ಬೆಂಗಳೂರಿನ ರಸ್ತೆ ಗುಂಡಿಗಳಿಂದ ತೊಂದರೆ; 50 ಲಕ್ಷ ರೂ. ಪರಿಹಾರಕ್ಕೆ ನೋಟಿಸ್ ನೀಡಿದ ಮಹಿಳೆ
x

ಬೆಂಗಳೂರಿನ ರಸ್ತೆ ಗುಂಡಿಗಳಿಂದ ತೊಂದರೆ; 50 ಲಕ್ಷ ರೂ. ಪರಿಹಾರಕ್ಕೆ ನೋಟಿಸ್ ನೀಡಿದ ಮಹಿಳೆ

15 ದಿನಗಳ ಒಳಗೆ ಈ ಕೋರಿಕೆಗೆ ಸ್ಪಂದಿಸದಿದ್ದರೆ, ಕರ್ನಾಟಕ ಹೈಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆ (ಪಿಐಎಲ್), ಲೋಕಾಯುಕ್ತಕ್ಕೆ ದೂರು ಮತ್ತು ರಾಜ್ಯ ಮಾನವ ಹಕ್ಕುಗಳ ಆಯೋಗಕ್ಕೆ ದೂರು ಸಲ್ಲಿಸುವ ಎಚ್ಚರಿಕೆಯನ್ನ ಮಹಿಳೆ ನೀಡಿದ್ದಾರೆ.


ರಸ್ತೆ ಗುಂಡಿಗಳಿಂದ ತಮಗೆ ಉಂಟಾದ ದೈಹಿಕ ಮತ್ತು ಮಾನಸಿಕ ತೊಂದರೆ ಉಂಟಾಗಿದೆ ಎಂದು ಬೆಂಗಳೂರಿನ ರಿಚ್ಮಂಡ್ ಟೌನ್‌ನ 43 ವರ್ಷದ ನಿವಾಸಿ ದಿವ್ಯಾ ಕಿರಣ್ ಎಂಬುವರು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ವಿರುದ್ಧ 50 ಲಕ್ಷ ರೂಪಾಯಿ ಪರಿಹಾರಕ್ಕಾಗಿ ಕಾನೂನು ನೋಟಿಸ್ ಜಾರಿ ಮಾಡಿದ್ದಾರೆ. ಮೇ 14ರಂದು ದಿವ್ಯಾ ಕಿರಣ್‌ರ ಅವರು ವಕೀಲ ಕೆ.ವಿ. ಲವೀನ್ ಮೂಲಕ ಬಿಬಿಎಂಪಿಗೆ ಈ ನೋಟಿಸ್ ಕಳುಹಿಸಿದ್ದಾರೆ. ನಗರದ ಕಳಪೆ ರಸ್ತೆಗಳಿಂದಾಗಿ ತಾನು ತೀವ್ರ ಕುತ್ತಿಗೆ ಮತ್ತು ಬೆನ್ನು ನೋವಿನಿಂದ ಬಳಲುತ್ತಿದ್ದೇನೆ. ಅದಕ್ಕೆ ಬಿಬಿಎಂಪಿಯ "ಗಂಭೀರ ನಿರ್ಲಕ್ಷ್ಯ" ಕಾರಣ ಎಂದು ಆರೋಪಿಸಲಾಗಿದೆ.

ದಿವ್ಯಾ ಕಿರಣ್ ತಮ್ಮ ನೋಟಿಸ್‌ನಲ್ಲಿ, ಬೆಂಗಳೂರಿನ ಕಳಪೆ ಮತ್ತು ಗುಂಡಿಗಳಿಂದ ಕೂಡಿದ ರಸ್ತೆಗಳಲ್ಲಿ ಸಂಚರಿಸುವಾಗ ಆಗುವ "ಆಘಾತ ಮತ್ತು ಒತ್ತಡ"ದಿಂದಾಗಿ ತೀವ್ರವಾದ ಕುತ್ತಿಗೆ ಮತ್ತು ಬೆನ್ನು ನೋವಿನಿಂದ ಸಮಸ್ಯೆ ಉಂಟಾಗಿದೆ. ಈ ಸಮಸ್ಯೆಯಿಂದಾಗಿ ಅವರು ಐದು ಬಾರಿ ಆರ್ಥೋಪೆಡಿಕ್ ತಜ್ಞರನ್ನು ಭೇಟಿಯಾಗಿದ್ದು, ಸೇಂಟ್ ಫಿಲೋಮಿನಾಸ್ ಆಸ್ಪತ್ರೆಗೆ ನಾಲ್ಕು ಬಾರಿ ತುರ್ತು ಚಿಕಿತ್ಸೆಗಾಗಿ ಭೇಟಿ ನೀಡಿದ್ದೇನೆ. ಈ ಚಿಕಿತ್ಸೆಗಳಲ್ಲಿ ಇಂಜೆಕ್ಷನ್‌ಗಳು ಮತ್ತು ನೋವು ನಿವಾರಕ ಔಷಧಿಗಳನ್ನು ನೀಡಲಾಗಿದೆ ಎಂದು ಆರೋಪಿಸಿದ್ದಾರೆ.

"ನನ್ನ ಕಕ್ಷಿದಾರರು ತೀವ್ರ ನೋವಿನಿಂದ ಕೂಗಾಡುವ ಸಂದರ್ಭಗಳು ಎದುರಿಸಿದ್ದಾರೆ. ನಿದ್ರಾಹೀನತೆ, ಆತಂಕ ಮತ್ತು ಮಾನಸಿಕ ಒತ್ತಡವನ್ನು ಎದುರಿಸಿದ್ದಾರೆ. ಇದು ಅವರ ದೈನಂದಿನ ಕಾರ್ಯಚಟುವಟಿಕೆಗಳ ಮೇಲೆ ಗಂಭೀರ ಪರಿಣಾಮ ಬೀರಿದೆ," ಎಂದು ವಕೀಲ ಕೆ.ವಿ. ಲವೀನ್ ನೋಟಿಸ್​ನಲ್ಲಿ ತಿಳಿಸಿದ್ದಾರೆ.

ಕಳಪೆ ರಸ್ತೆಗಳಿಂದಾಗಿ ದಿವ್ಯಾ ಕಿರಣ್‌ರ ಸಂಚಾರಕ್ಕೆ ಮಿತಿ ಹೇರಬೇಕಾಗಿ ಬಂದಿದೆ. ಆಟೋರಿಕ್ಷಾ ಅಥವಾ ದ್ವಿಚಕ್ರ ವಾಹನಗಳಲ್ಲಿ ಪ್ರಯಾಣಿಸಲು ಸಾಧ್ಯವಾಗದೇ, ಕ್ಯಾಬ್‌ಗಳಲ್ಲಿಯೂ ಕೂಡ ಸೌಕರ್ಯವಿಲ್ಲದಿರುವುದರಿಂದ ಅವರ ವೈಯಕ್ತಿಕ ಮತ್ತು ವೃತ್ತಿಪರ ಜೀವನದ ಮೇಲೆ ಗಮನಾರ್ಹ ಪರಿಣಾಮ ಬೀರಿದೆ. "ಕನಿಷ್ಠವಾಗಿ ಒಳ್ಳೆಯ ರಸ್ತೆಗಳನ್ನು ಒದಗಿಸುವುದು ರಾಜ್ಯದ ಕರ್ತವ್ಯವಲ್ಲವೇ? ನಾನು ಏಕೆ ಈ ತೊಂದರೆಯನ್ನು ಅನುಭವಿಸಬೇಕು?" ಎಂದು ದಿವ್ಯಾ ಕಿರಣ್ ನೋಟಿಸ್​ ಮೂಲಕ ಬಿಬಿಎಂಪಿಯನ್ನು ಪ್ರಶ್ನಿಸಿದ್ದಾರೆ. .

ಪರಿಹಾರ ನೀಡಲು ಕೋರಿಕೆ

ದಿವ್ಯಾ ಕಿರಣ್ ತಮ್ಮ ದೈಹಿಕ ನೋವು, ಮಾನಸಿಕ ಒತ್ತಡ, ಚಿಕಿತ್ಸೆಗಾಗಿ ಖರ್ಚಾದ ವೆಚ್ಚ ಮತ್ತು ಭವಿಷ್ಯದ ವೈದ್ಯಕೀಯ ವೆಚ್ಚಗಳಿಗಾಗಿ 50 ಲಕ್ಷ ರೂಪಾಯಿ ಪರಿಹಾರ ವನ್ನು ನೀಡುವಂತೆ ಕೋರಿದ್ದಾರೆ. ಕಾನೂನು ನೋಟಿಸ್ ವೆಚ್ಚಕ್ಕಾಗಿ 10,000 ರೂಪಾಯಿಗಳನ್ನು ಬಿಬಿಎಂಪಿಯಿಂದ ಕೋರಿದ್ದಾರೆ. 15 ದಿನಗಳ ಒಳಗೆ ಈ ಕೋರಿಕೆಗೆ ಸ್ಪಂದಿಸದಿದ್ದರೆ, ಕರ್ನಾಟಕ ಹೈಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆ (ಪಿಐಎಲ್), ಲೋಕಾಯುಕ್ತಕ್ಕೆ ದೂರು ಮತ್ತು ರಾಜ್ಯ ಮಾನವ ಹಕ್ಕುಗಳ ಆಯೋಗಕ್ಕೆ ದೂರು ಸಲ್ಲಿಸುವ ಎಚ್ಚರಿಕೆ ನೀಡಿದ್ದಾರೆ.

ಬಿಬಿಎಂಪಿಯಿಂದ ಪ್ರತಿಕ್ರಿಯೆ ಇಲ್ಲ

ಈ ಕಾನೂನು ನೋಟಿಸ್‌ಗೆ ಬಿಬಿಎಂಪಿಯಿಂದ ಇದುವರೆಗೆ ಯಾವುದೇ ಔಪಚಾರಿಕ ಪ್ರತಿಕ್ರಿಯೆ ನೀಡಿಲ್ಲ. ಆದರೆ, ಬೆಂಗಳೂರಿನ ರಸ್ತೆಗಳ ಕಳಪೆ ಸ್ಥಿತಿ ಮತ್ತು ಮಳೆಗಾಲದಲ್ಲಿ ಜಲಾವೃತವಾಗುವ ಸಮಸ್ಯೆಯು ದೀರ್ಘಕಾಲದಿಂದ ನಗರವಾಸಿಗಳಿಗೆ ದುಃಸ್ವಪ್ನವಾಗಿದೆ. . ಭಾನುವಾರ ರಾತ್ರಿಯಿಂದ ಸೋಮವಾರದವರೆಗೆ ಸುರಿದ ಭಾರೀ ಮಳೆಯಿಂದ ನಗರದ ಹಲವು ಭಾಗಗಳು ಜಲಾವೃತವಾಗಿದ್ದು, ಕೆಲವು ಕಡೆ ನಿವಾಸಿಗಳು ಸಮಸ್ಯೆಗೆ ಸಿಲುಕಿದ್ದಾರೆ.

ಕರ್ನಾಟಕ ಹೈಕೋರ್ಟ್ 2019ರಲ್ಲಿ ರಸ್ತೆ ಗುಂಡಿಗಳಿಂದ ಉಂಟಾಗುವ ಅಪಘಾತಗಳಿಗೆ ಬಿಬಿಎಂಪಿಯನ್ನು ಜವಾಬ್ದಾರಿಯನ್ನಾಗಿಸಿ, ಪರಿಹಾರ ನೀಡಬೇಕೆಂದು ಆದೇಶಿಸಿತ್ತು. ಆದರೆ, ಇದುವರೆಗೆ ಬಿಬಿಎಂಪಿಯಿಂದ ಸ್ಪಷ್ಟವಾದ ಪರಿಹಾರ ಕಾರ್ಯವಿಧಾನವನ್ನು ರೂಪಿಸಲಾಗಿಲ್ಲ.

ಮಳೆಯಿಂದ ರಸ್ತೆ ಹಾಳು

ಬೆಂಗಳೂರಿನಲ್ಲಿ ಇತ್ತೀಚಿನ ಭಾರೀ ಮಳೆಯು ರಸ್ತೆಗಳ ಸ್ಥಿತಿಯನ್ನು ಸಂಪೂರ್ಣವಾಗಿ ಹಾಳು ಮಾಡಿದೆ. ಭಾನುವಾರ ರಾತ್ರಿಯಿಂದ 12 ಗಂಟೆಗಳಲ್ಲಿ 130 ಮಿಮೀಗಿಂತಲೂ ಅಧಿಕ ಮಳೆಯಾಗಿದ್ದು, ರಸ್ತೆಗಳು ಜಲಾವೃತವಾಗಿ ಸಂಚಾರಕ್ಕೆ ತೀವ್ರ ತೊಂದರೆಯಾಗಿದೆ. ಈ ಮಳೆಯಿಂದ ಉಂಟಾದ ಅನಾಹುತಗಳಿಂದ ಮೂವರು ಮೃತಪಟ್ಟಿದ್ದಾರೆ.

Read More
Next Story