Bhovi Corporation scam: ED attaches immovable property worth Rs 26.27 crore
x
ಸಾಂದರ್ಭಿಕ ಚಿತ್ರ.

ಭೋವಿ ನಿಗಮ ಹಗರಣ: ಇ.ಡಿ. ಯಿಂದ 26.27 ಕೋಟಿ ಮೌಲ್ಯದ ಸ್ಥಿರಾಸ್ತಿ ಜಪ್ತಿ

2021ನೇ ಸಾಲಿನಲ್ಲಿ ಉದ್ಯಮಿಗಳಿಗೆ ಸಾಲ ನೀಡುವಾಗ ಅಕ್ರಮ ನಡೆದಿದ್ದು, ಸಾರ್ವಜನಿಕರ ದಾಖಲೆಗಳ ದುರ್ಬಳಕೆ ಜತೆಗೆ 10 ಕೋಟಿ ರೂಪಾಯಿಗೂ ಅಧಿಕ ಅಕ್ರಮ ನಡೆದಿದೆ ಎಂದು ದೂರು ದಾಖಲಾಗಿತ್ತು. ಪ್ರಕರಣವನ್ನು ಸಿಐಡಿ ಹಾಗೂ ಲೋಕಾಯುಕ್ತಾ ಸಂಸ್ಥೆಗಳು ತನಿಖೆ ನಡೆಸಿದ್ದವು.


ಭೋವಿ ನಿಗಮ ಹಗರಣ: ಇಡಿಯಿಂದ 26.27 ಕೋಟಿ ಮೌಲ್ಯದ ಆಸ್ತಿ ಮುಟ್ಟುಗೋಲು

ರಾಜ್ಯದಲ್ಲಿ ತೀವ್ರ ಸಂಚಲನ ಮೂಡಿಸಿದ್ದ ಭೋವಿ ನಿಗಮ ಹಗರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯದ (ಇ.ಡಿ.) ಅಧಿಕಾರಿಗಳು ಬಿ.ಕೆ. ನಾಗರಾಜಪ್ಪ, ಆರ್‌. ಲೀಲಾವತಿ ಹಾಗೂ ಇತರ ಆರೋಪಿಗಳಿಗೆ ಸೇರಿದ 26.27 ಕೋಟಿ ರೂಪಾಯಿ ಮೌಲ್ಯದ ಆಸ್ತಿಯನ್ನು ತಾತ್ಕಾಲಿಕವಾಗಿ ಮುಟ್ಟುಗೋಲು ಹಾಕಿಕೊಂಡಿದ್ದಾರೆ. ಈ ಮುಟ್ಟುಗೋಲು ಹಾಕಿಕೊಂಡಿರುವ ಆಸ್ತಿಯ ಪ್ರಸ್ತುತ ಮಾರುಕಟ್ಟೆ ಮೌಲ್ಯ ಸುಮಾರು 26 ಕೋಟಿ ರೂಪಾಯಿ ಎಂದು ಅಂದಾಜಿಸಲಾಗಿದೆ.

2021ನೇ ಸಾಲಿನಲ್ಲಿ ಉದ್ಯಮಿಗಳಿಗೆ ಸಾಲ ನೀಡುವಾಗ ಅಕ್ರಮ ನಡೆದಿದೆ ಎಂದು ದೂರು ದಾಖಲಾಗಿತ್ತು. ಈ ಪ್ರಕರಣದಲ್ಲಿ ಸಾರ್ವಜನಿಕರ ದಾಖಲೆಗಳ ದುರ್ಬಳಕೆ ಹಾಗೂ 10 ಕೋಟಿ ರೂಪಾಯಿಗೂ ಅಧಿಕ ಅಕ್ರಮ ನಡೆದಿದೆ ಎಂದು ಆರೋಪಿಸಲಾಗಿತ್ತು. ಪ್ರಕರಣವನ್ನು ಸಿಐಡಿ ಹಾಗೂ ಲೋಕಾಯುಕ್ತ ಸಂಸ್ಥೆಗಳು ತನಿಖೆ ನಡೆಸಿದ್ದವು. ಈ ತನಿಖೆಯ ವೇಳೆ, 2018ರಿಂದ 2023ರವರೆಗೆ ಐದು ವರ್ಷಗಳಲ್ಲಿ 90 ಕೋಟಿ ರೂಪಾಯಿಗೂ ಹೆಚ್ಚು ಅಕ್ರಮ ನಡೆದಿರುವುದು ಬೆಳಕಿಗೆ ಬಂದಿತ್ತು.

ಸಿಐಡಿ ತನಿಖೆ ಮತ್ತು ಹಣ ವರ್ಗಾವಣೆ

ಬಹುಕೋಟಿ ಅವ್ಯವಹಾರ ಪ್ರಕರಣದ ತನಿಖೆ ನಡೆಸಿದ್ದ ಸಿಐಡಿ, ಐದು ಖಾಸಗಿ ಕಂಪನಿಗಳಿಗೆ ಅಕ್ರಮವಾಗಿ 34 ಕೋಟಿ ರೂಪಾಯಿ ಹಣ ವರ್ಗಾವಣೆಯಾಗಿರುವುದನ್ನು ಪತ್ತೆಹಚ್ಚಿತ್ತು. ಅಲ್ಲದೆ, ಅಪರಾಧ ತನಿಖಾ ಇಲಾಖೆ (ಸಿಐಡಿ) ವಕೀಲೆ ಜೀವಾ ಅವರ ಖಾತೆಗೆ 7.16 ಕೋಟಿ ರೂಪಾಯಿ ಜಮೆಯಾಗಿರುವುದನ್ನು ಪತ್ತೆ ಮಾಡಿತ್ತು. ಭೋವಿ ನಿಗಮದ ವ್ಯವಸ್ಥಾಪಕ ನಿರ್ದೇಶಕಿ ಲೀಲಾವತಿ, ನಿಗಮದ ಪ್ರಧಾನ ವ್ಯವಸ್ಥಾಪಕ ಬಿ.ಕೆ. ನಾಗರಾಜಪ್ಪ ಹಾಗೂ ಮಾಜಿ ಅಧೀಕ್ಷಕ ಸುಬ್ಬಪ್ಪ ಅವರು ತಮ್ಮ ನೆರೆಹೊರೆಯವರು, ಬಾಡಿಗೆದಾರರು, ಸಂಬಂಧಿಕರ ಹೆಸರಿನಲ್ಲಿ ನಕಲಿ ಕಂಪನಿಗಳನ್ನು ತೆರೆದು ಅವರ ಖಾತೆಗಳಿಗೆ ಹಣ ಜಮೆ ಮಾಡಿರುವುದು ತನಿಖೆಯಲ್ಲಿ ಬಯಲಾಗಿತ್ತು.

ವಕೀಲೆ ಜೀವಾ ಆತ್ಮಹತ್ಯೆ ಪ್ರಕರಣದ ನಂಟು

ಈ ಹಗರಣದ ತನಿಖೆ ಎದುರಿಸುತ್ತಿದ್ದಾಗ ಪೊಲೀಸ್ ಅಧಿಕಾರಿ ಡಿವೈಎಸ್‌ಪಿ ಕನಕಲಕ್ಷ್ಮಿ ಅವರು ತಮ್ಮನ್ನು ವಿವಸ್ತ್ರಗೊಳಿಸಿ ವಿಚಾರಣೆ ನಡೆಸಿದ್ದಲ್ಲದೆ, 25 ಲಕ್ಷ ರೂಪಾಯಿ ಲಂಚಕ್ಕೆ ಬೇಡಿಕೆ ಇಟ್ಟಿದ್ದರು ಎಂದು ವಕೀಲೆ ಜೀವಾ (34) ಅವರು 13 ಪುಟಗಳ ಡೆತ್‌ ನೋಟ್ ಬರೆದಿಟ್ಟು 2024ರ ನವೆಂಬರ್ 22ರಂದು ಆತ್ಮಹತ್ಯೆ ಮಾಡಿಕೊಂಡಿದ್ದರು. ಈ ಸಂಬಂಧ ಜೀವಾ ಅವರ ಸಹೋದರಿ ಸಿಐಡಿ ಡಿವೈಎಸ್‌ಪಿ ಕನಕಲಕ್ಷ್ಮಿ ವಿರುದ್ಧ ದೂರು ನೀಡಿದ್ದರು. ತನಿಖೆ ನಡೆಸಿದ್ದ ಪೊಲೀಸರು ಕನಕಲಕ್ಷ್ಮೀ ಅವರನ್ನು ಬಂಧಿಸಿದ್ದರು.

Read More
Next Story