Bangalore Tunnel Road| ಕರ್ನಾಟಕದಲ್ಲೇ ಅದಾನಿ ಹೂಡಿಕೆ ಹೆಚ್ಚು; ಟನಲ್‌ ಗುತ್ತಿಗೆ ಇಕ್ಕಟ್ಟಿನಲ್ಲಿ ಕಾಂಗ್ರೆಸ್‌
x

Bangalore Tunnel Road| ಕರ್ನಾಟಕದಲ್ಲೇ ಅದಾನಿ ಹೂಡಿಕೆ ಹೆಚ್ಚು; ಟನಲ್‌ ಗುತ್ತಿಗೆ ಇಕ್ಕಟ್ಟಿನಲ್ಲಿ ಕಾಂಗ್ರೆಸ್‌

ನರೇಂದ್ರ ಮೋದಿ ಜೊತೆಯಲ್ಲೇ ಗೌತಮ್‌ ಅದಾನಿ ಅವರನ್ನು ಪದೇ ಪದೇ ಟೀಕಿಸುತ್ತಿದ್ದ ʼಕೈʼ ನಾಯಕರಿಗೆ ಅದಾನಿ ಒಡೆತನದ ಸಂಸ್ಥೆಗೆ ಸುರಂಗ ಮಾರ್ಗ ಕಾಮಗಾರಿ ಗುತ್ತಿಗೆ ನೀಡುವ ಕುರಿತು ಇಕ್ಕಟ್ಟು ಎದುರಾಗಿದೆ.


ಬೆಂಗಳೂರಿನ ಸಂಚಾರ ದಟ್ಟಣೆಗೆ ಪರಿಹಾರ ಕಂಡುಕೊಳ್ಳುವ ಸಲುವಾಗಿ ರೂಪಿಸಿರುವ ಮಹತ್ವಾಕಾಂಕ್ಷೆಯ ಅವಳಿ ಸುರಂಗ ಮಾರ್ಗ ಯೋಜನೆಗಾಗಿ ಕರೆದಿದ್ದ ಟೆಂಡರ್‌ನಲ್ಲಿ ಅದಾನಿ ಸಮೂಹವು ಕಡಿಮೆ ಬೆಲೆಗೆ ಬಿಡ್ ಮಾಡಿರುವುದು ಕಾಂಗ್ರೆಸ್‌ ನೇತೃತ್ವದ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಿದೆ.

ಪ್ರಧಾನಿ ನರೇಂದ್ರ ಮೋದಿ ಜೊತೆಯಲ್ಲೇ ಅದಾನಿ ಅವರನ್ನು ಪದೇ ಪದೇ ಟೀಕಿಸುತ್ತಿದ್ದ ʼಕೈʼ ನಾಯಕರಿಗೆ ಇದೀಗ ಗೌತಮ್‌ ಅದಾನಿ ಒಡೆತನದ ಸಂಸ್ಥೆಗೆ ಸುರಂಗ ಮಾರ್ಗದ ಕಾಮಗಾರಿಯ ಗುತ್ತಿಗೆ ನೀಡಬೇಕೋ, ಬೇಡವೋ ಎಂಬ ಜಿಜ್ಞಾಸೆ ಎದುರಾಗಿದೆ. ವಿಪರ್ಯಾಸ ಎಂದರೆ ಕಾಂಗ್ರೆಸ್‌ ಆಡಳಿತವಿರುವ ಕರ್ನಾಟಕದಲ್ಲೇ ಅದಾನಿ ಸಮೂಹವು ಹಲವು ಕ್ಷೇತ್ರಗಳಲ್ಲಿ ಭಾರೀ ಬಂಡವಾಳ ಹೂಡಿಕೆ ಮಾಡಿದ್ದು, ಕರ್ನಾಟಕದ ಆರ್ಥಿಕತೆಯಲ್ಲಿ ಪ್ರಮುಖ ಪಾತ್ರ ವಹಿಸಿದೆ. ಹೀಗಿರುವಾಗ, ಬಿಡ್ ಪರಿಗಣನೆ ವಿಚಾರದಲ್ಲಿ ಸರ್ಕಾರ ಇಕ್ಕಟ್ಟಿಗೆ ಸಿಲುಕಿದೆ.

ಬಿಡ್ ಪರಿಗಣಿಸುವುದು ಅನಿವಾರ್ಯವೇ?

ಅದಾನಿ ಗ್ರೂಪ್ ಕಡಿಮೆ‌ ಮೊತ್ತದ ಬಿಡ್ ದಾಖಲಿಸಿರುವುದರಿಂದ (ಎಲ್ 1 ಬಿಡ್ಡರ್- ಕಡಿಮೆ‌ ಮೊತ್ತದ ಬಿಡ್ ಸಲ್ಲಿಸಿರುವ ಕಂಪನಿ) ಗುತ್ತಿಗೆ ನೀಡಬೇಕು ಎನ್ನುವುದು ಕಡ್ಡಾಯವಲ್ಲ. 1994ರ ಟಾಟಾ ಸೆಲ್ಯೂಲರ್ vs ಭಾರತ ಒಕ್ಕೂಟ ಸರ್ಕಾರ, 2007 ರಲ್ಲಿ ಜಗದೀಶ್ ಮಂಡಲ್ vs ಸ್ಟೇಟ್ ಆಫ್ ಒಡಿಸಾ ಪ್ರಕರಣಗಳಲ್ಲಿ ಸುಪ್ರೀಂಕೋರ್ಟ್ ಸ್ಪಷ್ಟ ಆದೇಶಗಳನ್ನು ನೀಡಿದೆ. ಯಾವುದೇ ಟೆಂಡರ್ ಪ್ರಕ್ರಿಯೆಗಳಲ್ಲಿ ಬಿಡ್ ಷರತ್ತುಗಳ ಅನ್ವಯ ಸರ್ಕಾರವೇ ಗುತ್ತಿಗೆ ನೀಡಿಕೆಗೆ ನಿರ್ಧಾರ ತೆಗೆದುಕೊಳ್ಳಲಿದೆ. ಯಾವುದೇ ನ್ಯಾಯಾಲಯಗಳು ಈ ಪ್ರಕರಣಗಳನ್ನು ಸ್ವೀಕರಿಸುವಂತಿಲ್ಲ‌ ಎಂದು ಹೇಳಿದೆ. ಆದ್ದರಿಂದ ಅದಾನಿ ಗ್ರೂಪ್ ಕಡಿಮೆ ಮೊತ್ತದ ಬಿಡ್ ಕೂಗಿದ ಮಾತ್ರಕ್ಕೆ ಗುತ್ತಿಗೆ ನೀಡಬೇಕು ಎಂದೇನಿಲ್ಲ ಎಂದು ಆರ್ಥಿಕ ವಿಶ್ಲೇಷಕ ಹಾಗೂ ಹಿರಿಯ ಪತ್ರಕರ್ತ ಕೆ. ಗಿರಿ ಪ್ರಕಾಶ್ 'ದ ಫೆಡರಲ್ ಕರ್ನಾಟಕ' ಕ್ಕೆ ತಿಳಿಸಿದರು.

ಇನ್ನು ಅದಾನಿ ಸಮೂಹ ಸೌರಶಕ್ತಿ, ನವೀಕರಿಸಬಹುದಾದ ಇಂಧನ, ಮೂಲ ಸೌಕರ್ಯ, ಬಂದರು ಅಭಿವೃದ್ಧಿಯಲ್ಲಿ ತೊಡಗಿಸಿಕೊಂಡರೂ ಈ ಕ್ಷೇತ್ರದಲ್ಲಿ ಅನುಭವ ಹೊಂದಿದೆ ಎಂದು ಹೇಳುವುದು ತುಸು ಕಷ್ಟ. ಏಕೆಂದರೆ, ಅದಾನಿ ಗ್ರೂಪ್ ಸಾಕಷ್ಟು ಕಂಪೆನಿಗಳನ್ನು ಹೊಂದಿದ್ದರೂ ಅವನ್ನು ತಳಮಟ್ಟದಿಂದ ಕಟ್ಟಿದ್ದಲ್ಲ, ಖರೀಸಿದ್ದು. ಹಾಗಾಗಿ ಪರಿಣಿತಿ ವಿಷಯದಲ್ಲಿ ನಿಖರವಾಗಿ ಹೇಳಲಾಗದು. ಇನ್ನು ಅದಾನಿ ಗ್ರೂಪ್ ಈವರೆಗೆ ಸುರಂಗ ರಸ್ತೆ ಯೋಜನೆ ಕೈಗೊಂಡ ಉದಾಹರಣೆಗಳಿಲ್ಲ ಎಂದು ವಿವರಿಸಿದರು.

ಕರ್ನಾಟಕದಲ್ಲೇ ಅದಾನಿ ಹೂಡಿಕೆ ಹೆಚ್ಚು

ಗೌತಮ್‌ ಅದಾನಿ ಒಡೆತನದ ಕಂಪೆನಿಗಳು ಕರ್ನಾಟಕದಲ್ಲಿ ಈಗಾಗಲೇ 20 ಸಾವಿರ ಕೋಟಿ ರೂ.ಗಳಿಗೂ ಹೆಚ್ಚು ಬಂಡವಾಳ ಹೂಡಿವೆ. 7 ವರ್ಷಗಳಲ್ಲಿ (2022 ರಿಂದ 2029 ರವರೆಗೆ )1 ಲಕ್ಷ ಕೋಟಿ ರೂ. ಹೂಡಿಕೆ ಮಾಡುವುದಾಗಿ ಘೋಷಿಸಿದೆ.

ನವೀಕರಿಸಬಹುದಾದ ಇಂಧನ, ಸಿಮೆಂಟ್, ವಿಮಾನ ನಿಲ್ದಾಣ, ಬಂದರು ನಿರ್ಮಾಣ ಯೋಜನೆ, ನಗರ ಗ್ಯಾಸ್ ಸಂಪರ್ಕ ವ್ಯವಸ್ಥೆ, ಎಡಿಬಲ್‌ ಆಯಿಲ್ (ಅದಾನಿ ವಿಲ್ಮೋರ್), ಸಾರಿಗೆ ಮತ್ತು ಲಾಜಿಸ್ಟಿಕ್ಸ್ ಕ್ಷೇತ್ರಗಳಲ್ಲಿ ಅದಾನಿ ಸಮೂಹವು ಕರ್ನಾಟಕದಲ್ಲಿ ಹೂಡಿಕೆ ಮಾಡಿದೆ.

ಉಡುಪಿ ಉಷ್ಣ ವಿದ್ಯುತ್‌ ಸ್ಥಾವರದ ಒಡೆತನ ಹೊಂದಿರುವ ಅದಾನಿ ಗ್ರೂಪ್ 1200 ಮೆಗಾವ್ಯಾಟ್‌ ವಿದ್ಯುತ್‌ ಉತ್ಪಾದನೆಯಲ್ಲಿ ತೊಡಗಿಸಿಕೊಂಡಿದೆ. ಮುಂದಿನ ದಿನಗಳಲ್ಲಿ 1,600 ಮೆಗಾವ್ಯಾಟ್‌ ಹೆಚ್ಚಳಕ್ಕೆ 11,500 ಕೋಟಿ ಹೂಡಿಕೆ ಮಾಡುತ್ತಿದೆ.

ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಆಧುನೀಕರಣ ಮತ್ತು ವಿಸ್ತರಣೆ ಕಾರ್ಯವನ್ನು ಅದಾನಿ ಏರ್‌ಪೋರ್ಟ್ಸ್‌ ಕೈಗೆತ್ತಿಕೊಂಡಿದೆ. ಅದಾನಿ ವಿಲ್ಮೋರ್‌ ಸಂಸ್ಥೆಯು ಆಹಾರ ಸಂಸ್ಕರಣಾ ಘಟಕವನ್ನೂ ಆರಂಭಿಸಿದೆ. ಎಸಿಸಿ ಸೇರಿದಂತೆ ರಾಜ್ಯದ ನಾಲ್ಕು ಸಿಮೆಂಟ್ ಘಟಕಗಳಲ್ಲಿ ವಾರ್ಷಿಕ 7 ಮಿಲಿಯನ್ ಟನ್‌ಗಿಂತಲೂ ಹೆಚ್ಚು ಉತ್ಪಾದನಾ ಸಾಮರ್ಥ್ಯ ಹೊಂದಿದೆ.

ರಾಜ್ಯದ 21 ವಿವಿಧ ಸ್ಥಳಗಳಲ್ಲಿ ಸುಮಾರು 1,100 ಮೆಗಾವ್ಯಾಟ್ ಸೌರ ಮತ್ತು ಗಾಳಿ ವಿದ್ಯುತ್ ಸ್ಥಾವರಗಳ ಮೂಲಕ ನವೀಕರಿಸಬಹುದಾದ ಇಂಧನ ಉತ್ಪಾದನೆಯಲ್ಲಿ ತೊಡಗಿಸಿಕೊಂಡಿದೆ. ʼಪರಮಪೂಜ್ಯʼ ಸೋಲಾರ್ ಮತ್ತು ಅದಾನಿ ಗ್ರೀನ್ ಎನರ್ಜಿ ಅಡಿ ಪಾವಗಡದಲ್ಲಿ 350 ಮೆಗಾವ್ಯಾಟ್ ವಿದ್ಯುತ್‌ ಉತ್ಪಾದನೆ ಮಾಡಲಾಗುತ್ತಿದೆ.

ರಾಜ್ಯದ 11 ಪ್ರಮುಖ ಸ್ಥಳಗಳಲ್ಲಿ ಸಿಎನ್‌ಜಿ ಕೇಂದ್ರಗಳು, 50 ಕಿ.ಮೀ ಪೈಪ್‌ಲೈನ್‌ ಅಳವಡಿಸುವ ಕಾರ್ಯ ಕೈಗೆತ್ತಿಕೊಂಡಿದೆ. ಫೆಬ್ರವರಿ 2025ರ ಜಾಗತಿಕ ಹೂಡಿಕೆದಾರರ ಸಮಾವೇಶದಲ್ಲೂ ಅದಾನಿ ಸಮೂಹವು ಕರ್ನಾಟಕದಲ್ಲಿ ಬಂಡವಾಳ ಹೂಡಿಕೆಯ ಬದ್ಧತೆ ಪುನರುಚ್ಚರಿಸಿದೆ.

"ಬೆಂಗಳೂರು ಸುರಂಗ ರಸ್ತೆ ಯೋಜನೆ ಟೆಂಡರ್ ನಲ್ಲಿ ಅದಾನಿ ಸಮೂಹ ಕಡಿಮೆ ಮೊತ್ತದ ಬಿಡ್ ಸಲ್ಲಿಸಿರುವುದರಿಂದ ಸರ್ಕಾರ ನೀಡಲೇಬೇಕಾಗಬಹುದು. ಹಣ ಗಳಿಸುವ ವಿಚಾರದಲ್ಲಿ ಕಾಂಗ್ರೆಸ್, ಬಿಜೆಪಿ ಎರಡೂ ಒಂದೇ. ಇಷ್ಟು ದಿನ ಟನಲ್ ರಸ್ತೆ ವಿರೋಧಿಸುತ್ತಿದ್ದ ಬಿಜೆಪಿಯವರು ಈಗ ಅದಾನಿ ಸಮೂಹಕ್ಕೆ ಗುತ್ತಿಗೆ ಹೋಗಲಿದೆ ಎಂದು ತಿಳಿದು ಸೈಲೆಂಟ್ ಆಗಿದ್ದಾರೆ. ಅದಾನಿ ಬಗ್ಗೆ ಕಾಂಗ್ರೆಸ್ಸಿನ ವಿರೋಧ ಕೇವಲ ನಾಟಕೀಯ. ಭ್ರಷ್ಟ ರಾಜಕಾರಣಿಗಳು ಹಾಗೂ ಬಂಡವಾಳಶಾಹಿಗಳ ಷಡ್ಯಂತ್ರಕ್ಕೆ ಯೋಜನೆ ಸಾಕ್ಷಿಯಾಗಿದೆ" ಎಂದು ಕೆಆರ್ ಎಸ್ ಪಕ್ಷದ ಸಂಸ್ಥಾಪಕ ರವಿಕೃಷ್ಣ ರೆಡ್ಡಿ 'ದ ಫೆಡರಲ್ ಕರ್ನಾಟಕ' ಕ್ಕೆ ತಿಳಿಸಿದರು.

ಪ್ರಧಾನಿ ನರೇಂದ್ರ‌ ಮೋದಿ ಹಾಗೂ ಬಿಜೆಪಿಗರ ಬೆಂಬಲದಿಂದ ಇಂದು ಎಲ್ಲಾ ಕ್ಷೇತ್ರಗಳಲ್ಲಿ ಅದಾನಿ ಸಮೂಹ ಶರವೇಗದಲ್ಲಿ ಬೆಳೆಯುತ್ತಿದೆ. ಅಂಬಾನಿಯನ್ನು ಮೀರಿಸುವಷ್ಟರ ಮಟ್ಟಿಗೆ ಅದಾನಿ ಬೆಳೆದಿದ್ದಾರೆ. ಎಲ್ಲಾ ರಾಜಕೀಯ ಪಕ್ಷಗಳನ್ನು ನಿಯಂತ್ರಿಸುವ ಶಕ್ತಿ ಅದಾನಿಗೆ ಬಂದಿದೆ. ಯಾವುದೇ ದೊಡ್ಡ‌ ಮೊತ್ತದ ಯೋಜನೆ ವಿಚಾರದಲ್ಲಿ ರಾಜಕೀಯ ಪಕ್ಷಗಳಿಗೆ ಭಿನ್ನಾಭಿಪ್ರಾಯ ಇರುವುದಿಲ್ಲ. ಕೇಲವ ಹಣ ಹಂಚಿಕೆಗಷ್ಟೇ ಭಿನ್ನಾಭಿಪ್ರಾಯ ಇರುತ್ತದೆ. ತೆಲಂಗಾಣ ಸೇರಿದಂತೆ ಕಾಂಗ್ರೆಸ್ ಆಡಳಿತವಿರುವ ಹಲವು ರಾಜ್ಯಗಳಲ್ಲಿ ಅದಾನಿ ಸಮೂಹ ದೊಡ್ಡ ದೊಡ್ಡ ಯೋಜನೆ ಕೈಗೆತ್ತಿಕೊಂಡಿದೆ. ಕಾಂಗ್ರೆಸ್ ಪಕ್ಷಕ್ಕೆ ಪ್ರಾಮಾಣಿಕತೆ ಇದ್ದಿದ್ದರೆ ಯಾವುದೇ ಯೋಜನೆ ನೀಡುತ್ತಿರಲಿಲ್ಲ. ಅದಾನಿಯಿಂದಲೂ ಕಾಂಗ್ರೆಸ್ ಗೆ ಲಾಭ ಇರುವುದರಿಂದ ವಿರೋಧ ವ್ಯಕ್ತಪಡಿಸುತ್ತಿಲ್ಲ ಎಂದು ವ್ಯಂಗ್ಯವಾಡಿದರು.

ರಾಜ್ಯ ಸರ್ಕಾರದಲ್ಲಿರುವ ಹೆಸರು ಹೇಳಲಿಚ್ಛಿಸದ ಮಂತ್ರಿಯೊಬ್ಬರು ʼದ ಫೆಡರಲ್‌ ಕರ್ನಾಟಕʼ ಜತೆಗೆ ಮಾತನಾಡಿ, "ರಾಜಕಾರಣ ಬೇರೆ, ಅಭಿವೃದ್ಧಿ ಬೇರೆ. ಯಾವುದೇ ಪ್ರಾಜೆಕ್ಟ್‌ ಟೆಂಡರ್‌ನಲ್ಲಿ ಉದ್ಯಮಿಗಳು ಬಿಡ್‌ ನಡೆಸುವುದು ಕಾನೂನು ಬಾಹಿರವಲ್ಲ," ಎಂದರು. "ಪದೇ ಪದೇ ಅದಾನಿಯವರನ್ನು ದೆಹಲಿಮಟ್ಟದಲ್ಲಿ ಕಾಂಗ್ರೆಸ್‌ ನಾಯಕರು, ಅದರಲ್ಲೂ ಪ್ರಮುಖವಾಗಿ ಲೋಕಸಭಾ ವಿರೋಧ ಪಕ್ಷ ನಾಯಕ ರಾಹುಲ್‌ ಗಾಂಧಿ ಅವರು ಟೀಕಿಸುತ್ತಿರುವುದು ಈ ಗೊಂದಲಕ್ಕೆ ಕಾರಣವಾಗಿದೆ," ಎಂದು ಅಭಿಪ್ರಾಯಪಟ್ಟರು.

ಇನ್ನೊಬ್ಬರು ಹೆಸರು ಹೇಳಲಿಚ್ಛಿಸದ ಕೆಪಿಸಿಸಿ ಪದಾಧಿಕಾರಿಯೊಬ್ಬರು, "ಅದಾನಿಯವರ ವಿಷಯ ಒಂದು ರೀತಿಯಲ್ಲಿ ಗೊಂದಲಕ್ಕೆ ಕಾರಣವಾಗಿದೆ. ಆದರೆ, ಅವರು ಅತಿ ಕಡಿಮೆ ಬಿಡ್‌ ಹಾಕಿರುವ ಸಮರ್ಥ ಉದ್ಯಮಿಯಾಗಿರುವುದರಿಂದ ಕಾನೂನು ಪ್ರಕಾರ ಅಲ್ಲಗಳೆಯುವ ಅವಕಾಶವೂ ಇಲ್ಲ. ಇದು ನಿಜವಾಗಿ ಕಾಂಗ್ರೆಸ್‌ಗೆ ಒಂದು ರೀತಿಯಲ್ಲಿ ಅಗ್ನಿಪರೀಕ್ಷೆಯಾಗಿದೆ," ಎಂದು ಹೇಳಿದರು.

ಸಿಮೆಂಟ್‌ ತಯಾರಿಕೆಯಲ್ಲಿ ಪಾರಮ್ಯ

ಸಿಮೆಂಟ್ ಉತ್ಪಾದನಾ ಕ್ಷೇತ್ರದಲ್ಲೂ ಅದಾನಿ ಗ್ರೂಪ್ ತಮ್ಮ ಸಾಮರ್ಥ್ಯ ವೃದ್ಧಿಸಿಕೊಳ್ಳುತ್ತಿದೆ. ಕಲಬುರಗಿ ಜಿಲ್ಲೆಯ ಶಹಾಬಾದ್‌ ತಾಲೂಕಿನಲ್ಲಿರುವ ಜೈಪ್ರಕಾಶ್‌ ಅಸೋಸಿಯೇಟ್‌ ಸಿಮೆಂಟ್ ಸ್ಥಾವರ, ಅಸೋಸಿಯೇಟ್‌ ಸಿಮೆಂಟ್‌ ಕಂಪನಿ(ಎಸಿಸಿ), ಅಂಬುಜಾ ಸಿಮೆಂಟ್ಸ್ ಕಂಪನಿಗಳನ್ನು ಅದಾನಿ ಸಮೂಹ ವಶಕ್ಕೆ ಪಡೆದಿದೆ. 2006 ಸೆ.1ರಂದು ಎಸಿಸಿ ಸಿಮೆಂಟ್ ಕಂಪನಿಯನ್ನು ಅದಾನಿ ಸಿಮೆಂಟ್‌ ಕಂಪೆನಿ ಎಂದು ಮರು ನಾಮಕರಣ ಮಾಡಲಾಯಿತು.

ಎಸಿಸಿ ಸಿಮೆಂಟ್‌ ಕಾರ್ಖಾನೆಯ ಘಟಕಗಳು ಕರ್ನಾಟಕದ ಬೆಳಗಾವಿ ಜಿಲ್ಲೆಯ ವಾಡಿ, ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರು ತಾಲೂಕಿನ ತೊಂಡೆಬಾವಿ ಗ್ರಾಮದಲ್ಲಿವೆ. 2024 ರ ಅಂತ್ಯದಲ್ಲಿ ಕಲಬುರಗಿ ಚಿತ್ತಾಪುರದ ಓರಿಯಂಟ್ ಸಿಮೆಂಟ್ ಅನ್ನು ಸ್ವಾಧೀನಪಡಿಸಿಕೊಂಡಿತ್ತು.

ಸುರಂಗ ರಸ್ತೆ ಯೋಜನೆಗೆ ಕನಿಷ್ಠ ಬಿಡ್

ಬೆಂಗಳೂರಿನ ಸುರಂಗ ರಸ್ತೆ ಯೋಜನೆಯ ಟೆಂಡರ್‌ನಲ್ಲಿ ಅದಾನಿ ಸಮೂಹವು ಎರಡೂ ಪ್ಯಾಕೇಜುಗಳಿಗೆ ಕನಿಷ್ಠ ಮೊತ್ತದ ಬಿಡ್ ಸಲ್ಲಿಸಿದೆ. ಆದರೆ, ಇದು ಸರ್ಕಾರದ ಅಂದಾಜು ವೆಚ್ಚಕ್ಕಿಂತ ಶೇ.24 ರಿಂದ 28 ರಷ್ಟು ಹೆಚ್ಚು ವೆಚ್ಚ ಉಲ್ಲೇಖಿಸಿದ ಕಾರಣ ಗುತ್ತಿಗೆ ಅಂತಿಮಗೊಳಿಸುವ ಪ್ರಕ್ರಿಯೆ ವಿಳಂಬವಾಗಲಿದೆ. ವೆಚ್ಚ ಹೆಚ್ಚಳ ಸಂಬಂಧ ಸಂಪುಟ ಸಭೆ ನಿರ್ಣಯಿಸಬೇಕಾಗಿದೆ.

ಹೆಬ್ಬಾಳದ ಎಸ್ಟೀಮ್‌ ಮಾಲ್‌ನಿಂದ ಸಿಲ್ಕ್ ಬೋರ್ಡ್ವರೆಗಿನ 16.57 ಕಿ.ಮೀ ಉದ್ದದ ಸುರಂಗ ಮಾರ್ಗ ನಿರ್ಮಾಣದ ಹೊಣೆ ಹೊತ್ತಿರುವ ಬೆಂಗಳೂರು ಸ್ಮಾರ್ಟ್ ಇನ್ಫ್ರಾಸ್ಟ್ರಕ್ಚರ್ ಲಿಮಿಟೆಡ್ ಈ ಟೆಂಡರ್‌ ಕರೆದಿತ್ತು.

ಟೆಂಡರ್‌ನಲ್ಲಿ ಅದಾನಿ ಗ್ರೂಪ್, ದಿಲೀಪ್ ಬಿಲ್ಡ್‌ಕಾನ್, ವಿಶ್ವ ಸಮುದ್ರ ಎಂಜಿನಿಯರಿಂಗ್ ಹಾಗೂ ರೈಲ್ ವಿಕಾಸ್ ನಿಗಮ್ ಲಿಮಿಟೆಡ್ ಬಿಡ್ ಸಲ್ಲಿಸಿದ್ದವು. ಬಿಡ್‌ದಾರರು ಇತ್ತೀಚಿನ ವರ್ಷಗಳಲ್ಲಿ ನಿರ್ಮಿಸಿದ ರಸ್ತೆ ಅಥವಾ ಸೇತುವೆಗಳು ಕುಸಿದಿರಬಾರದು ಎಂಬ ಷರತ್ತಿನಲ್ಲಿ ವಿಶ್ವ ಸಮುದ್ರ ಎಂಜಿನಿಯರಿಂಗ್ ಮತ್ತು ರೈಲ್‌ ವಿಕಾಸ್‌ ನಿಗಮ್‌ ಲಿಮಿಟೆಡ್ ವಿಫಲವಾಗಿದ್ದವು ಎಂದು ಮೂಲಗಳು ತಿಳಿಸಿವೆ.

ಕರ್ನಾಟಕದಲ್ಲಿ ಹೂಡಿಕೆಯ ಘೋಷಣೆ

2022 ರಲ್ಲಿ ನಡೆದ 'ಇನ್ವೆಸ್ಟ್ ಕರ್ನಾಟಕ; ಗ್ಲೋಬಲ್ ಇನ್ವೆಸ್ಟರ್ಸ್‌ ಮೀಟ್‌ ಹಾಗೂ 2025 ಫೆಬ್ರವರಿಯಲ್ಲಿ ನಡೆದ ಗ್ಲೋಬಲ್‌ ಇನ್‌ವೆಸ್ಟರ್ಸ್‌ ಮೀಟ್‌(ಜಿಮ್‌) ನಲ್ಲಿ ಅದಾನಿ ಸಮೂಹವು ಕರ್ನಾಟಕದಲ್ಲಿ ಒಂದು ಲಕ್ಷ ಕೋಟಿ ರೂ. ಹೂಡಿಕೆಯ ಘೋಷಣೆ ಮಾಡಿತ್ತು.

ಕರ್ನಾಟಕದಲ್ಲಿ ಹೂಡಿಕೆ ಸ್ನೇಹಿ ಉದ್ಯಮ ವಾತಾವರಣವಿದೆ. ಅಲ್ಲದೇ ಜಾಗತಿಕ ವ್ಯವಹಾರದಲ್ಲಿ ಪ್ರಮುಖ ಕೇಂದ್ರವಾಗಿ ಗುರುತಿಸಿಕೊಂಡಿದೆ. ಆದ್ದರಿಂದ ಕರ್ನಾಟಕದಲ್ಲಿ ಸಿಮೆಂಟ್, ವಿದ್ಯುತ್, ನಗರ ಅನಿಲ, ತೈಲ, ಸಾರಿಗೆ, ಲಾಜಿಸ್ಟಿಕ್ಸ್ ಮತ್ತು ಡಿಜಿಟಲ್ ವಲಯಗಳಲ್ಲಿ ಹೂಡಿಕೆ ಮಾಡಲಾಗುತ್ತಿದೆ ಎಂದು ಗೌತಮ್ ಅದಾನಿ ಅವರ ಪುತ್ರ ಹಾಗೂ ಅದಾನಿ ಸಮೂಹದ ಸಿಇಒ ಕರಣ್‌ ಅದಾನಿ ಘೋಷಿಸಿದ್ದರು.

ಭವಿಷ್ಯದ ಯೋಜನೆಗಳು ಏನು?
ಮಾಲೂರು ಇನ್‌ಲ್ಯಾಂಡ್‌ ಕಂಟೇನರ್ ಡಿಪೋವನ್ನು ಪ್ರಸಕ್ತ ವರ್ಷಾಂತ್ಯದಲ್ಲಿ ಆರಂಭಿಸಲು ತಯಾರಿ ನಡೆಸಲಾಗಿದೆ. ಇಲ್ಲಿ
ಲಾಜಿಸ್ಟಿಕ್ಸ್ ಮತ್ತು ಸರಕು ನಿರ್ವಹಣೆಯನ್ನು ಹೆಚ್ಚಿಸಲು ನಿರ್ಧರಿಸಲಾಗಿದೆ. ಅದಾನಿ-ಕರ್ನಾಟಕ ಸೋಲಾರ್ ಪಿವಿ ಪಾರ್ಕ್ ಯೋಜನೆಯಲ್ಲಿ ಅಂದಾಜು 132.62 ಮಿಲಿಯನ್ ಡಾಲರ್‌ ಮೊತ್ತದ 190 ಮೆಗಾವ್ಯಾಟ್ ಸೌರಶಕ್ತಿ ಯೋಜನೆ ಕೈಗೆತ್ತಿಕೊಳ್ಳಲಾಗಿದೆ.

300 ಮೆಗಾವ್ಯಾಟ್ ಸಾಮರ್ಥ್ಯದ ಪವನ ವಿದ್ಯುತ್ ಉತ್ಪಾದನೆಗೆ ಕೊಪ್ಪಳದಲ್ಲಿ ಯೋಜನೆ ಜಾರಿಯಾಗುತ್ತಿದೆ. ಇದೇ ವರ್ಷಾಂತ್ಯದಲ್ಲಿ ಯೋಜನೆ ಕಾರ್ಯಾರಂಭ ಮಾಡುವ ಸಾಧ್ಯತೆ ಇದೆ. ಪವರ್ ಸ್ಟೋರೇಜ್ ತಂತ್ರಜ್ಞಾನ, ಬ್ಯಾಟರಿ ತಯಾರಿಕಾ ಕ್ಷೇತ್ರದಲ್ಲೂ ಅದಾನಿ ಸಮೂಹವು ಹೂಡಿಕೆ ವಿಸ್ತರಿಸುತ್ತಿದೆ ಎಂದು ಕೈಗಾರಿಕಾ ಇಲಾಖೆಯ ಅಧಿಕಾರಿಯೊಬ್ಬರು ʼದ ಫೆಡರಲ್‌ ಕರ್ನಾಟಕʼಕ್ಕೆ ತಿಳಿಸಿದರು.
ಅದಾನಿ ಸಮೂಹವು ಈಗಾಗಲೇ ಕರ್ನಾಟಕವನ್ನು ತನ್ನ ನೆಚ್ಚಿನ ಹೂಡಿಕೆ ಕ್ಷೇತ್ರವನ್ನಾಗಿಸಿಕೊಂಡಿದೆ. ಅದಾನಿ ಗ್ರೂಪ್ ಕರ್ನಾಟಕದ ದೀರ್ಘಕಾಲಿಕ ಕೈಗಾರಿಕಾ ಬೆಳವಣಿಗೆಯ ಪ್ರಮುಖ ಸಹಭಾಗಿಯಾಗಿದೆ ಎಂದರು.

Read More
Next Story