ಬೆಂಗಳೂರು ತಂತ್ರಜ್ಞಾನ ಶೃಂಗಸಭೆಗೆ ಚಾಲನೆ: 60ಕ್ಕೂಹೆಚ್ಚು ದೇಶಗಳ 1,200ಕ್ಕೂ ಅಧಿಕ ಪ್ರದರ್ಶಕರು ಭಾಗಿ
x

ಬೆಂಗಳೂರು ತಂತ್ರಜ್ಞಾನ ಶೃಂಗಸಭೆಗೆ ಚಾಲನೆ: 60ಕ್ಕೂಹೆಚ್ಚು ದೇಶಗಳ 1,200ಕ್ಕೂ ಅಧಿಕ ಪ್ರದರ್ಶಕರು ಭಾಗಿ

25 ಸಾವಿರ ಸ್ಟಾರ್ಟ್ಅಪ್‌ಗಳ ಸ್ಥಾಪನೆಗೆ ನೆರವಾಗುವ ಗುರಿಯನ್ನು ಸರ್ಕಾರ ಹೊಂದಿದೆ. ಭಾರತದ ಐಟಿ ರಫ್ತಿನಲ್ಲಿ ರಾಜ್ಯವು ಶೇ.42 ಕೊಡುಗೆ ನೀಡುತ್ತಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.


ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ತಂತ್ರಜ್ಞಾನದ ಮಹೋತ್ಸವ ಆರಂಭವಾಗಿದೆ. ಏಷ್ಯಾದ ಅತಿದೊಡ್ಡ ತಂತ್ರಜ್ಞಾನ ಮೇಳ ಎಂದೇ ಖ್ಯಾತವಾಗಿರುವ "ಬೆಂಗಳೂರು ತಂತ್ರಜ್ಞಾನ ಶೃಂಗಸಭೆ"ಯ 28ನೇ ಆವೃತ್ತಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಚಾಲನೆ ನೀಡಿದರು. ಶೃಂಗಸಭೆಯು ಬೆಂಗಳೂರು ಅಂತರಾಷ್ಟ್ರೀಯ ಪ್ರದರ್ಶನ ಕೇಂದ್ರದಲ್ಲಿ ಮೂರು ದಿನಗಳ ಕಾಲ ನಡೆಯಲಿದೆ.

ಈ ಬಾರಿಯ ಶೃಂಗಸಭೆಯು ಜಾಗತಿಕ ಮಟ್ಟದ ತಂತ್ರಜ್ಞಾನ ಮತ್ತು ಉದ್ಯಮ ವಲಯವನ್ನು ಒಂದೇ ವೇದಿಕೆಯಲ್ಲಿ ತೆರೆಯಲಾಗಿದೆ. ಎಲೆಕ್ಟ್ರಾನಿಕ್ಸ್, ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ ಇಲಾಖೆಯು ಉದ್ಯಮ ಪಾಲುದಾರರ ಸಹಯೋಗದೊಂದಿಗೆ ಈ ಬೃಹತ್ ಕಾರ್ಯಕ್ರಮವನ್ನು ಆಯೋಜಿಸಿದೆ.

ಶೃಂಗಸಭೆಯಲ್ಲಿ 60ಕ್ಕೂ ಹೆಚ್ಚು ದೇಶಗಳಿಂದ 1,200ಕ್ಕೂ ಅಧಿಕ ಪ್ರದರ್ಶಕರು ಭಾಗವಹಿಸಿದ್ದಾರೆ. ಆಸ್ಟ್ರೇಲಿಯಾ ಈ ವರ್ಷದ ಶೃಂಗಸಭೆಯ 'ಪಾಲುದಾರ ದೇಶ'ವಾಗಿ ಕೈಜೋಡಿಸಿದೆ. ಇದರ ಜತೆಗೆ ಫ್ರಾನ್ಸ್, ಜಪಾನ್, ದಕ್ಷಿಣ ಕೊರಿಯಾ, ಫಿನ್ಲ್ಯಾಂಡ್, ಬವೇರಿಯಾ, ಬೆಲ್ಜಿಯಂ, ಸಿಂಗಾಪುರ, ರಷ್ಯಾ, ಕ್ಯೂಬಾ ಸೇರಿದಂತೆ 60ಕ್ಕೂ ಹೆಚ್ಚು ರಾಷ್ಟ್ರಗಳು ಭಾಗಿಯಾಗಿವೆ. ಇದು ಅಂತರಾಷ್ಟ್ರೀಯ ಮಟ್ಟದಲ್ಲಿ ಸಹಯೋಗ ಮತ್ತು ವಾಣಿಜ್ಯ ಅವಕಾಶಗಳಿಗೆ ಬೃಹತ್ ವೇದಿಕೆ ಕಲ್ಪಿಸಲಿದೆ. ಶೃಂಗಸಭೆಯು ಡೀಪ್‌ಟೆಕ್, ಕೃತಕ ಬುದ್ಧಿಮತ್ತೆ, ಬ್ಲಾಕ್‌ಚೈನ್, ಕ್ವಾಂಟಮ್ ಕಂಪ್ಯೂಟಿಂಗ್, ಜೈವಿಕ ತಂತ್ರಜ್ಞಾನ, ಡಿಜಿಟಲ್ ಆರೋಗ್ಯ, ಸೈಬರ್ ಭದ್ರತೆ, ಬಾಹ್ಯಾಕಾಶ ತಂತ್ರಜ್ಞಾನ, ಮತ್ತು ಹಸಿರು ತಂತ್ರಜ್ಞಾನಗಳಂತಹ ಅತ್ಯಾಧುನಿಕ ವಿಷಯಗಳ ಮೇಲೆ ಕೇಂದ್ರೀಕರಿಸಲಾಗಿದೆ.

ರಾಜ್ಯವು ಜಾಗತಿಕ ತಂತ್ರಜ್ಞಾನ ಕ್ರಾಂತಿಯನ್ನು ಮುನ್ನಡೆಸುತ್ತಿದೆ:

ಐಟಿ ಶೃಂಗಸಭೆ ಉದ್ಘಾಟನೆ ಮಾಡಿ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಸರ್ಕಾರದ ಸ್ಪಷ್ಟ ನೀತಿಗಳು, ಸುಗಮ ಅನುಮತಿಗಳು, ಕೌಶಲ್ಯ, ಮೂಲಸೌಕರ್ಯ ಹಾಗೂ ಪೂರಕ ವಾತಾವರಣಗಳು, ರಾಜ್ಯವನ್ನು ಭಾರತದ ಅತ್ಯಂತ ವಿಶ್ವಾಸಾರ್ಹ ಹೂಡಿಕೆ ತಾಣವಾಗಿದೆ. 2034 ರ ವೇಳೆಗೆ ರಾಜ್ಯವನ್ನು ದೇಶದ ಪ್ರಮುಖ ಬಾಹ್ಯಾಕಾಶ ತಂತ್ರಜ್ಞಾನ ಕೇಂದ್ರವಾಗಿ ಪರಿವರ್ತಿಸುವ ಸರ್ಕಾರದ ಗುರಿಗೆ ಬಾಹ್ಯಾಕಾಶ ತಂತ್ರಜ್ಞಾನ ನೀತಿ 2025-30 ಸಹಕಾರಿಯಾಗಲಿದೆ. ಹೊಸ ಸ್ಟಾರ್ಟ್ಅಪ್ ನೀತಿಯಿಂದ ಮುಂದಿನ ಐದು ವರ್ಷಗಳಲ್ಲಿ ಬಂಡವಾಳ ನೆರವು, ಮಾರುಕಟ್ಟೆ ಅವಕಾಶ, ಮೂಲಸೌಲಭ್ಯ, ಕೌಶಲ್ಯಾಭಿವೃದ್ಧಿಯಂತಹ ಕ್ರಮಗಳ ಮೂಲಕ 25 ಸಾವಿರ ಸ್ಟಾರ್ಟ್ಅಪ್‌ಗಳ ಸ್ಥಾಪನೆಗೆ ನೆರವಾಗುವ ಗುರಿಯನ್ನು ಸರ್ಕಾರ ಹೊಂದಿದೆ ಎಂದು ತಿಳಿಸಿದರು.

ಬೆಂಗಳೂರು ತಂತ್ರಜ್ಞಾನ ಶೃಂಗಸಭೆಯು ಒಂದು ಸಮಾವೇಶಕ್ಕಿಂತಲೂ ಹೆಚ್ಚಾಗಿ ಹೊಸ ಹೊಸ ವಿಚಾರಗಳು, ಸಂವಾದಗಳು, ಬಂಡವಾಳ ಹೂಡಿಕೆ ಆವಿಷ್ಕಾರ ಮತ್ತು ಪರಿವರ್ತನೆಯ ಮನ್ವಂತರಕ್ಕೆ ವೇದಿಕೆಯಾಗಿದೆ. ಈ ವರ್ಷದ ಧ್ಯೇಯವಾಕ್ಯ: "ಭವಿಷ್ಯೀಕರಣಗೊಳ್ಳಿ-ಅಜ್ಞಾತವನ್ನು ರೂಪಿಸುತ್ತಾ, ಊಹಿಸಿಲಾಗದ್ದನ್ನು ಅಳೆಯುತ್ತಾ , ಜಗತ್ತನ್ನು ಮುಂದೆ ಕೊಂಡೊಯ್ಯುವುದು" ಎಂಬುದಾಗಿದೆ. ಈ ಆಶಯ ನಮ್ಮ ಸಾಮೂಹಿಕ ಧ್ಯೇಯದ ಸಂಕಲ್ಪವನ್ನು ಎತ್ತಿ ಹಿಡಿಯುತ್ತದೆ. ಅನ್ಯ ದೇಶಗಳ ಪರಿಣಿತರನ್ನು ಸಂಶೋಧಕರನ್ನು, ನೀತಿ ನಿರೂಪಕರನ್ನು ಪರಸ್ಪರ ಬೆಸೆಯುವುದಲ್ಲದೇ , ಜಾಗತಿಕ ಮಾರುಕಟ್ಟೆಗಳನ್ನು ಸಂಪರ್ಕಿಸಲು ಬೃಹತ್ ವೇದಿಕೆಯಾಗಿದೆ ಎಂದು ಹೇಳಿದರು.

ತಂತ್ರಜ್ಞಾನವು ಸಾಮಾಜಿಕ ಒಳಿತನ್ನು, ಆರ್ಥಿಕ ನ್ಯಾಯವನ್ನು, ಸುಸ್ಥಿರ ಅಭಿವೃದ್ಧಿಯನ್ನು ಮತ್ತು ಸಮಾಜದ ಎಲ್ಲರಿಗೂ ಸಮೃದ್ಧಿಯನ್ನು ಒದಗಿಸಬೇಕು ಎಂಬ ನಮ್ಮ ನಂಬಿಕೆಯನ್ನು ಪುನರುಚ್ಚರಿಸುತ್ತೇವೆ. ಕೃತಕ ಬುದ್ಧಿಮತ್ತೆ, ಕ್ವಾಂಟಮ್, ಬಯೋಟೆಕ್, ಬಾಹ್ಯಾಕಾಶ ಮತ್ತು ಹಸಿರು ತಂತ್ರಜ್ಞಾನಗಳಿಂದ ಕೂಡಿರುವ ಡಿಜಿಟಲ್ ಯುಗದಲ್ಲಿ ನಿಂತಿದ್ದೇವೆ. ದಿಟ್ಟ, ಮಾನವೀಯ ಮತ್ತು ಪರಿವರ್ತನಾತ್ಮಕ ಭವಿಷ್ಯವನ್ನು ಸಹ-ಸೃಷ್ಟಿಸಲು ಇಡೀ ಜಗತ್ತಿಗೆ ರಾಜ್ಯವು ಆಹ್ವಾನಿಸಿದೆ.

ತಂತ್ರಜ್ಞಾನ ಶಕ್ತಿ ಕೇಂದ್ರವಾಗಿ ಕರ್ನಾಟಕದ ಬೆಳವಣಿಗೆ ಆಕಸ್ಮಿಕವಲ್ಲ, ಇದು ದೂರದೃಷ್ಟಿಯ ನೀತಿಗಳು, ಆಳವಾದ ಸಾಂಸ್ಥಿಕ ಶಕ್ತಿ ಮತ್ತು ಪ್ರತಿ ಹಂತದಲ್ಲೂ ಸೃಜನಶೀಲತೆ ಮತ್ತು ಶ್ರೇಷ್ಠತೆಯನ್ನು ಪೋಷಿಸುವ ಪರಿಸರ ವ್ಯವಸ್ಥೆಯ ಪರಿಣಾಮವಾಗಿದೆ. ಕರ್ನಾಟಕವು ಜ್ಞಾನಕಾಶಿ ಎಂಬುದನ್ನು ಹೆಮ್ಮೆಯಿಂದ ಹೇಳುತ್ತೇವೆ. 85 ವಿಶ್ವವಿದ್ಯಾಲಯಗಳು, 243 ಎಂಜಿನಿಯರಿಂಗ್ ಕಾಲೇಜುಗಳು ಮತ್ತು ಸುಮಾರು 1,800 ಐಟಿಐಗಳಿಗೆ ಕರ್ನಾಟಕ ನೆಲೆಯಾಗಿದೆ. ರಾಜ್ಯದ ನಿರುದ್ಯೋಗ ಪ್ರಮಾಣ ಶೇ.4.3 ರಷ್ಟು ಮಾತ್ರ ಇದ್ದು, ಇದು ರಾಜ್ಯದ ಸಮರ್ಥ ಉತ್ಪಾದಕತೆ ಮತ್ತು ಉದ್ಯೋಗಾವಕಾಶಗಳನ್ನು ಎತ್ತಿ ತೋರಿಸುತ್ತದೆ ಎಂದರು.

ರಾಜ್ಯವು ದೇಶದ ಅತಿದೊಡ್ಡ ಸಂಶೋಧನೆ ಮತ್ತು ಅಭಿವೃದ್ಧಿ ಕೇಂದ್ರ

ಭಾರತದ ಐಟಿ ರಫ್ತಿನಲ್ಲಿ ರಾಜ್ಯವು ಶೇ.42 ಕೊಡುಗೆ ನೀಡುತ್ತಿದೆ. ಇದರ ಮೌಲ್ಯ 3.2 ಲಕ್ಷ ಕೋಟಿ ರೂ.ಗಳಿಗಿಂತ ಹೆಚ್ಚು ಮತ್ತು ಈ ಪ್ರಗತಿ ವರ್ಷದಿಂದ ವರ್ಷಕ್ಕೆ ಶೇ. 27 ರಷ್ಟು ವೇಗವಾಗಿ ಬೆಳೆಯುತ್ತಿದೆ. ರಾಜ್ಯವು 550 ಕ್ಕೂ ಹೆಚ್ಚು ಜಾಗತಿಕ ಸಾಮರ್ಥ್ಯ ಕೇಂದ್ರಗಳನ್ನು (ಜಿಸಿಸಿ) ಹೊಂದಿದೆ, ಇದು ಭಾರತದ ಒಟ್ಟು ಕಂಪನಿಯ ಮೂರನೇ ಒಂದು ಭಾಗವಾಗಿದೆ. ಬೆಂಗಳೂರು ಸೆಮಿಕಂಡಕ್ಟರ್, ಏರೋಸ್ಪೇಸ್, ರಕ್ಷಣಾ, ಬಯೋಟೆಕ್, ಎಲೆಕ್ಟ್ರಾನಿಕ್ಸ್ ಉತ್ಪಾದನೆ, ಅನಿಮೇಷನ್ ಮತ್ತು ಗೇಮಿಂಗ್ ಮತ್ತು ಡೀಪ್-ಟೆಕ್‌ಗಳಿಗೆ ಪ್ರಮುಖ ಕೇಂದ್ರವಾಗಿದೆ.

ನೀತಿ -ನಾವೀನ್ಯತೆ ಯ ರೂಪಿಸುವಲ್ಲಿ ರಾಜ್ಯವು ಯಾವಾಗಲೂ ಭಾರತವನ್ನು ಮುನ್ನಡೆಸಿದೆ. ನಾವು 1997 ರಲ್ಲಿಯೇ ಭಾರತದ ಮೊದಲ ತಂತ್ರಜ್ಞಾನ ನೀತಿಯನ್ನು ರೂಪಿಸಿದ್ದೇವೆ ಮತ್ತು ಹೊಸ ನೀತಿಗಳೊಂದಿಗೆ ಈ ನಾಯಕತ್ವವನ್ನು ಮುಂದುವರಿಸುತ್ತಿದ್ದೇವೆ. ಸರ್ಕಾರದ ದೂರದೃಷ್ಟಿಯ ಆಡಳಿತದ ಪರಿಣಾಮವಾಗಿ , ಜಾಗತಿಕ ತಂತ್ರಜ್ಞಾನದ ಕ್ಷೇತ್ರದಲ್ಲಿ ಕರ್ನಾಟಕ ಸಕ್ರಿಯವಾಗಿ ಪಾಲ್ಗೊಂಡಿದೆ. ವಿದೇಶಿ ಬಂಡವಾಳ ಹೂಡಿಕೆ, ಜಾಗತಿಕ ಸಹಭಾಗಿತ್ವ ಹಾಗೂ ಬಹುರಾಷ್ಟ್ರೀಯ ಹೂಡಿಕೆಗಳಲ್ಲಿ ಕರ್ನಾಟಕವು ದೇಶದ ಪ್ರಮುಖ ರಾಜ್ಯಗಳಲ್ಲಿ ಒಂದಾಗಿದೆ. ನಮ್ಮ ಪರಿಸರ ವ್ಯವಸ್ಥೆಯು ವಿಶ್ವದರ್ಜೆಯ ಇಂಜಿನಿಯರಿಂಗ್, ಪಾರದರ್ಶಕ ನೀತಿ , ಸದೃಢ ಐಪಿ ಸಂಸ್ಕೃತಿ ಹಾಗೂ ವೈವಿಧ್ಯಮಯ ಜಾಗತಿಕ ಸಮುದಾಯಗಳನ್ನು ಒಳಗೊಂಡಿದೆ. ನಮ್ಮ ವಾಣಿಜ್ಯ ಪರಿಸರಕ್ಕೆ ಉನ್ನತಮಟ್ಟದ ಕಾನೂನು, ಆರ್ಥಿಕ ಹಾಗೂ ತಾಂತ್ರಿಕ ಬಲದ ಬೆಂಬಲವಿದೆ. ವಿಶೇಷವಾಗಿ ಬೆಂಗಳೂರಿನ ಹವಾಮಾನ, ಬಹುಸಂಸ್ಕೃತಿಗಳು ವಿಶ್ವದ ಜನರನ್ನು ಆಕರ್ಷಿಸುತ್ತವೆ. ಒಟ್ಟಾರೆ ,ರಾಜ್ಯವು ಹೂಡಿಕೆದಾರರಿಗೆ ಸಂಶೋಧನೆಯಿಂದ ಮಾರುಕಟ್ಟೆಯವರೆಗೂ, ಮೂಲಸೌಕರ್ಯದಿಂದ ಕೌಶಲ್ಯದವರೆಗಿನ ಎಲ್ಲ ಅಗತ್ಯತೆಗಳನ್ನು ಪೂರೈಸುತ್ತಿದ್ದು, ಕರ್ನಾಟಕವು ಜಾಗತಿಕ ತಂತ್ರಜ್ಞಾನ ಕ್ರಾಂತಿಯನ್ನು ಮುನ್ನಡೆಸುತ್ತಿದೆ ಎಂದು ನುಡಿದರು.

200 ಎಕರೆಯಲ್ಲಿ ಸೆಮಿಕಂಡಕ್ಟರ್ ಪಾರ್ಕ್ :

ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ್‌ ಮಾತನಾಡಿ, ಆಧುನಿಕ ಬಗೆಯ ಕೈಗಾರಿಕೋದ್ಯಮಗಳ ಮಹತ್ತ್ವವನ್ನು ಅರಿತಿರುವ ರಾಜ್ಯ ಸರ್ಕಾರವು 200 ಎಕರೆ ಜಾಗದಲ್ಲಿ ಸೆಮಿಕಂಡಕ್ಟರ್ ಪಾರ್ಕ್ ಅಭಿವೃದ್ಧಿಪಡಿಸಲಿದೆ. ಇಲ್ಲಿ ಈ ತರಹದ ಕಂಪನಿಗಳಿಗೆ ಬೇಕಾಗುವ ಸಕಲ ಸೌಕರ್ಯಗಳನ್ನೂ ಕಲ್ಪಿಸಲಾಗುವುದು. ಇದು ದೇಶ ಮತ್ತು ರಾಜ್ಯ ಮಟ್ಟದಲ್ಲಿ ಸೆಮಿಕಂಡಕ್ಟರ್ ಕ್ಷೇತ್ರಕ್ಕೆ ಸಂಬಂಧಿಸಿದ ಎಲ್ಲ ರೀತಿಯ ನಾವೀನ್ಯತಾ ಕೇಂದ್ರವಾಗಿ ಕೆಲಸ ಮಾಡಲಿದೆ ಎಂದು ಹೇಳಿದರು.

ಮುಂಚೂಣಿ ತಂತ್ರಜ್ಞಾನ ಕಂಪನಿಗಳಿಂದ ಮತ್ತು ಪ್ರಮುಖ ಹೂಡಿಕೆದಾರರಿಂದ ಬಂಡವಾಳ ಹೂಡಿಕೆಯನ್ನು ಆಕರ್ಷಿಸಲು ಆದ್ಯತೆ ನೀಡಲಾಗಿದೆ. ಇಂತಹ ಹೂಡಿಕೆಯು ಕೈಗಾರಿಕೋದ್ಯಮದ ವಿವಿಧ ವಲಯಗಳಿಗೆ ಹರಿದು ಬರಬೇಕು ಎನ್ನುವುದು ಸರ್ಕಾರದ ಗುರಿಯಾಗಿದೆ. ಇಂತಹ ವಲಯಗಳಲ್ಲಿ ಡ್ರೋನ್, ಸೆಮಿಕಂಡಕ್ಟರ್ ಸಾಧನಗಳು ಮತ್ತು ಸೌರ ವಿದ್ಯುತ್ ಎಲ್ಲವನ್ನೂ ಪರಿಗಣಿಸಲಾಗಿದೆ. ಇದರ ಜೊತೆಯಲ್ಲಿ ಇಂಡಸ್ಟ್ರಿ 5.0 ಮತ್ತು ಇನ್ನಿತರ ಅತ್ಯಾಧುನಿಕ ಕೈಗಾರಿಕಾ ವಿಧಾನಗಳನ್ನೂ ಗಂಭೀರವಾಗಿ ತೆಗೆದುಕೊಳ್ಳಲಾಗಿದೆ. ಕೈಗಾರಿಕೆಗಳು ಬೆಳೆಯಬೇಕು ಮತ್ತು ಹೂಡಿಕೆದಾರರು ನಮ್ಮಲ್ಲಿಗೆ ಬರಬೇಕೆಂದರೆ, ಸಂಶೋಧನೆ ಮತ್ತು ಅಭಿವೃದ್ಧಿ ಕಾರ್ಯಪರಿಸರ ಚೆನ್ನಾಗಿರಬೇಕು. 800ಕ್ಕೂ ಹೆಚ್ಚು ಆರ್ & ಡಿ ಕೇಂದ್ರಗಳು, 100ಕ್ಕೂ ಅಧಿಕ ಚಿಪ್ ವಿನ್ಯಾಸ ಕಂಪನಿಗಳು ಮತ್ತು 18,300 ನವೋದ್ಯಮಗಳು ಇವೆ ಎಂದು ಮಾಹಿತಿ ನೀಡಿದರು.

ರಾಜ್ಯದಲ್ಲಿ ಹಲವು ತಂತ್ರಜ್ಞಾನ ಕಂಪನಿಗಳು ಎಐ, ಎಂಎಲ್ (ಮಷೀನ್ ಲರ್ನಿಂಗ್), ಕ್ವಾಂಟಮ್‌, ರೋಬೋಟಿಕ್ಸ್, ಆಧುನಿಕ ತಯಾರಿಕೆ ಮತ್ತು ಸುಸ್ಥಿರ ನಾವೀನ್ಯತೆಯ ಕ್ಷೇತ್ರಗಳಲ್ಲಿ ಸಕ್ರಿಯವಾಗಿವೆ. ಇಂತಹ ಕಂಪನಿಗಳಿಗೆ ಬೆಂಬಲ ಕೊಡಲೆಂದೇ ಸರ್ಕಾರವು 600 ಕೋಟಿ ರೂ.ಗಳನ್ನು ಒದಗಿಸಿದೆ. ರಾಜ್ಯವು ಡೀಪ್ ಸೈನ್ಸ್ ಮತ್ತು ಮುಂಚೂಣಿ ತಂತ್ರಜ್ಞಾನ ಎರಡರಲ್ಲೂ ಅಗ್ರಸ್ಥಾನದಲ್ಲಿ ಇರಬೇಕೆನ್ನುವುದು ಸರ್ಕಾರದ ಸಂಕಲ್ಪವಾಗಿದೆ. ಇದಕ್ಕೆ ಪೂರಕವಾಗಿ ಇತ್ತೀಚೆಗೆ ಧಾರವಾಡದಲ್ಲಿ ಎಐ ಮತ್ತು ಕ್ವಾಂಟಂ ಕಂಪ್ಯೂಟಿಂಗ್ ಕ್ಷೇತ್ರಕ್ಕೆ ಸಂಬಂಧಿಸಿದ ಉತ್ಕೃಷ್ಟತಾ ಕೇಂದ್ರವನ್ನು ಪ್ರಾರಂಭಿಸಲು ತೀರ್ಮಾನಿಸಲಾಗಿದೆ. ಇನ್ನೊಂದೆಡೆಯಲ್ಲಿ ಜೈವಿಕ ತಂತ್ರಜ್ಞಾನ, ಸೈಬರ್ ಸೆಕ್ಯುರಿಟಿ ತರಹದ ಕ್ಷೇತ್ರಗಳಿಗೆ ಸಂಬಂಧಿಸಿದಂತೆ ಕೈಗಾರಿಕೆಗಳು ಶಿಕ್ಷಣ ಸಂಸ್ಥೆಗಳೊಂದಿಗೆ ಕೈಜೋಡಿಸಿವೆ ಎಂದು ಪಾಟೀಲ ನುಡಿದಿದ್ದಾರೆ.

Read More
Next Story