
Heinous Crime |ಹಕ್ಕಿಪಿಕ್ಕಿ ಬುಡಕಟ್ಟಿನ ವಿಶೇಷಚೇತನ ಬಾಲಕಿ ಅತ್ಯಾಚಾರ ನಡೆಸಿ ಹತ್ಯೆ? ; 2 ದಿನ ಮನೆಯಲ್ಲೇ ಶವವಿಟ್ಟು ಪೋಷಕರಿಂದ ಪ್ರತಿಭಟನೆ
ಬಾಲಕಿಗೆ ಮಾತು ಬರುತ್ತಿರಲಿಲ್ಲ. ಕಿವಿಯೂ ಕೇಳಿಸುತ್ತಿರಲಿಲ್ಲ. ಶವವಾಗಿ ಪತ್ತೆಯಾದ ಬಾಲಕಿಯನ್ನು ಭೀಭತ್ಸವಾಗಿ ಹತ್ಯೆ ಮಾಡಲಾಗಿದ್ದು, ಕಾಲು, ಸೊಂಟ ಮುರಿದಿದ್ದು, ತಲೆಗೆ ಬಲವಾದ ಆಯುಧದಿಂದ ಹೊಡೆಯಲಾಗಿದೆ. ಮುಖದ ಮೇಲೆ ಸಿಗರೇಟಿನಿಂದ ಸುಟ್ಟಿರುವ ಕಲೆಗಳಿವೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.
ರಾಮನಗರ ಜಿಲ್ಲೆ ಬಿಡದಿಯ ರೈಲ್ವೆ ಹಳಿ ಪಕ್ಕದಲ್ಲಿ ಸೋಮವಾರ ಬೆಳಿಗ್ಗೆ 14 ವರ್ಷದ ಅಪ್ರಾಪ್ತ ಬಾಲಕಿಯ ಶವ ಪತ್ತೆಯಾದ ಪ್ರಕರಣದಲ್ಲಿ ಪೊಲೀಸರ ನಡೆ ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ.
ಬಾಲಕಿಯ ಸಾವಿನ ಮರಣೋತ್ತರ ಪರೀಕ್ಷೆ ವರದಿ ನೀಡುವಂತೆ ಆಗ್ರಹಿಸಿ ಪೋಷಕರು ಹಾಗೂ ಗ್ರಾಮಸ್ಥರು ಎರಡು ದಿನಗಳಿಂದ ಬಾಲಕಿಯ ಮೃತದೇಹವನ್ನು ಮನೆಯ ಮುಂದಿಟ್ಟುಕೊಂಡೇ ಪ್ರತಿಭಟನೆ ನಡೆಸಿದ್ದರು. ಆದರೆ, ಬುಧವಾರ ಸಂಜೆ ಪೊಲೀಸರು ಬಲವಂತವಾಗಿ ಶವವನ್ನು ಕೊಂಡೊಯ್ದರಲ್ಲದೇ ಪೋಷಕರು ಹಾಗೂ ಗ್ರಾಮಸ್ಥರಿಗೆ ಬೆದರಿಕೆ ಹಾಕಿದ್ದಾರೆ ಎಂಬ ಆರೋಪಗಳು ಅನುಮಾನ ಹುಟ್ಟಿಸಿವೆ.
ತಮ್ಮ ಮಗಳ ಮೇಲೆ ದುಷ್ಕರ್ಮಿಗಳು ಅತ್ಯಾಚಾರ ನಡೆಸಿ, ಹತ್ಯೆ ಮಾಡಿದ್ದಾರೆ ಎಂಬುವುದು ಪೋಷಕರ ಆರೋಪ. ಇದಕ್ಕೆ ವಿವಿಧ ಸಂಘಟನೆಗಳು ಕೂಡ ದನಿಗೂಡಿಸಿದ್ದು, ಆರೋಪಿಗಳನ್ನು ಕೂಡಲೇ ಬಂಧಿಸುವಂತೆ ಸರ್ಕಾರವನ್ನು ಆಗ್ರಹಿಸಿವೆ.
ವಿಶೇಷ ಚೇತನ ಬಾಲಕಿ
ಹಕ್ಕಿಪಿಕ್ಕಿ ಬುಡಕಟ್ಟು ಸಮುದಾಯ ಬಾಲಕಿಗೆ ಮಾತು ಬರುತ್ತಿರಲಿಲ್ಲ. ಕಿವಿಯೂ ಕೇಳಿಸುತ್ತಿರಲಿಲ್ಲ. ತಾವರೆಕೆರೆಯಲ್ಲಿ ಏಳನೇ ತರಗತಿ ಮುಗಿಸಿದ್ದರು. ಅಲ್ಲಿಯೇ ವಿದ್ಯಾರ್ಥಿನಿಲಯದಲ್ಲಿ ಉಳಿದಿದ್ದರು. ಶಾಲೆಗೆ ರಜೆ ಇದ್ದ ಕಾರಣ ಊರಿಗೆ ಬಂದಿದ್ದರು. ಭಾನುವಾರ ಸಂಜೆಯಿಂದ ಬಾಲಕಿ ನಾಪತ್ತೆಯಾಗಿದ್ದಳು. ಸೋಮವಾರ ಬೆಳಿಗ್ಗೆ ಮನೆಯ ಅನತಿ ದೂರದಲ್ಲೇ ಹಾದು ಹೋಗಿರುವ ರೈಲ್ವೆ ಹಳಿ ಪಕ್ಕದಲ್ಲಿ ಮೃತದೇಹ ಪತ್ತೆಯಾಗಿತ್ತು.
ದುಷ್ಕರ್ಮಿಗಳ ಬೀಭತ್ಸ ಕೃತ್ಯ
ಶವವಾಗಿ ಪತ್ತೆಯಾದ ಬಾಲಕಿಯನ್ನು ಭೀಭತ್ಸವಾಗಿ ಹತ್ಯೆ ಮಾಡಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ. ಬಾಲಕಿಯ ಕಾಲು, ಸೊಂಟ ಮುರಿದಿದ್ದು, ತಲೆಗೆ ಬಲವಾದ ಆಯುಧದಿಂದ ಹೊಡೆಯಲಾಗಿದೆ. ಮುಖದ ಮೇಲೆ ಸಿಗರೇಟಿನಿಂದ ಸುಟ್ಟಿರುವ ಕಲೆಗಳಿವೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಬಾಲಕಿ ಮೇಲೆ ಅತ್ಯಾಚಾರ ನಡೆಸಿ ಭೀಕರವಾಗಿ ಹತ್ಯೆ ಮಾಡಲಾಗಿದೆ ಎಂದು ಆರೋಪಗಳು ಕೇಳಿ ಬರುತ್ತಿವೆ.
ಮರಣೋತ್ತರ ಪರೀಕ್ಷೆ ತಡ
ಬಾಲಕಿಯ ಶವ ರೈಲ್ವೆ ಹಳಿ ಬಳಿ ಮೇ 12ರಂದು ಬೆಳಿಗ್ಗೆ 7ರ ಸುಮಾರಿಗೆ ಪತ್ತೆಯಾಗಿತ್ತು. ಬಾಲಕಿಯನ್ನು ಬೇರೆ ಜಾಗದಲ್ಲಿ ಕೊಲೆ ಮಾಡಿದ್ದ ದುಷ್ಕರ್ಮಿಗಳು ಶವವನ್ನು ರೈಲು ಹಳಿ ಸಮೀಪ ಹಾಕಿ ಅಪಘಾತದಲ್ಲಿ ಸತ್ತಿದ್ದಾಳೆಂದು ಬಿಂಬಿಸಲು ಯತ್ನಿಸಿದ್ದರು. ಆದರೆ, ರೈಲ್ವೆ ಪೊಲೀಸರು ಪ್ರಕರಣ ದಾಖಲಿಸುವ ಬದಲು ಬಿಡದಿ ಪೊಲೀಸರೇ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿರುವುದು ಕೂಡ ಅನುಮಾನಕ್ಕೆ ಕಾರಣವಾಗಿದೆ.
ಸೋಮವಾರವೇ ಶವವನ್ನು ಕೆಂಗೇರಿಯ ರಾಜರಾಜೇಶ್ವರಿ ಆಸ್ಪತ್ರೆಗೆ ಕೊಂಡೊಯ್ದರೂ ಮಾರನೇ ದಿನ ಅಂದರೆ ಮಂಗಳವಾರ ಮರಣೋತ್ತರ ಪರೀಕ್ಷೆ ಮಾಡಿ, ಮೃತದೇಹವನ್ನು ಕುಟುಂಬದವರಿಗೆ ಹಸ್ತಾಂತರಿಸಿದ್ದರು.
ಕಾಲಾವಾಕಾಶ ಕೇಳಿದ ವೈದ್ಯರು
ಬಾಲಕಿಯ ಸಾವಿನ ಕಾರಣ ತಿಳಿಯಲು ಮರಣೋತ್ತರ ಪರೀಕ್ಷೆ ವರದಿ ನೀಡುವಂತೆ ಪೋಷಕರು ಒತ್ತಾಯಿಸಿದ್ದಾರೆ. ಬಾಲಕಿಯನ್ನು ಭೀಕರವಾಗಿ ಕೊಲೆ ಮಾಡಿರುವುದು ನೋಡಿದರೆ ಮೇಲ್ನೋಟಕ್ಕೆ ಅತ್ಯಾಚಾರ ನಡೆದ ಶಂಕೆಯಿದೆ. ಹಾಗಾಗಿ ಮರಣೋತ್ತರ ಪರೀಕ್ಷೆ ನೀಡುವಂತೆ ಪೋಷಕರು ದೂರಿದ್ದರು.
ವೈದ್ಯರು ವರದಿ ನೀಡಲು ಕಾಲಾವಕಾಶ ಕೇಳಿದ್ದಾರೆ. ಮೊದಲು ಶವಸಂಸ್ಕಾರ ಮಾಡಿ, ಆ ಬಳಿಕ ವರದಿ ನೀಡುತ್ತೇವೆ ಎಂದು ಪೊಲೀಸರು ಹೇಳಿ ಕಳುಹಿಸಿದ್ದು ಬಾಲಕಿಯ ಪೋಷಕರು ಹಾಗೂ ಗ್ರಾಮಸ್ಥರ ಆಕ್ರೋಶಕ್ಕೆ ಕಾರಣವಾಗಿತ್ತು. ಹಾಗಾಗಿ ಎರಡು ದಿನ ಮೃತದೇಹವನ್ನು ಮನೆಯ ಮುಂದಿಟ್ಟು, ವರದಿ ನೀಡುವವರೆಗೂ ಶವ ಸಂಸ್ಕಾರ ಮಾಡಲ್ಲ ಎಂದು ಪಟ್ಟು ಹಿಡಿದಿದ್ದರು.
ಪೊಲೀಸರು ಸರಿಯಾಗಿ ತನಿಖೆ ನಡೆಸುತ್ತಿಲ್ಲ. ಮಗಳ ಸಾವಿನ ಕುರಿತು ಏನನ್ನೋ ಮುಚ್ಚಿಡುತ್ತಿದ್ದಾರೆ ಎಂದು ಕುಟುಂಬದವರು ಅನುಮಾನ ವ್ಯಕ್ತಪಡಿಸಿದ್ದರು.
ಶವ ಹೊತ್ತೊಯ್ದ ಪೊಲೀಸರು
ಬಾಲಕಿಯ ಶವವನ್ನು ಎರಡು ದಿನ ಮನೆಯ ಮುಂದೆ ಇಟ್ಟುಕೊಂಡು ಪ್ರತಿಭಟನೆ ನಡೆಸುತ್ತಿದ್ದ ನಮಗೆ ಪೊಲೀಸರು ಬೆದರಿಕೆ ಹಾಕಿ ಬಲವಂತವಾಗಿ ಶವವನ್ನು ತೆಗೆದುಕೊಂಡು ಹೋಗಿ ಮಣ್ಣು ಮಾಡಿದ್ದಾರೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.
ಇದಲ್ಲದೇ ಕನ್ನಡ ಪರ ಸಂಘಟನೆಯೊಂದರ ಮುಖಂಡ ಕೂಡ ಪೊಲೀಸರಿಗೆ ಸಾಥ್ ನೀಡಿದ್ದಾರೆ ಎಂದು ಡಾ.ಬಿ.ಆರ್. ಅಂಬೇಡ್ಕರ್ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡಗಳ ಕ್ಷೇಮಾಭಿವೃದ್ಧಿ ಸಂಘದ ಮುಖಂಡರು ದೂರಿದ್ದಾರೆ.
ಬಾಲಕಿಯ ಕುಟುಂಬಸ್ಥರು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಭೇಟಿ ಮಾಡಿ ಮಗಳ ಸಾವಿಗೆ ನ್ಯಾಯ ದೊರಕಿಸಿಕೊಡುವಂತೆ ಮನವಿ ಮಾಡಿದರು
ಡಿಸಿಎಂ ಭೇಟಿ ಮಾಡಿದ ಮುಖಂಡರು
ಬಾಲಕಿಯ ಹತ್ಯೆ ವಿಚಾರಕ್ಕೆ ಸಂಬಂಧಿಸಿ ದಲಿತ ಸಂಘಟನೆ ಮುಖಂಡರು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಭೇಟಿಯಾಗಿ ಬಾಲಕಿಯ ಸಾವಿಗೆ ನ್ಯಾಯ ದೊರಕಿಸಿಕೊಡುವಂತೆ ಮನವಿ ಮಾಡಿದ್ದಾರೆ. ಈ ವೇಳೆ ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ನ್ಯಾಯ ಕೊಡಿಸುವ ಭರವಸೆ ನೀಡಿದ್ದಾರೆ.
"ಬಾಲಕಿಯ ಅನುಮಾನಾಸ್ಪದ ಸಾವಿನ ಪ್ರಕರಣದ ಬಗ್ಗೆ ಪೊಲೀಸರು ತನಿಖೆ ಮಾಡುತ್ತಿದ್ದಾರೆ. ಈ ವಿಚಾರದಲ್ಲಿ ಯಾರ ಒತ್ತಡಕ್ಕೂ ಒಳಗಾಗದೆ ನ್ಯಾಯಪರ, ನಿಷ್ಠುರವಾಗಿ ತನಿಖೆ ನಡೆಯಲಿದೆ. ತನಿಖೆ ಮಾಡುವುದು ಪೊಲೀಸ್ ಇಲಾಖೆ ಕರ್ತವ್ಯ" ಎಂದು ಡಿ.ಕೆ. ಶಿವಕುಮಾರ್ ಹೇಳಿದ್ದಾರೆ.
ಬಾಲಕಿಯ ಮೇಲೆ ಅತ್ಯಾಚಾರ ನಡೆಸಿ ಕೊಲೆ ಮಾಡಲಾಗಿದೆಯೇ ಎಂಬ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಅವರು, "ಎಲ್ಲಾ ಆಯಾಮದಲ್ಲಿಯೂ ಪೊಲೀಸರು ತನಿಖೆ ಮಾಡಲಿದ್ದಾರೆ. ದ್ವೇಷದಿಂದ ಹತ್ಯೆ ನಡೆದಿದೆಯೇ? ಅತ್ಯಾಚಾರವಾಗಿದೆಯೇ? ಏನಾದರೂ ಬೇರೆ ಕಾರಣ ಇದೆಯೇ ಎಂಬುದು ತನಿಖೆಯಿಂದ ಗೊತ್ತಾಗಲಿದೆ. ನಾವು ನ್ಯಾಯ ಕೊಡಿಸುತ್ತೇವೆ” ಎಂದು ತಿಳಿಸಿದ್ದಾರೆ.
ಬಾಲಕಿ ಕುಟುಂಬಕ್ಕೆ ಪರಿಹಾರ
ಭದ್ರಾಪುರದ ಹಕ್ಕಿಪಿಕ್ಕಿ ಬುಡಕಟ್ಟು ಜನಾಂಗದ ಬಾಲಕಿಯ ಕುಟುಂಬಸ್ಥರಿಗೆ ರಾಮನಗರ ಜಿಲ್ಲಾಡಳಿತದ ವತಿಯಿಂದ 4,12,500 ರೂ. ಪಂಚಾಯ್ತಿ ವತಿಯಿಂದ 50,000 ರೂ ಪರಿಹಾರ ಚೆಕ್ ವಿತರಿಸಲಾಯಿತು.
ಕಾಲೊನಿಯಲ್ಲಿ ಮೂಲಸೌಕರ್ಯ ಇಲ್ಲ
ಹಕ್ಕಿಪಿಕ್ಕಿ ಬುಡಕಟ್ಟು ಸಮುದಾಯ ವಾಸಿಸುತ್ತಿರುವ ಬಿಡದಿ ಹೋಬಳಿಯ ಭದ್ರಾಪುರದಲ್ಲಿ ಯಾವುದೇ ಮೂಲ ಸೌಕರ್ಯ ಇಲ್ಲ. ಬೀದಿ ದೀಪಗಳಿಲ್ಲದೇ ಹೆಣ್ಣು ಮಕ್ಕಳು ನಿರ್ಭೀತಿಯಿಂದ ಓಡಾಡುವುದೇ ದುಸ್ತರವಾಗಿದೆ. ಇಂತಹ ಅವಘಢ ನಡೆದರೂ ಕೇಳುವವರಿಲ್ಲದಂತಾಗಿದೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.