿನಿಮಾ ರಂಗದ ಸ್ಟಾರ್ ನಟ-ನಟಿಯರು ಮತ್ತು ಸ್ಟಾರ್ ನಿರ್ದೇಶಕರು, ಸಂಗೀತ ನಿರ್ದೇಶಕರು, ಛಾಯಾಗ್ರಾಹಕರು ಬೆಂಗಳೂರು ಸಿನಿಮೋತ್ಸವದಿಂದ ಅಂತರ ಕಾಯ್ದುಕೊಳ್ಳುವುದು ಇದೇ ಮೊದಲೇನಲ್ಲ. ಈ ಹಿಂದಿನ ಹದಿನೈದು ಸಿನಿಮೋತ್ಸವಗಳಲ್ಲೂ ಹೆಚ್ಚುಕಡಿಮೆ ಇದೇ ಸ್ಥಿತಿ ಇತ್ತು. ಈ ಬಾರಿ ಬೇರೆ ಬೇರೆ ಕಾರಣಗಳಿಂದಾಗಿ ಮತ್ತು ಉಪಮುಖ್ಯಮಂತ್ರಿಗಳ ಮಾತುಗಳಿಂದಾಗಿ ಹೆಚ್ಚು ಸಾರ್ವಜನಿಕ ಚರ್ಚೆಗೆ ಗ್ರಾಸವಾಗಿದೆ.
ಕನ್ನಡದಲ್ಲಿ ಮಾತ್ರ ಈ ಪರಿಸ್ಥಿತಿ
ಬೆಂಗಳೂರು ಸಿನಿಮೋತ್ಸವಗಳಲ್ಲಿ ಆರಂಭದಿಂದಲೂ ಭಾಗವಹಿಸುತ್ತಿರುವ ಹಿರಿಯ ಸಿನಿಮಾ ವಿರ್ಮಶಕರ ಪ್ರಕಾರ, ನೆರೆಯ ಕೇರಳದ ಕೊಚ್ಚಿ ಸಿನಿಮೋತ್ಸವ ಅಥವಾ ಕೊಲ್ಕತ್ತಾದ ಸಿನಿಮೋತ್ಸವಗಳಿಗೆ ಹೋಲಿಸಿದರೆ ಕನ್ನಡದಲ್ಲಿ ಸ್ಥಳೀಯ ಸ್ಟಾರ್ ನಟ- ನಟಿಯರು ಸೇರಿದಂತೆ ಸಿನಿಮಾ ರಂಗದ ಮಂದಿ ಸಕ್ರಿಯವಾಗಿ ಭಾಗಹಿಸುವುದು ವಿರಳಾತಿವಿರಳ. ಆದರೆ, ಕೊಚ್ಚಿ ಸಿನಿಮೋತ್ಸವದಲ್ಲಿ ಮಲಯಾಳಂನ ಬಹುತೇಕ ಸ್ಟಾರ್ ನಟ-ನಟಿಯರು ತಪ್ಪದೇ ಭಾಗವಹಿಸುತ್ತಾರೆ. ಕೊಲ್ಕತ್ತಾ ಉತ್ಸವದಲ್ಲಿ ಕೂಡ ಅಂತಹ ಸತ್ಸಂಪ್ರದಾಯವಿದೆ. ಆದರೆ, ಅದೇಕೋ ಕನ್ನಡದಲ್ಲಿ ಆರಂಭದ ವರ್ಷಗಳಿಂದಲೂ ಅಂತಹ ಒಂದು ಸಂಪ್ರದಾಯವೇ ಬೆಳೆದುಬಂದಿಲ್ಲ.
ಮುಖ್ಯವಾಗಿ ಸಿನಿಮೋತ್ಸವ(BIFFes) ಆಯೋಜಕ ಸಮಿತಿ ಸ್ಟಾರ್ ನಟ- ನಟಿಯರು, ಸ್ಟಾರ್ ನಿರ್ದೇಶಕರು, ಮತ್ತು ಇತರರನ್ನು ವಿಶ್ವಾಸಕ್ಕೆ ಪಡೆಯುವಲ್ಲಿ ವಿಫಲವಾಗುತ್ತಿದೆ. ಅದರಲ್ಲೂ ಸಿನಿಮೋತ್ಸವದ ಯೋಜನಾ ಹಂತದಲ್ಲೇ ಅಂತಹವರನ್ನು ಒಳಗೊಳ್ಳುವ ಪ್ರಯತ್ನಗಳು ವಿರಳ. ಹಾಗಾಗಿ ಸ್ಟಾರ್ ನಟ-ನಟಿಯರ ನಡುವೆ ಕೂಡ ಸಿನಿಮೋತ್ಸವ ಆಯೋಜಕರ ಬಗ್ಗೆ ಅಸಮಾಧಾನಗಳಿವೆ. ಅದು ಒಂದು ಗುಂಪಿನ, ಒಂದು ಹಿತಾಸಕ್ತ ವಲಯದ ಹಿಡಿತದಲ್ಲಿದೆ. ಪ್ರತಿ ಬಾರಿ ಒಂದೇ ಸಮೂಹ ಅದರ ನಿಯಂತ್ರಣ ಸಾಧಿಸುತ್ತಾ ಬಂದಿದೆ. ಅವರು ಸಹಜವಾಗೇ ತಮಗೆ ಬೇಕಾದ, ತಮ್ಮ ವಲಯದ ಕಲಾವಿದರು, ನಿರ್ದೇಶಕರುಗಳನ್ನೇ ಸಿನಿಮೋತ್ಸವದ ತಯಾರಿ ಮತ್ತು ಯೋಜನಾ ಹಂತದಲ್ಲಿ ಒಳಗೊಳ್ಳುತ್ತಾರೆ. ಕಮಿಟಿಗಳ ನೇಮಕಾತಿಯ ವಿಷಯದಲ್ಲಿ ಕೂಡ ಇಂತಹ ಹಿತಾಸಕ್ತ ಗುಂಪಿನ ತೀರ್ಮಾನವೇ ಅಂತಿಮವಾಗಿರುತ್ತದೆ. ಹಾಗಾಗಿ ಸಹಜವಾಗೇ ಇಂತಹ ರಾಜಕಾರಣದಿಂದ ದೂರ ಇರಲು ಬಯಸುವ ನಟ-ನಟಿಯರು ಅತ್ತ ಮುಖ ಹಾಕುವುದೇ ಬೇಡ ಎಂದು ದೂರು ಉಳಿಯುತ್ತಿದ್ದಾರೆ ಎಂದು ʼದ ಫೆಡರಲ್ ಕರ್ನಾಟಕʼದೊಂದಿಗೆ ಮಾತನಾಡಿದ ಹೆಸರು ಹೇಳಬಯಸದ ಹಿರಿಯ ಸಿನಿಮಾ ವಿರ್ಮಶಕರೊಬ್ಬರು ಅಭಿಪ್ರಾಯಪಟ್ಟರು.
ಈ ಬಗ್ಗೆ ಪ್ರತಿಕ್ರಿಯೆ ಕೇಳಿದಾಗ, ಬೆಂಗಳೂರು ಅಂತಾರಾಷ್ಟ್ರೀಯ ಸಿನಿಮೋತ್ಸವದ ಆಯೋಜಕ ಕರ್ನಾಟಕ ಚಲನಚಿತ್ರ ಅಕಾಡೆಮಿಯ ರಿಜಿಸ್ಟ್ರಾರ್ ಜಿ ಹಿಮಂತ ರಾಜು, “ಈ ಬಾರಿ ಕನ್ನಡ ಸಿನಿಮಾ ರಂಗದ ಬಹುತೇಕ ಸ್ಟಾರ್ ನಟ- ನಟಿಯರು, ನಿರ್ದೇಶಕರು, ನಿರ್ಮಾಪಕರು, ಕಲಾವಿದರು, ತಂತ್ರಜ್ಞರನ್ನು ನಾವು ಖುದ್ದು ಆಹ್ವಾನ ನೀಡಿ ಕರೆದಿದ್ದೇವೆ. ನೂರಾರು ಮಂದಿಗೆ ಆಹ್ವಾನಪತ್ರ ತಲುಪಿಸಬೇಕಾದ ಕಾರಣದಿಂದ ಕೆಲವರಿಗೆ ಮುಂಚಿತವಾಗಿ ತಲುಪದೇ ಇರಬಹುದು. ಆದರೆ, ಬಹುತೇಕ ಎಲ್ಲರಿಗೂ ಆಹ್ವಾನ ಪತ್ರಿಕೆ ತಲುಪಿದೆ. ಆದರೆ, ಎಲ್ಲರನ್ನೂ ಕರೆ ಮಾಡಿ ಆಹ್ವಾನಿಸಲು ಕೆಲವು ಕಾರಣಗಳಿಂದ ಕಷ್ಟಸಾಧ್ಯ. ಇನ್ನು ಕೆಲವೊಮ್ಮೆ ಭದ್ರತೆ ಕಾರಣದಿಂದ ಸ್ಟಾರ್ ನಟ- ನಟಿಯರು ತಾವಾಗಿಯೇ ಇಂತಹ ಸಾರ್ವಜನಿಕ ಕಾರ್ಯಕ್ರಮಗಳಿಂದ ದೂರ ಉಳಿಯುತ್ತಾರೆ. ಅದನ್ನು ಹೊರತುಪಡಿಸಿ ಬೇರಾವುದೇ ಗೊಂದಲಗಳಿಲ್ಲ” ಎಂದು ಸಮಜಾಯಿಷಿ ನೀಡಿದರು.
ಆದರೆ, ಬರಗೂರು ರಾಮಚಂದ್ರಪ್ಪ ಅವರಂಥ ಹಿರಿಯರೇ ತಮಗೆ ಕೊನೇ ಕ್ಷಣದಲ್ಲಿ ಆಹ್ವಾನ ಪತ್ರ ತಲುಪಿದೆ. ಅಂತಹದ್ದೇ ಕಾರಣದಿಂದಾಗಿ ಸಿನಿಮಾ ರಂಗದವರು ಹೆಚ್ಚಿನ ಸಂಖ್ಯೆಯಲ್ಲಿ ಸಿನಿಮೋತ್ಸವದಲ್ಲಿ ಭಾಗವಹಿಸಲು ಆಗದೇ ಇರಬಹುದು ಎಂದೂ ಹೇಳಿದ್ದಾರೆ. ಇನ್ನು ಈ ಕುರಿತು ಪ್ರತಿಕ್ರಿಯೆ ನೀಡಿದ ಹಿರಿಯ ನಿರ್ದೇಶಕ ಟಿ ಎಸ್ ನಾಗಾಭರಣ ಅವರು, ತಮಗೆ ಆಹ್ವಾನ ಪತ್ರ ತಲುಪಿದೆ. ನಾಳೆ- ನಾಡಿದ್ದು ಸಿನಿಮೋತ್ಸವದಲ್ಲಿ ಭಾಗಿಯಾಗುತ್ತೇನೆ ಎಂದರು.
ಸಿನಿಮೋತ್ಸವದಲ್ಲಿ ಅವ್ಯವಸ್ಥೆ
ಇನ್ನು ಈ ಬಾರಿಯ ಸಿನಿಮೋತ್ಸವದಲ್ಲಿ ಹಲವು ವಿಷಯಗಳಲ್ಲಿ ಅವ್ಯವಸ್ಥೆ, ಗೊಂದಲಗಳು ಎದ್ದು ಕಾಣುತ್ತಿವೆ. ಭಾನುವಾರ ಉತ್ಸವ ಚಲನಚಿತ್ರಗಳ ಪ್ರದರ್ಶನ ಆರಂಭವಾಗುತ್ತಲೇ ಒರಾಯನ್ ಮಾಲ್ನಲ್ಲಿ ಅಕಾಡೆಮಿಯ ಸದಸ್ಯರು ಮತ್ತು ಆಯೋಜಕರ ನಡುವೆ ಮಾತಿನ ಚಕಮಕಿಗೂ ಈ ಅವ್ಯವಸ್ಥೆ ಕಾರಣವಾಯಿತು.
ಒಂದು ಹಂತದಲ್ಲಿ ಅಕಾಡೆಮಿಯ ಸದಸ್ಯರೊಬ್ಬರು, ಆಯೋಜಕರ ವಿರುದ್ಧ ಗಂಭೀರ ಆರೋಪ ಮಾಡಿ, “ಇಡೀ ಉತ್ಸವ ದಶಕಗಳಿಂದ ಒಂದು ಗುಂಪಿನ ಏಕಸ್ವಾಮ್ಯಕ್ಕೆ ಒಳಪಟ್ಟಿದೆ. ಯಾರೂ ಹೇಳುವವರು, ಕೇಳುವವರು ಇಲ್ಲ ಎಂಬ ವಾತಾವರಣ ನಿರ್ಮಾಣವಾಗಿದೆ” ಎಂದು ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಇದೇ ವೇಳೆ ಧಿಕ್ಕಾರ ಕೂಗಿ ಒಂದು ಗುಂಪು ಆಕ್ರೋಶ ವ್ಯಕ್ತಪಡಿಸಿದ ಘಟನೆಯೂ ನಡೆಯಿತು.
ಇನ್ನು ದಿನದ ಪಾಸ್ ಮತ್ತು ಮಾಧ್ಯಮ ಪಾಸ್ ವಿಷಯದಲ್ಲಿ ಕೂಡ ಮೂರನೇ ದಿನವೂ ಗೊಂದಲಗಳು ಮುಂದುವರಿದಿದ್ದು, ಪಾಸ್ ಮತ್ತು ಕಿಟ್ ಸಾಮಗ್ರಿಗಳು ಅಗತ್ಯ ಸಂಖ್ಯೆಯಲ್ಲಿ ಮುದ್ರಣವಾಗಿಲ್ಲ. ಹಾಗಾಗಿ ಪಾಸ್ ಮತ್ತು ಕಿಟ್ ಎಲ್ಲರಿಗೂ ಸಕಾಲದಲ್ಲಿ ವಿತರಿಸಲಾಗುತ್ತಿಲ್ಲ ಎಂದು ಮಾಧ್ಯಮ ಸಮಿತಿಯ ನಿರ್ವಾಹಕರೊಬ್ಬರು ಅಸಹಾಯಕತೆ ವ್ಯಕ್ತಪಡಿಸಿದರು.
ಒಟ್ಟಾರೆ ಈ ಬಾರಿಯ ಬೆಂಗಳೂರು ಸಿನಿಮೋತ್ಸವ ಸದ್ಯಕ್ಕಂತೂ ವಿವಾದ, ಅಸಮಾಧಾನ, ಅವ್ಯವಸ್ಥೆ ಮತ್ತು ಗೊಂದಲಗಳಿಂದಲೇ ಹೆಚ್ಚು ಸುದ್ದಿಯಾಗುತ್ತಿದೆ. ಸರ್ವ ಜನಾಂಗದ ಶಾಂತಿಯ ತೋಟ ಎಂಬ ಘೋಷವಾಕ್ಯದಡಿ ನಡೆಯುತ್ತಿರುವ ಉತ್ಸವ ಸರ್ವ ಜನರನ್ನು ವಿಶ್ವಾಸಕ್ಕೆ ಪಡೆಯುವಲ್ಲೇ ಎಡವಿದಂತೆ ತೋರುತ್ತಿದೆ.