
ಕುವೆಂಪು ವಿವಿ
ಕುವೆಂಪು ವಿವಿಯಲ್ಲಿ 'ಭಗವದ್ಗೀತೆ' ವಿಚಾರ ಸಂಕಿರಣ: ದಲಿತ ಸಂಘರ್ಷ ಸಮಿತಿಯಿಂದ 'ತಮಟೆ ಚಳವಳಿ' ಎಚ್ಚರಿಕೆ
ವಿಶ್ವವಿದ್ಯಾಲಯಗಳಲ್ಲಿ ಒಂದೇ ಸಿದ್ಧಾಂತವನ್ನು ಹೇರಿ, ಮನುಸ್ಮೃತಿಯನ್ನು ವಿದ್ಯಾರ್ಥಿಗಳ ತಲೆಗೆ ತುಂಬುವ ಸಂಘ ಪರಿವಾರದ ಹುನ್ನಾರ ಇದರ ಹಿಂದಿದೆ ಎಂದು ಸಮಿತಿ ದೂರಿದೆ.
ಕುವೆಂಪು ವಿಶ್ವವಿದ್ಯಾನಿಲಯದಲ್ಲಿ ಮಂಗಳವಾರ ಆಯೋಜಿಸಲಾಗಿರುವ 'ಭಗವದ್ಗೀತೆ ಮತ್ತು ಅಪರಾಧ ನಿಯಂತ್ರಣ' ಕುರಿತ ವಿಚಾರ ಸಂಕಿರಣಕ್ಕೆ ಕರ್ನಾಟಕ ದಲಿತ ಸಂಘರ್ಷ ಸಮಿತಿ (KDSS) ತೀವ್ರ ವಿರೋಧ ವ್ಯಕ್ತಪಡಿಸಿದೆ. ಕಾರ್ಯಕ್ರಮವನ್ನು ರದ್ದುಗೊಳಿಸದಿದ್ದರೆ 'ತಮಟೆ ಚಳವಳಿ' ನಡೆಸುವುದಾಗಿ ಎಚ್ಚರಿಕೆ ನೀಡಿದೆ.
ಈ ವಿಚಾರ ಸಂಕಿರಣವು ಬಲಪಂಥೀಯ ಸಿದ್ಧಾಂತವನ್ನು ವಿದ್ಯಾರ್ಥಿಗಳ ಮೇಲೆ ಹೇರುವ ಅಜೆಂಡಾವನ್ನು ಹೊಂದಿದೆ ಎಂದು ದಲಿತ ಸಂಘರ್ಷ ಸಮಿತಿ ಆರೋಪಿಸಿದೆ. "ಭಗವದ್ಗೀತೆಯನ್ನು ಚಾತುರ್ವರ್ಣ ವ್ಯವಸ್ಥೆ ಮತ್ತು ಜಾತಿ ಪದ್ಧತಿಯನ್ನು ಸಮರ್ಥಿಸಲು ಐತಿಹಾಸಿಕವಾಗಿ ಬಳಸಲಾಗಿದೆ. ಇಂತಹ ಕಾರ್ಯಕ್ರಮಗಳು ರಾಷ್ಟ್ರಕವಿ ಕುವೆಂಪು ಅವರ ಆದರ್ಶಗಳಿಗೆ ಮತ್ತು ಡಾ. ಬಿ.ಆರ್. ಅಂಬೇಡ್ಕರ್ ಅವರ ಸಂವಿಧಾನದ ಆಶಯಗಳಿಗೆ ವಿರುದ್ಧವಾಗಿವೆ," ಎಂದು ಸಮಿತಿಯ ರಾಜ್ಯ ಸಂಚಾಲಕ ಎಂ. ಗುರುಮೂರ್ತಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ವಿಶ್ವವಿದ್ಯಾಲಯಗಳಲ್ಲಿ ಒಂದೇ ಸಿದ್ಧಾಂತವನ್ನು ಹೇರಿ, ಮನುಸ್ಮೃತಿಯನ್ನು ವಿದ್ಯಾರ್ಥಿಗಳ ತಲೆಗೆ ತುಂಬುವ ಸಂಘ ಪರಿವಾರದ ಹುನ್ನಾರ ಇದರ ಹಿಂದಿದೆ ಎಂದು ಸಮಿತಿ ದೂರಿದೆ. ರಾಜ್ಯದ ಬೇರೆ ಯಾವುದೇ ವಿಶ್ವವಿದ್ಯಾಲಯ ಆಯೋಜಿಸದ ಈ ಕಾರ್ಯಕ್ರಮವನ್ನು ಕುವೆಂಪು ವಿವಿಯಲ್ಲಿ ಏಕೆ ಆಯೋಜಿಸಲಾಗಿದೆ ಎಂದು ಪ್ರಶ್ನಿಸಲಾಗಿದೆ.
ಕುಲಪತಿಗಳ ಪಾಲ್ಗೊಳ್ಳುವಿಕೆಗೂ ಆಕ್ಷೇಪ
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಉಪಕುಲಪತಿಗಳು ವಹಿಸಿರುವುದು "ಕುವೆಂಪು ಅವರ ಸರ್ವಮಾನವ ಮೌಲ್ಯಗಳಿಗೆ ಮಾಡಿದ ಅವಮಾನ" ಎಂದು ಸಮಿತಿ ಆಕ್ಷೇಪ ವ್ಯಕ್ತಪಡಿಸಿದೆ. ಅಲ್ಲದೆ, ಕಾರ್ಯಕ್ರಮಕ್ಕೆ ಆಹ್ವಾನಿತರಾಗಿರುವ ವಕ್ತಾರರು ಗಾಂಧಿ, ಬಸವಣ್ಣ ಮತ್ತು ಅಂಬೇಡ್ಕರ್ ಅವರ ಚಿಂತನೆಗಳನ್ನು ವಿರೋಧಿಸುವ ಸಂಘಟನೆಗಳೊಂದಿಗೆ ಗುರುತಿಸಿಕೊಂಡಿದ್ದಾರೆ ಎಂದು ಆರೋಪಿಸಲಾಗಿದೆ.
ಕುವೆಂಪು ವಿವಿ ಸಿಂಡಿಕೇಟ್ ಸದಸ್ಯ ಕೆ.ಪಿ. ಶ್ರೀಪಾಲ್ ಅವರೂ ಕೂಡ ಕುಲಪತಿಗಳಿಗೆ ಪತ್ರ ಬರೆದು, ವಿಚಾರ ಸಂಕಿರಣದ ಔಚಿತ್ಯವನ್ನು ಪ್ರಶ್ನಿಸಿದ್ದಾರೆ. ಬಲಪಂಥೀಯ ಸಿದ್ಧಾಂತವನ್ನು ಪ್ರತಿಪಾದಿಸುವ ಸಂಘ ಪರಿವಾರದ ಸದಸ್ಯರು, ಇದೀಗ ಭಗವದ್ಗೀತೆಯ ಹೆಸರಿನಲ್ಲಿ ವಿವಿಗೆ ಪ್ರವೇಶಿಸುತ್ತಿರುವುದು ಅಪಾಯಕಾರಿ ಬೆಳವಣಿಗೆ ಎಂದು ಅವರು ಕಳವಳ ವ್ಯಕ್ತಪಡಿಸಿದ್ದಾರೆ.
ಸ್ವರ್ಣ ರಶ್ಮಿ ಟ್ರಸ್ಟ್, ಭಗವದ್ಗೀತೆ ಅಭಿಯಾನ ಜಿಲ್ಲಾ ಸಮಿತಿ ಮತ್ತು ಕುವೆಂಪು ವಿವಿಯ ಸಹಯೋಗದಲ್ಲಿ ಈ ಕಾರ್ಯಕ್ರಮವನ್ನು ವಿವಿಯ ಬಸವ ಮಂಟಪದಲ್ಲಿ ಆಯೋಜಿಸಲಾಗಿದೆ. ಕಾರ್ಯಕ್ರಮಕ್ಕೆ ಕೇವಲ ಎರಡು ದಿನಗಳಿರುವಾಗ ಆಹ್ವಾನ ಪತ್ರಿಕೆ ನೀಡಿರುವುದರ ಬಗ್ಗೆಯೂ ಸಮಿತಿ ಅನುಮಾನ ವ್ಯಕ್ತಪಡಿಸಿದೆ.

