ಹಾಂಗ್ ಕಾಂಗ್ ಮಹಿಳಾ ಕ್ರಿಕೆಟ್ ತಂಡದ ಮುಖ್ಯ ಕೋಚ್ ಆಗಿ ಬೆಂಗಳೂರಿನ ಮಮತಾ ಮಾಬೇನ್ ನೇಮಕ
x

ಹಾಂಗ್ ಕಾಂಗ್ ಮಹಿಳಾ ಕ್ರಿಕೆಟ್ ತಂಡದ ಮುಖ್ಯ ಕೋಚ್ ಆಗಿ ಬೆಂಗಳೂರಿನ ಮಮತಾ ಮಾಬೇನ್ ನೇಮಕ

ಮಾಬೆನ್​ ಅವರು 4 ಟೆಸ್ಟ್ ಮತ್ತು 40 ಏಕದಿನ ಪಂದ್ಯಗಳಲ್ಲಿ ಆಡಿದ್ದು, 2003 ಮತ್ತು 2004ರಲ್ಲಿ ಟೀಮ್ ಇಂಡಿಯಾವನ್ನು ಮುನ್ನಡೆಸಿದ್ದರು.


Click the Play button to hear this message in audio format

ಭಾರತ ಮಹಿಳಾ ಕ್ರಿಕೆಟ್ ತಂಡದ ಮಾಜಿ ನಾಯಕಿ ಹಾಗೂ ಬೆಂಗಳೂರು ಮೂಲದ ಹಿರಿಯ ಕ್ರಿಕೆಟರ್ ಮಮತಾ ಮಾಬೇನ್ ಅವರಿಗೆ ಮತ್ತೊಂದು ಪ್ರತಿಷ್ಠಿತ ಅಂತಾರಾಷ್ಟ್ರೀಯ ಜವಾಬ್ದಾರಿ ಒಲಿದುಬಂದಿದೆ. ಹಾಂಗ್ ಕಾಂಗ್, ಚೀನಾ ಮಹಿಳಾ ಕ್ರಿಕೆಟ್ ತಂಡದ ಮುಖ್ಯ ತರಬೇತುದಾರರಾಗಿ ಅವರನ್ನು ಮೂರು ವರ್ಷಗಳ ಅವಧಿಗೆ ನೇಮಕ ಮಾಡಲಾಗಿದೆ ಎಂದು ಕ್ರಿಕೆಟ್ ಹಾಂಗ್ ಕಾಂಗ್ ಅಧಿಕೃತವಾಗಿ ಪ್ರಕಟಿಸಿದೆ.

"ಮಮತಾ ಮಾಬೇನ್ ಅವರನ್ನು ನಮ್ಮ ಮಹಿಳಾ ರಾಷ್ಟ್ರೀಯ ತಂಡದ ನೂತನ ಮುಖ್ಯ ಕೋಚ್ ಆಗಿ ಸ್ವಾಗತಿಸಲು ನಮಗೆ ಅತ್ಯಂತ ಸಂತೋಷವಾಗುತ್ತಿದೆ. ಹಾಂಗ್ ಕಾಂಗ್‌ನಲ್ಲಿ ಮಹಿಳಾ ಕ್ರಿಕೆಟ್‌ನ ಸರ್ವತೋಮುಖ ಅಭಿವೃದ್ಧಿ ಮತ್ತು ತಂಡದ ಕಾರ್ಯಕ್ಷಮತೆಯನ್ನು ಜಾಗತಿಕ ಮಟ್ಟದಲ್ಲಿ ಹೆಚ್ಚಿಸುವ ಉದ್ದೇಶದಿಂದ ಈ ಮಹತ್ವದ ನೇಮಕಾತಿ ಮಾಡಲಾಗಿದೆ," ಎಂದು ಕ್ರಿಕೆಟ್ ಹಾಂಗ್ ಕಾಂಗ್ ತನ್ನ ಹೇಳಿಕೆಯಲ್ಲಿ ತಿಳಿಸಿದೆ.

"ಪ್ರತಿಭೆಗಳನ್ನು ಗುರುತಿಸಿ ಬೆಳೆಸುವಲ್ಲಿ ಮಮತಾ ಅವರಿಗಿರುವ ಅಪಾರ ಅನುಭವ ಮತ್ತು ಬದ್ಧತೆ ತಂಡವನ್ನು ಹೊಸ ಎತ್ತರಕ್ಕೆ ಕೊಂಡೊಯ್ಯಲು ನಿರ್ಣಾಯಕವಾಗಲಿದೆ. ತರಬೇತಿ ವಿಧಾನಗಳನ್ನು ಸುಧಾರಿಸಲು ಮತ್ತು ಆಟಗಾರರಲ್ಲಿ ವೃತ್ತಿಪರತೆಯನ್ನು ಮೂಡಿಸಲು ಅವರ ನಾಯಕತ್ವ ನೆರವಾಗಲಿದೆ," ಎಂದು ಮಂಡಳಿ ವಿಶ್ವಾಸ ವ್ಯಕ್ತಪಡಿಸಿದೆ.

ಬೆಂಗಳೂರಿನಿಂದ ವಿಶ್ವಮಟ್ಟಕ್ಕೆ: ಮಮತಾ ಅವರ ಕ್ರಿಕೆಟ್ ಹಾದಿ

55 ವರ್ಷದವರಾದ ಮಮತಾ ಮಾಬೇನ್ ಅವರು 1993ರಿಂದ 2004ರ ವರೆಗೆ ಭಾರತ ತಂಡವನ್ನು ಪ್ರತಿನಿಧಿಸಿದ್ದಾರೆ. ಅವರು 4 ಟೆಸ್ಟ್ ಮತ್ತು 40 ಏಕದಿನ ಪಂದ್ಯಗಳಲ್ಲಿ ಆಡಿದ್ದು, 2003 ಮತ್ತು 2004ರಲ್ಲಿ ಟೀಮ್ ಇಂಡಿಯಾವನ್ನು ಮುನ್ನಡೆಸಿದ್ದರು. 1993ರ ಮಹಿಳಾ ವಿಶ್ವಕಪ್‌ನಲ್ಲಿ ಅವರು ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದ್ದರು.

ನಿವೃತ್ತಿಯ ನಂತರ ಕೋಚಿಂಗ್ ಕ್ಷೇತ್ರಕ್ಕೆ ಕಾಲಿಟ್ಟ ಅವರು, ಕರ್ನಾಟಕ ರಾಜ್ಯ ಮಹಿಳಾ ತಂಡ ಮಾತ್ರವಲ್ಲದೆ ಬಾಂಗ್ಲಾದೇಶ, ಚೀನಾ ಮತ್ತು ನಮೀಬಿಯಾ ದೇಶದ ರಾಷ್ಟ್ರೀಯ ತಂಡಗಳಿಗೂ ತರಬೇತುದಾರರಾಗಿ ಸೇವೆ ಸಲ್ಲಿಸಿದ ಅನುಭವ ಹೊಂದಿದ್ದಾರೆ.

'ರೋಮಾಂಚಕ ಕಾಲಘಟ್ಟದತ್ತ ಹಾಂಗ್ ಕಾಂಗ್ ಕ್ರಿಕೆಟ್'

ತಮ್ಮ ಹೊಸ ಜವಾಬ್ದಾರಿ ಬಗ್ಗೆ ಉತ್ಸುಕರಾಗಿರುವ ಮಮತಾ, "ಹಾಂಗ್ ಕಾಂಗ್ ತಂಡದ ಮುಖ್ಯ ಕೋಚ್ ಆಗಿ ಆಯ್ಕೆಯಾಗಿರುವುದು ನನಗೆ ಹೆಮ್ಮೆಯ ವಿಷಯ. ಅಲ್ಲಿನ ಪ್ರತಿಭೆಗಳ ಬಗ್ಗೆ ನನಗೆ ವಿಶ್ವಾಸವಿದೆ. ತಂಡದ ಆಟಗಾರರೊಂದಿಗೆ ಕೆಲಸ ಮಾಡಲು ಮತ್ತು ಅವರ ಸಂಪೂರ್ಣ ಸಾಮರ್ಥ್ಯವನ್ನು ಹೊರತಂದು ಅವರನ್ನು ಬೆಳೆಸಲು ನಾನು ಎದುರು ನೋಡುತ್ತಿದ್ದೇನೆ. ಮುಂದಿನ ದಿನಗಳಲ್ಲಿ ಹಾಂಗ್ ಕಾಂಗ್ ಕ್ರಿಕೆಟ್ ರೋಮಾಂಚಕ ಹಂತವನ್ನು ತಲುಪಲಿದೆ ಎಂಬ ನಂಬಿಕೆ ನನಗಿದೆ," ಎಂದು ಪ್ರತಿಕ್ರಿಯಿಸಿದ್ದಾರೆ.

ಕ್ರಿಕೆಟ್ ಹಾಂಗ್ ಕಾಂಗ್ ಅಧ್ಯಕ್ಷ ಬರ್ಜಿ ಶ್ರಾಫ್ ಕೂಡ ಮಮತಾ ಅವರ ಆಗಮನವನ್ನು ಸ್ವಾಗತಿಸಿದ್ದು, "ಅವರ ಪ್ರಭಾವಶಾಲಿ ಟ್ರ್ಯಾಕ್ ರೆಕಾರ್ಡ್ ನಮ್ಮ ಮಹಿಳಾ ಕ್ರಿಕೆಟ್ ಕಾರ್ಯಕ್ರಮವನ್ನು ಬಲಪಡಿಸಲು ಅಮೂಲ್ಯವಾಗಿದೆ," ಎಂದು ಹೇಳಿದ್ದಾರೆ.

ಮಮತಾ ಅವರ ತಕ್ಷಣದ ಗುರಿ ಫೆಬ್ರವರಿಯಲ್ಲಿ ನಡೆಯಲಿರುವ ಏಷ್ಯಾ ಕಪ್ ಅರ್ಹತಾ ಸುತ್ತಿನ ಪಂದ್ಯಗಳಾಗಿದ್ದು, ಮುಂದಿನ ಎರಡು ವರ್ಷಗಳಲ್ಲಿ ಹಾಂಗ್ ಕಾಂಗ್ ತಂಡದ ವಿಶ್ವ ರ‍್ಯಾಂಕಿಂಗ್ ಅನ್ನು ಕನಿಷ್ಠ ಏಳು ಸ್ಥಾನಗಳಷ್ಟು ಸುಧಾರಿಸುವ ಗುರಿ ಹೊಂದಿದ್ದಾರೆ.

Read More
Next Story