Bangalore VV Puram Street Food |  ವಿ.ವಿ. ಪುರಕ್ಕೆ ಬನ್ನಿ... ಹೊಟ್ಟೆಗೆ ಮಾತ್ರವಲ್ಲ ಕಣ್ಣಿಗೂ ಟ್ರೀಟ್
x
ವಿವಿ ಪುರನ ಫುಡ್‌ ಸ್ಟ್ರೀಟ್‌

Bangalore VV Puram Street Food | ವಿ.ವಿ. ಪುರಕ್ಕೆ ಬನ್ನಿ... ಹೊಟ್ಟೆಗೆ ಮಾತ್ರವಲ್ಲ ಕಣ್ಣಿಗೂ ಟ್ರೀಟ್

ಸುಮಾರು ಆರು ಕೋಟಿ ರೂ ವೆಚ್ಚದಲ್ಲಿ ಅಭಿವೃದ್ಧಿ ಕಾಮಗಾರಿಗಳು ನಡೆಯುತ್ತಿದ್ದು, 2022 ರ ಡಿಸೆಂಬರ್‌ನಲ್ಲಿ ಆರಂಭಗೊಂಡ ಬಹುತೇಕ ಕಾಮಗಾರಿಗಳು ಈಗ ಪೂರ್ಣಗೊಂಡಿದೆ.


ಬೆಂಗಳೂರಿನ ಗಾಂಧಿ ಬಜಾರ್ ಬಳಿಯ ಸಜ್ಜನ್ ರಾವ್ ವೃತ್ತದ ಬಳಿ ಇರುವ ವಿ.ವಿ. ಪುರ(ವಿಶ್ವೇಶ್ವರಪುರ)ನ ತಿಂಡಿ ಬೀದಿಗೆ (ಫುಡ್ ಸ್ಟ್ರೀಟ್‌) ದಶಕಗಳ ಇತಿಹಾಸವಿದೆ. ಇದು ಹೆಚ್ಚಿನ ಆಹಾರ ಪ್ರಿಯರ ಅಚ್ಚುಮೆಚ್ಚಿನ ತಾಣವಾಗಿರುವುದರಿಂದ ಬಿಬಿಎಂಪಿ ಈ ತಾಣವನ್ನು ಮತ್ತಷ್ಟು ಮೆರುಗುಗೊಳಿಸಲು ಮತ್ತು ವ್ಯಾಪಾರಸ್ಥರಿಗೆ ಹಾಗೂ ಗ್ರಾಹಕರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಅನೇಕ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಂಡಿದ್ದು, ಈ ಫುಡ್‌ ಸ್ಟ್ರೀಟ್‌ಗೆ ಹೈಟೆಕ್‌ ಸ್ಪರ್ಶ ನೀಡಿದೆ.

ಪೂರ್ಣಗೊಂಡ ಕಾಮಗಾರಿ

ಸುಮಾರು ಆರು ಕೋಟಿ ರೂ. ವೆಚ್ಚದಲ್ಲಿ ಅಭಿವೃದ್ಧಿ ಕಾಮಗಾರಿಗಳು ನಡೆಯುತ್ತಿದ್ದು, 2022 ರ ಡಿಸೆಂಬರ್‌ನಲ್ಲಿ ಆರಂಭಗೊಂಡ ಬಹುತೇಕ ಕಾಮಗಾರಿಗಳು ಈಗ ಬಹುತೇಕ ಪೂರ್ಣಗೊಂಡಿದೆ. ಒಳಚರಂಡಿ, ಮಳೆನೀರು ಕಾಲುವೆ, ನೀರು ಸರಬರಾಜು ಕೊಳವೆಗಳ ಅಳವಡಿಕೆ, ಭೂಗತ ವಿದ್ಯುತ್‌ ಸಂಪರ್ಕ, ಒಎಫ್‌ಸಿ ಜಾಲಕ್ಕೆ ಡಕ್ಟ್‌ಗಳ ನಿರ್ಮಾಣ ಕಾಮಗಾರಿ, ಪಾದಚಾರಿ ಮಾರ್ಗ ನಿರ್ಮಾಣ, ಬೆಂಚುಗಳ ವ್ಯವಸ್ಥೆ, ಬೀದಿದೀಪಗಳನ್ನು ಅಳವಡಿಸುವ ಕಾರ್ಯ ಪೂರ್ಣಗೊಂಡಿದೆ. ಇದೀಗ ಈ ಬೀದಿಗೆ ಹೊಸ ರೂಪ ಮೂಡಿಬಂದಿದ್ದು, ಸಾರ್ವಜನಿಕರು ಓಡಾಡಲು ಅನುಕೂಲವಾಗುವ ಉದ್ದೇಶದಿಂದ 7 ಮೀಟರ್ ಇದ್ದ ರಸ್ತೆಯ ಅಗಲವನ್ನು 5 ಮೀಟರ್‌ಗೆ ಕಿರಿದಾಗಿಸಿದೆ. ಇದರಿಂದ 3.5 ಮೀಟರ್ ಅಗಲದ ಪಾದಚಾರಿ ಮಾರ್ಗ ನಿರ್ಮಿಸಲಾಗಿದ್ದು, ತಿಂಡಿ, ತಿನಿಸು ಸವಿಯಲು ಬರುವ ಸಾರ್ವಜನಿಕರು ಆತಂಕವಿಲ್ಲದೆ ಓಡಾಡಲು ಅನುಕೂಲವಾಗಿದೆ.

ಬಾಕಿ ಉಳಿದಿರುವ ಕಾಮಗಾರಿ

ಹಸಿ ಕಸ/ಒಣ ಕಸವನ್ನು ಪ್ರತ್ಯೇಕವಾಗಿ ಹಾಕಲು ಕಸದ ಬುಟ್ಟಿಗಳ ಅಳವಡಿಕೆ, ಎಲ್ಲ ತಿಂಡಿ ಮಳಿಗೆಗಳಿಗೆ ಏಕರೂಪದ ನೆರಳಿನ ವ್ಯವಸ್ಥೆ ಕಲ್ಪಿಸುವ ಕೆಲಸವೂ ಬಾಕಿ ಉಳಿದಿದೆ. ಈ ಎಲ್ಲಾ ಕೆಲಸಗಳು ಪೂರ್ಣಗೊಂಡರೆ ಇದರಿಂದ ವ್ಯಾಪಾರಸ್ಥರಿಗೂ, ಗ್ರಾಹಕರಿಗೂ ಅನುಕೂಲವಾಗಲಿದೆ.

ಸ್ಪಚ್ಛತೆ ಕಾಪಾಡುತ್ತಿಲ್ಲ

ದೇಶ ಮಟ್ಟದಲ್ಲೇ ಹೆಸರುವಾಸಿಯಾಗಿರುವ ಈ ಬೀದಿ ಆಹಾರ ಮಳಿಗೆಯುಳ್ಳ ರಸ್ತೆಗಳನ್ನು ಗ್ರಾಹಕರು ಮತ್ತು ವ್ಯಪಾರಸ್ಥರಗೆ ಅನುಕೂಲವಾಗುವಂತೆ ಬಿಬಿಎಂಪಿ ಹೈಟೆಕ್‌ ಸ್ಪರ್ಶ ನೀಡಿ ಅಭಿವೃದ್ಧಿ ಕೆಲಸಗಳನ್ನು ನಡೆಸುತ್ತಿದ್ದರೂ ಕೆಲವೊಂದು ಕಡೆ ಸ್ಪಚ್ಛತೆ ಕಾಪಾಡುವುದಿಲ್ಲ ಎಂಬ ಕೂಗು ಕೇಳಿ ಬಂದಿದೆ. ಕೆಲವೊಂದು ಅಂಗಡಿಗಳು ಸ್ವಚ್ಛತೆಯನ್ನು ಕಾಪಾಡುವುದಿಲ್ಲ. ನಿಯಮ ಪಾಲನೆಗಳನ್ನು ಸರಿಯಾಗಿ ಮಾಡುತ್ತಿಲ್ಲ ಎಂಬ ದೂರುಗಳೂ ಕೂಡ ಇವೆ. ಕೆಲವೊಂದು ಅಂಗಡಿಗಳು ಕಸವನ್ನು ಹಾಕಲು ಕಸದ ತೊಟ್ಟಿಯ ವ್ಯವಸ್ಥೆಯನ್ನು ಮಾಡಿಲ್ಲ. ಇದರಿಂದಾಗಿ ಗ್ರಾಹಕರಿಗೆ ತುಂಬಾ ತೊಂದರೆಯಾಗುತ್ತದೆ. ಗ್ರಾಹಕರು ಮೂಗು ಮುಚ್ಚಿ ಹೋಗುವಂತಾಗಿದೆ ಎಂದು ಹೇಳುತ್ತಾರೆ ರಾಯಲ್‌ ಕಾರ್ನರ್‌ ಐಸ್‌ಕ್ರೀಂ ಅಂಗಡಿ ಮಾಲೀಕ ಸತ್ಯಾ ಅವರು ʻದ ಫೆಡರಲ್‌ ಕರ್ನಾಟಕʼಕ್ಕೆ ತಿಳಿಸಿದರು.

ಯಾವೆಲ್ಲ ಆಹಾರಗಳು ಇಲ್ಲಿ ಲಭ್ಯ

ವಿವಿಧ ರೀತಿಯ ವಿಶಿಷ್ಟ, ರುಚಿಕರವಾದ ಭಕ್ಷ್ಯಗಳನ್ನು ಮಾರಾಟ ಮಾಡುವ ರಸ್ತೆಯ ಎರಡೂ ಬದಿ ಆಹಾರ ಮಳಿಗೆಗಳಿಂದ ಕೂಡಿದ ಈ ಬೀದಿ ಆಹಾರ ಮಳಿಗೆಯಲ್ಲಿ ನಾನಾ ಬಗೆಯ ಭಕ್ಷಗಳು ಲಭ್ಯ. ಹತ್ತಾರು ಬಗೆಯ ದೋಸೆಗಳು, ಚೈನೀಸ್ ಕುರುಕಲು ತಿನಿಸುಗಳು, ಬಗೆ ಬಗೆಯ ಪಾನಿಪೂರಿ, ಮಂಚೂರಿಯನ್ ರೋಲ್, ಪಾವ್ ಬಾಜಿ, ಮಿರ್ಚಿ ಬಜ್ಜಿ, ಖಾರಾ ಕಾಂಗ್ರೆಸ್ ಬನ್, ರುಮಾಲಿ ರೋಟಿ, ಪಂಜಾಬಿ, ರಾಜಸ್ಥಾನಿಗಳು ಆಹಾರ ಖಾದ್ಯಗಳು ಇಲ್ಲಿ ಬಾಯಿ ಚಪ್ಪರಿಸುವಂತೆ ತಿನ್ನಬಹುದು. ಇಲ್ಲಿಯ ಇನ್ನೊಂದು ವಿಶೇಷ ಅಂದರೆ ಇಲ್ಲಿ ಕೇವಲ ಸಸ್ಯಹಾರಿ ಖಾದ್ಯಗಳ ಮಾತ್ರ ಲಭ್ಯವಿದೆ.

ನೀವು ಟ್ರೈ ಮಾಡಲೇಬೇಕಾದ ಖಾದ್ಯಗಳಿವು

ಖಾರಾ ಕಾಂಗ್ರೆಸ್ ಬನ್: ಈ ಬನ್‌ ವಿಬಿ ಬೇಕರಿಯಲ್ಲಿ ಲಭ್ಯವಿದೆ. ಮಸಾಲೆಗಳು ಮತ್ತು ಕಡಲೆಕಾಯಿಗಳ ಬೆಣ್ಣೆಯ ಮಿಶ್ರಣದಿಂದ ತುಂಬಿದ ಹಗುರವಾದ ಬನ್ ಇದು. 1969 ರಲ್ಲಿ ಕಾಂಗ್ರೆಸ್ ಪಕ್ಷ ಎರಡು ಗುಂಪುಗಳಾಗಿ ವಿಭಜನೆಯಾದಾಗ (ಕಡಲೆಕಾಯಿ ಯಾವಾಗಲೂ ಎರಡು ಭಾಗಗಳಾಗಿ ವಿಭಜನೆಯಾಗುವಂತೆಯೇ) ನಡೆದ ಘಟನೆಯ ನಂತರ ಇದಕ್ಕೆ ಈ ಹೆಸರು ಬಂದಿದೆ ಎನ್ನಲಾಗಿದೆ. ಅದಲ್ಲದೆ ಇಲ್ಲಿ ಸಿಗುವ ಮೊಸರು ಕೋಡುಬಳೆ, ಅವರೆಕಾಳು ದೋಸೆ, ಪಡ್ಡು, 99ವೈರಟಿ ದೋಸೆಗಳು, ಹಾಗೂ ಇನ್ನಿತರ ಸಾಂಪ್ರಾದಯಿಕ ಖಾದ್ಯಗಳನ್ನು ನೀವು ಸವಿಯಲೇಬೇಕು.

ಸ್ಟ್ರೀಟ್‌ಫುಡ್‌ ನಗರ ಸಂಸ್ಕೃತಿ ಭಾಗ

ಸ್ಟ್ರೀಟ್‌ಫುಡ್‌ ನಗರ ಸಂಸ್ಕೃತಿಯ ಒಂದು ಭಾಗವಾಗಿದೆ ಮತ್ತು ಇದು ಬಹಳಷ್ಟು ಮಹತ್ವವನ್ನು ಹೊಂದಿದೆ. ನಗರಗಲ್ಲಿ ದುಬಾರಿ ಹಣ ನೀಡಿ ರೆಸ್ಟೋರೆಂಟ್‌ಗಳಲ್ಲಿ ಆಹಾರ ಕೊಳ್ಳುವ ಬದಲು ವಿವಿ ಪುರ ಅಥವಾ ತಿಂಡಿಬೀದಿಗಳಂತ ಸ್ಥಳಗಳಲ್ಲಿ ಸಿಗುವ ಸ್ವಾದಿಷ್ಟ ಆಹಾರಗಳನ್ನು ಕಡಿಮೆ ಹಣದಲ್ಲಿ ಖರೀದಿಸಿ ಆನಂದಿಸಬಹುದು. ಬೆಂಗಳೂರು ಅಂತಹ ಸ್ಟ್ರೀಟ್‌ಫುಡ್‌ ಆಹಾರಗಳಿಗೆ ಹೆಸರುವಾಸಿಯಾಗಿದೆ. ಇಲ್ಲಿ ಲಭ್ಯವಿರುವ ವಿವಿಧ ಬಗೆಯ ದೋಸೆ, ಇಡ್ಲಿ ಹಾಗೂ ಕಾಫಿಗಳು ಬೇರೆಲ್ಲು ಸಿಗುವುದಿಲ್ಲ ಎಂದು ಆಹಾರ ಬರಹಗಾರ್ತಿ ಮತ್ತು ʻಬಜಾರ್‌ ಬೈಟ್ಸ್‌ʼ ಕೃತಿಯ ಲೇಖಕಿ ಪ್ರಿಯಾ ಬಾಲಾ ಅವರು ʻದ ಫೆಡರಲ್‌ ಕರ್ನಾಟಕ್ಕೆʼ ತಿಳಿಸಿದರು.

ವಿ.ವಿ. ಪುರ ಬೆಂಗಳೂರಿನ ಅತ್ಯಂತ ಪ್ರಸಿದ್ಧ ಆಹಾರ ಬೀದಿಯಾಗಿದ್ದು, ಸಂಜೆಯಾದ್ರೆ ಸಾಕು ಕಾಲು ಇಡುವಷ್ಟು ಜಾಗವಿಲ್ಲದೆ ಜನಜಂಗುಳಿಯಿಂದ ತುಂಬಿರುತ್ತದೆ. ಕೇವಲ ಸಾಮಾನ್ಯ ಜನರು ಮಾತ್ರವಲ್ಲದೆ ಸಿನಿತಾರೆಯರು, ವಿದೇಶಿಗರು ಅಷ್ಟೇ ಅಲ್ಲದೆ ವಿದೇಶಾಂಗ ಸಚಿವ ಜೈಶಂಕರ್‌ ಕೂಡ ಇಲ್ಲಿಗೆ ಭೇಟಿ ನೀಡಿ ಇಲ್ಲಿನ ಆಹಾರವನ್ನು ಆಸ್ವಾದಿಸಿದ್ದಾರೆ. ಸಂಜೆ ನಾಲ್ಕು ಗಂಟೆಯ ಸುಮಾರಿಗೆ ಇಲ್ಲಿಯ ಅಂಗಡಿಗಳು ಆಹಾರ ಖಾದ್ಯಗಳನ್ನು ಉಣಬಡಿಸಲು ಶುರುಮಾಡಿದರೆ ಮಧ್ಯರಾತ್ರಿ 12ಗಂಟೆಯವರೆಗೆ ಜನರು ಭೇಟಿ ನೀಡುತ್ತಲೇ ಇರುತ್ತಾರೆ.


Read More
Next Story