
ʼದ ಫೆಡರಲ್ ಕರ್ನಾಟಕʼ ಸಹಭಾಗಿತ್ವದಲ್ಲಿ ನ.4 ರಿಂದ ಬೆಂಗಳೂರು ಕೌಶಲ್ಯ ಶೃಂಗಸಭೆ
ಬೆಂಗಳೂರು ಕೌಶಲ್ಯ ಶೃಂಗಸಭೆಗೆ ನ್ಯೂ ಜನರೇಷನ್ ಮೀಡಿಯಾ ಕಾರ್ಪೋರೇಷನ್ ಪ್ರೈವೇಟ್ ಲಿಮಿಟೆಡ್‌ನ ʼದ ಫೆಡರಲ್ ಕರ್ನಾಟಕʼ ಡಿಜಿಟಲ್ ಮಾಧ್ಯಮದ ಸಹಭಾಗಿತ್ವ ಹೊಂದಿದೆ.
ಕರ್ನಾಟಕ ಸರ್ಕಾರದ ಕೌಶಲ್ಯಾಭಿವೃದ್ಧಿ,ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆಯ ಕರ್ನಾಟಕ ಕೌಶಲ್ಯ ಅಭಿವೃದ್ಧಿ ನಿಗಮ, ಕರ್ನಾಟಕ ಕೌಶಲ್ಯ ಅಭಿವೃದ್ಧಿ ಪ್ರಾಧಿಕಾರದ ಸಹಯೋಗ ಹಾಗೂ ಕರ್ನಾಟಕ ಡಿಜಿಟಲ್ ಎಕಾನಮಿ ಮಿಷನ್ ಸಹಭಾಗಿತ್ವದೊಂದಿಗೆ “ಬೆಂಗಳೂರು ಕೌಶಲ್ಯ ಶೃಂಗಸಭೆ-2025” ರ ಮೊದಲ ಆವೃತ್ತಿ ನ.4 ರಿಂದ 6 ರವರೆಗೆ ಬೆಂಗಳೂರಿನ ʼದಿ ಲಲಿತ್ ಅಶೋಕ್ ಹೋಟೆಲ್ʼ ನಲ್ಲಿ ನಡೆಯಲಿದೆ.
ಬೆಂಗಳೂರು ಕೌಶಲ್ಯ ಶೃಂಗಸಭೆಗೆ ನ್ಯೂ ಜನರೇಷನ್ ಮೀಡಿಯಾ ಕಾರ್ಪೋರೇಷನ್ ಪ್ರೈವೇಟ್ ಲಿಮಿಟೆಡ್‌ನ ʼದ ಫೆಡರಲ್ ಕರ್ನಾಟಕʼ ಡಿಜಿಟಲ್ ಮಾಧ್ಯಮದ ಸಹಭಾಗಿತ್ವ ಹೊಂದಿದೆ. ಈ ಶೃಂಗಸಭೆಯು ಕರ್ನಾಟಕದ ಕೌಶಲ್ಯ ಮತ್ತು ಮಾನವ ಸಂಪನ್ಮೂಲವನ್ನು ಜಾಗತಿಕ ಉದ್ಯೋಗಾರ್ಹತೆಗೆ ತಯಾರಿಸುವ ಉದ್ದೇಶದಿಂದ ವಿದೇಶಿ ಸಹಭಾಗಿತ್ವಗಳ ವೃದ್ಧಿ, ಭಾಷಾ ತರಬೇತಿ ಮತ್ತು ಪ್ರಮಾಣ ಪತ್ರ ನೀಡುವ ವ್ಯವಸ್ಥೆಗಳಿಗೆ ಉತ್ತೇಜನ ನೀಡಲಿದೆ.
ಕಾರ್ಯಕ್ರಮವನ್ನು ನ.4 ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಉದ್ಘಾಟಿಸಲಿದ್ದಾರೆ. ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ವೈದ್ಯಕೀಯ ಶಿಕ್ಷಣ ಮತ್ತು ಕೌಶಲ್ಯಾಭಿವೃದ್ಧಿ ಸಚಿವ ಡಾ. ಶರಣಪ್ರಕಾಶ್ ಆರ್. ಪಾಟೀಲ ಅಧ್ಯಕ್ಷತೆಯಲ್ಲಿ ಶೃಂಗಸಭೆ ಆಯೋಜಿಸಲಾಗಿದೆ. ವಿಶೇಷ ಆಹ್ವಾನಿತರಾಗಿ ಮಾರಿಷಸ್ ಗಣರಾಜ್ಯದ ಕಾರ್ಮಿಕ ಮತ್ತು ಕೈಗಾರಿಕಾ ಸಂಬಂಧಗಳ ಸಚಿವ ಮುಹಮ್ಮದ್ ರೆಝಾ ಖಾಸ್ಸಂ ಉತೀಮ್, ಜರ್ಮನಿ ರಾಯಭಾರಿ ಡಾ. ಫಿಲಿಪ್ ಅಕೆರ್ಮನ್ ಮತ್ತು ಕೋರ್ಸೆರಾ ಸಂಸ್ಥೆಯ ಭಾರತ ಮತ್ತು ಏಷ್ಯಾ ಪೆಸಿಫಿಕ್ ವ್ಯವಸ್ಥಾಪಕ ನಿರ್ದೇಶಕ ಅಶುತೋಷ್ ಗುಪ್ತಾ ಸೇರಿದಂತೆ ಹಲವು ಗಣ್ಯರು ಭಾಗವಹಿಸಲಿದ್ದಾರೆ.
ಶೃಂಗಸಭೆಯ ಪ್ರಮುಖ ವಿಷಯಗಳು
“ಮಾನವ ಸಂಪನ್ಮೂಲ 2030: ವಿಸ್ತರಣೆ, ವ್ಯವಸ್ಥೆಗಳು, ಸಮನ್ವಯ” ಥೀಮ್ ಅಡಿಯಲ್ಲಿ ಹೆಚ್ಚಿನ ಯುವಕರಿಗೆ ಕೌಶಲ್ಯಾವಕಾಶ ವಿಸ್ತರಿಸುವುದು. ಗುಣಮಟ್ಟ ಮತ್ತು ಪ್ರಸ್ತುತತೆಯುಳ್ಳ ಕೌಶಲ್ಯ ತರಬೇತಿ ವ್ಯವಸ್ಥೆ ಬಲಪಡಿಸುವುದು ಹಾಗೂ ಸರ್ಕಾರ, ಕೈಗಾರಿಕೆ, ಶಿಕ್ಷಣ ವಲಯಗಳ ನಡುವೆ ಸಮನ್ವಯ ವೃದ್ಧಿಸಲು ಗಮನ ಹರಿಸಲಾಗಿದೆ.
ಕಾರ್ಯಕ್ರಮದಲ್ಲಿ 3 ಸಾವಿರಕ್ಕೂ ಹೆಚ್ಚು ಮಂದಿ ನೀತಿ ನಿರೂಪಕರು, ಕಾರ್ಪೊರೇಟ್ ಉದ್ಯಮಿಗಳು, ಶಿಕ್ಷಣ ತಜ್ಞರು ಹಾಗೂ ಸಂಶೋಧಕರು ಭಾಗವಹಿಸಲಿದ್ದಾರೆ. 100ಕ್ಕೂ ಹೆಚ್ಚು ಮಂದಿ ಜಾಗತಿಕ ನಾಯಕರು, ಶಿಕ್ಷಣದಲ್ಲಿ ಸೇವೆ ಸಲ್ಲಿಸಿರುವವರು ಭಾಷಣ ಮಾಡಲಿದ್ದಾರೆ. ರಾಜ್ಯ ಮತ್ತು ಅಂತರಾಷ್ಟ್ರೀಯ ಮಟ್ಟದ ಸಂಸ್ಥೆಗಳಿಂದ 50ಕ್ಕೂ ಹೆಚ್ಚು ಪ್ರದರ್ಶಕರು ಮತ್ತು ಸಹಭಾಗಿದಾರರು ಪಾಲ್ಗೊಳ್ಳಲಿದ್ದಾರೆ.
ಮೈಂಡ್‌ಟ್ರೀ (Mindtree) ಸಂಸ್ಥೆಯ ಸಹ-ಸ್ಥಾಪಕ ಸುಬ್ರತೋ ಬಾಗ್ಚಿ, ಗ್ಲೋಬಲ್ ಎನರ್ಜಿ ಅಲಯನ್ಸ್ ಅಧ್ಯಕ್ಷ ರವಿ ವೆಂಕಟೇಶನ್, ಕೇಂದ್ರದ ಕೌಶಲ್ಯಾಭಿವೃದ್ಧಿ ಮತ್ತು ಉದ್ಯಮಶೀಲತೆ ಸಚಿವಾಲಯದ ಮಾಜಿ ಕಾರ್ಯದರ್ಶಿ ಅತುಲ್ ಕುಮಾರ್ ತಿವಾರಿ, ನೀತಿ ಆಯೋಗದ ಮುಖ್ಯ ಕಾರ್ಯನಿರ್ವಹಣಾಧಿಕಾರಿ (CEO) ಬಿ.ವಿ.ಆರ್. ಸುಬ್ರಹ್ಮಣ್ಯಂ, ಬಯೋಕಾನ್ ಬಯಾಲಾಜಿಕ್ಸ್ ಗ್ಲೋಬಲ್ ಹೆಡ್( ಮಾನವ ಸಂಪನ್ಮೂಲ) ನವೀನ್ ನಾರಾಯಣನ್, ಲೈಟ್‌ಕಾಸ್ಟ್ ದೇಶದ ಮುಖ್ಯಸ್ಥರು, ವ್ಯವಸ್ಥಾಪಕ ನಿರ್ದೇಶಕರು ಸರಸ್ವತಿ ರಾಮಚಂದ್ರ, ಫಿಲಿಪೈನ್ಸ್‌ನ ಏಷ್ಯನ್ ಡೆವಲಪ್ಮೆಂಟ್ ಬ್ಯಾಂಕ್ ಮಾನವ ಮತ್ತು ಸಾಮಾಜಿಕ ಅಭಿವೃದ್ಧಿ ವಿಭಾಗದ ನಿರ್ದೇಶಕರಾದ( ದಕ್ಷಿಣ ಏಷ್ಯಾ) ಜೀ ಸೂನ್ ಸಾಂಗ್, ಆಸ್ಟ್ರೇಲಿಯಾದ ಆರ್‌ಎಂಐಟಿ ವಿಶ್ವವಿದ್ಯಾಲಯ (RMIT University) ಉಪ ಉಪಕುಲಪತಿ (ವೃತ್ತಿಪರ ಶಿಕ್ಷಣ) ಮತ್ತು ಉಪಾಧ್ಯಕ್ಷೆ ಮಿಷ್ ಈಸ್ಟ್‌ಮನ್ ಭಾಷಣಕಾರರಾಗಿ ಭಾಗವಹಿಸಲಿದ್ದಾರೆ.
ವಿಶೇಷ ಸಚಿವರ ಸಮಿತಿ ಸಭೆ
ನ.5 ರಂದು ಶೃಂಗಸಭೆಯ ವೇದಿಕೆಯಲ್ಲಿ “Convergence of Education, Skills & Industry for a Trillion USD Economy by 2032” ಎಂಬ ವಿಷಯದ ಕುರಿತು ವಿಶೇಷ ಸಚಿವರ ಸಮಿತಿ (Ministerial Panel) ಚರ್ಚಿಸಲಿದೆ. 2032ರೊಳಗೆ ಒಂದು ಟ್ರಿಲಿಯನ್ ಡಾಲರ್ ಆರ್ಥಿಕತೆಯತ್ತ ಮುನ್ನಡೆಸುವ ಮಾರ್ಗಗಳ ಬಗ್ಗೆ ಚರ್ಚೆ ನಡೆಯಲಿದೆ. ಈ ಚರ್ಚೆಯು ನವೀನತೆ, ಉದ್ಯೋಗಾವಕಾಶ ಮತ್ತು ಸುಸ್ಥಿರ ಆರ್ಥಿಕ ಬೆಳವಣಿಗೆ ಉತ್ತೇಜಿಸುವ ಸಂಯೋಜಿತ ಪರಿಸರ ವ್ಯವಸ್ಥೆ (Integrated Ecosystem) ನಿರ್ಮಾಣದ ಅಗತ್ಯತೆ ಪ್ರಸ್ತುತಪಡಿಸುತ್ತಿದೆ.
ವಿಶೇಷ ಸಚಿವರ ಸಮಿತಿಯ ಚರ್ಚೆಯಲ್ಲಿ ವೈದ್ಯಕೀಯ ಶಿಕ್ಷಣ ಹಾಗೂ ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖಾ ಸಚಿವ ಡಾ.ಶರಣಪ್ರಕಾಶ್ ಆರ್.ಪಾಟೀಲ್, ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಸಚಿವ ಎಂ.ಬಿ.ಪಾಟೀಲ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಹಾಗೂ ಐಟಿ ಮತ್ತು ಬಿಟಿ ಇಲಾಖಾ ಸಚಿವ ಪ್ರಿಯಾಂಕ್ , ಉನ್ನತ ಶಿಕ್ಷಣ ಇಲಾಖಾ ಸಚಿವ ಡಾ. ಎಂ. ಸಿ. ಸುಧಾಕರ್ ಭಾಗವಹಿಸಲಿದ್ದಾರೆ.
ಶೃಂಗಸಭೆಯಲ್ಲಿ ಭಾಗವಹಿಸುವ ವಲಯಗಳು ಯಾವುವು?
ವಿಮಾನೋದ್ಯಮ ಮತ್ತು ರಕ್ಷಣಾ ವಲಯ (Aerospace & Defence), ಕೃಷಿ ತಂತ್ರಜ್ಞಾನ (AgriTech), ವಾಹನೋದ್ಯಮ (Automotive), ಆಸ್ತಿ ಮತ್ತು ನಿರ್ಮಾಣ ವಲಯ (Real Estate), ಬ್ಯಾಂಕಿಂಗ್ ಮತ್ತು ಹಣಕಾಸು (Banking & Finance), ಶಿಕ್ಷಣ (Education), ಆರೋಗ್ಯ ರಕ್ಷಣೆ (Healthcare), ಉತ್ಪಾದನೆ (Manufacturing), ಮಾಧ್ಯಮ (Media), ವ್ಯಾಪಾರ (Retail), ಸಾಫ್ಟ್‌ವೇರ್ ಮತ್ತು ತಂತ್ರಜ್ಞಾನ (Software & IT), ದೂರಸಂಪರ್ಕ (Telecommunications), ಆತಿಥ್ಯ ಮತ್ತು ಪ್ರವಾಸೋದ್ಯಮ (Hospitality & Tourism). ಇತರೆ ವಲಯಗಳು.
ಪ್ರತಿನಿಧಿಗಳಿಗೆ ಸಿಗುವ ಅವಕಾಶಗಳೇನು?
ಹೊಸದಾಗಿ ಕೌಶಲ್ಯ ನವೀಕರಣಗಳನ್ನು (Emerging Skilling Innovations) ತಿಳಿದುಕೊಳ್ಳುವ ಅವಕಾಶ. ಸರ್ಕಾರ ಹಾಗೂ ಕೈಗಾರಿಕಾ ವಲಯದ ಪ್ರಮುಖ ನಾಯಕರೊಂದಿಗೆ ನೇರ ಸಂಪರ್ಕ ಹಾಗೂ ಸಂವಾದಿಸುವ ಅವಕಾಶ.
ಪ್ರತ್ಯಕ್ಷ ಪ್ರದರ್ಶನಗಳು (Live Showcases) ಹಾಗೂ ನೀತಿ ಸಂವಾದಗಳು (Policy Dialogues) ಗಳಲ್ಲಿ ಪಾಲ್ಗೊಳ್ಳುವ ಅವಕಾಶ. ಉದ್ಯೋಗ, ತರಬೇತಿ ಹಾಗೂ ಸಹಭಾಗಿತ್ವದ ಹೊಸ ಅವಕಾಶಗಳನ್ನು ಅನ್ವೇಷಿಸುವ ಅವಕಾಶ.
ಶೃಂಗಸಭೆಯಲ್ಲಿ ಬೇರೇನು ಇರಲಿದೆ?
ಶೃಂಗಸಭೆಯಲ್ಲಿ ವಿಶಿಷ್ಟ ಕಾರ್ಯಕ್ರಮಗಳು ಮತ್ತು ಆಕರ್ಷಣೆಗಳು ಇರಲಿವೆ.
Skillathon 2025: ಕಾಲೇಜಿನ ವಿದ್ಯಾರ್ಥಿಗಳಿಗಾಗಿ ರಾಷ್ಟ್ರಮಟ್ಟದ ನವೀನತಾ ಸ್ಪರ್ಧೆ ಆಯೋಜಿಸಿದ್ದು, ಯುವಜನತೆಯ ಸೃಜನಾತ್ಮಕ ಚಿಂತನೆಗಳನ್ನು ಪ್ರೇರೇಪಿಸಲಿದೆ. ಭಾರತದ ಕೌಶಲ್ಯ ಪರಿಸರ ವ್ಯವಸ್ಥೆಯನ್ನು (Skilling Ecosystem) ಹೊಸದಾಗಿ ರೂಪಿಸುವ ಗುರಿ ಹೊಂದಿದೆ. ಇದರಲ್ಲಿ ಭಾಗವಹಿಸುವ ವಿದ್ಯಾರ್ಥಿಗಳು ಭವಿಷ್ಯದ ಉದ್ಯೋಗ ಜಗತ್ತಿಗೆ ಸೂಕ್ತ ಪರಿಹಾರ ವಿನ್ಯಾಸಗೊಳಿಸುವ ಅವಕಾಶ ಪಡೆಯಲಿದ್ದಾರೆ.
ಕೌಶಲ್ಯ ಕರ್ನಾಟಕ ಪ್ರಶಸ್ತಿ (Kaushalya Karnataka Awards): ರಾಜ್ಯದ ಕೈಗಾರಿಕೆಗಳು ಮತ್ತು ಸಂಸ್ಥೆಗಳ ಸಾಧನೆಗಳನ್ನು ಗುರುತಿಸಿ ಗೌರವಿಸಲಾಗುವುದು. ಆ ಮೂಲಕ ರಾಜ್ಯದ ಸಮತೋಲನ ಅಭಿವೃದ್ಧಿ (Inclusive Growth), ನವೀನತೆ (Innovation) ಮತ್ತು ಮಾನವ ಸಂಪನ್ಮೂಲದ ಸ್ಪರ್ಧಾತ್ಮಕತೆಯನ್ನು (Workforce Competitiveness) ಉತ್ತೇಜಿಸುವ ಮಾದರಿ ಉಪಕ್ರಮಗಳನ್ನು ಪ್ರಸ್ತುತಪಡಿಸಲಾಗುತ್ತದೆ.
Skill Expo Pavilion: ರಾಜ್ಯದೆಲ್ಲೆಡೆ ಮಾನವ ಸಂಪನ್ಮೂಲದ ಸ್ಪರ್ಧಾತ್ಮಕತೆಯನ್ನು ಹೆಚ್ಚಿಸುವ ಉದ್ದೇಶದ ಕಾರ್ಯಕ್ರಮವಾಗಿದೆ. ಇಲ್ಲಿ ಅತ್ಯಾಧುನಿಕ ತರಬೇತಿ ತಂತ್ರಜ್ಞಾನಗಳು, ಶೈಕ್ಷಣಿಕ ತಂತ್ರಜ್ಞಾನ (EdTech) ಪರಿಹಾರಗಳು, ಹಾಗೂ ಭವಿಷ್ಯಮುಖಿ ಕೌಶಲ್ಯಾಭಿವೃದ್ಧಿಯ ಇತ್ತೀಚಿನ ಆವಿಷ್ಕಾರಗಳನ್ನು ಪ್ರದರ್ಶಿಸಲಾಗುತ್ತದೆ.
ಸಾಂಸ್ಕೃತಿಕ ಕಾರ್ಯಕ್ರಮ – ಕರ್ನಾಟಕ ವೈಭವ (Karnataka Vaibhava): ಇದು ಕರ್ನಾಟಕದ ಸಮೃದ್ಧ ಪರಂಪರೆ, ಕಲೆ, ಸಂಸ್ಕೃತಿ ಮತ್ತು ಜನಪದ ವೈವಿಧ್ಯತೆಯನ್ನು ಪ್ರತಿಬಿಂಬಿಸುವ ಭವ್ಯ ಸಾಂಸ್ಕೃತಿಕ ಪ್ರದರ್ಶನ. ಇದು ರಾಜ್ಯದ ಸಾಂಸ್ಕೃತಿಕ ಗೌರವ ಮತ್ತು ವೈಭವವನ್ನು ಜನರಿಗೆ ಪರಿಚಯಿಸುವ ವಿಶಿಷ್ಟ ಆಯ್ಕೆ ಆಗಿರುತ್ತದೆ.
“ಬೆಂಗಳೂರು ಕೌಶಲ್ಯ ಶೃಂಗಸಭೆಯು ಭಾರತವನ್ನು ಮುಂದಿನ ಮಾನವ ಸಂಪನ್ಮೂಲ ಅಭಿವೃದ್ಧಿಯ ಕಡೆಗೆ ಮುನ್ನಡೆಸುವಲ್ಲಿ ಕರ್ನಾಟಕದ ದೃಢಸಂಕಲ್ಪವನ್ನು ಪ್ರತಿಬಿಂಬಿಸುತ್ತದೆ. ನಮ್ಮ ಪ್ರಾಥಮಿಕ ಗುರಿಯು ಸಮಾವೇಶಕ, ಕೈಗಾರಿಕಾ ಅವಶ್ಯಕತೆಗಳಿಗೆ ಹೊಂದಿಕೊಂಡು, ಜಾಗತಿಕ ಮಾನದಂಡಗಳಿಗೆ ತಕ್ಕಂತೆ ಇರುವ ಕೌಶಲ್ಯಾಭಿವೃದ್ಧಿ ಚೌಕಟ್ಟನ್ನು ನಿರ್ಮಿಸುವುದಾಗಿದೆ. ಇದರಿಂದ ಯುವಜನರು ಕೌಶಲ್ಯ ಸಂಪನ್ನ ವೃತ್ತಿಪರರು, ಆವಿಷ್ಕಾರಕರು ಅಥವಾ ಉದ್ಯಮಿಗಳು ಆಗಿ ಭವಿಷ್ಯದ ಆರ್ಥಿಕತೆಯನ್ನು ರೂಪಿಸಲು ಶಕ್ತಿಶಾಲಿಗಳಾಗುತ್ತಾರೆ” ಎಂದು ಸಚಿವ ಡಾ. ಶರಣಪ್ರಕಾಶ್ ಪಾಟೀಲ ಹೇಳಿದರು.
ಲೇಬರ್‌ನೆಟ್ ಸರ್ವಿಸಸ್ ಇಂಡಿಯಾ ಪ್ರೈ.ಲಿ.ಮತ್ತು ಟ್ರಸ್ಟಿ–ಸಂಭವ ಫೌಂಡೇಷನ್ ಅಧ್ಯಕ್ಷೆ ಡಾ. ಗಾಯತ್ರಿ ವಾಸುದೇವನ್ ಪ್ರತಿಕ್ರಿಯಿಸಿ, “ಬೆಂಗಳೂರು ಕೌಶಲ್ಯ ಶೃಂಗಸಭೆಯ ಉದ್ದೇಶ ತಂತ್ರಜ್ಞಾನ ಮತ್ತು ಮಾನವ ಸಂಪನ್ಮೂಲ ಅಭಿವೃದ್ಧಿಯ ನವೀನ ಆಲೋಚನೆಗಳನ್ನು ಒಂದೇ ವೇದಿಕೆಗೆ ಒಗ್ಗೂಡಿಸುವುದು. ಇದರ ಮೂಲಕ ಕೌಶಲ್ಯಾಭಿವೃದ್ಧಿಯು ಯುವಜನತೆಗೆ ನಿಜವಾದ ಉದ್ಯೋಗಾವಕಾಶವನ್ನು ಅರ್ಥಪೂರ್ಣ ಉದ್ಯೋಗಾವಕಾಶಗಳನ್ನಾಗಿ ಹೇಗೆ ಪರಿವರ್ತಿಸಬಹುದು ಎಂಬುದನ್ನು ಅನ್ವೇಷಿಸುವುದಾಗಿದೆ.” ಎಂದು ಹೇಳಿದ್ದಾರೆ.

