
ಸಾಂದರ್ಭಿಕ ಚಿತ್ರ
Nelamangala| ಪೈಪ್‌ಲೈನ್ ಗುಂಡಿಗೆ ಬಿದ್ದು ಬೈಕ್ ಸವಾರ ಸಾವು; ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಅಮಾಯಕ ಬಲಿ
ನೆಲಮಂಗಲದ ಸುಭಾಷ್ ನಗರದಲ್ಲಿ ಸಂಭವಿಸಿದ ರಸ್ತೆ ಅಪಘಾತದಲ್ಲಿ ಇಸ್ಲಾಂಪುರ ನಿವಾಸಿ ತಬ್ರೇಜ್ (32) ಎಂಬ ಯುವಕ ಮೃತಪಟ್ಟಿದ್ದಾರೆ. ನೀರಿನ ಪೈಪ್‌ಲೈನ್ ಅಳವಡಿಸಲು ರಸ್ತೆಯಲ್ಲಿ ಅಗೆದಿದ್ದ ಗುಂಡಿಯನ್ನು ಸರಿಯಾಗಿ ಮುಚ್ಚದ ಕಾರಣ ಈ ದುರಂತ ಸಂಭವಿಸಿದೆ.
ಅಭಿವೃದ್ಧಿ ಹೆಸರಲ್ಲಿ ಅಗೆದ ಗುಂಡಿಗಳು ಸಾವಿನ ಕೂಪಗಳಾಗುತ್ತಿವೆ. ನೆಲಮಂಗಲದಲ್ಲಿ ಪೈಪ್‌ಲೈನ್ ಕಾಮಗಾರಿಗಾಗಿ ಅಗೆದಿದ್ದ ಗುಂಡಿಯನ್ನು ತಪ್ಪಿಸಲು ಹೋಗಿ ರಸ್ತೆಗೆ ಬಿದ್ದು ಬೈಕ್ ಸವಾರರೊಬ್ಬರು ಮೃತಪಟ್ಟಿದ್ದಾರೆ. ನೆಲಮಂಗಲದ ಸುಭಾಷ್ ನಗರ ಮುಖ್ಯರಸ್ತೆಯಲ್ಲಿ ನಡೆದ ಭೀಕರ ಅಪಘಾತದಲ್ಲಿ ಇಸ್ಲಾಂಪುರ ನಿವಾಸಿ ತಬ್ರೇಜ್(32) ಮೃತಪಟ್ಟಿದ್ದಾರೆ.
ಘಟನೆಯ ಹಿನ್ನೆಲೆ ಏನು?
ಕಳೆದ ಡಿ.17ರಂದು ರಾತ್ರಿ ವೇಳೆ ಕೆಲಸ ಮುಗಿಸಿ ಮನೆಗೆ ಮರಳುತ್ತಿದ್ದ ತಬ್ರೇಜ್ ಅವರು ಬಜಾಜ್ ಶೋ ರೂಮ್ ಮುಂಭಾಗದ ರಸ್ತೆಯಲ್ಲಿ ಸಂಚರಿಸುತ್ತಿದ್ದಾಗ ನೀರಿನ ಪೈಪ್‌ಲೈನ್ ಕಾಮಗಾರಿಗಾಗಿ ಅಗೆದಿದ್ದ ಗುಂಡಿ ತಪ್ಪಿಸಲು ಹೋಗಿ ಬಿದ್ದು ಮೃತಪಟ್ಟಿದ್ದಾರೆ.
ಸಿಸಿಟಿವಿ ದೃಶ್ಯಾವಳಿ ಪ್ರಕಾರ ಎದುರಿನಿಂದ ವೇಗವಾಗಿ ಬಂದ ವಾಹನಕ್ಕೆ ದಾರಿ ಮಾಡಿಕೊಡಲು ತಬ್ರೇಜ್ ಬೈಕ್ ಅನ್ನು ರಸ್ತೆಯ ಎಡಭಾಗಕ್ಕೆ ತಿರುಗಿಸಿದ್ದಾರೆ. ಅರೆಬರೆಯಾಗಿ ಮುಚ್ಚಿದ್ದ ಗುಂಡಿ ಗಮನಿಸಲಿಲ್ಲ. ಆಗ ದಿಢೀರನೇ ಬ್ರೇಕ್ ಹಾಕಿದ್ದರಿಂದ ಕೆಳಗೆ ಬಿದ್ದಿದ್ದಾರೆ. ತಬ್ರೇಜ್ ಹೆಲ್ಮೆಟ್ ಧರಿಸಿರಲಿಲ್ಲ. ತಲೆಗೆ ಗಂಭೀರ ಪೆಟ್ಟು ಬಿದ್ದು ಮೆದುಳಿನಲ್ಲಿ ರಕ್ತಸ್ರಾವವಾಗಿತ್ತು. ಎರಡು ದಿನಗಳ ಕಾಲ ಬೆಂಗಳೂರಿನ ನಿಮ್ಹಾನ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದರೂ ಫಲಿಸದೇ ಮೃತಪಟ್ಟಿದ್ದಾರೆ.
ಘಟನೆ ನಡೆದ ಸ್ಥಳದಲ್ಲಿ ಕನಿಷ್ಠ ಸುರಕ್ಷತಾ ಕ್ರಮಗಳನ್ನೂ ಪಾಲಿಸಿರಲಿಲ್ಲ ಎಂಬುದು ತನಿಖೆಯಲ್ಲಿ ತಿಳಿದುಬಂದಿದೆ. ಪೈಪ್‌ಲೈನ್ ಕಾಮಗಾರಿ ನಡೆಸುವ ಗುತ್ತಿಗೆದಾರರು ಅಥವಾ ಸಂಬಂಧಪಟ್ಟ ಇಲಾಖೆಗಳು ಬ್ಯಾರಿಕೇಡ್ ಆಗಲಿ, ರಾತ್ರಿ ವೇಳೆ ಹೊಳೆಯುವ 'ರಿಫ್ಲೆಕ್ಟಿವ್ ಟೇಪ್' ಆಗಲಿ ಅಳವಡಿಸಿರಲಿಲ್ಲ. ಇದೊಂದು ಅಪಘಾತವಲ್ಲ, ಬದಲಾಗಿ ವ್ಯವಸ್ಥಿತ ಕೊಲೆ. ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಅಮಾಯಕ ವ್ಯಕ್ತಿಯ ಜೀವ ಹೋಗಿದೆ ಎಂದು ಸ್ಥಳೀಯರು ಆಕ್ರೋಶ ಹೊರಹಾಕಿದ್ದಾರೆ.
ಈಗಾಗಲೇ ನೆಲಮಂಗಲ ಸಂಚಾರಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಕಾಮಗಾರಿ ನಿರ್ವಹಿಸುತ್ತಿದ್ದ ಏಜೆನ್ಸಿಯ ವಿರುದ್ಧವೂ ತನಿಖೆಗೆ ಮುಂದಾಗಿದ್ದಾರೆ. ತಬ್ರೇಜ್ ಕುಟುಂಬಕ್ಕೆ ಸೂಕ್ತ ಪರಿಹಾರ ನೀಡುವಂತೆ ಒತ್ತಾಯಗಳು ಕೇಳಿ ಬಂದಿವೆ.
ಪೊಲೀಸ್ ಮೂಲಗಳ ಪ್ರಕಾರ, ತಬ್ರೇಜ್ ಹೆಲ್ಮೆಟ್ ಧರಿಸಿದ್ದರೆ ಜೀವ ಉಳಿಯುವ ಸಾಧ್ಯತೆ ಹೆಚ್ಚಿತ್ತು. "ರಸ್ತೆಯಲ್ಲಿ ಗುಂಡಿಗಳಿರುವುದು ನಿಜ, ಆದರೆ, ಸವಾರರು ಕೂಡ ಹೆಲ್ಮೆಟ್ ಅನಿವಾರ್ಯ" ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಪ್ರಸ್ತುತ ಪ್ರಕರಣದಲ್ಲಿ ಸ್ಥಳೀಯರ ದೂರಿನ ಮೇರೆಗೆ ಮುನ್ನೆಚ್ಚರಿಕೆ ವಹಿಸದ ಅಧಿಕಾರಿಗಳ ವಿರುದ್ಧ ಎಫ್‌ಐಆರ್ ದಾಖಲಿಸುವ ಪ್ರಕ್ರಿಯೆ ನಡೆದಿದೆ. ಕಳೆದ ವರ್ಷ ಏಪ್ರಿಲ್‌ನಲ್ಲೂ ಪೈಪ್‌ಲೈನ್ ಗುಂಡಿಗೆ ಬಿದ್ದು ಸವಾರನೊಬ್ಬ ಮೃತಪಟ್ಟಿದ್ದ ಘಟನೆ ನಡೆದಿತ್ತು.
ನೀರಿನ ಪೈಪ್‌ಲೈನ್‌ಗಾಗಿ ಅಗೆದಿದ್ದ ಆಳ ಗುಂಡಿಯನ್ನು ಗಮನಿಸದ ಬೈಕ್ ಸವಾರ ನೇರವಾಗಿ ಗುಂಡಿಯೊಳಗೆ ಬಿದ್ದಿದ್ದರು. ಅಪಘಾತದಲ್ಲಿ ಒಬ್ಬ ಸವಾರ ಸ್ಥಳದಲ್ಲೇ ಮೃತಪಟ್ಟರೆ, ಬೈಕ್‌ನಲ್ಲಿದ್ದ ಉಳಿದ ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದರು. ಕಾಮಗಾರಿ ನಡೆಯುವ ಸ್ಥಳದಲ್ಲಿ ಯಾವುದೇ ಸೂಚನಾ ಫಲಕಗಳಿಲ್ಲದ ಕಾರಣ ಈ ದುರಂತ ಸಂಭವಿಸಿತ್ತು ಎಂದು ಪೊಲೀಸರು ತಿಳಿಸಿದ್ದರು.
ಕಳೆದ ಸೆಪ್ಟೆಂಬರ್ ತಿಂಗಳಿನಲ್ಲಿ ಬೆಂಗಳೂರಿನಲ್ಲಿ ರಸ್ತೆ ಗುಂಡಿ ಸಮಸ್ಯೆಯಿಂದ 20 ವರ್ಷದ ಬಿ.ಕಾಂ ವಿದ್ಯಾರ್ಥಿನಿ ತನುಶ್ರೀ ಬಲಿಯಾಗಿದ್ದರು. ಕಾಲೇಜಿಗೆ ಹೋಗುತ್ತಿದ್ದ ವೇಳೆ ರಸ್ತೆಯಲ್ಲಿದ್ದ ದೊಡ್ಡ ಗುಂಡಿ ತಪ್ಪಿಸಲು ಬೈಕ್ ನಿಧಾನಗೊಳಿಸಿದಾಗ, ಹಿಂದಿನಿಂದ ವೇಗವಾಗಿ ಬಂದ ಟಿಪ್ಪರ್ ಲಾರಿ ಡಿಕ್ಕಿ ಹೊಡೆದು ವಿದ್ಯಾರ್ಥಿನಿ ಸ್ಥಳದಲ್ಲೇ ಮೃತಪಟ್ಟಿದ್ದರು. ಅಕ್ಟೋಬರ್‌ನಲ್ಲೂ ನೆಲಮಂಗಲದ ಮಾದನಾಯಕನಹಳ್ಳಿ ಹುಸ್ಕೂರು ಎಪಿಎಂಸಿ ಬಳಿ ರಸ್ತೆ ಗುಂಡಿ ತಪ್ಪಿಸಲು ಹೋಗಿ 26 ವರ್ಷದ ಸಾಫ್ಟ್‌ವೇರ್ ಎಂಜಿನಿಯರ್ ಪ್ರಿಯಾಂಕ ಎಂಬುವವರು ಮೃತಪಟ್ಟಿದ್ದರು.
ಅಣ್ಣನ ಜೊತೆ ಬೈಕ್‌ನಲ್ಲಿ ತೆರಳುತ್ತಿದ್ದಾಗ ಹದಗೆಟ್ಟ ರಸ್ತೆಯಿಂದಾಗಿ ಬೈಕ್ ನಿಯಂತ್ರಣ ತಪ್ಪಿ ಇಬ್ಬರೂ ರಸ್ತೆಗೆ ಬಿದ್ದಿದ್ದಾರೆ. ಈ ವೇಳೆ ಹಿಂದಿನಿಂದ ಬಂದ ಲಾರಿ ಯುವತಿಯ ಮೇಲೆ ಹರಿದಿದೆ. ಹೆಲ್ಮೆಟ್ ಧರಿಸಿದ್ದ ಅಣ್ಣ ಪ್ರಾಣಾಪಾಯದಿಂದ ಪಾರಾಗಿದ್ದರೆ, ಪ್ರಿಯಾಂಕ ಸ್ಥಳದಲ್ಲೇ ಕೊನೆಯುಸಿರೆಳೆದಿದ್ದರು.

