Bengaluru Twin Tunnel | ಸುರಂಗ ಮಾರ್ಗ ಯೋಜನೆಗೆ ವಿರೋಧ; ಡಿಪಿಆರ್‌ ಮರು ಪರಿಶೀಲನೆಗೆ ಒತ್ತಡ
x
ಸುರಂಗ ಮಾರ್ಗದ ಸಾಂದರ್ಭಿಕ ಚಿತ್ರ

Bengaluru Twin Tunnel | ಸುರಂಗ ಮಾರ್ಗ ಯೋಜನೆಗೆ ವಿರೋಧ; ಡಿಪಿಆರ್‌ ಮರು ಪರಿಶೀಲನೆಗೆ ಒತ್ತಡ

Bengaluru Twin Tunnel | ಸುರಂಗ ಮಾರ್ಗ ಯೋಜನೆಯ ಡಿಪಿಆರ್‌ ಮರು ಪರಿಶೀಲನೆ ಮಾಡುವಂತೆ ಒತ್ತಾಯಿಸಿ ಬಿಜೆಪಿ ಸಂಸದ ಪಿ.ಸಿ.ಮೋಹನ್ ಅವರು ಬಿಬಿಎಂಪಿಗೆ ಪತ್ರ ಬರೆದಿದ್ದಾರೆ.


ಬೆಂಗಳೂರಿನ ಸಂಚಾರ ದಟ್ಟಣೆಗೆ ಪರಿಹಾರ ಕಂಡುಕೊಳ್ಳುವ ಬಹುನಿರೀಕ್ಷಿತ ಸುರಂಗ ಮಾರ್ಗ ಯೋಜನೆಗೆ ಭಾರೀ ವಿರೋಧ ವ್ಯಕ್ತಗೊಂಡಿದೆ. ಯೋಜನೆಗೆ ಭಾರತೀಯ ವಿಜ್ಞಾನ ಸಂಸ್ಥೆಯ (ಐಐಎಸ್ಸಿ) ವಿಜ್ಞಾನಿಗಳು ವಿರೋಧ ವ್ಯಕ್ತಪಡಿಸಿದ ಬೆನ್ನಲ್ಲೇ ರೋಡಿಕ್ ಕನ್ಸಲ್ಟೆಂಟ್‌ ಲಿಮಿಟೆಡ್ ಸಿದ್ಧಪಡಿಸಿರುವ ವಿಸ್ತೃತ ಯೋಜನಾ ವರದಿ(ಡಿಪಿಆರ್) ಮರು ಪರಿಶೀಲನೆಗೆ ಒತ್ತಾಯಿಸಿ ಬಿಜೆಪಿ ಸಂಸದ ಪಿ.ಸಿ.ಮೋಹನ್ ಅವರು ಬಿಬಿಎಂಪಿ ಮುಖ್ಯ ಆಯುಕ್ತರಿಗೆ ಪತ್ರ ಬರೆದಿದ್ದಾರೆ.

ರೋಡಿಕ್ ಕನ್ಸಲ್ಟೆಂಟ್‌ ಲಿಮಿಟೆಡ್‌ 9.5 ಕೋಟಿ ರೂ. ವೆಚ್ಚದಲ್ಲಿ ಡಿಪಿಆರ್ ಸಿದ್ಧಪಡಿಸಿದೆ. ಆದರೆ, ಅದು ಹಲವು ಲೋಪದೋಷಗಳಿಂದ ಕೂಡಿದೆ. ಅವಾಸ್ತವಿಕ ಯೋಜನೆಯಿಂದ ನಗರದ ಸಂಚಾರ ವ್ಯವಸ್ಥೆ ಹಾಗೂ ಪರಿಸರಕ್ಕೆ ಧಕ್ಕೆಯಾಗಲಿದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.

ಡಿಪಿಆರ್‌ಗೆ ಆಕ್ಷೇಪವೇನು?

ಸುರಂಗ ಮಾರ್ಗ ನಿರ್ಮಾಣ ಸಂಬಂಧ ಸಮಗ್ರ ಡಿಪಿಆರ್ ಸಿದ್ಧಪಡಿಸಲು ಕನಿಷ್ಠ 12 ರಿಂದ 18 ತಿಂಗಳು ಸಮಯ ಹಿಡಿಯುತ್ತದೆ. ಆದರೆ, ರೋಡಿಕ್ಸ್ ಕನ್ಸಲ್ಟೆಂಟ್‌ ಲಿಮಿಟೆಡ್‌ ಸಂಸ್ಥೆ ಕೇವಲ 3 ತಿಂಗಳಲ್ಲಿ ಡಿಪಿಆರ್ ಸಿದ್ಧಪಡಿಸಿದೆ. ಈ ವೇಳೆ ಭೂತಾಂತ್ರಿಕ ಅಧ್ಯಯನ ನಡೆಸಿಲ್ಲ. ಸುರಂಗ ಮಾರ್ಗವು ಭೂ ಮೇಲ್ಭಾಗದಿಂದ 120 ಮೀಟರ್ ಆಳದಲ್ಲಿ ಹಾದು ಹೋಗುವ ಹಿನ್ನೆಲೆಯಲ್ಲಿ ಪ್ರತಿ ಕಿ.ಮೀ.ಗೆ 20 ಕಡೆ ಮಣ್ಣಿನ ಮಾದರಿ ಸಂಗ್ರಹಿಸಿ ಪರೀಕ್ಷೆ ನಡೆಸಬೇಕು. 18 ಕಿ.ಮೀ ಉದ್ದದ ಮಾರ್ಗದಲ್ಲಿ ಒಟ್ಟು 400 ಕಡೆ ಮಣ್ಣಿನ ಮಾದರಿ ಸಂಗ್ರಹಿಸಬೇಕಿತ್ತು. ಆದರೆ, ರೋಡಿಕ್ಸ್ ಕನ್ಸಲ್ಟೆಂಟ್‌ ಇದ್ಯಾವುದನ್ನೂ ಮಾಡಿಲ್ಲ. ನಗರ ಸಂಚಾರ ಯೋಜನೆಯನ್ನು ತಪ್ಪಾಗಿ ಅರ್ಥೈಸಲಾಗಿದೆ. ಮುಂಬೈ ಕೋಸ್ಟಲ್ ರಸ್ತೆ ಯೋಜನೆಯ ಉದಾಹರಣೆ ನೀಡಲಾಗಿದೆ. ಅವೈಜ್ಞಾನಿಕವಾಗಿರುವ ಯೋಜನೆಯಿಂದ ಸುರಕ್ಷತೆಗೆ ಧಕ್ಕೆಯಾಗಲಿದೆ. ಪರಿಸರಕ್ಕೂ ಮಾರಕ ಎಂದು ಪಿ.ಸಿ. ಮೋಹನ್‌ ಅಭಿಪ್ರಾಯಪಟ್ಟಿದ್ದಾರೆ.

ಇನ್ನು ರೋಡಿಕ್ಸ್ ಸಂಸ್ಥೆ ಯೋಜನೆಗೆ ಸಂಬಂಧಿಸದ ಒಂದು ಪುಟವನ್ನೂ ಡಿಪಿಆರ್‌ನಲ್ಲಿ ಸೇರಿಸಿದೆ. ಇಲ್ಲೂ ನಿರ್ಲಕ್ಷ್ಯ ವಹಿಸಲಾಗಿದೆ. ಅದಕ್ಕಾಗಿ ₹5 ಲಕ್ಷ ದಂಡ ವಿಧಿಸಲಾಗಿದೆ' ಎಂದು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ತಿಳಿಸಿದ್ದಾರೆ.

ಏನಿದು ಸುರಂಗ ಯೋಜನೆ?
ಹೆಬ್ಬಾಳದಿಂದ ಸಿಲ್ಕ್ ಬೋರ್ಡ್‌ಗ ಒಟ್ಟು 18 ಕಿ.ಮೀ. ಸುರಂಗ ಮಾರ್ಗವನ್ನು 14,981.39 ಕೋಟಿ ರೂ.ವೆಚ್ಚದಲ್ಲಿ ಕೈಗೆತ್ತಿಕೊಂಡಿದೆ. ಯೋಜನೆಯ ಗುತ್ತಿಗೆ ಪಡೆಯುವ ಸಂಸ್ಥೆ ಶೇ 60 ಹಾಗೂ ಬಿಬಿಎಂಪಿ ಶೇ 40 ರಷ್ಟು ಬಂಡವಾಳ ಹೂಡಲಿದೆ. ಈಗಾಗಲೇ ಬಿಬಿಎಂಪಿ ತನ್ನ ಪಾಲಿನ ಬಂಡವಾಳ ಹೂಡಿಕೆಗೆ 8 ಕೋಟಿ ಸಾವಿರ ಕೋಟಿ ಸಾಲದ ಮೊರೆ ಹೋಗಿದೆ. ಯೋಜನಾ ವೆಚ್ಚ ಆಧರಿಸಿ ಕಿ.ಮೀ.ಗೆ 18 ರಿಂದ 24 ರೂ.ವರೆಗೆ ಟೋಲ್ ಶುಲ್ಕ ಸಂಗ್ರಹಿಸಲು ಚಿಂತನೆ ನಡೆಸಿದೆ. ನಿರ್ಗಮನ ಮತ್ತು ಪ್ರವೇಶ ದ್ವಾರ ನಿರ್ಮಾಣಕ್ಕೆ ಅಗತ್ಯವಾದ ಭೂಮಿ ಸ್ವಾಧೀನಪಡಿಸಿಕೊಳ್ಳಲು 800 ಕೋಟಿ ರೂ. ನಿಗದಿಪಡಿಸಲಾಗಿದೆ.

ಪ್ರತಿ ಕಿ.ಮೀ.ಗೆ 898 ಕೋಟಿ ರೂ. ವೆಚ್ಚ

ಹೆಬ್ಬಾಳದ ಎಸ್ಟೀಮ್ ಮಾಲ್ ಜಂಕ್ಷನ್‌ನಿಂದ ಸಿಲ್ಕ್‌ಬೋರ್ಡ್‌ ಕೆಎಸ್ಆರ್‌ಪಿ ಜಂಕ್ಷನ್‌ವರೆಗೆ ಒಟ್ಟು 16.67 ಕಿ.ಮೀ. ಉದ್ದದ ಆರು ಪಥದ ಮಾರ್ಗದಲ್ಲಿ ಪ್ರತಿ ನಿರ್ಗಮನ ಹಾಗೂ ಪ್ರವೇಶದ್ವಾರದ ಬಳಿ ಹತ್ತೂವರೆ ಮೀಟರ್ ಅಗಲದ 3 ಪಥ ನಿರ್ಮಿಸಲಾಗುತ್ತಿದೆ.

ಅವಳಿ ಸುರಂಗ ಮಾರ್ಗದ ಆರು ರಸ್ತೆಗಳಲ್ಲಿ ಎರಡು ಪಥಗಳನ್ನು ಆಂಬ್ಯುಲೆನ್ಸ್, ಬಿಎಂಟಿಸಿ ಬಸ್‌ ಹಾಗೂ ಪೊಲೀಸ್ ವಾಹನಗಳ ಸಂಚಾರಕ್ಕೆ ಮೀಸಲಿಡಲಾಗುವುದು. ಸುರಂಗ ಮಾರ್ಗದಲ್ಲಿ ಪ್ರತಿ ಕಿ.ಮೀ. ರಸ್ತೆ ನಿರ್ಮಾಣಕ್ಕೆ 898 ಕೋಟಿ ರೂ. ವೆಚ್ಚವಾಗಲಿದೆ ಎಂದು ಡಿಪಿಆರ್‌ನಲ್ಲಿ ಉಲ್ಲೇಖಿಸಲಾಗಿದೆ. ಪ್ರಸ್ತುತ, ಸಿಲ್ಕ್‌ಬೋರ್ಡ್‌ನಿಂದ ಹೆಬ್ಬಾಳದ ಎಸ್ಟೀಮ್ ಮಾಲ್‌ವರೆಗೆ ಸಂಚರಿಸಲು ಕನಿಷ್ಠ 90 ನಿಮಿಷ ಬೇಕಾಗುತ್ತದೆ. ಆದರೆ, ಸುರಂಗ ಮಾರ್ಗ ನಿರ್ಮಾಣವಾದ ಬಳಿಕ ಕೇವಲ 20 ನಿಮಿಷಗಳಲ್ಲಿ ತಲುಪಬಹುದಾಗಿದೆ.

5 ಕಡೆ ಪ್ರವೇಶ, ನಿರ್ಗಮನ

ಹೆಬ್ಬಾಳದಿಂದ ಸಿಲ್ಕ್ ಬೋಡ್‌ವರೆಗಿನ ಅವಳಿ ಸುರಂಗ ಮಾರ್ಗದಲ್ಲಿ ಒಟ್ಟು ಐದು ಕಡೆ ನಿರ್ಗಮನ ಹಾಗೂ ಪ್ರವೇಶ ವ್ಯವಸ್ಥೆ ಕಲ್ಪಿಸಲಾಗುವುದು. ಹೆಬ್ಬಾಳ ಜಂಕ್ಷನ್, ಅರಮನೆ ಮೈದಾನ ಬಳಿಯ ಮೇಖ್ರಿ ವೃತ್ತ, ರೇಸ್‌ಕೋರ್ಸ್‌ ರಸ್ತೆ, ಲಾಲ್‌ಬಾಗ್‌ ಬಳಿಯ ಅಶೋಕ ಪಿಲ್ಲರ್ ಹಾಗೂ ಸಿಲ್ಕ್‌ ಬೋರ್ಡ್ ಬಳಿ ಪ್ರವೇಶ ಮತ್ತು ನಿರ್ಗಮನ ವ್ಯವಸ್ಥೆ ಇರಲಿದೆ.

ಸುರಂಗ ಮಾರ್ಗ ಯೋಜನೆಗೆ ವಿರೋಧ

ರಾಜ್ಯ ಸರ್ಕಾರದ ಬಹುನಿರೀಕ್ಷಿತ ಸುರಂಗ ಮಾರ್ಗ ಬೆಂಗಳೂರಿಗೆ ವರದಾನವಾಗಲಿದೆ ಎಂಬ ಮಾತುಗಳ ನಡುವೆಯೇ ಯೋಜನೆಯೇ ಅನಗತ್ಯ ಎಂಬ ವಾದವೂ ಕೇಳಿ ಬಂದಿದೆ.

ಮೆಟ್ರೋ, ಬಿಎಂಟಿಸಿ ಸಾರಿಗೆಗೆ ಆದ್ಯತೆ ನೀಡಬೇಕು ಎಂಬ ಒತ್ತಾಯಿಸಲಾಗಿದೆ. ಭಾರತೀಯ ವಿಜ್ಞಾನ ಸಂಸ್ಥೆ ಈಗಾಗಲೇ ಮೆಟ್ರೋ 3ನೇ ʼಎ' ಹಂತ, ಉಪನಗರ ರೈಲು ಯೋಜನೆಗೆ ಶಿಫಾರಸು ಮಾಡಿದೆ. ಅದರಂತೆ ಸಾರ್ವಜನಿಕ ಸಾರಿಗೆಯನ್ನು ಬಲಪಡಿಸಿ, ಪ್ರಯಾಣಿಕರಿಗೆ ಲಾಸ್ಟ್ ಮೈಲ್ ಕನೆಕ್ಟಿವಿಟಿ ಸೌಲಭ್ಯ ಒದಗಿಸಬೇಕು ಎಂಬುದು ಪಿ.ಸಿ. ಮೋಹನ್ ಅವರ ವಾದ. ಈ ಮಧ್ಯೆ, ಸುರಂಗ ಮಾರ್ಗದಿಂದ ಜಲಮೂಲಗಳಿಗೆ ಹಾನಿಯಾಗುವ ಸಾಧ್ಯತೆಯಿದೆ. ಟ್ರಾಫಿಕ್ ಕಡಿಮೆಯಾಗುವ ಬದಲು ಮತ್ತಷ್ಟು ಹೆಚ್ಚಾಗುವ ಆತಂಕವಿದ್ದು, ಬೆಂಗಳೂರಿಗೆ ಸುರಂಗ ಮಾರ್ಗ ಅವಶ್ಯಕವಲ್ಲ ಎಂದು ಸಿಟಿಜನ್ ಫಾರ್ ಸಿಟಿಜನ್ ಫೌಂಡೇಷನ್ ಸಂಸ್ಥಾಪಕ ರಾಜ್ ಕುಮಾರ್ ಥೇಲ್ಕರ್​ ಆತಂಕ ವ್ಯಕ್ತಪಡಿಸಿದ್ದಾರೆ.

ಮೆಟ್ರೋ ಮಾರ್ಗ ಕೂಡ ಸಮೀಪವೇ ಇರುವುದರಿಂದ ಸುರಂಗ ಮಾರ್ಗ ನಿರ್ಮಾಣದ ವೇಳೆ ಅವಘಡಗಳಾಗುವ ಸಾಧ್ಯತೆ ಇರುತ್ತದೆ. ಸರ್ಕಾರ ಸುರಂಗದ ಬದಲು ರಸ್ತೆ, ಮೂಲಸೌಕರ್ಯ ಕಲ್ಪಿಸಲಿ. ಸಾರ್ವಜನಿಕ ಸಾರಿಗೆ ವ್ಯವಸ್ಥೆ ಸುಧಾರಿಸಬೇಕು. ಹಾಗಾಗಿ ಸುರಂಗ ಮಾರ್ಗ ಯೋಜನೆ ಬಗ್ಗೆ ಪುನರ್ ಪರಿಶೀಲನೆ ಮಾಡಬೇಕು ಎಂದು ಆಗ್ರಹಿಸಿದ್ದಾರೆ.

ಸಾಲಕ್ಕಾಗಿ ರಾಷ್ಟ್ರೀಕೃತ ಬ್ಯಾಂಕ್‌ಗಳಿಗೆ ಮೊರೆ

ಬಿಬಿಎಂಪಿ ಅಧಿಕಾರಿಗಳು 8 ಸಾವಿರ ಕೋಟಿ ಸಾಲಕ್ಕಾಗಿ ಈಗಾಗಲೇ ಹಲವು ರಾಷ್ಟ್ರೀಕೃತ ಬ್ಯಾಂಕ್‌ಗಳು, ಹುಡ್ಕೊ, ಪಿಎಫ್‌ಟಿ, ಆರ್‌ಇಸಿ (ಗ್ರಾಮೀಣ ವಿದ್ಯುದೀಕರಣ ನಿಗಮ) ಸೇರಿದಂತೆ ಇತರೆ ಹಣಕಾಸು ಸಂಸ್ಥೆಗಳಿಗೆ ಸುರಂಗ ಮಾರ್ಗ ಯೋಜನೆಯ ದಾಖಲೆಗಳನ್ನು ಒದಗಿಸಿದ್ದಾರೆ. ಯೋಜನೆಯ ಗುತ್ತಿಗೆಗಾಗಿ ಜಾಗತಿಕ ಟೆಂಡರ್ ಕರೆಯಲಾಗುವುದು. ಅರ್ಹ ಕಂಪನಿಗೆ 20 ವರ್ಷಗಳ ಅವಧಿಗೆ ಟೋಲ್ ಶುಲ್ಕ ಸಂಗ್ರಹಿಸಲು ಅವಕಾಶ ಕಲ್ಪಿಸಲು ತೀರ್ಮಾನಿಸಲಾಗಿದೆ. ಆ ನಂತರ ಸುರಂಗ ಮಾರ್ಗ ಬಿಬಿಎಂಪಿಗೆ ಹಸ್ತಾಂತರಿಸಲಿದೆ.

ಯೋಜನೆಗೆ ಇದೇ ತಿಂಗಳಲ್ಲಿ ಜಾಗತಿಕ ಟೆಂಡರ್ ಕರೆಯಲಿದ್ದು, ಮೂರು ವರ್ಷದಲ್ಲಿ ಕಾಮಗಾರಿ ಪೂರ್ಣಗೊಳಿಸಲು ಯೋಜಿಸಲಾಗಿದೆ. ಕಳೆದ 2024ಆಗಸ್ಟ್ ತಿಂಗಳಲ್ಲಿ ಅವಳಿ ಸುರಂಗ ಮಾರ್ಗಕ್ಕೆ ರಾಜ್ಯ ಸಚಿವ ಸಂಪುಟ ಹಸಿರು ನಿಶಾನೆ ತೋರಿತ್ತು

Read More
Next Story