
ಬೆಂಗಳೂರು ಟನಲ್ ರಸ್ತೆ ಅವೈಜ್ಞಾನಿಕ; ಡಿಕೆಶಿ ಭೇಟಿಯಾಗಿ ವಿವರಣೆ ನೀಡಿದ ತೇಜಸ್ವಿ ಸೂರ್ಯ
ಯೋಜನೆ ಅವೈಜ್ಞಾನಿಕ ಮತ್ತು ಪರಿಣಾಮಕಾರಿ ಅಲ್ಲ ಎಂದು ಪ್ರತಿಪಾದಿಸುವ ತೇಜಸ್ವಿ ಸೂರ್ಯ, ಇದು ಸಾರ್ವಜನಿಕರ ಹಣವನ್ನು ಪೋಲು ಮಾಡುವ ಯೋಜನೆಯಾಗಿದೆ ಎಂದು ತಮ್ಮ ವಾದವನ್ನು ಹಿಂದೆ ಹಲವು ಬಾರಿ ಮಂಡಿಸಿದ್ದರು.
ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಬೆಂಗಳೂರು ಟನಲ್ ರಸ್ತೆ ಯೋಜನೆಗೆ ಸಂಬಂಧಿಸಿದಂತೆ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಮತ್ತು ಬೆಂಗಳೂರು ದಕ್ಷಿಣ ಸಂಸದ ತೇಜಸ್ವಿ ಸೂರ್ಯ ನಡುವಿನ ರಾಜಕೀಯ ಜಟಾಪಟಿ ಇದೀಗ ಮುಖಾಮುಖಿ ಚರ್ಚೆಯ ಹಂತಕ್ಕೆ ತಲುಪಿದೆ. ಯೋಜನೆಯನ್ನು ಆರಂಭದಿಂದಲೂ ಸತತವಾಗಿ ವಿರೋಧಿಸುತ್ತಿರುವ ತೇಜಸ್ವಿ ಸೂರ್ಯ ಅವರು, ಇಂದು ಡಿಸಿಎಂ ಡಿ.ಕೆ. ಶಿವಕುಮಾರ್ ಅವರ ಸದಾಶಿವನಗರ ನಿವಾಸದಲ್ಲಿ ಭೇಟಿಯಾಗಿ, ಸುರಂಗ ಮಾರ್ಗದ ಬಾಧಕಗಳ ಬಗ್ಗೆ ವಿವರಣೆ ನೀಡಿದ್ದಾರೆ.
ಬೆಂಗಳೂರಿನ ಸಂಚಾರ ದಟ್ಟಣೆ ನಿವಾರಣೆಗೆ ಈ ಯೋಜನೆ ಅವೈಜ್ಞಾನಿಕ ಮತ್ತು ಪರಿಣಾಮಕಾರಿ ಅಲ್ಲ ಎಂದು ಪ್ರತಿಪಾದಿಸುವ ತೇಜಸ್ವಿ ಸೂರ್ಯ, ಇದು ಸಾರ್ವಜನಿಕರ ಹಣವನ್ನು ಪೋಲು ಮಾಡುವ ಯೋಜನೆಯಾಗಿದೆ ಎಂದು ತಮ್ಮ ವಾದವನ್ನು ಹಿಂದೆ ಹಲವು ಬಾರಿ ಮಂಡಿಸಿದ್ದರು. ಆ ವೇಳೆ ತಮ್ಮ ಭೇಟಿಗೆ ಸ್ವತಃ ಡಿ.ಕೆ. ಶಿವಕುಮಾರ್ ಅವರೇ ಆಹ್ವಾನ ನೀಡಿದ್ದರು.
ಚರ್ಚೆಯಲ್ಲಿ ತೇಜಸ್ವಿ ಸೂರ್ಯ ಮುಂದಿಟ್ಟ ಅಂಶಗಳೇನು?
ಸಮಾಲೋಚನೆಯಲ್ಲಿ ತೇಜಸ್ವಿ ಸೂರ್ಯ, ಟನಲ್ ರಸ್ತೆ ಯೋಜನೆಯು ಪರಿಸರಕ್ಕೆ ಹಾನಿ ಉಂಟುಮಾಡುವುದಲ್ಲದೆ, ಸಂಚಾರ ದಟ್ಟಣೆಯ ಮೂಲ ಸಮಸ್ಯೆಯನ್ನು ಬಗೆಹರಿಸುವುದಿಲ್ಲ ಎಂದು ವಿವರಿಸಿದ್ದಾರೆ ಎನ್ನಲಾಗಿದೆ. "ಖಾಸಗಿ ವಾಹನಗಳ ಬಳಕೆಯನ್ನು ಕಡಿಮೆ ಮಾಡಿ, ಸಾರ್ವಜನಿಕ ಸಾರಿಗೆಯನ್ನು ಉತ್ತೇಜಿಸುವುದು ಬೆಂಗಳೂರಿನ ಸಂಚಾರ ಸಮಸ್ಯೆಗೆ ನಿಜವಾದ ಪರಿಹಾರ. ಟನಲ್ ರಸ್ತೆಯಿಂದ ಇದು ಸಾಧ್ಯವಿಲ್ಲ," ಎಂಬ ತಮ್ಮ ವಾದವನ್ನು ಈ ವೇಳೆಯೂ ಪ್ರಸ್ತುತಪಡಿಸಿದ್ದಾರೆ ಎನನ್ನಲಾಗಿದೆ.
ಏನಿದು ಬೆಂಗಳೂರು ಟನಲ್ ರಸ್ತೆ ಯೋಜನೆ?
ಬೆಂಗಳೂರಿನಲ್ಲಿ ದಿನೇದಿನೇ ಹೆಚ್ಚುತ್ತಿರುವ ಸಂಚಾರ ದಟ್ಟಣೆಗೆ ಪರಿಹಾರವಾಗಿ, ರಾಜ್ಯ ಸರ್ಕಾರವು ಸುರಂಗ ಮಾರ್ಗ ನಿರ್ಮಿಸಲು ಪ್ರಸ್ತಾಪಿಸಿದೆ. ಈ ಯೋಜನೆಯು ನಗರದ ಪ್ರಮುಖ ಭಾಗಗಳಾದ ಹೆಬ್ಬಾಳ, ಕೆ.ಆರ್. ಪುರಂ, ಮತ್ತು ಸೆಂಟ್ರಲ್ ಸಿಲ್ಕ್ ಬೋರ್ಡ್‌ನಂತಹ ಪ್ರದೇಶಗಳನ್ನು ಸಂಪರ್ಕಿಸಲಿದೆ. ಅಂದಾಜು 50,000 ಕೋಟಿ ರೂಪಾಯಿ ವೆಚ್ಚದ ಈ ಯೋಜನೆಯು, ನಗರದ ಮೇಲ್ಮೈ ರಸ್ತೆಗಳ ಮೇಲಿನ ಒತ್ತಡವನ್ನು ಕಡಿಮೆ ಮಾಡುವ ಗುರಿ ಹೊಂದಿದೆ. ಆದರೆ, ಲಾಲ್‌ಬಾಗ್‌ನಂತಹ ಸೂಕ್ಷ್ಮ ಪರಿಸರ ವಲಯಗಳ ಅಡಿಯಲ್ಲೂ ಸುರಂಗ ಹಾದುಹೋಗುವ ಪ್ರಸ್ತಾಪಕ್ಕೆ ತೀವ್ರ ವಿರೋಧ ವ್ಯಕ್ತವಾಗಿದೆ.
ಸತತ ವಿರೋಧ ಮತ್ತು ಕಾನೂನು ಹೋರಾಟ
ಈ ಯೋಜನೆಯನ್ನು "ಅವೈಜ್ಞಾನಿಕ" ಮತ್ತು "ನಿಷ್ಪ್ರಯೋಜಕ" ಎಂದು ಕರೆದಿರುವ ತೇಜಸ್ವಿ ಸೂರ್ಯ, ಇದು ಕೇವಲ ಕೆಲವೇ ಶ್ರೀಮಂತರ ಕಾರುಗಳ ಓಡಾಟಕ್ಕೆ ಅನುಕೂಲ ಮಾಡಿಕೊಡುವ ಯೋಜನೆ ಎಂದು ಟೀಕಿಸುತ್ತಲೇ ಬಂದಿದ್ದಾರೆ. ಇದಲ್ಲದೆ, ನಟ ಪ್ರಕಾಶ್ ಬೆಳವಾಡಿ ಅವರು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ (PIL) ಪರವಾಗಿ ಹೈಕೋರ್ಟ್‌ನಲ್ಲಿ ಖುದ್ದು ವಾದ ಮಂಡಿಸುವ ಮೂಲಕ, ಯೋಜನೆಗೆ ಕಾನೂನಾತ್ಮಕವಾಗಿಯೂ ತಡೆಯೊಡ್ಡಲು ಯತ್ನಿಸಿದ್ದಾರೆ.

